ADVERTISEMENT

ಪ್ರಜಾವಾಣಿ ರಸಪ್ರಶ್ನೆಗೆ ನೋಂದಣಿ ಆರಂಭ

ಪ್ರಜಾವಾಣಿ ವಿಶೇಷ
Published 27 ಅಕ್ಟೋಬರ್ 2024, 20:51 IST
Last Updated 27 ಅಕ್ಟೋಬರ್ 2024, 20:51 IST
Venugopala K.
   Venugopala K.

ನವೆಂಬರ್‌ ತಿಂಗಳಿನಿಂದ ಜನವರಿ ಅಂತ್ಯದವರೆಗೂ ಕರ್ನಾಟಕದಾದ್ಯಂತ ಮಕ್ಕಳೆಲ್ಲ ಪ್ರಚಲಿತ ವಿದ್ಯಮಾನಗಳತ್ತ ಗಮನ ನೀಡುತ್ತಾರೆ. ಶಿಕ್ಷಕರೂ ಪತ್ರಿಕೆಗಳಿಂದ ಯಾರು ಏನಾದರು, ಯಾರಿಗೆ ಯಾವ ಪ್ರಶಸ್ತಿ ಲಭಿಸಿತು, ಕ್ರೀಡೆಯಲ್ಲಿ ಗೆದ್ದವರು ಯಾರು, ನಿವೃತ್ತರಾದವರು ಯಾರು? ಬಾಹ್ಯಾಕಾಶದಲ್ಲಿ ಏನೆಲ್ಲ ಸಾಧನೆಗಳಾದವು, ಹೀಗೆ ಹಲವಾರು ವಿಷಯಗಳತ್ತ ಹದ್ದಿನ ಕಣ್ಣಿಟ್ಟು ಕಾಯುತ್ತಾರೆ.

ಕಾರಣ, ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ ರಾಜ್ಯದೆಲ್ಲೆಡೆ ಸಂಚರಿಸುತ್ತದೆ. ಐದು ವಲಯಗಳಲ್ಲಿ ಮೊದಲ ಸುತ್ತು, ಎರಡನೆಯ ಸುತ್ತು ಮತ್ತು ಅಂತಿಮ ಸುತ್ತಿನಲ್ಲಿ ಆಯ್ಕೆಯಾದವರು ಅಂತಿಮ ಹಣಾಹಣಿಗೆ ಬೆಂಗಳೂರಿಗೆ ಬರುತ್ತಾರೆ. 

ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಈ ಚಾಂಪಿಯನ್‌ಶಿಪ್‌ಗಾಗಿ ಎದುರು ನೋಡುತ್ತಾರೆ.

ADVERTISEMENT

ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಪ್ರಚಲಿತ ಜ್ಞಾನ, ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಜೊತೆಗೆ ದೃಕ್‌ ಶ್ರವಣದ ಪ್ರಶ್ನೆಗಳನ್ನೂ ಕೇಳುವುದರಿಂದ ಅವರಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೆಚ್ಚುತ್ತದೆ. ವಿಶ್ಲೇಷಿಸುವ ವಿವೇಚನಾ ಶಕ್ತಿಯೂ ಬೆಳೆಯುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಸೋಲು–ಗೆಲುವುಗಳನ್ನು ಸ್ವೀಕರಿಸುವ ಮನೋಸ್ಥೈರ್ಯ ಹೆಚ್ಚಾಗುತ್ತದೆ. 

ಪತ್ರಿಕೆಗಳನ್ನು ಓದುತ್ತಲೇ, ಜಾಗತಿಕ ವಿದ್ಯಮಾನಗಳತ್ತ ಒಂದು ಕಣ್ಣಿಡುವುದು, ಜೊತೆಗೆ ಓದಿದ್ದನ್ನು ಅರಗಿಸಿಕೊಳ್ಳುವುದು, ಎಂದರೆ ನೆನಪಿನಲ್ಲಿಟ್ಟುಕೊಳ್ಳುವುದು. ಕೇಳಿದ ತಕ್ಷಣ ಉತ್ತರಿಸುವುದು, ಕೆಲವೊಮ್ಮೆ ಎಲ್ಲ ಗೊತ್ತಿದ್ದರೂ ಕೇಳಿದಾಗ ಕೂಡಲೆ ನೆನಪಾಗುವುದಿಲ್ಲ. ಇನ್ನೊಬ್ಬರು ಉತ್ತರಿಸಿದಾಗ ಈ ಉತ್ತರ ನಮಗೂ ಗೊತ್ತಿತ್ತು ಎಂದೆಲ್ಲ ಎನಿಸತೊಡಗುತ್ತದೆ. ಇಂಥ ಕಾರಣಗಳಿಗೆ ಅಂಕ ಕಳೆದುಕೊಂಡು, ಕೊನೆಯ ಹಂತದಲ್ಲಿ ಗೆಲುವಿನ ಮುಂದೆ ಮುಗ್ಗರಿಸುವ ವಿದ್ಯಾರ್ಥಿಗಳು ಪ್ರತಿವರ್ಷವೂ ಕಾಣಸಿಗುತ್ತಾರೆ.

ನೋಂದಣಿಯೊಂದಿಗೆ ನಿಮ್ಮ ತಯಾರಿ ಹೀಗಿರಲಿ.
ಪ್ರತಿದಿನವೂ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿರಿ. ಮೊಟ್ಟೆ, ಬಾಳೆಹಣ್ಣು, ಮೊಳಕೆ ಕಾಳು ನಿಮ್ಮ ಆಹಾರದಲ್ಲಿರಲಿ. 

ಯಾವುದೇ ಕಾರಣಕ್ಕೂ ಧಾವಂತಕ್ಕೆ ಬೀಳದಂತೆ ಮನಸು ಶಾಂತವಾಗಿರಿಸಿಕೊಳ್ಳುವುದು ರೂಢಿಸಿಕೊಳ್ಳಿ.

ಇದಕ್ಕಾಗಿ ದೀರ್ಘ ಉಸಿರಾಟದ ಅಭ್ಯಾಸ ಮಾಡಿಕೊಳ್ಳಿ. ಪ್ರಶ್ನೆಗಳನ್ನು ಕೇಳಿದಾಗ ಶಾಂತಚಿತ್ತರಾಗಿ ಉತ್ತರಿಸುವುದು ಸಾಧ್ಯವಾಗುತ್ತದೆ.

ಕರ್ನಾಟಕದ ಇತಿಹಾಸ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಕ್ರೀಡೆ, ವಿಜ್ಞಾನ, ಬಾಹ್ಯಾಕಾಶ, ಆಟೊಮೊಬೈಲ್ಸ್‌, ವ್ಯಕ್ತಿಗಳು, ಪ್ರಶಸ್ತಿಗಳು ಹೀಗೆ ವಿಭಾಗವಾರು ವಿಂಗಡಿಸಿಕೊಳ್ಳಿ. ಓದುವ ಸಾಮಗ್ರಿಗಳನ್ನು ಒಟ್ಟಿಗೆ ಕಲೆಹಾಕಿ ಎಲ್ಲವನ್ನೂ ಕಲಸುಮೇಲೊಗರ ಮಾಡಿಕೊಳ್ಳುವ ಬದಲು, ಯೋಜಿಸಿ, ವಿಂಗಡಿಸಿಕೊಂಡಾಗ ನೆನಪಿಡುವುದು ಸುಲಭವಾಗುತ್ತದೆ. 

ರಸಪ್ರಶ್ನೆ ಸ್ಪರ್ಧೆಗಳು ಕೇವಲ ನೆನಪಿನ ಶಕ್ತಿಯನ್ನು ಪರಿಶೀಲಿಸುವುದಿಲ್ಲ. ನಿಮ್ಮ ಜಾಣ್ಮೆ ಹಾಗೂ ಚಾಕಚಕ್ಯತೆಯನ್ನು ಪರಿಶೀಲಿಸುತ್ತವೆ. ನಿಮ್ಮ ಆತ್ಮಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ. ಉಳಿದ ಮಕ್ಕಳೊಡನೆ ನಿಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡುತ್ತದೆ. 

ಇವೆಲ್ಲವನ್ನೂ ನಿಭಾಯಿಸುವವರೆ ನಿಜವಾದ ಚಾಂಪಿಯನ್‌ ಆಗಿ ಹೊರಹೊಮ್ಮುತ್ತಾರೆ. ಉಳಿದವರು ತಮ್ಮ ಸಾಮರ್ಥ್ಯವನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ ವರ್ಷದ ಸ್ಪರ್ಧೆಯ ತಯಾರಿಗೆ ಸಜ್ಜಾಗುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಸಾಮರ್ಥ್ಯ ಬೆಳೆಸಿಕೊಳ್ಳುವ ಬಗೆಯನ್ನು ಅರಿತುಕೊಳ್ಳುತ್ತಾರೆ. 

ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಈ ಕಾರಣದಿಂದ ಮುಖ್ಯವಾಗುತ್ತದೆ. ಆಲ್‌ ದ ಬೆಸ್ಟ್‌.. ಕ್ಯು ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ನೊಂದಣಿ ಮಾಡಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.