ಬೆಂಗಳೂರು: ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಯುಎಎಸ್) ಹಮ್ಮಿಕೊಂಡಿದ್ದ 6ನೇ ಘಟಿಕೋತ್ಸವದಲ್ಲಿ ಒಟ್ಟು 1,647 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅಧ್ಯಕ್ಷ ಪ್ರೊ.ಅನಿಲ್ ಡಿ ಸಹಸ್ರಬುದ್ಧೆ ಅವರು 7 ಮಂದಿಗೆ ಪಿಎಚ್.ಡಿ, 453 ಜನರಿಗೆ ಸ್ನಾತಕೋತ್ತರ ಹಾಗೂ 1,187 ಮಂದಿಗೆ ಸ್ನಾತಕ ಪದವಿಗಳನ್ನು ಸೋಮವಾರ ಪ್ರದಾನ ಮಾಡಿದರು.
28 ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆ ಗುರುತಿಸಿ ಡಾ.ಎಂ.ಎಸ್.ರಾಮಯ್ಯ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ವೆಂಕಟಮ್ಮ ರಾಮಯ್ಯ ಅವರ ಹೆಸರಿನಲ್ಲಿ ನೀಡಲಾಗುವ ಬೆಳ್ಳಿ ಪದಕವನ್ನು 28 ಮಂದಿ ಪಡೆದರು. ಅತ್ಯುತ್ತಮ ಸಂಶೋಧನಾ ಪ್ರಬಂಧ ಮಂಡಿಸಿದ 8 ಮಂದಿ ಸಂಶೋಧನಾರ್ಥಿಗಳಿಗೆ ಗೌರಮ್ಮ ರಾಮಯ್ಯ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.
ಐಶ್ವರ್ಯ ರಘು, ಸಫಿಯಾ ಫಾತಿಮಾ ಖಾನ್, ಪಿ.ಸ್ಫೂರ್ತಿ, ಬೈತಪಲ್ಲಿ ದಿವ್ಯಶ್ರೀ, ಕೆ.ಎನ್.ಶರ್ವಣಿ, ಅಥಿರಾ, ಪ್ರತೀಕ್ಷಾ ರಾಯ್, ಅನುಮುಲ ವೆಂಕಟ ಶಿವ ಸಾಯಿ ಕೃಷ್ಣ, ಸಮ್ರೀನ್ ಫಾತಿಮಾ, ಬಿ.ನೇತ್ರಾವತಿ, ಸ್ನೇಹಾ ಮುಖರ್ಜಿ ಹಾಗೂ ಯಲಮಿಂಚಿಲಿ ಜಾಹ್ನವಿ ಅವರು ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.
ಸ್ನಾತಕ ವಿಭಾಗದಲ್ಲಿ ಅಜಯ್‌ಕುಮಾರ್ ಅಹಿರ್ವಾರ್, ಆರ್.ಎಂ.ಶಿವಾನಿ, ಸಿ.ಕಾವ್ಯ, ಹರ್ಷಿತ್ ಅಗರವಾಲ್, ಡಿ.ನಿಶಾ, ಪಲ್ಲವಿ ಶರ್ಮಾ, ಪಿ.ಬ್ರಿಸ್ಲಿ ಜೇಕಬ್, ವಿ.ಸೂರ್ಯಕಿರಣ್, ಕೆ.ವಿ.ತೇಜಸ್, ಬಿ.ಎನ್.ಮಂಜುನಾಥ ಬಾಬು, ಕೆ.ಪೂಜಾ, ಪೊಲಾಸ್ ಬರುವಾ, ಆರತಿ ರವೀಂದ್ರನ್, ಮಿಸ್ಬಾ ಖಾನ್, ಮೊಹಮ್ಮದ್ ಅಫ್ತಾಬ್ ಹಾಗೂ ಕರೆನ್ ಡಿಸೋಜಾ ಅವರಿಗೆ ಚಿನ್ನದ ಪದಕ ಲಭಿಸಿತು.
‘ಮೌಲ್ಯ ಮತ್ತು ನೀತಿ ಅಳವಡಿಸಿಕೊಳ್ಳುವುದಕ್ಕೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ದೇಶದ ಹಿತ ಕಾಯುವ ನಿಸ್ವಾರ್ಥ ನಾಗರಿಕರನ್ನು ರೂಪಿಸುವುದು ಶಿಕ್ಷಣದ ಮುಖ್ಯ ಉದ್ದೇಶ. ಆತ್ಮನಿರ್ಭರ ಭಾರತ ನಿರ್ಮಾಣದ ಹೊಣೆ ವಿದ್ಯಾರ್ಥಿಗಳ ಮೇಲಿದೆ. ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಅರ್ಥಮಾಡಿಕೊಳ್ಳಬೇಕು. ಬದಲಾಗುತ್ತಿರುವ ವಾತಾವರಣಕ್ಕೆ ಸ್ಪಂದಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದುಪ್ರೊ.ಅನಿಲ್ ಡಿ ಸಹಸ್ರಬುದ್ಧೆ ಹೇಳಿದರು.
‘ರಾಮಯ್ಯ ವಿಶ್ವವಿದ್ಯಾಲಯವು ಶಿಕ್ಷಣದಲ್ಲಿ ಅನುಸರಿಸುತ್ತಿರುವ ಸಮಗ್ರ ದೃಷ್ಟಿಕೋನ ಶ್ಲಾಘನೀಯವಾದುದು. ಅಂತರ್‌ಶಿಸ್ತೀಯ ಅಧ್ಯಯನಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯೂ ಅಭಿನಂದನಾರ್ಹವಾದುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಲಾಧಿಪತಿ ಡಾ.ಎಂ.ಆರ್.ಜಯರಾಮ್, ಕುಲಪತಿ ಪ್ರೊ.ಕುಲದೀಪ್‌ಕುಮಾರ್ ರೈನಾ, ಕುಲಸಚಿವ ಪ್ರೊ.ಎಂ.ಸಾಯಿಬಾಬಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.