ADVERTISEMENT

ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಎಂಟು ಹೊಸ ಕೋರ್ಸ್‌: ಅಶ್ವತ್ಥನಾರಾಯಣ

ಆಟೋಮೇಷನ್‌, ರೊಬಾಟಿಕ್ಸ್‌, ಸೈಬರ್‌ ಸೆಕ್ಯುರಿಟಿ, ಬಿಗ್‌ ಡೆಟಾ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 19:56 IST
Last Updated 12 ಆಗಸ್ಟ್ 2021, 19:56 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಆಟೋಮೇಷನ್‌, ರೊಬಾಟಿಕ್ಸ್‌, ಸೈಬರ್‌ ಸೆಕ್ಯುರಿಟಿ, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನಂತಹ ಉದಯೋನ್ಮುಖ ಕ್ಷೇತ್ರಗಳ ಕೌಶಲ ಕಲಿಸುವ ಎಂಟು ಹೊಸ ಕೋರ್ಸ್‌ಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ಆರಂಭಿಸಿದೆ.

ರಾಜ್ಯದ ವಿವಿಧ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಈ ಕೋರ್ಸ್‌ಗಳು ಲಭ್ಯ ಇವೆ. ಇಂದಿನ ತಂತ್ರಜ್ಞಾನ ಯುಗಕ್ಕೆ ಸರಿ ಹೊಂದುವ ಮತ್ತು ಜಾಗತಿಕವಾಗಿ ರಾಜ್ಯದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕವಾಗಿಸುವ ನಿಟ್ಟಿನಲ್ಲಿ ಈ ಕೋರ್ಸ್‌ಗಳು ಸಹಾಯಕವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸೈಬರ್‌ ಸೆಕ್ಯುರಿಟಿಯಲ್ಲಿ ಇಸ್ರೇಲ್‌, ಫಿಲ್ಮ್‌ ಅಂಡ್‌ ಎಂಟರ್‌ಟೈನ್‌ಮೆಂಟ್‌ನಲ್ಲಿ ಕೊರಿಯಾ ದೇಶಗಳ ಜಾಗತಿಕ ಮಟ್ಟದ ಸಾಧನೆ ಬೆರಗಾಗುವಂತಹದ್ದು. ಆ ದೇಶಗಳಿಗೆ ಹಲವು ಶತಕೋಟಿ ಡಾಲರ್‌ಗಳ ಆದಾಯ ಸಿಗುತ್ತಿದೆ. ನಮ್ಮ ರಾಜ್ಯದಲ್ಲೂ ಪ್ರತಿಭೆಗಳಿವೆ. ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಪರ್ಯಾಯವಾಗಿ ಆಧುನಿಕ ಕೋರ್ಸ್‌ಗಳಲ್ಲಿ ಅವಕಾಶ ನೀಡಿದರೆ ಉದ್ಯೋಗವೂ ಸಿಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ನಾವು ಈಗ ಆರಂಭಿಸುತ್ತಿರುವ ಕೋರ್ಸ್‌ಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ದುಬಾರಿ ಕೋರ್ಸ್‌ಗಳು ಎನಿಸಿವೆ’ ಎಂದರು.

‘ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರವೇ ಶಿಷ್ಯ ವೇತನ ನೀಡುತ್ತದೆ. ಟ್ಯಾಬ್ಲೆಟ್‌ಗಳನ್ನು ವಿತರಿಸಲಾಗುತ್ತದೆ. ಉತ್ತಮ ಗುಣಮಟ್ಟದ ಬೋಧನೆಯೂ ಇರುತ್ತದೆ’ ಎಂದರು.

ರಾಜ್ಯದ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಅರ್ಜಿ ನೀಡಲಾಗುತ್ತದೆ. 26 ಪಾಲಿಟೆಕ್ನಿಕ್‌ಗಳಲ್ಲಿ ಮೆರಿಟ್‌ ಆಧಾರಿತ ಪ್ರವೇಶ ನೀಡಲಾಗುತ್ತದೆ. ಉಳಿದ ಪಾಲಿಟೆಕ್ನಿಕ್‌ಗಳಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಇವತ್ತಿನಿಂದಲೇ (ಆ.12) ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕಲಿಕೆ ಅವಕಾಶ:

ಪರ್ಯಾಯ ಇಂಧನ ತಂತ್ರಜ್ಞಾನ, ಕ್ಲೌಡ್‌ ಕಂಪ್ಯೂಟಿಂಗ್‌ ಮತ್ತು ಬಿಗ್‌ ಡೇಟಾ, ಲಾಜಿಸ್ಟಿಕ್‌ ಟೆಕ್ನಾಲಜಿ, ಡೈರೆಕ್ಷನ್‌, ಸ್ಕ್ರೀನ್‌ ಪ್ಲೇ ಮತ್ತು ಟಿ.ವಿ ಪ್ರೊಡಕ್ಷನ್‌, ಆಟೋಮೇಷನ್‌ ಮತ್ತು ರೋಬಾಟಿಕ್ಸ್‌, ಸೈಬರ್‌ ಸೆಕ್ಯುರಿಟಿ, ಟ್ರಾವೆಲ್‌ ಟೂರಿಸಂ, ಫುಡ್‌ ಪ್ರೊಸೆಸಿಂಗ್‌ ಮತ್ತು ಪ್ರಿಸರ್ವೇಷನ್‌.

ಅಲ್ಲದೆ, ಸಂವಹನ ಕೌಶಲಗಳು, ಯೋಜನಾ ನಿರ್ವಹಣೆ ಕೌಶಲಗಳು, ಸಾಮಾನ್ಯ ಮಾಹಿತಿ ತಂತ್ರಜ್ಞಾನ ಕೌಶಲಗಳು, ಅಂಕಿ–ಅಂಶಗಳು ಮತ್ತು ವಿಶ್ಲೇಷಣಾ ಕೌಶಲಗಳು, ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ನ ಮೂಲಭೂತ ಕೌಶಲಗಳನ್ನು ಕಲಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.