ADVERTISEMENT

ಬಿಬಿಎಂಪಿ ಪಿ.ಯು ಕಾಲೇಜುಗಳ ನಿರಂತರ ಕಳಪೆ ಸಾಧನೆ-ಉಪನ್ಯಾಸಕರಿಗೆ ಕೌನ್ಸೆಲಿಂಗ್‌

ಬಿಬಿಎಂಪಿ ಪಿ.ಯು ಕಾಲೇಜು: 82 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ

ಪ್ರವೀಣ ಕುಮಾರ್ ಪಿ.ವಿ.
Published 21 ಜುಲೈ 2021, 19:51 IST
Last Updated 21 ಜುಲೈ 2021, 19:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬಿಬಿಎಂಪಿ ಆಡಳಿತಕ್ಕೊಳಪಟ್ಟ ಪದವಿಪೂರ್ವ ಕಾಲೇಜುಗಳಲ್ಲಿ 2020–21ನೇ ಸಾಲಿನಲ್ಲಿ ವ್ಯಾಸಂಗ ಮಾಡಿದವರ ಪೈಕಿ 82 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 973 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ ಉತ್ತೀರ್ಣರಾಗಿದ್ದಾರೆ. ಆದರೆ, ಕೆಲವು ಕಾಲೇಜುಗಳು ಫಲಿತಾಂಶದ ಗುಣಮಟ್ಟ ಬಿಬಿಎಂಪಿಗೆ ತೃಪ್ತಿ ತಂದಿಲ್ಲ.

ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವಂತಹ ಫಲಿತಾಂಶದ ನಿರೀಕ್ಷೆಯಲ್ಲಿರುವ ಬಿಬಿಎಂ‍ಪಿ, ನಿರಂತರವಾಗಿ ತೃಪ್ತಿಕರ ಸಾಧನೆ ತೋರಿಸದ ಕಾಲೇಜುಗಳ ಉಪನ್ಯಾಸಕರಿಗೆ ವಿಶೇಷ ತರಬೇತಿ ಏರ್ಪಡಿಸಲು ಮುಂದಾಗಿದೆ.

‘ಕ್ಲೀವ್‌ಲ್ಯಾಂಡ್‌ ಕಾಲೇಜು ಪ್ರತಿವರ್ಷವೂ ಉತ್ತಮ ಸಾಧನೆ ತೋರಿಸುತ್ತದೆ. ಅದೇ ರೀತಿ ಕೆಲವು ಕಾಲೇಜುಗಳು ನಿರಂತರವಾಗಿ ಕಳಪೆ ನಿರ್ವಹಣೆ ತೋರಿಸುತ್ತಿವೆ. ಈ ವರ್ಷವೂ ಒಂದೆರಡು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿಲ್ಲ. ಅನೇಕ ಕಾಲೇಜುಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರ ಪ್ರಮಾಣವೂ ತೀರಾ ಕಡಿಮೆ ಇದೆ. ಕೆಲವು ಕಾಲೇಜುಗಳಲ್ಲಿ ಇಂತಹ ಫಲಿತಾಂಶ ಪ್ರತಿ ವರ್ಷವೂ ಮರುಕಳಿಸುತ್ತಿದೆ ಎಂದಾದರೆ ಅಲ್ಲಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರೇ ಇದಕ್ಕೆ ಹೊಣೆ’ ಎನ್ನುತ್ತಾರೆ ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ) ರೆಡ್ಡಿ ಶಂಕರ ಬಾಬು.

ADVERTISEMENT

‘ಈ ಬಾರಿ ಶೇಕಡಾ ನೂರು ಫಲಿತಾಂಶ ಬಂದಿದೆ. ಎಲ್ಲವೂ ಚೆನ್ನಾಗಿದೆ ಎಂದು ಪರಿಭಾವಿಸಿದರೆ ನಮ್ಮ ಪಿ.ಯು. ಕಾಲೇಜುಗಳ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಆಸ್ಪದವೇ ಇರುವುದಿಲ್ಲ. ಕೆಲವು ಕಾಲೇಜುಗಳಲ್ಲಿ ನಿರಂತರವಾಗಿ ಕಳಪೆ ಫಲಿತಾಂಶ ಬರುವುದಕ್ಕೆ ಏನು ಕಾರಣ ಎಂದು ನಾವು ಪತ್ತೆ ಹಚ್ಚುತ್ತೇವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೇವೆ. ಏಕೆಂದರೆ ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ’ ಎಂದು ಅವರು ತಿಳಿಸಿದರು.

‘ನಿರಂತರ ಕಳಪೆ ಸಾಧನೆಗೆ ಖಂಡಿತಾ ವಿದ್ಯಾರ್ಥಿಗಳು ಕಾರಣರಲ್ಲ. ಏಕೆಂದರೆ ವಿದ್ಯಾರ್ಥಿಗಳ ತಂಡ ಪ್ರತಿವರ್ಷವೂ ಬದಲಾಗುತ್ತಿರುತ್ತದೆ. ಅಂತಹ ಕಾಲೇಜುಗಳಲ್ಲಿ ಕಲಿಕಾ ವಿಧಾನದಲ್ಲೇ ಸುಧಾರಣೆ ತರಬೇಕಾದ ಅಗತ್ಯವಿದೆ. ಅಂತಹ ಕಾಲೇಜುಗಳ ಉಪನ್ಯಾಸಕರಿಗೆ ಕೌನ್ಸೆಲಿಂಗ್‌ ನಡೆಸುವ ಅಗತ್ಯವಿದೆ. ಸುಧಾರಣೆಯ ಅಗತ್ಯ ಇರುವವರಿಗೆ ಪರಿಣಿತರಿಂದ ವಿಶೇಷ ತರಬೇತಿಯನ್ನೂ ಒದಗಿಸಲಿದ್ದೇವೆ’ ಎಂದರು.

‘ಬಿಬಿಎಂಪಿಯ ಯಾವುದೇ ಪದವಿ ಪೂರ್ವ ಕಾಲೇಜುಗಳಲ್ಲೂ ಉಪನ್ಯಾಸಕರ ಕೊರತೆ ಇಲ್ಲ. ಯಾವುದಾದರೂ ವಿಷಯದ ಉಪನ್ಯಾಸಕರು ಲಭ್ಯ ಇಲ್ಲದಿದ್ದರೆ, ಪ್ರಾಂಶುಪಾಲರು ಕೋರಿಕೆ ಸಲ್ಲಿಸಿದ 48 ಗಂಟೆಗಳ ಒಳಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಕ್ಲೀವ್‌ ಲ್ಯಾಂಡ್‌: ಶೇ 50ರಷ್ಟು ವಿದ್ಯಾರ್ಥಿಗಳಿಗೆ ಪ್ರಥಮ ಶ್ರೇಣಿ

ಬಿಬಿಎಂಪಿಯ ಪಿ.ಯು. ಕಾಲೇಜುಗಳಲ್ಲಿ ಕ್ಲೀವ್‌ಲ್ಯಾಂಡ್‌ ಕಾಲೇಜು ಈ ಬಾರಿಯೂ ದ್ವಿತೀಯ ಪಿ.ಯು. ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ. ಈ ಕಾಲೇಜಿನ 459 ವಿದ್ಯಾರ್ಥಿಗಳಲ್ಲಿ 20 ಮಂದಿ ಅತ್ಯುನ್ನತ ದರ್ಜೆಯಲ್ಲೂ, 260 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ ಉತ್ತೀರ್ಣರಾಗಿದ್ದಾರೆ.

ಶ್ರೀರಾಂಪುರದ ಕಾಲೇಜಿನಲ್ಲಿ 223 ವಿದ್ಯಾರ್ಥಿಗಳಲ್ಲಿ 15 ಮಂದಿ ಅತ್ಯುನ್ನತ ದರ್ಜೆಯಲ್ಲಿ ಹಾಗೂ 66 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಟಸ್ಕರ್‌ ಟೌನ್‌ ಹಾಗೂ ಆಸ್ಟಿನ್‌ ಟೌನ್‌ ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿಲ್ಲ.

***

ಬಿಬಿಎಂಪಿ ಪಿ.ಯು ಕಾಲೇಜುಗಳಲ್ಲಿ ಸೌಕರ್ಯಗಳಿಗೆ ಕೊರತೆಇಲ್ಲ. ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಫಲಿತಾಂಶ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ

- ರೆಡ್ಡಿ ಶಂಕರ ಬಾಬು, ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.