ADVERTISEMENT

ಮಕ್ಕಳಲ್ಲಿ ಅಶ್ಲೀಲ ಚಿತ್ರದ ಗೀಳು: ನಿಯಂತ್ರಣ ಹೇಗೆ?

ಡಾ.ವೈಶಾಲಿ ಎಂ.ರಾಯ್ಕರ್‌
Published 25 ಫೆಬ್ರುವರಿ 2020, 2:50 IST
Last Updated 25 ಫೆಬ್ರುವರಿ 2020, 2:50 IST
   

ಅದೊಂದು ದಿನ ರೇವತಿ ತನ್ನ 14ರ ಹರೆಯದ ಮಗನ ಕೊಠಡಿಯ ಬಾಗಿಲು ನೂಕಿ ಒಳಹೋದಾಗ ಮಗ ಶೌಚಾಲಯಕ್ಕೆ ಹೋಗಿದ್ದ. ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಪರದೆಯ ಮೇಲೆ ಪಾಪ್‌ಅಪ್‌ನಲ್ಲಿ ನಗ್ನ ಯುವತಿಯ ಚಿತ್ರ ಫ್ಲ್ಯಾಷ್‌ ಆಗುತ್ತಿತ್ತು. ಮಗ ಅವಸರದಲ್ಲಿ ಬ್ರೌಸರ್‌ ಅನ್ನು ಮಿನಿಮೈಸ್‌ ಮಾಡಿ ಹೋಗಿದ್ದು ಅರಿತ ರೇವತಿ ಅದನ್ನು ತೆರೆದು ನೋಡಿದವಳೇ ಚಕಿತಳಾದಳು. ಅಶ್ಲೀಲ ಎಕ್ಸ್‌ ರೇಟೆಡ್‌ ವಿಡಿಯೊ (ಪೋರ್ನ್‌) ಸ್ಟ್ರೀಮ್‌ ಆಗುತ್ತಿತ್ತು. ಮಗನನ್ನು ಪ್ರಶ್ನಿಸಿದರೆ ತಡವರಿಸಿದ. ತನ್ನ ಸ್ನೇಹಿತರು ಮೇಲ್‌ನಲ್ಲಿ ಕಳಿಸಿದ್ದು ಎಂದು ಸಬೂಬು ಹೇಳಲಾರಂಭಿಸಿದ. ಇದು ಗೊತ್ತಾದ ರೇವತಿಯ ಗಂಡನಂತೂ ಬೆಳೆದ ಮಗನ ಮೇಲೆ ಕೈಮಾಡಲೂ ಆಗದೆ, ಬಯ್ದು ಒಂದಿಷ್ಟು ಆಕ್ರೋಶ ತೀರಿಸಿಕೊಂಡ.

ಆದರೆ ನಿಧಾನವಾಗಿ ವಿಚಾರಿಸಿದಾಗ ಗೊತ್ತಾಗಿದ್ದು, ಮಗ ಮತ್ತು ಆತನ ಸ್ನೇಹಿತರು ಶಾಲೆಯಲ್ಲಿ, ಆಟದ ಮೈದಾನದಲ್ಲಿ ಸ್ಮಾರ್ಟ್‌ಫೋನ್‌ನಲ್ಲೂ ಇಂತಹವುಗಳನ್ನು ನೋಡುತ್ತಾರೆ ಎಂಬುದು. ಮಗನನ್ನು ಸಂಪರ್ಕಿಸಲು ಫೋನ್‌ ಕೊಟ್ಟರೆ ಆತ ಅದನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೇ, ಪ್ರಾಜೆಕ್ಟ್‌ ವರ್ಕ್‌ ಮಾಡಲೆಂದು ಕೊಡಿಸಿದ ಕಂಪ್ಯೂಟರ್‌ ಅನ್ನೂ ತನ್ನ ಗೀಳಿಗಾಗಿ ಬಳಸಿಕೊಂಡಿದ್ದ. ಫೋನ್‌, ಕಂಪ್ಯೂಟರ್‌ ಕಸಿದುಕೊಂಡರೆ ಆತ ತನ್ನ ಸ್ನೇಹಿತರ ಡಿವೈಸ್‌ಗಳಲ್ಲಿ ನೋಡುವುದಿಲ್ಲ ಎಂದು ಏನು ಗ್ಯಾರಂಟಿ?

ಮಕ್ಕಳು ತಮ್ಮ ಓದಿನ ಸಲುವಾಗಿ ಅಂತರ್ಜಾಲದ ಮೊರೆ ಹೋಗುವುದು ಈಗ ಸಾಮಾನ್ಯ ವಿಷಯ. ಆದರೆ ಅದರ ಜೊತೆಗೆ ಇಂತಹ ಅಪಾಯಕಾರಿ ವಿಷಯಗಳೂ ಮಕ್ಕಳ ಆಸಕ್ತಿಯನ್ನು ಸಹಜವಾಗಿಯೇ ಕೆರಳಿಸುತ್ತವೆ. ಮಕ್ಕಳು ಶಾಲೆಗಳಲ್ಲಿ, ಕೋಚಿಂಗ್‌ ತರಗತಿಗಳಲ್ಲಿ ಇಂತಹ ಫೋನ್‌ ಮೂಲಕ ಆರಾಮವಾಗಿ ಅಶ್ಲೀಲ ಚಿತ್ರಗಳನ್ನು ನೋಡಬಲ್ಲರು. ಅಂತರ್ಜಾಲದಲ್ಲಿ ಇಂತಹ ವೆಬ್‌ಸೈಟ್‌ಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಎಂದು ಹಾಕಿರುತ್ತಾರೆ. ಅಂತಹ ಬಾಕ್ಸ್‌ ಮೇಲೆ ಯಾರೂ ಬೇಕಾದರೂ ರೈಟ್‌ ಮಾರ್ಕ್‌ ಮಾಡಬಹುದಲ್ಲ!

ADVERTISEMENT

ಪೋಷಕರು ಏನು ಮಾಡಬಹುದು?

ಇದಕ್ಕೆಲ್ಲ ಪೋಷಕರು ತಮ್ಮ ಮಕ್ಕಳು 5–6 ವರ್ಷಗಳಿರುವಾಗಲೇ ಅವರಿಗೆ ಲೈಂಗಿಕ ಶಿಕ್ಷಣದ ಪ್ರಥಮ ಪಾಠಗಳನ್ನು ಹೇಳಲಾರಂಭಿಸುವುದು ಒಳಿತು. ಅಂದರೆ ಅವರ ದೇಹದ ವಿವಿಧ ಅಂಗಾಂಗಗಳ ಬಗ್ಗೆ ಅರಿವು ಮೂಡಿಸುವ ಯತ್ನ ಆರಂಭಿಸಬಹುದು. 10–11ರ ವಯಸ್ಸಿನಲ್ಲಿ ಹದಿಹರೆಯದ ಲಕ್ಷಣಗಳು ಕಾಣಿಸಿಕೊಳ್ಳುವಾಗ ಅದರ ಬಗ್ಗೆ ವಿವರಿಸಬಹುದು. ಆದಷ್ಟೂ ಮುಜುಗರವಾಗದಂತೆ ಹೇಳಿದರೆ ಉತ್ತಮ. ಮುಕ್ತವಾಗಿ ಮಾತನಾಡಿದರೆ, ಮಕ್ಕಳೂ ಕೂಡ ತಮ್ಮಲ್ಲಿ ಮೂಡುವ ಅನುಮಾನಗಳನ್ನು, ಭಾವನೆಗಳನ್ನು ಪೋಷಕರ ಬಳಿ ಹೇಳಿಕೊಂಡು ಸೂಕ್ತ ಪರಿಹಾರ ಪಡೆಯುತ್ತಾರೆ.

ಜನನಾಂಗಗಳ ಬಗ್ಗೆ ಸೂಕ್ತ ಹೆಸರನ್ನೇ ಹೇಳಿ. ಅವುಗಳ ಕಾರ್ಯನಿರ್ವಹಣೆ ಕುರಿತು ವಿವರಿಸಿ. ವಿವರಿಸುವಾಗ ಆದಷ್ಟೂ ಸಹಜವಾಗಿರಲು ಯತ್ನಿಸಿ. ಯಾವುದೇ ರೀತಿಯ ಉಪದೇಶ ಬೇಡ. ಹಾಗೇ ಹಿಂಜರಿಕೆಯೂ ಬೇಡ. ಪ್ರಶ್ನೆಗಳನ್ನು ಕೇಳಿದರೆ ಗದರಿಸಬೇಡಿ.

ಲೈಂಗಿಕ ಶಿಕ್ಷಣ

ನಿಮ್ಮ ಮಕ್ಕಳು ಈ ರೀತಿಯ ಕಾಮ ಪ್ರಚೋದಕ ಚಿತ್ರ/ ವಿಡಿಯೊ ನೋಡುತ್ತಿರುವುದು ಅಥವಾ ಅವರ ಮೊಬೈಲ್‌/ ಕಂಪ್ಯೂಟರ್‌ನಲ್ಲಿ ಇರುವುದು ಗಮನಕ್ಕೆ ಬಂದರೆ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ಕೂಡ ಮುಖ್ಯ. ತಕ್ಷಣಕ್ಕೆ ಕೋಪದಿಂದ ಕೂಗಾಡುವುದು, ಹೊಡೆದು, ಬಯ್ದು ಮಾಡುವುದು, ಮಕ್ಕಳ ಜೊತೆ ಮಾತನಾಡದೆ ಹಗೆ ಸಾಧಿಸುವುದು.. ಇವೆಲ್ಲ ಮಾಮೂಲು. ಇಂತಹ ನಡವಳಿಕೆಗಳಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಕದ್ದು ಚಿತ್ರಗಳನ್ನು ನೋಡಬಹುದು. ಪೋಷಕರನ್ನು ಶತ್ರುಗಳಂತೆ ನೋಡಬಹುದು. ಆದರೆ ಇಂತಹ ಸಿಟ್ಟನ್ನು ನಿಯಂತ್ರಿಸಿಕೊಂಡು ನಿಧಾನವಾಗಿ ಕೂತು ಮಾತನಾಡಿ. ಇದನ್ನು ನೋಡಲು ಯಾರು ಪ್ರೇರಣೆ? ಸ್ನೇಹಿತರೇ ಅಥವಾ ಆಕಸ್ಮಿಕವಾಗಿ ನೋಡಿದ್ದೇ ಅಥವಾ ನೀನೇ ನೋಡಲು ಆರಂಭಿಸಿದೆಯಾ? ಹೀಗೆ ಮೊದಲು ಅದನ್ನು ವಿಚಾರಿಸಿಕೊಂಡ ನಂತರ, ಲೈಂಗಿಕತೆ, ಲೈಂಗಿಕ ಕ್ರಿಯೆ, ಜನನಾಂಗಗಳ ಬಗ್ಗೆ ವಿವರಿಸಿ. ವಿಡಿಯೊಗಳಲ್ಲಿ ಕಾಣಿಸುವುದು ನಿಜವಾದದ್ದಲ್ಲ. ಅದು ನಟನೆ. ಅವರು ಹಣ ತೆಗೆದುಕೊಂಡು ನಟಿಸುತ್ತಾರೆ. ಅಂಗಾಂಗಗಳ ಗಾತ್ರ, ಆಕಾರ ಶಸ್ತ್ರಚಿಕಿತ್ಸೆ ಮೂಲಕ ಬದಲಾಗಿರುತ್ತದೆ. ನಿಜವಾದ ಬದುಕಿನಲ್ಲಿ ಸಂಗಾತಿ ಬಗ್ಗೆ ಪ್ರೀತಿ, ಕಾಳಜಿ ಇರುತ್ತದೆ ಎಂದು ವಿವರಿಸಿ. ಲೈಂಗಿಕತೆ ಕುರಿತು ವೈಜ್ಞಾನಿಕವಾಗಿ ವಿವರಿಸುವ ಪುಸ್ತಕಗಳು, ವೆಬ್‌ಸೈಟ್‌ಗಳ ಬಗ್ಗೆ ಹೇಳಿಕೊಡಿ.

ಪೋರ್ನ್‌ ವೀಕ್ಷಣೆಯಿಂದ ದುಷ್ಪರಿಣಾಮಗಳು

ಗಂಡು ಮಕ್ಕಳಲ್ಲಿ ಲಿಂಗಭೇದ ಮನೋಭಾವ ಹುಟ್ಟುಹಾಕಬಹುದು. ಹುಡುಗಿಯರಿರುವುದೇ ತಮ್ಮ ಲೈಂಗಿಕ ಆಸೆ ತೀರಿಸಿಕೊಳ್ಳಲು ಎಂಬ ಭಾವನೆ ಹುಟ್ಟಿಸಬಹುದು.

ಹೆಣ್ಣುಮಕ್ಕಳ ಅಂಗಾಂಗಗಳನ್ನು ಕೀಳಾಗಿ ನೋಡಿ ಲೇವಡಿ, ಅವಮಾನ ಮಾಡುವುದು, ನೈಸರ್ಗಿಕವಾದ ಲೈಂಗಿಕ ಕ್ರಿಯೆಯನ್ನು ಹಿಂಸಾಮಟ್ಟಕ್ಕೆ ಒಯ್ಯುವುದು.

ಹುಡುಗಿಯರು ತಾವಿರುವುದೇ ಗಂಡುಮಕ್ಕಳಿಗೆ ಲೈಂಗಿಕ ತೃಪ್ತಿ ನೀಡಲು ಎಂದುಕೊಳ್ಳಬಹುದು.

ಮಕ್ಕಳು ಬೆಳೆದು ದೊಡ್ಡವರಾದಂತೆ ಕೇವಲ ಲೈಂಗಿಕ ಸಂಬಂಧದತ್ತ ಆಸಕ್ತಿ ತೋರಿಸಿ, ಪ್ರೀತಿ– ಪ್ರೇಮ, ನಂಬಿಕೆ, ಪರಸ್ಪರ ಗೌರವವಿರುವ, ಬದ್ಧತೆ ಬೇಡುವ ಸಂಬಂಧಕ್ಕೆ ನಿರಾಸಕ್ತಿ ತೋರಿಸಬಹುದು.

ಇದಲ್ಲದೇ ಸೆಕ್ಸ್ಟಿಂಗ್‌ ಮಾಡುವ, ಸೈಬರ್‌ ಪೀಡನೆಯಂತಹ ನಡವಳಿಕೆ ಅವರಲ್ಲಿ ಕಂಡುಬರಬಹುದು.

ತಮ್ಮ ದೇಹದ ಬಗ್ಗೆ ಅಸಂತೃಪ್ತಿ ಬೆಳೆಸಿಕೊಳ್ಳಬಹುದು. ಕಾಮ ಪ್ರಚೋದಕ ಚಿತ್ರಗಳಲ್ಲಿ ತೋರಿಸುವ ಅಸಹಜ ದೇಹದಾರ್ಢ್ಯ, ಅಂಗಾಂಗಗಳನ್ನು ಹೊಂದುವ ಉದ್ದೇಶದಿಂದ ಅಪಾಯಕಾರಿ ಡಯಟ್‌, ಔಷಧಿಗಳ ಮೊರೆ ಹೋಗುವ ಸಾಧ್ಯತೆಯೂ ಇದೆ.

ಪೋಷಕರಿಗೆ, ಶಿಕ್ಷಕರಿಗೆ ತಮ್ಮ ಈ ಗೀಳು ಗೊತ್ತಾದರೆ ಎಂಬ ಭಯದಿಂದ ಆತಂಕ, ಖಿನ್ನತೆ, ಒಂಟಿತನ ಕಾಡುವ ಸಾಧ್ಯತೆಯೂ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.