ನಾನು ಶಶಾಂಕ್ ಪ್ರಥಮ ಪಿಯುಸಿ ಓದುತ್ತಿದ್ದೇನೆ. ನನಗೆ ರೈಲ್ವೆ ಎಂಜಿನ್ ಡ್ರೈವರ್ ಆಗಬೇಕೆಂಬ ಆಸೆ ಇದೆ. ಇದಕ್ಕಾಗಿ ದ್ವಿತೀಯ ಪಿಯುಸಿ ಆದ ನಂತರ ಯಾವ ಕೋರ್ಸ್ ಮಾಡಬೇಕು ಮತ್ತು ಎಲ್ಲಿ ಈ ಕೋರ್ಸ್ ಲಭ್ಯವಿದೆ ಎಂಬುದನ್ನು ತಿಳಿಸಿ.
–ಶಶಾಂಕ್ ಎಸ್., ಮಧುಗಿರಿ
ರೈಲ್ವೆ ಎಂಜಿನ್ ಡ್ರೈವರ್ ಹುದ್ದೆಯನ್ನು ಲೋಕೊ ಪೈಲಟ್ ಎಂದು ಕರೆಯುತ್ತಾರೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟೆಂಟ್ ಲೋಕೊ ಪೈಲಟ್ (ಎಎಲ್ಪಿ) ಅಥವಾ ಸಹಾಯಕ ಲೋಕೊ ಪೈಲಟ್ ಹುದ್ದೆಯ ನೇಮಕಾತಿಯನ್ನು ಸಿಇಎನ್ (ಸೆಂಟ್ರಲೈಜ್ಡ್ ಎಂಪ್ಲಾಯ್‌ಮೆಂಟ್ ನೋಟಿಸ್) ಅಥವಾ ಕೇಂದ್ರೀಕೃತ ಉದ್ಯೋಗ ಪ್ರಕಟಣೆಯ ಮುಖಾಂತರ ಮಾಡಲಾಗುತ್ತದೆ.
ಲೋಕೊ ಪೈಲಟ್ ಹುದ್ದೆಯ ನೇಮಕಾತಿಯು ಎಲೆಕ್ಟ್ರಿಕಲ್ ಹಾಗೂ ಮೆಕ್ಯಾನಿಕಲ್ ವಿಭಾಗಗಳ ಅಡಿಯಲ್ಲಿ ಆಗುತ್ತದೆ. ಅದಕ್ಕಾಗಿ ನೀವು ಈ ಕೆಳಗಿನ ಯಾವುದಾದರೂ ಒಂದು ಟ್ರೇಡ್ ಅಥವಾ ವಿಭಾಗದಲ್ಲಿ ಎರಡು ವರ್ಷಗಳ ಐಟಿಐ ಅಥವಾ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಮುಗಿಸಿರಬೇಕು. ಎಲೆಕ್ಟ್ರಿಷಿಯನ್ / ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ / ಫಿಟ್ಟರ್ / ಮೆಷಿನಿಸ್ಟ್/ ಟರ್ನರ್ / ವೈರ್‌ಮ್ಯಾನ್ / ಆಟೊಮೊಬೈಲ್/ ಹೀಟ್ ಎಂಜಿನ್ / ಆರ್ಮೇಚರ್ ಮತ್ತು ಕಾಯಿಲ್ ವಿಂಡರ್ / ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ / ಮೆಕ್ಯಾನಿಕ್ ಡೀಸೆಲ್ / ಮೆಕ್ಯಾನಿಕ್ ಮೋಟಾರ್ ವಾಹನ / ಮಿಲ್‌ರೈಟ್ ನಿರ್ವಹಣೆ ಮೆಕ್ಯಾನಿಕ್ / ಮೆಕ್ಯಾನಿಕ್ ರೇಡಿಯೊ ಮತ್ತು ಟಿವಿ/ ರೆಫಿಜರೇಟರ್ ಮತ್ತು ಹವಾನಿಯಂತ್ರಣ ಮೆಕ್ಯಾನಿಕ್ / ಟ್ರ್ಯಾಕ್ಟರ್ ಮೆಕ್ಯಾನಿಕ್ - ಇವುಗಳಲ್ಲಿ ಯಾವುದಾದರೂ ಒಂದು ವಿಷಯ ಓದಿರಬೇಕು.
ಇಲ್ಲಿ ಅನೇಕ ವಿಭಾಗಗಳು ನಿಮಗೆ ಹೊಸತೆನಿಸಿದರೂ ಸಾಮಾನ್ಯವಾಗಿ ಎಲ್ಲಾ ಐಟಿಐ ಕಾಲೇಜುಗಳಲ್ಲಿ ಎಲೆಕ್ಟ್ರಿಷಿಯನ್ / ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ / ಫಿಟ್ಟರ್ / ಮೆಷಿನಿಸ್ಟ್/ ಟರ್ನರ್ ವಿಭಾಗಗಳು ಇರುತ್ತವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಐಟಿಐ ಓದಬಹುದು. ಹಾಗೆಯೇ, ಡಿಪ್ಲೊಮಾ ಕಾಲೇಜುಗಳಲ್ಲಿ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಆಟೊಮೊಬೈಲ್ ವಿಭಾಗಗಳು ಇರುತ್ತವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಓದಬಹುದು. ಐಟಿಐಗೆ ಹೋಲಿಸಿದರೆ ಡಿಪ್ಲೊಮಾಗೆ ಹೆಚ್ಚು ವ್ಯಾಪ್ತಿ ಮತ್ತು ಉದ್ಯೋಗಾವಕಾಶ ಇರುವುದರಿಂದ ಡಿಪ್ಲೊಮಾ ಶಿಕ್ಷಣವನ್ನು ನೀವು ಓದಬಹುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಡಿಪ್ಲೊಮಾ ಮತ್ತು ಐಟಿಐ ಕಾಲೇಜುಗಳು ಲಭ್ಯವಿದ್ದು ನಿಮ್ಮ ಹತ್ತನೆಯ ತರಗತಿಯ ಅಂಕದ ಆಧಾರದ ಮೇಲೆ ಸರ್ಕಾರಿ ಸೀಟ್ ದೊರಕಿಸಿಕೊಂಡು ಕಡಿಮೆ ಖರ್ಚಿನಲ್ಲಿ ಉತ್ತಮ ಕಾಲೇಜಿನಲ್ಲಿ ಓದಿಕೊಳ್ಳಬಹುದು.
ಈ ಶಿಕ್ಷಣದ ನಂತರ ನೀವು ರೈಲ್ವೆ ಇಲಾಖೆಯ ನೇಮಕಾತಿ ಕರೆದಾಗ ಅರ್ಜಿ ಸಲ್ಲಿಸಬಹುದು. ಸಹಾಯಕ ಲೋಕೊ ಪೈಲಟ್ ಹುದ್ದೆಯ ನೇಮಕಾತಿಗೆ ಎರಡು ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯ ಹಂತದಲ್ಲಿ ಎರಡು ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಅಥವಾ ಸಿ.ಬಿ.ಟಿ. ಮತ್ತು ಎರಡನೇ ಹಂತದಲ್ಲಿ ಕಂಪ್ಯೂಟರ್ ಬೇಸ್ಡ್ ಆಪ್ಟಿಟ್ಯೂಡ್ ಟೆಸ್ಟ್ ಅಥವಾ ಎ.ಟಿ. ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಸಿ.ಬಿ.ಟಿ. ಪರೀಕ್ಷೆಯಲ್ಲಿ ಸಾಮಾನ್ಯ ಗಣಿತ, ತಾರ್ಕಿಕ ಆಲೋಚನೆ, ಸಾಮಾನ್ಯ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ. ಮೆಡಿಕಲ್ ಫಿಟ್‌ನೆಸ್ ಕೂಡ ರೈಲ್ವೆ ಇಲಾಖೆಯ ನೇಮಕಾತಿ ಮುಖ್ಯ ಭಾಗವಾಗಿರುವುದರಿಂದ ಉತ್ತಮ ದೈಹಿಕ ಕ್ಷಮತೆ ಮತ್ತು ಸಾಮಾನ್ಯ ದೃಷ್ಟಿಯ ಅರ್ಹತೆಗಳನ್ನು ಹೊಂದಿರಬೇಕು.
ರೈಲ್ವೆ ಇಲಾಖೆಯ ಲೋಕೊ ಪೈಲಟ್ ಹಾಗೂ ಇತರ ಯಾವುದೇ ಹುದ್ದೆಗಳ ಬಗ್ಗೆ ಶೈಕ್ಷಣಿಕ ಅರ್ಹತೆ, ಪರೀಕ್ಷಾ ನಿಯಮ ಇತ್ಯಾದಿ ಮಾಹಿತಿಗೆ ಆರ್‌ಆರ್‌ಬಿ ವೆಬ್‌ಸೈಟ್ ಪರಿಶೀಲಿಸಿ. ಹಾಗೆಯೇ ಕಳೆದ ವರ್ಷದ ಲೋಕೊ ಪೈಲಟ್ ನೇಮಕಾತಿ ಅಧಿಸೂಚನೆಯನ್ನು ಅಂತರ್ಜಾಲದಲ್ಲಿ ಹುಡುಕಿ ವಿವರವಾಗಿ ಓದಿಕೊಳ್ಳಿ. ಸಾಧ್ಯವಾದಲ್ಲಿ ಈಗಾಗಲೇ ಲೋಕೊ ಪೈಲಟ್ ಆಗಿ ಕೆಲಸ ಮಾಡುತ್ತಿರುವವರಲ್ಲಿ ಈ ಕೆಲಸ ಹೇಗಿರುತ್ತದೆ, ಅದಕ್ಕಾಗಿ ಪರೀಕ್ಷೆ ಮಾತ್ರವಲ್ಲದೆ ಮಾನಸಿಕ ಮತ್ತು ದೈಹಿಕ ತಯಾರಿ ಏನು ಮಾಡಬೇಕು ಎಂದೆಲ್ಲ ವಿಚಾರಿಸಿ. ಶುಭಾಶಯ.
ನಾನು ವಿಜ್ಞಾನ ವಿಷಯದಲ್ಲಿ (ಪಿಸಿಎಂ) ದ್ವಿತೀಯ ಪಿಯುಸಿ ಪಾಸಾಗಿದ್ದೇನೆ. ನನಗೆ ಪ್ರಾಣಿವಿಜ್ಞಾನ ವಿಷಯದಲ್ಲಿ ಪದವಿ ಮಾಡುವಾಸೆ. ಆದರೆ ಈ ವಿಷಯದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವಿರಾ?
ಹೆಸರು, ಊರು ಇಲ್ಲ
ನೀವು ಪ್ರಾಣಿವಿಜ್ಞಾನ ವಿಷಯವನ್ನು ಪ್ರಮುಖವಾಗಿಸಿಕೊಂಡು ನಿಮ್ಮ ಪದವಿಯನ್ನು ಓದಿದಲ್ಲಿ ಪ್ರಾಣಿ ಸಂರಕ್ಷಣಾಲಯದಲ್ಲಿ, ಸಸ್ಯ ಸಂರಕ್ಷಣಾಲಯಗಳಲ್ಲಿ, ವನ್ಯಧಾಮ, ಅರಣ್ಯ ಇಲಾಖೆ, ಫಾರೆನ್ಸಿಕ್ ಲ್ಯಾಬ್‌ಗಳಲ್ಲಿ, ಸಂಶೋಧನಾ ಘಟಕಗಳಲ್ಲಿ, ಪರಿಸರ ವಿಜ್ಞಾನ ಘಟಕಗಳಲ್ಲಿ, ಕೃಷಿ ಸಂಬಂಧಿಸಿದ ಸಂಸ್ಥೆಗಳಲ್ಲಿ, ಸರ್ಕಾರಿ ಹೈನುಗಾರಿಕೆ ಮತ್ತು ತೋಟಗಾರಿಕೆಯ ಇಲಾಖೆ ಮತ್ತು ಇದಕ್ಕೆ ಸಂಬಂಧಿಸಿದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಬಹುದು. ಪ್ರಾಣಿವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನ ಕ್ಷೇತ್ರದಲ್ಲಿ ಕೂಡ ನೀವು ಸ್ನಾತಕೋತ್ತರ ಪದವಿ ಮಾಡಿದಲ್ಲಿ ಕೆಲಸ ಮಾಡಬಹುದು. ಹಾಗೆ ಪ್ರಾಣಿವಿಜ್ಞಾನದೊಂದಿಗೆ ಬಯೋಟೆಕ್ನಾಲಜಿಯನ್ನು ಓದಿದರೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಕಾರ್ಯಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು.
ನಿಮಗೆ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಇದ್ದಲ್ಲಿ ನಿಮ್ಮ ಬಿ.ಎಸ್‌ಸಿ. ನಂತರ ಬಿ.ಎಡ್. ಶಿಕ್ಷಣ ಪಡೆದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಶಿಕ್ಷರಾಗಬಹುದು. ಎಂ.ಎಸ್‌ಸಿ. ಮಾಡಿಕೊಂಡರೆ ಆ ವಿಷಯವಾಗಿ ಪಿಯುಸಿ ಮತ್ತು ಪದವಿ ಹಂತದಲ್ಲಿ ಪ್ರಾಧ್ಯಾಪಕರಾಗಬಹುದು. ಹಾಗೆಯೇ ಪಿಎಚ್.ಡಿ. ಶಿಕ್ಷಣ ಪಡೆದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿ ಕೆಲಸ ಮಾಡಬಹುದು.
ಇದು ಈ ವಿಷಯದ ಮೂಲ ಕ್ಷೇತ್ರಗಳಾಗಿದ್ದರೆ ಇನ್ನು ಮುಂದುವರಿದು ಇದರ ಮೇಲೆ ಬೆಳೆದಿರುವ ಕ್ಷೇತ್ರಗಳಾದ ಪ್ರಾಣಿ ಮತ್ತು ಸಸ್ಯಗಳ ಮೇಲೆ ಕೆಲಸ ಮಾಡುವ ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳಲ್ಲಿ ಕೆಲಸ ನಿರ್ವಹಿಸಬಹುದು. ಈ ಸಂಬಂಧ ಕೌಶಲಗಳನ್ನು ಕಲಿತಲ್ಲಿ ನ್ಯಾಷನಲ್ ಜಿಯೋಗ್ರಫಿ, ಡಿಸ್ಕವರಿ ಹಾಗೂ ಇತರ ಚಾನೆಲ್ ಮತ್ತು ಈ ಬಗ್ಗೆ ಕೆಲಸ ಮಾಡುವ ಸ್ವತಂತ್ರ ಮಾಧ್ಯಮ ಅಥವಾ ಡಾಕ್ಯುಮೆಂಟರಿ ತಯಾರಿ ಮಾಡುವ ಸಂಸ್ಥೆಗಳಲ್ಲಿ ಸಂಶೋಧನೆ, ವನ್ಯಜೀವಿ ವಿಡಿಯೊಗ್ರಫಿ, ಫೋಟೊಗ್ರಫಿಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಶುಭಾಶಯ.
(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.