ನೈಸರ್ಗಿಕ ವಿದ್ಯಮಾನಗಳಲ್ಲಿ ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನ (ರಿಫ್ಲೆಕ್ಷನ್ ಮತ್ತು ರಿಫ್ರಾಕ್ಷನ್) ಕ್ರಿಯೆಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾದದ್ದು. ದರ್ಪಣ(ಮಿರರ್)ವು ಬೆಳಕನ್ನು ಪ್ರತಿಫಲಿಸಿದರೆ ಮಸೂರ (ಲೆನ್ಸ್)ವು ಇದನ್ನು ವಕ್ರೀಭವಿಸುತ್ತದೆ.
u- ವಸ್ತು ದೂರ, v- ಪ್ರತಿಬಿಂಬದ ದೂರ, f- ಸಂಗಮದ ದೂರ (ಫೋಕಲ್ ಲೆಂಥ್) ಹಾಗೂ m- ವರ್ಧನೆ (ಮ್ಯಾಗ್ನಿಫಿಕೇಶನ್)ಯ ಸಂಕೇತ. ಇದಕ್ಕೆ ಸಬಂಧಿಸಿದ ಚಿಹ್ನೆಗಳನ್ನು ಈ ಕೋಷ್ಟಕದ ಮೂಲಕ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು.
[(*)– ವಸ್ತು ದೂರವು ಸಂಗಮ ದೂರಕ್ಕಿಂತ ಕಡಿಮೆ ಇದ್ದಾಗ]
ಪೀನ ದರ್ಪಣ (ಕಾನ್‌ವೆಕ್ಸ್)ವು ಚಿಕ್ಕದಾದ, ನೇರ, ಮಿಥ್ಯ ಪ್ರತಿಬಿಂಬವನ್ನು ಉಂಟುಮಾಡುವ ಕಾರಣ ಹಾಗೂ ದೃಷ್ಟಿಕ್ಷೇತ್ರ (ರೇಂಜ್ ಆಫ್ ವಿಶನ್) ಅಧಿಕವಿರುವುದರಿಂದ ವಾಹನಗಳಲ್ಲಿ ಬಳಕೆಯಾಗುತ್ತದೆ. ನಿಮ್ನ ದರ್ಪಣ (ಕಾಂಕೇವ್)ವನ್ನು ಸಲೂನ್‌ಗಳ ಕನ್ನಡಿಯಲ್ಲಿ ಮತ್ತು ದಂತ ವೈದ್ಯರ ಕ್ಲಿನಿಕ್‌ಗಳಲ್ಲಿ ದೊಡ್ಡ ಪ್ರತಿಬಿಂಬ ಪಡೆಯಲು ಬಳಸುತ್ತಾರೆ.
ನಿಮ್ನ ದರ್ಪಣ ಹಾಗೂ ಪೀನ ಮಸೂರಗಳಲ್ಲಿ ವಸ್ತು ದೂರ ಕಡಿಮೆಯಾಗುತ್ತಿದ್ದಂತೆ ಪ್ರತಿಬಿಂಬದ ದೂರ ಅಧಿಕವಾಗುತ್ತದೆ. ಮಸೂರವು ಅರ್ಧಭಾಗ ಮುಚ್ಚಿದ್ದರೂ ಸಹ ಸಂಪೂರ್ಣ ಪ್ರತಿಬಿಂಬ ದೊರೆಯುತ್ತದೆ.
ಕನ್ನಡಕದಲ್ಲಿ ಬಳಕೆ
ಮನುಷ್ಯನಿಗೆ ಕಣ್ಣುಗಳು ಹೊರಗಿನ ವರ್ಣಮಯ ಜಗತ್ತನ್ನು ಅನುಭವಿಸಲು ಸಹಕರಿಸುತ್ತವೆ. ಆದರೆ ದೃಷ್ಟಿದೋಷವಿದ್ದರೆ ವಸ್ತುವಿನ ಪ್ರತಿಬಿಂಬವು ರೆಟಿನ ಪರದೆಯ ಮೇಲೆ ಸರಿಯಾಗಿ ಮೂಡುವುದಿಲ್ಲ. ಸಮೀಪ ದೃಷ್ಟಿ ದೋಷವನ್ನು ಸೂಕ್ತ ಸಾಮರ್ಥ್ಯದ ನಿಮ್ನ ಮಸೂರದಿಂದಲೂ ಹಾಗೂ ದೂರ ದೃಷ್ಟಿ ದೋಷವನ್ನು ಪೀನ ಮಸೂರದಿಂದಲೂ ಸರಿಪಡಿಸಬಹುದು. ಪಟ್ಟಕ (ಪ್ರಿಸಮ್)ವು ಸಹ ಮಸೂರದಂತೆಯೇ ಬೆಳಕನ್ನು ವಕ್ರೀಭವಿಸುತ್ತದೆ. ನೀರಿನ ಹನಿಗಳು ಕಿರು ಪಟ್ಟಕದಂತೆ ಕಾರ್ಯನಿರ್ವಹಿಸಿ ಕಾಮನಬಿಲ್ಲನ್ನು ಮೂಡಿಸುತ್ತವೆ. ಈ ಕಾರ್ಯದಲ್ಲಿ ನಾಲ್ಕು ಕ್ರಿಯೆಗಳು ಕ್ರಮವಾಗಿ ನಡೆಯುತ್ತವೆ. 1. ವಕ್ರೀಭವನ 2. ಚದುರುವಿಕೆ 3. ಆಂತರಿಕ ಪ್ರತಿಫಲನ 4. ವಕ್ರೀಭವನ.
ವಾಯುಮಂಡಲದ ಅನೇಕ ಕೌತುಕಗಳಿಗೆ ಬೆಳಕಿನ ವಕ್ರೀಭವನವೇ ಕಾರಣ. ವಕ್ರೀಭವನದ ಸೂಚ್ಯಂಕ ಭೂಮಿಯ ಕಡೆಗೆ ಕ್ರಮೇಣ ಏರಿಕೆಯಾಗುತ್ತದೆ.
l ನಕ್ಷತ್ರಗಳ ಬೆಳಕಿನ ವಕ್ರೀಭವನದಿಂದಾಗಿ ತಾರೆಗಳು ಮಿನುಗುವಂತೆ ಭಾಸವಾಗುತ್ತವೆ.
l ಉದಯಿಸುವ ಸೂರ್ಯನನ್ನು ನಿಗದಿತ ಸೂರ್ಯೋದಯದ ಸಮಯಕ್ಕಿಂತ ಎರಡು ನಿಮಿಷ ಮೊದಲು ಹಾಗೂ ಅಸ್ತವಾಗುತ್ತಿರುವ ಸೂರ್ಯನನ್ನು ಸೂರ್ಯಾಸ್ತದ ಎರಡು ನಿಮಿಷಗಳ ನಂತರವೂ ನೋಡಬಹುದು.
ಬೆಳಕಿನ ಚದರುವಿಕೆ ವಾಯುಮಂಡಲದಲ್ಲಿರುವ ಕಲಿಲ (ಕೊಲಾಯಿಡ್)ಗಳಿಂದ ಉಂಟಾಗುತ್ತದೆ. ಅದರ ಪರಿಣಾಮವಾಗಿ
1 ಆಕಾಶ ನೀಲಿಯಾಗಿ ಕಾಣುತ್ತದೆ. (ಆದರೆ ವಿಮಾನದಲ್ಲಿ ಹಾರುವವನಿಗೆ ಆ ಎತ್ತರದಿಂದ ಭೂಮಿಯನ್ನು ನೋಡಿದಾಗ ಅದು ಕಪ್ಪಾಗಿ ಕಾಣುತ್ತದೆ. ಏಕೆಂದರೆ ಅಲ್ಲಿ ವಾಯುಮಂಡಲವಿರುವುದಿಲ್ಲ)
2 ಸೂರ್ಯಾಸ್ತ ಹಾಗೂ ಸೂರ್ಯೋದಯಗಳಲ್ಲಿ ರವಿಕಿರಣಗಳು ಕೆಂಪಾಗಿ ಗೋಚರಿಸುತ್ತವೆ.
3 ಬೆಳಕು ಹೆಚ್ಚು ದೂರ ಕ್ರಮಿಸಿದಾಗಲೂ ಕೆಂಪು ಬಣ್ಣ ಚದುರದ ಕಾರಣ ಡೇಂಜರ್ ದೀಪಗಳು ಕೆಂಪು ಬಣ್ಣದಲ್ಲಿರುತ್ತವೆ.
(ನಿನ್ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ‘F2 (F1 ಬದಲಾಗಿ) ಪೀಳಿಗೆಯಲ್ಲಿ ಅವುಗಳ ಅನುಪಾತ 9:3:3:1 ಆಗಿತ್ತು’ ಎಂದಾಗಬೇಕಿತ್ತು.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.