ADVERTISEMENT

ಆರ್‌ಜೆ: ಉದ್ಯೋಗದ ಹೆಬ್ಬಾಗಿಲು

ನೂತನ ಎಂ.ದೋಶೆಟ್ಟಿ
Published 22 ಜನವರಿ 2019, 19:31 IST
Last Updated 22 ಜನವರಿ 2019, 19:31 IST
ರೇಡಿಯೋ ಜಾಕಿ
ರೇಡಿಯೋ ಜಾಕಿ    

2006 ರಲ್ಲಿ ‘ಲಗೇ ರಹೋ ಮುನ್ನಾ ಭಾಯ್’ ಎಂಬ ಹಾಸ್ಯಮಯ ಹಿಂದಿ ಚಲನಚಿತ್ರ ತೆರೆಗೆ ಬಂತು. ಈ ಚಿತ್ರ ಹಲವು ಕಾರಣಗಳಿಂದ ಪ್ರಸಿದ್ಧವಾದರೂ ಅದರಲ್ಲಿ ನಟಿ ವಿದ್ಯಾ ಬಾಲನ್ ತನ್ನ ರೇಡಿಯೋ ಜಾಕಿ ಪಾತ್ರದಲ್ಲಿ ‘ಗುಡ್ ಮಾರ್ನಿಂಗ್ ಮುಂಬೈ’ ಎಂದು ಅಕ್ಕರೆಯಿಂದ ಜನರನ್ನು ಸಂಬೋಧಿಸುತ್ತಿದ್ದುದು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಿತು.

ಕನ್ನಡದಲ್ಲಿ 2008 ರಲ್ಲಿ ಮುಖ್ಯ ಭೂಮಿಕೆಯಲ್ಲಿ ನಟ ಸುದೀಪ್, ರೇಡಿಯೊ ಜಾಕಿಯಾಗಿ ಅಭಿನಯಿಸಿದ ‘ಮುಸ್ಸಂಜೆ ಮಾತು’ ಚಿತ್ರ ಬಿಡುಗಡೆಯಾಯಿತು.

2017 ರಲ್ಲಿ ಮತ್ತೆ ವಿದ್ಯಾ ಬಾಲನ್ ರೇಡಿಯೊ ಜಾಕಿಯಾಗಿ ಅಭಿನಯಿಸಿದ ‘ತುಮ್ಹಾರಿ ಸುಲು’ ಹಿಂದಿ ಚಿತ್ರ ತೆರೆ ಕಂಡಿತು.

ADVERTISEMENT

ಎಫ್.ಎಮ್. ಕೇಂದ್ರಗಳ ಜನಪ್ರಿಯತೆಯ ನಿದರ್ಶನಗಳೇ ಈ ಮೂರು ಸಿನಿಮಾಗಳು.

2005ರಲ್ಲಿ ಭಾರತದಾದ್ಯಂತ ಎಫ್.ಎಮ್. ರೇಡಿಯೊ ಕೇಂದ್ರಗಳು ಜನಪ್ರಿಯತೆಯ ತುತ್ತತುದಿಗೇರಿದ ಕಾಲ. ಆದರೆ 1957ರಿಂದಲೇ ಭಾರತದಲ್ಲಿ ಕೇಂದ್ರ ಸರ್ಕಾರಿ ಒಡೆತನದ ವಿವಿಧ ಭಾರತಿ ವಾಣಿಜ್ಯ ಕೇಂದ್ರಗಳು ಪ್ರಸಾರ ಮಾಡುತ್ತ ಮನರಂಜನೆಯ ಮುಂಚೂಣಿಯಲ್ಲಿ ಇದ್ದವು. ಅಲ್ಲದೇ ಕೆಲವು ಪ್ರಾಯೋಗಿಕ ಎಫ್.ಎಮ್. ಪ್ರಸಾರಗಳು ಗೋವಾ, ದೆಹಲಿ, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ಷಹರಗಳಲ್ಲಿ ಸರ್ಕಾರದ ಪರವಾನಗಿಯ ಮೇರೆಗೆ ನಡೆದವು. ಆನಂತರ ಕೇಂದ್ರ ಸರ್ಕಾರ ಪರವಾನಗಿಯನ್ನು ನವೀಕರಿಸದೇ 2000ದಲ್ಲಿ 108 ಎಫ್.ಎಮ್. ಕಂಪನಾಂಕಗಳ ಹರಾಜನ್ನು ಮಾಡಿ ಅದುವರೆಗೂ ಸರ್ಕಾರಿ ಅಧೀನದಲ್ಲಿದ್ದ ರೇಡಿಯೊ ಪ್ರಸಾರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿತು. 2001ರಲ್ಲಿ ಭಾರತದ ಮೊದಲ ಖಾಸಗಿ ಎಫ್.ಎಮ್. ಕೇಂದ್ರ ಆರಂಭವಾದಾಗ ರೇಡಿಯೊ ಪ್ರಸಾರದ ಹೊಸ ಶಕೆ ಆರಂಭವಾಯಿತು. ಸರ್ಕಾರಿ ಸ್ವಾಮ್ಯದಲ್ಲಿದ್ದ ಎಫ್.ಎಮ್. ಮೆಟ್ರೋ 2002ರಲ್ಲಿ ಎಫ್.ಎಮ್. ರೇನ್‌ಬೋ ಆಗಿ ಮರುನಾಮಕರಣಗೊಂಡು ಖಾಸಗಿ ರೇಡಿಯೊಗಳಿಗೆ ತೀರ್ವ ಸ್ಪರ್ಧೆಯೊಡ್ಡಿತು. ಮುಕ್ತ ಹಾಗೂ ಆಪ್ತವಾದ ಮಾತುಕತೆ ಮತ್ತು ವಾಕ್ಚಾತುರ್ಯದಿಂದ ಎಲ್ಲ ಎಫ್.ಎಮ್. ವಾಹಿನಿಗಳೂ ಯುವಜನರ ಮನಸೂರೆಗೊಂಡವು. ಇದು ಪ್ರಸಾರಕ್ಕೆ ಅಪಾರ ಹೊಸ ಶ್ರೋತೃವರ್ಗವನ್ನು ನಿರ್ಮಿಸಿದಂತೆ ಉದ್ಯೋಗ ಸೃಷ್ಟಿಗೂ ಕಾರಣವಾಯ್ತು.

1980ರ ಹೊತ್ತಿಗೆ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯವನ್ನು ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗೆ ಕಲಿಸಲಾಗುತ್ತಿತ್ತು. ಅದನ್ನು ಕಲಿಯುತ್ತಿದ್ದ ವಿದ್ಯಾರ್ಥಿಗಳ ಮುಖ್ಯ ಉದ್ದೇಶ ಪತ್ರಿಕೆಗಳಲ್ಲಿ ಪತ್ರಕರ್ತರಾಗುವುದು. ಆಕಾಶವಾಣಿ ಹಾಗೂ ದೂರದರ್ಶನಕ್ಕೆ ಸೇರಲು ವಿಶೇಷವಾದ ಆಯ್ಕೆ ಪ್ರಕ್ರಿಯೆ ಇದ್ದಿದ್ದರಿಂದ ಇಲ್ಲಿಗೆ ಸೇರಲು ಹೆಚ್ಚು ವಿದ್ಯಾರ್ಥಿಗಳು ಪ್ರಯತ್ನಿಸುತ್ತಿರಲಿಲ್ಲ. ಹಾಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಮುಂದೆ ಹೆಚ್ಚು ಆಯ್ಕೆಗಳಿರದೆ ಉದ್ಯೋಗಕ್ಕಾಗಿ ಪರದಾಡುವಂಥ ಪರಿಸ್ಥಿತಿ ಉಂಟಾಗುತ್ತಿತ್ತು. ಆದರೆ ಎಫ್.ಎಮ್. ಕೇಂದ್ರಗಳು ಅವರಿಗೆ ಹೊಸ ದಾರಿಯನ್ನು ತೆರೆದವು.

ಆರ್‌ಜೆಗಳಾಗಿ ಸೇರುವವರಿಗೆ ಒಳ್ಳೆಯ ಧ್ವನಿ, ಉತ್ತಮ ಸಾಮಾನ್ಯ ಜ್ಞಾನ, ಸಮಯ ಪ್ರಜ್ಞೆ, ಸಂವಹನ ಕಲೆ ಮೊದಲಾದವು ಅವಶ್ಯವಾಗಿ ಇರಬೇಕು. ಜನರೊಂದಿಗೆ ಅವರು ಸದಾ ನೇರ ಸಂಪರ್ಕದಲ್ಲಿರುವುದರಿಂದ ಅವರ ಸಂಪರ್ಕಜಾಲ ವಿಸ್ತಾರವಾಗುತ್ತದೆ. ಇದು ಅವರನ್ನು ಹೊಸ ಹೊಸ ಕ್ಷೇತ್ರಗಳಿಗೆ ಕೊಂಡೊಯ್ಯುತ್ತದೆ. ಇದು ಪಾರ್ಟ್‌ ಟೈಂ ಕೆಲಸವಾದ್ದರಿಂದ ದಿನದ ಉಳಿದ ಸಮಯವನ್ನು ಅವರು ಸದುಪಯೋಗಪಡಿಸಿಕೊಳ್ಳಬಹುದು. ವೇದಿಕೆಗಳ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವ ಕೆಲಸ ಆರ್‌ಜೆ ಗಳನ್ನು ಅರಸಿ ಬರುವ ಮುಖ್ಯ ಕೆಲಸಗಳಲ್ಲಿ ಒಂದು. ಇದು ಅವರಿಗೆ ಹೆಸರು ಹಾಗೂ ಹಣ ಎರಡನ್ನೂ ತರುವಂಥದ್ದು. ಸ್ಕ್ರಿಪ್ಟ್ ಬರೆಯುವ, ವಾಯ್ಸ್ ಓವರ್ ಮಾಡುವ, ಜಾಹೀರಾತುಗಳಿಗೆ ಧ್ವನಿದಾನ ಮಾಡುವ, ವ್ಯಕ್ತಿತ್ವ ವಿಕಸನ ಕೌಶಲ್ಯಗಳ ತರಬೇತಿ, ಮುಂತಾದವು ಅವರನ್ನು ಅರಸಿ ಬರುವ ಇತರ ಕೆಲಸಗಳು. ಯುವಜನರಲ್ಲಿ ಎಫ್.ಎಮ್. ಕ್ರೇಜ್ ಈಗಲೂ ಇರುವುದರಿಂದ ಅವರನ್ನು ಆರ್‌ಜೆ ಆಗಿ ತರಬೇತಿಗೊಳಿಸುವುದು ಹಲವರ ಮುಖ್ಯ ಕಸುಬಾಗಿದೆ. ಹಲವರು ಡಿಜೆ ( ಡಿಸ್ಕ್ ಜಾಕಿ) ಆಗಿಯೂ ಹೆಸರಾಗಿದ್ದಾರೆ.

ಪದವೀಧರರಾಗಿರುವುದು ಆರ್‌ಜೆ ಆಗಲು ಇರಬೇಕಾದ ಕನಿಷ್ಠ ವಿದ್ಯಾರ್ಹತೆ. ಎಫ್.ಎಮ್. ಕೇಂದ್ರಗಳ ಆರಂಭದ ದಿನಗಳಲ್ಲಿ ಶಿಕ್ಷಕರು, ಗೃಹಿಣಿಯರು, ಉತ್ತಮ ಧ್ವನಿ ಹೊಂದಿರುವವರು ಆರ್‌ಜೆ ಕೆಲಸಕ್ಕೆ ಬರುವವರಲ್ಲಿ ಮುಖ್ಯರಾಗಿದ್ದರು. ಕಾಲಕ್ರಮೇಣ ವೈದ್ಯರು, ಎಂಜಿನಿಯರುಗಳು, ಅಧ್ಯಾಪಕರೇ ಮೊದಲಾದ ವೃತ್ತಿ ನಿರತರಿಗೆ ಇದು ಹವ್ಯಾಸವಾಯಿತು. ಹೀಗೆ ಮೈಕ್ ಎಂಬ ಮಾಂತ್ರಿಕನ ಎದುರು ಶರಣಾದವರು ಅನೇಕರು.

ಆಕಾಶವಾಣಿಗೆ ಸಂಬಂಧಿಸಿದಂತೆ ವಿಶೇಷವಾಗಿ ಹೇಳುವುದಾದರೆ ಅಲ್ಲಿ ಕಾರ್ಯಕ್ರಮಗಳ ಧ್ವನಿಮುದ್ರಣವನ್ನು ಒಳಗೊಂಡು ಪ್ರಸಾರಕ್ಕೆ ಸಿದ್ಧಪಡಿಸುವ ಹಂತದವರೆಗಿನ ಅಗತ್ಯಾನುಸಾರ ಕೆಲಸಕ್ಕೆ ಅವಕಾಶಗಳಿವೆ. ಇದು ಕಾಯಂ ಉದ್ಯೋಗವಾಗಿರದೆ ಆಸಕ್ತರು ಹಾಗೂ ಆರ್ಥಿಕ ಅಗತ್ಯ ಇರುವ ಪದವೀಧರ ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು ಕಚೇರಿಯ ಅಗತ್ಯಗಳಿಗೆ ತಕ್ಕಂತೆ ಹೋಗಿ ಮಾಡಬಹುದಾದ ಕೆಲಸವಾಗಿದೆ. ಅದರಂತೆ ಸುದ್ದಿ ವಿಭಾಗದಲ್ಲಿ ಅರೆಕಾಲಿಕ ವಾರ್ತಾ ವಾಚಕರು ಹಾಗೂ ಸುದ್ದಿ ಸಂಪಾದನೆಯ ಸಹಾಯಕರು ಕಚೇರಿಯ ಅಗತ್ಯಗಳಿಗೆ ತಕ್ಕಂತೆ ಮಾಡಬಹುದಾದ ಕೆಲಸಗಳಿಗೆ ಅವಕಾಶಗಳಿವೆ. ಇವಲ್ಲದೆ ಬರವಣಿಗೆ ಹವ್ಯಾಸವಾಗಿರುವ ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು ತಮ್ಮ ಭಾಷಣ, ಕತೆ, ಕವನ ಮೊದಲಾದವುಗಳನ್ನು ಪ್ರಸ್ತುತಪಡಿಸುವ ಮೂಲಕ ಆಕಾಶವಾಣಿಯಿಂದ ಗೌರವ ಸಂಭಾವನೆ ಪಡೆಯಬಹುದು. ವಿದ್ಯಾರ್ಥಿ ಸಮುದಾಯಗಳು, ಮಹಿಳಾ ಮಂಡಳಗಳು, ಕಾರ್ಮಿಕ ಸಂಘಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭಾವನೆ ಪಡೆಯಬಹುದು. ಸಂಗೀತ ಕ್ಷೇತ್ರ ಆಕಾಶವಾಣಿಯ ಹೆಮ್ಮೆ. ಅನೇಕ ಹೆಸರಾಂತ ಸಂಗೀತ ದಿಗ್ಗಜರು ಹಾಗೂ ಆಕಾಶವಾಣಿಯ ಕಲಾವಿದರು ಆಕಾಶವಾಣಿಯ ಮೂಲಕ ನಾಡಿನಾದ್ಯಂತ ಮನೆಮಾತಾದವರು. ಆಕಾಶವಾಣಿಯಲ್ಲಿ ಕಾಲಕಾಲಕ್ಕೆ ನಡೆಸಲಾಗುವ ಸಂಗೀತದ ಧ್ವನಿಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಆಕಾಶವಾಣಿಯಲ್ಲಿ ಹಾಡುವ ಅವಕಾಶವನ್ನು ಪಡೆಯುವುದಲ್ಲದೇ ಸಂಭಾವನೆಯನ್ನೂ ಪಡೆಯುವರು. ಉಳಿದ ವಿದ್ಯುನ್ಮಾನ ಮಾಧ್ಯಮಗಳಿಗೆ ಹೋಲಿಸಿದರೆ ಆಕಾಶವಾಣಿಯಲ್ಲಿ ಭಾಷಾ ಶುದ್ಧತೆ, ಕನ್ನಡದ ಕಂಪು ತುಸು ಹೆಚ್ಚು.

ನುಡಿಯೇ ಸರ್ವಸ್ವವಾಗಿರುವ ರೇಡಿಯೊ ಮಾಧ್ಯಮ ಇಂದಿಗೂ ಜನರ ಗೌರವಕ್ಕೆ, ಕುತೂಹಲಕ್ಕೆ ಪಾತ್ರವಾಗಿದೆ. ಇದನ್ನು ದೂರ ನಿಂತು ಆಲಿಸುವುದರೊಂದಿಗೆ ಅದರೊಳಗೆ ಪ್ರವೇಶಿಸಬಲ್ಲ ಈ ಮೇಲೆ ಹೇಳಿದ ದಾರಿಗಳನ್ನು ಎಲ್ಲರೂ ಪ್ರಯತ್ನಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.