ADVERTISEMENT

ಸ್ಪರ್ಧಾ ವಾಣಿ | 12 ನಿಮಿಷಗಳಲ್ಲಿ ಸಿದ್ಧಗೊಳ್ಳುವ ಆಸ್ಪತ್ರೆ ‘ಭೀಷ್ಮ್‌’

ಯು.ಟಿ. ಆಯಿಷಾ ಫರ್ಝಾನ
Published 16 ಅಕ್ಟೋಬರ್ 2024, 23:30 IST
Last Updated 16 ಅಕ್ಟೋಬರ್ 2024, 23:30 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಸರ್ಕಾರಕ್ಕೆ ಈಚೆಗೆ ನಾಲ್ಕು (BHISHM) ಕ್ಯೂಬ್‌ಗಳನ್ನು ಒದಗಿಸಿದ ಸಂದರ್ಭ.<br></p></div>

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಸರ್ಕಾರಕ್ಕೆ ಈಚೆಗೆ ನಾಲ್ಕು (BHISHM) ಕ್ಯೂಬ್‌ಗಳನ್ನು ಒದಗಿಸಿದ ಸಂದರ್ಭ.

   

ಪಿಟಿಐ ಚಿತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಸರ್ಕಾರಕ್ಕೆ ನಾಲ್ಕು 'ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹ್ಯೋಗ್ ಹಿತಾ ಮತ್ತು ಮೈತ್ರಿ' (BHISHM) ಕ್ಯೂಬ್‌ಗಳ ನೆರವನ್ನು ನೀಡಿದ್ದಾರೆ.

ADVERTISEMENT

* ಇವು ಪೋರ್ಟಬಲ್ ಆಸ್ಪತ್ರೆಗಳ ಹೊಸ ಮಾದರಿಯದಾಗಿದ್ದು ತುರ್ತು ಮಾನವೀಯ ನೆರವಿಗೆ ಭಾರತದ ಬದ್ಧತೆಯನ್ನು ತೋರಿಸುತ್ತದೆ. ಹಾಗೂ ಭಾರತದ ಕ್ಷಿಪ್ರ ವೈದ್ಯಕೀಯ ಪ್ರತಿಕ್ರಿಯೆ ತಂತ್ರಜ್ಞಾನದಲ್ಲಿ ಪ್ರಮುಖ ಆವಿಷ್ಕಾರವಾಗಿದೆ.

ಎಲ್ಲಿ ಅಗತ್ಯವಿದೆಯೋ ಅಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗಳನ್ನು ಈ ಕ್ಯೂಬ್‌ ಗಳನ್ನು ಜೋಡಿಸುವ ಮೂಲಕ ನಿರ್ಮಿಸಲಾಗುತ್ತದೆ.

* BHISHM ಕ್ಯೂಬ್ ಗಳನ್ನು ತುರ್ತು ಸಂದರ್ಭಗಳಲ್ಲಿ ತಕ್ಷಣದ ವೈದ್ಯಕೀಯ ನೆರವು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ಘಟಕವು ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಸುಮಾರು 200 ವೈವಿಧ್ಯಮಯ ತುರ್ತು ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

* ಈ ವಾಹನಗಳು ಶಕ್ತಿಯ ಸ್ವಯಂ-ಉತ್ಪಾದನೆ ಮತ್ತು ಆಮ್ಲಜನಕ ಪೂರೈಕೆ ಸಾಮರ್ಥ್ಯಗಳನ್ನು ಒಳಗೊಂಡಿರುತ್ತವೆ. ಆರಂಭಿಕ ತರಬೇತಿಗಾಗಿ ಭಾರತೀಯ ತಜ್ಞರನ್ನು ಕೂಡಾ ಕಳಿಸಲಾಗುತ್ತದೆ. ಈ ಪೋರ್ಟಬಲ್ ಸೌಲಭ್ಯಗಳು ಉಕ್ರೇನ್‌ಗೆ ಭಾರತದ ಬೆಂಬಲವನ್ನು ಎತ್ತಿಹಿಡಿಯುವುದಲ್ಲದೆ, ಸವಾಲಿನ ಸಂದರ್ಭಗಳಲ್ಲಿ ಜೀವ ಉಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.

ಆರೋಗ್ಯ ಮೈತ್ರಿ ಯೋಜನೆ 

* 2023 ರ ಜನವರಿಯಲ್ಲಿ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 'ಆರೋಗ್ಯ ಮೈತ್ರಿ' ಯೋಜನೆಯು ಜಾಗತಿಕ ಆರೋಗ್ಯ ಮತ್ತು ವಿಪತ್ತು ಪರಿಹಾರಕ್ಕೆ ಭಾರತದ ಬದ್ಧತೆಯನ್ನು ವಿಸ್ತರಿಸುವ ಮಾನವೀಯ ಉಪಕ್ರಮವಾಗಿದೆ.

* 100 ಕ್ಕೂ ಹೆಚ್ಚು ದೇಶಗಳಿಗೆ ಭಾರತೀಯ ನಿರ್ಮಿತ COVID-19 ಲಸಿಕೆಗಳನ್ನು ವಿತರಿಸಿದ 'ಲಸಿಕೆ ಮೈತ್ರಿ' ಕಾರ್ಯಕ್ರಮದ ಯಶಸ್ಸಿನ ಮೇಲೆ ರೂಪಿಸಲ್ಪಟ್ಟ, 'ಆರೋಗ್ಯ ಮೈತ್ರಿ' ನೈಸರ್ಗಿಕ ವಿಪತ್ತುಗಳು ಅಥವಾ ಮಾನವೀಯ ಬಿಕ್ಕಟ್ಟುಗಳಿಂದ ಬಳಲುತ್ತಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

* ಈ ಯೋಜನೆಯು ಜವಾಬ್ದಾರಿಯುತ ಜಾಗತಿಕ ಪಾಲುದಾರನಾಗಿ ಭಾರತದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಸಂಕಷ್ಟದ ಸಮಯದಲ್ಲಿ ನಿರ್ಣಾಯಕ ಬೆಂಬಲವನ್ನು ನೀಡುತ್ತದೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಪ್ರಯತ್ನಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.

BHISHMನ ವೈಶಿಷ್ಟ್ಯ

* ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹ್ ಹಿತಾ & ಮೈತ್ರಿ (BHISHM)ಯು ಆರೋಗ್ಯ ಮೈತ್ರಿ ಯೋಜನೆಯ ಭಾಗವಾಗಿದ್ದು ಇದು ಅತ್ಯಾಧುನಿಕ ತುರ್ತು ವೈದ್ಯಕೀಯ ನೆರವು ಕಾರ್ಯಕ್ರಮವಾಗಿದೆ.

* BHISHM ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಆದ ಮಿನಿ ಕ್ಯೂಬ್‌ ಗಳನ್ನು ಹೊಂದಿದ್ದು ಇದು ಅಗತ್ಯ ಔಷಧಗಳು ಮತ್ತು ಸಲಕರಣೆಗಳನ್ನು ಒಳಗೊಂಡಿರುತ್ತದೆ ಹಾಗೂ ಇದನ್ನು ತುರ್ತು ಸಂದರ್ಭಗಳಲ್ಲಿ ತ್ವರಿತ ನಿಯೋಜನೆಗಾಗಿ ವಿನ್ಯಾಸಗೊಳಿಸಲಾಗಿದೆ.

* BHISHM ವ್ಯವಸ್ಥೆಯಲ್ಲಿ ಮೂವತ್ತಾರು ಮಿನಿ ಘನಗಳನ್ನು ಜೋಡಿಸಿ ಒಂದು ಪ್ರದಾನ ಘನವನ್ನು ರೂಪಿಸಲಾಗುತ್ತದೆ. ಮತ್ತು ಎರಡು ಪ್ರಧಾನ ಘನಗಳನ್ನು ಜೋಡಿಸಿದರೆ ಪೂರ್ಣ BHISHM ಕ್ಯೂಬ್ ಘಟಕವು ತಯಾರಾಗುತ್ತವೆ. ಈ ರೆಡಿಮೇಡ್‌ ಆಸ್ಪತ್ರೆಯು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಂತೆ 200 ಪ್ರಕರಣಗಳಿಗೆ ವೈದ್ಯಕೀಯ ಆರೈಕೆಯನ್ನು ನೀಡಲು ಶಕ್ತವಾಗಿರುತ್ತವೆ.

ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಮತ್ತು 180 ಭಾಷೆಗಳಲ್ಲಿ ಡಿಜಿಟಲ್ ಬೆಂಬಲದ ಮೂಲಕ ದಾಸ್ತಾನು ನಿರ್ವಹಣೆಯನ್ನು ಒಳಗೊಂಡಿರುವ ಸುಧಾರಿತ ತಂತ್ರಜ್ಞಾನವನ್ನು ಈ ವ್ಯವಸ್ಥೆಯು ಹೊಂದಿದೆ.

* BHISHM ಕ್ಯೂಬ್‌ನ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಕ್ಷಿಪ್ರ ನಿಯೋಜನೆ ಸಾಮರ್ಥ್ಯ. ಸಾಮೂಹಿಕ ಅಪಘಾತದಂತಹಾ ಘಟನೆಗಳಲ್ಲಿ ಸಂಪೂರ್ಣ ಘಟಕವನ್ನು 12 ನಿಮಿಷಗಳಲ್ಲಿ ಸ್ಥಾಪಿಸಬಹುದು.

ತುರ್ತುಸ್ಥಿತಿಗಳ "ಗೋಲ್ಡನ್ ಅವರ್" ಸಮಯದಲ್ಲಿ ಇದು ನಿರ್ಣಾಯಕ ಆರೈಕೆಯನ್ನು ಒದಗಿಸುತ್ತದೆ.

* ಕ್ಯೂಬ್ ಸುಲಭವಾಗಿ ಸಾಗಿಸಬಹುದಾದ 72 ಘಟಕಗಳನ್ನು ಒಳಗೊಂಡಿದೆ. ಕೈಯಲ್ಲಿಯೇ ಸಾಗಿಸಬಹುದಾದ, ಬೈಸಿಕಲ್ ಮೂಲಕ ಅಥವಾ ಡ್ರೋನ್ ಸಾರಿಗೆ ಸೇರಿದಂತೆ ಯಾವುದೇ ಮಾಧ್ಯಮದ ಮೂಲಕ ಇವುಗಳನ್ನು ಕೊಂಡೊಯ್ಯುವಂತೆ ಹಗುರವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಘನಗಳು ದೃಢವಾದ ಜಲನಿರೋಧಕವಾಗಿದ್ದು ಹಗುರವಾಗಿರುತ್ತವೆ. ಅವುಗಳು ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ಮತ್ತು ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಬಳಸಲು ಸುಲಭವಾಗುವಂತೆ ರಚಿಸಲಾಗಿದೆ.

* BHISHM Cubeನ ಸುಧಾರಿತ ವೈದ್ಯಕೀಯ ಉಪಕರಣವು ಸಮರ್ಥ ನಿರ್ವಹಣೆಗಾಗಿ RFID(Radio frequency Identification) ನಿಂದ ಟ್ಯಾಗ್ ಮಾಡಲ್ಪಟ್ಟಿದೆ. ಅತ್ಯಾಧುನಿಕ ಸಾಫ್ಟ್‌ವೇರ್ ಸಿಸ್ಟಮ್ ಮೂಲಕ ಆಪರೇಟರ್‌ಗಳಿಗೆ ತ್ವರಿತವಾಗಿ ವಸ್ತುಗಳನ್ನು ಪತ್ತೆಹಚ್ಚಲು, ಬಳಕೆ ಮತ್ತು ಮುಕ್ತಾಯ ದಿನಾಂಕಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಿದ್ಧತೆಯನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಈ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಶ್ಲೇಷಣೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ. ಪರಿಣಾಮಕಾರಿ ಸಮನ್ವಯ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ಕ್ಷೇತ್ರದಲ್ಲಿ ವೈದ್ಯಕೀಯ ಸೇವೆಗಳ ಸಮರ್ಥ ನಿರ್ವಹಣೆಯನ್ನು ಸುಗಮಗೊಳಿಸುವ ಮೂಲಕ ವಿಪತ್ತಿನ ಸಮಯದಲ್ಲಿ ಆಪತ್ಬಾಂಧವನಂತೆ ಕಾರ್ಯನಿರ್ವಹಿಸುತ್ತದೆ.

BHISHMನ ಇತ್ತೀಚಿನ ನಿಯೋಜನೆಗಳು

* ಜನವರಿ 2024 ರಲ್ಲಿ, 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ವೈದ್ಯಕೀಯ ಸಿದ್ಧತೆಯ ಸಲುವಾಗಿ ಅಯೋಧ್ಯೆಯಲ್ಲಿ ಎರಡು ಆರೋಗ್ಯ ಮೈತ್ರಿ ವಿಪತ್ತು ನಿರ್ವಹಣಾ ಕ್ಯೂಬ್-ಭೀಷ್ಮ್ ಘಟಕಗಳನ್ನು ನಿಯೋಜಿಸಲಾಗಿತ್ತು.

* ಈ ನಿಯೋಜನೆಯು ಯೋಜಿತ ಘಟನೆಗಳು ಮತ್ತು ಅನಿರೀಕ್ಷಿತ ತುರ್ತುಸ್ಥಿತಿಗಳೆರಡನ್ನೂ ನಿರ್ವಹಿಸುವಲ್ಲಿ ತನ್ನ ದಕ್ಷತೆಯನ್ನು ನಿರೂಪಿಸುತ್ತದೆ.

* ಇದಲ್ಲದೆ, ಆಗಸ್ಟ್ 17, 2024 ರಂದು, ಭಾರತೀಯ ವಾಯುಪಡೆ (IAF) ಮತ್ತು ಭಾರತೀಯ ಸೇನೆಯು ಸುಮಾರು 15,000 ಅಡಿ ಎತ್ತರದ ಪ್ರದೇಶದಲ್ಲಿ ಆರೋಗ್ಯ ಮೈತ್ರಿ ಹೆಲ್ತ್ ಕ್ಯೂಬ್ ಅನ್ನು ಪ್ಯಾರಾ-ಡ್ರಾಪ್ ಮಾಡುವ ಮೂಲಕ ಅದ್ಭುತ ಕಾರ್ಯಾಚರಣೆಯನ್ನು ನಡೆಸಿತು.

* ಈ ಕಾರ್ಯಾಚರಣೆಯು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸನ್ನಿವೇಶಗಳಲ್ಲಿ ತ್ವರಿತ ಮತ್ತು ಪರಿಣಾಮಕಾರಿ ಬೆಂಬಲವನ್ನು ಒದಗಿಸುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿಯವರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ.

ಆರೋಗ್ಯ ಮೈತ್ರಿ ಯೋಜನೆ ಮತ್ತು BHISHM ಉಪಕ್ರಮವು ಪೋರ್ಟಬಲ್ ತುರ್ತು ವೈದ್ಯಕೀಯ ಆರೈಕೆಯಲ್ಲಿ ಮಹತ್ವದ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಈ ನವೀನ ಉಪಕ್ರಮಗಳು ವ್ಯಾಪಕವಾದ ವೈದ್ಯಕೀಯ ಸಾಮರ್ಥ್ಯಗಳು, ಕ್ಷಿಪ್ರ ನಿಯೋಜನೆ ಮತ್ತು ಸುಧಾರಿತ ತಂತ್ರಜ್ಞಾನವನ್ನು ಸಂಯೋಜಿಸುತ್ತವೆ. ಇದು ಜೀವಗಳನ್ನು ಉಳಿಸಲು ಮತ್ತು ವಿಶ್ವಾದ್ಯಂತ ಸವಾಲಿನ ಸಂದರ್ಭಗಳಲ್ಲಿ ಅಗತ್ಯ ವೈದ್ಯಕೀಯ ಬೆಂಬಲವನ್ನು ನೀಡಲು ನಿರ್ಮಿಸಲಾದ ವಿಶೇಷ ಸಾಧನಗಳಾಗಿವೆ.

ಈ ಪ್ರಯತ್ನಗಳ ಮೂಲಕ, ಭಾರತವು ತನ್ನದೇ ಆದ ತುರ್ತು ವೈದ್ಯಕೀಯ ಪ್ರತಿಕ್ರಿಯೆಯನ್ನು ಮುನ್ನಡೆಸುತ್ತಿದ್ದು , ಜಾಗತಿಕ ಸಮುದಾಯಕ್ಕೆ ನೆರವಿನಸೆಲೆಯನ್ನು ವಿಸ್ತರಿಸುತ್ತಿದೆ. ವಿಶ್ವಾದ್ಯಂತ ಸಮುದಾಯಗಳು ಮತ್ತು ಅಂತರಾಷ್ಟ್ರೀಯ ತುರ್ತು ಪ್ರತಿಕ್ರಿಯೆ ಮತ್ತು ವೈದ್ಯಕೀಯ ಆರೈಕೆಯಲ್ಲಿ ಮಾನವೀಯ ನೆರವನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಭಾರತವು ಈ ಮೂಲಕ ಎತ್ತಿಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.