ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯು ಇದೇ ತಿಂಗಳ 8 ಹಾಗೂ 15ರಂದು ನಿಗದಿಯಾಗಿದೆ. ಅಭ್ಯರ್ಥಿಗಳು ಈಗ ಮಾಡಬೇಕಿರುವುದು ಪುನರ್‌ಮನನ ಹಾಗೂ ಕನಿಷ್ಠ ದಿನಕ್ಕೊಂದು ಮಾದರಿ ಪ್ರಶ್ನೆಪತ್ರಿಕೆ ಅಥವಾ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಹಾಗೂ ಅವುಗಳ ವಿಶ್ಲೇಷಣೆ ನಡೆಸುವುದು.
ವರ್ಷದಿಂದ ವರ್ಷಕ್ಕೆ ಕಟ್-ಆಫ್ ಹೆಚ್ಚುತ್ತಿರುವುದಕ್ಕೆ ಆತ್ಮ ವಿಶ್ವಾಸ ಕಳೆದುಕೊಳ್ಳದಿರಿ:
ಅಭ್ಯರ್ಥಿಗಳು ಪಠ್ಯಕ್ರಮ ಅವಲೋಕಿಸಿ ಅಭ್ಯಸಿಸಿದಾಗ 45 ನಿಮಿಷಗಳಲ್ಲಿ 80 ಪ್ರಶ್ನೆಗಳಿಗೆ ಉತ್ತರಿಸುವುದು ಅಸಾಧ್ಯವೇನಲ್ಲ. ಇದಕ್ಕೆ ಅವಶ್ಯಕವಾಗಿರುವುದು ಸೂಕ್ತ ತಯಾರಿ, ನಿಖರತೆ ಹಾಗೂ ವೇಗದ ಮೇಲೆ ನಿಮಗಿರುವ ಹಿಡಿತ. ಇವೆಲ್ಲವುಗಳು ದೊರಕುವುದು ಸೂಕ್ತ ಅಭ್ಯಾಸದಿಂದ ಮಾತ್ರ. ಹೀಗೆ ಹೆಚ್ಚು ಅಭ್ಯರ್ಥಿಗಳು ಹೆಚ್ಚು ಅಂಕ ಗಳಿಸಿದಾಗ ಸಾಮಾನ್ಯವಾಗಿ ಕಟ್ ಆಫ್ ಹೆಚ್ಚಾಗಲೇಬೇಕು. ಈಗ ನೀವು ವಿಮರ್ಶಿಸಬೇಕಾದದ್ದು, ಕಟ್ ಆಫ್ ಹೆಚ್ಚಾದುದರ ಬಗ್ಗೆ ಅಲ್ಲ, ಬದಲಾಗಿ ನೀಡಿದ ಅದೇ ಸಮಯ ಮತ್ತು ಅದೇ ಪ್ರಶ್ನೆಗಳಿಗೆ ನನ್ನಿಂದ ಏಕೆ ಅಷ್ಟು ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಅವಲೋಕನ.
ಹೆಚ್ಚು ಅಂಕ ಗಳಿಕೆಗೆ ಸೂತ್ರಗಳು
l ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗೆ ಹಾಜರಾಗಿ.
l ನಿಮ್ಮದೇ ಸ್ವಂತ ಪರೀಕ್ಷಾ ಯೋಜನೆ ಅನುಸರಿಸಿ
l ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ರೀಸನಿಂಗ್ ಹಾಗೂ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಎರಡು ವಿಷಯಗಳಿಗೂ ಸೇರಿ ಉತ್ತರಿಸಲು 45 ನಿಮಿಷಗಳ ಕಾಲಾವಕಾಶವಿರುತ್ತದೆ. ಇದರಲ್ಲಿ ವಿದ್ಯಾರ್ಥಿಗಳು ತಮಗೆ ಅನುಕೂಲಕ್ಕೆ ತಕ್ಕಂತೆ ಪರಿಣತಿ ಇರದ ವಿಭಾಗಕ್ಕೆ ಹೆಚ್ಚು ಹಾಗೂ ಪರಿಣತಿ ಇರುವ ವಿಭಾಗಕ್ಕೆ ಕಡಿಮೆ ಸಮಯ ಮೀಸಲಿಟ್ಟು ಹೆಚ್ಚು ಅಂಕ ಗಳಿಸಲು ಪ್ರಯತ್ನಪಡಬೇಕು.
l ವಿದ್ಯಾರ್ಥಿಗಳು ಮೊದಲು ತಾವು ಹೆಚ್ಚು ಪರಿಣತಿ ಹೊಂದಿದ ವಿಷಯ ಆಯ್ಕೆ ಮಾಡಿಕೊಂಡು ಉತ್ತರಿಸಲು ಪ್ರಾರಂಭಿಸಿ. ಇದರಿಂದ ವೇಗವಾಗಿ, ನಿಖರತೆಯೊಂದಿಗೆ ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಂತೆ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಇದು ನಿಮಗೆ ಸುಲಭವಾದ ವಿಷಯವಾಗಿರುವುದರಿಂದ ಇದರಲ್ಲಿ ಆದಷ್ಟು ಸಮಯ ಉಳಿಸಿ ಹೆಚ್ಚು ಅಂಕ ಗಳಿಸಲು ಪ್ರಯತ್ನಿಸಿ.
l ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯ. ಆದರೆ ಕಾಲಾವಕಾಶವನ್ನು ಬಳಸಿಕೊಳ್ಳುವ ಚಾಕಚಕ್ಯತೆ ತಿಳಿದಿರಬೇಕು. ಹಾಗಾಗಿ ಮೊದಲು ಯಾವ ಟಾಪಿಕ್ ಪ್ರಶ್ನೆಗಳಿಗೆ ಉತ್ತರಿಸಬೇಕು, ನಂತರ ಯಾವ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬುದರ ಕ್ರಮವನ್ನು ಅನುಸರಿಸಿ. ಹೆಚ್ಚು-ಹೆಚ್ಚು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದಾಗ ಇದನ್ನು ಅನುಸರಿಸುವುದು ಅತಿಸುಲಭ.
l ರೀಸನಿಂಗ್ ವಿಭಾಗದ ಪಜಲ್ ವಿಭಾಗಕ್ಕೆ ಬಂದರೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಸರಳವಾದ ಮೂರರಿಂದ ನಾಲ್ಕು ಪಜಲ್‌ಗಳಿರುತ್ತವೆ. ಇವುಗಳಿಗೆ ಉತ್ತರಿಸುವಾಗ ಸಾಧ್ಯತೆಗಳೊಂದಿಗೆ ಉತ್ತರಿಸುತ್ತಾ ಬನ್ನಿ. ಉದಾಹರಣೆಗೆ ಒಂದು ಪಜಲ್ ಉತ್ತರಿಸುವಾಗ ಎರಡರಿಂದ ಮೂರು ಸಾಧ್ಯತೆಗಳು ಬಂದಾಗ ಸರಿ ಉತ್ತರ ಕೊನೆಯ ಮೂರನೇ ಸಾಧ್ಯತೆಯಲ್ಲಿ ಇದ್ದರೆ ಒಂದಾದ ನಂತರ ಒಂದು ಸಾಧ್ಯತೆ ಪ್ರಯತ್ನಿಸುವಷ್ಟರಲ್ಲಿ ನಿಮ್ಮ ಸಾಕಷ್ಟು ಸಮಯ ವ್ಯರ್ಥವಾಗಿ ಹೋಗುತ್ತದೆ. ಬದಲಾಗಿ ನೀವು ಪಜಲ್ ಬಿಡಿಸುವಾಗ ಪರ್ಯಾಯವಾಗಿ ಎಲ್ಲ ಸಾಧ್ಯತೆಗಳೊಂದಿಗೆ ಬಿಡಿಸಿ. ಇದರಿಂದ ನೀವು ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು.
l ಯಾವುದೇ ಪ್ರಶ್ನೆಗಳನ್ನು ಬಿಡಿಸುವಾಗ ಹಂತಗಳಿಗೆ ಅಂಕಗಳಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹಾಗಾಗಿ ಉತ್ತರಿಸುವಾಗ ಪ್ರಶ್ನೆಯನ್ನು ಹಂತಹಂತವಾಗಿ ಬಿಡಿಸಿ ನಂತರ ಉತ್ತರಿಸುವ ಗೋಜಿಗೆ ಹೋಗದಿರಿ. ಬದಲಾಗಿ ಮೈಂಡ್ ಕ್ಯಾಲ್ಕುಲೇಷನ್ ಕ್ರಮವನ್ನು ಅನುಸರಿಸಿ ನೇರವಾಗಿಯೇ ಉತ್ತರವನ್ನು ಕಂಡುಕೊಳ್ಳಿ. ಏಕೆಂದರೆ ಇದರಲ್ಲಿ ಬಹುತೇಕ ಪ್ರಶ್ನೆಗಳು ‘ವಿದೌಟ್ ಪೆನ್ ಅಂಡ್ ಪೇಪರ್’ ಮಾದರಿಯ ಪ್ರಶ್ನೆ ಗಳಾಗಿರುತ್ತವೆ. ಹಾಗಾಗಿ ಇವುಗಳಿಗೂ ಸಹ ನೀವು ಹಂತಹಂತವಾಗಿ ಉತ್ತರಿಸುತ್ತಾ ಸಮಯ ವ್ಯರ್ಥ ಮಾಡದಿರಿ. ಅಲ್ಲದೇ ಕೆಲವು ಪ್ರಶ್ನೆಗಳಿಗೆ ‘ಆಪ್ಷನ್ ಎಲಿಮಿನೇಷನ್’ ಕ್ರಮ ಅನುಸರಿಸಿ ಸುಲಭವಾಗಿ ಉತ್ತರಿಸಬಹುದು. ಇದರಿಂದ ನಿಮ್ಮ ಬಹುತೇಕ ಸಮಯ ಉಳಿತಾಯವಾಗುತ್ತದೆ.
l ನಿಮಗೆ ತಿಳಿದಂತೆ ಪ್ರಿಲಿಮ್ಸ್ ಪರೀಕ್ಷೆಯು ಕೇವಲ ಅರ್ಹತಾ ಪರೀಕ್ಷೆ ಆಗಿರುತ್ತದೆ. ಕಾರಣ ಇದರಲ್ಲಿ ಸುಲಭವಾದ ಪ್ರಶ್ನೆಗಳಿರುತ್ತವೆ. ಹಾಗಾಗಿ ನೀವು ಪ್ರಿಲಿಮ್ಸ್ ಪರೀಕ್ಷೆ ಎದುರಿಸಲು ವೇಗ ಹಾಗೂ ನಿಖರತೆಯನ್ನು ಹೆಚ್ಚಿಸಿಕೊಳ್ಳಿ ಹಾಗೂ ಮೇನ್ಸ್ ಪರೀಕ್ಷೆಯನ್ನು ಎದುರಿಸಲು ಕಾನ್ಸೆಪ್ಟ್ ಗಳ ಮೇಲೆ ಹಿಡಿತ ಸಾಧಿಸಿ. ಆಗ ಸುಲಭವಾಗಿ ನೀವು ಆರ್‌ಆರ್‌ಬಿ ಕ್ಲರ್ಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು
l ಇನ್ನು ಪ್ರಿಲಿಮ್ಸ್ ಅಥವಾ ಮೇನ್ಸ್ ಯಾವುದೇ ಪರೀಕ್ಷೆಯಾಗಿರಲಿ ಕನಿಷ್ಠ 1ರಿಂದ 40ರವರೆಗೆ ಸ್ಕ್ವೇರ್ ಹಾಗೂ ಕ್ಯೂಬ್, ಪ್ರೈಮ್ ನಂಬರ್ಸ್, ಡಿವಿಸಿಬಿಲ್ಟಿ ರೂಲ್ಸ್, ಪರ್ಸೆಂಟೇಜ್ ಟು ಫ್ರಾಕ್ಷನ್ & ಫ್ರಾಕ್ಷನ್ ಟು ಪರ್ಸೆಂಟೇಜ್, ಮೆನ್ಸುರೇಶನ್ ಸೂತ್ರಗಳು, ಅಲ್ಫಾಬೇಟ್ ನಂಬರ್ಸ್ ಮುಂತಾದ ಸೂತ್ರಗಳಿದ್ದು, ಸುಲಭವಾಗಿ ಯಶಸ್ಸು ಗಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.