ಬೆಂಗಳೂರು: ಪಿಯು ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲು ಅನುಮತಿ ಕೋರಿ ಪದವಿಪೂರ್ವ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಸಲ್ಲಿಸಿದ ಶುಲ್ಕ ಹೆಚ್ಚಳ ಪ್ರಸ್ತಾವಕ್ಕೆ ಅನುಮತಿ ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆರ್ಥಿಕ ಇಲಾಖೆಗೆ ಕಳುಹಿಸಿದೆ. ಕಾಲೇಜುಗಳ ಪ್ರವೇಶ, ಹೊಸ ಕೋರ್ಸ್‌ಗಳು, ಸಂಯೋಜಕತ್ವಕ್ಕೂ ಶುಲ್ಕ ಹೆಚ್ಚಳ ಅನ್ವಯವಾಗಲಿದೆ.
‘ಮೂರು ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ನಡೆಯುತ್ತದೆ. 2018-19ರಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿತ್ತು.ಕೋವಿಡ್ ನಂತರ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಹಾಗಾಗಿ, ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ನೀಡಿದರೆ 2024-25ನೇ ಶೈಕ್ಷಣಿಕ ಸಾಲಿನಿಂದ ಶುಲ್ಕ ಹೆಚ್ಚಳ ಮಾಡಲಾಗುತ್ತದೆ’ ಎಂದು ಇಲಾಖೆಯ ಮೂಲಗಳು ಹೇಳಿವೆ.
‘ಕಾಲೇಜುಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಆದ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹೊರೆಯಾಗದಂತೆ ಪರಿಷ್ಕೃತ ಶುಲ್ಕಗಳನ್ನು ನಿಗದಿ ಮಾಡಲಾಗಿದೆ. 2013-14ರಲ್ಲಿ ಶೇ 30ರಷ್ಟು ಹಾಗೂ 2018-19ರಲ್ಲಿ ಶೇ 60ರಷ್ಟು ಶುಲ್ಕ ಹೆಚ್ಚಿಸಲಾಗಿತ್ತು. ಈ ಬಾರಿ ಶೇ 10ರಿಂದ 20ರಷ್ಟು ಹೆಚ್ಚಳಕ್ಕೆ ಅನುಮತಿ ದೊರೆಯುವ ನಿರೀಕ್ಷೆ ಇದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.