ಗ್ರಾಮೀಣ ಹಿನ್ನೆಲೆಯ ಬಡ ಕುಟುಂಬದ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ವೈದ್ಯರಾಗುವ ಕನಸಿದ್ದರೆ, ಅಂಥವರಿಗೆ ನೆರವಾಗುತ್ತದೆ ರಾಷ್ಟ್ರೋತ್ಥಾನ ಪರಿಷತ್‌ನ ‘ಸಾಧನಾ’ ಯೋಜನೆ.
ಪಿಯು ಮತ್ತು ನೀಟ್ ಕೋಚಿಂಗ್ ಉಚಿತವಾಗಿ ನೀಡುವ ಮೂಲಕ ಎಂಬಿಬಿಎಸ್‌ಗೆ ತಯಾರು ಮಾಡುತ್ತದೆ ಈ ಯೋಜನೆ. 2017ರ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ ಈ ಯೋಜನೆಯಲ್ಲಿ 246 ವಿದ್ಯಾರ್ಥಿನಿಯರು ಉಚಿತ ಶಿಕ್ಷಣ ಪಡೆದಿದ್ದಾರೆ. 58 ಮಕ್ಕಳಿಗೆ ಎಂಬಿಬಿಎಸ್‌ನಲ್ಲಿ ಮೆರಿಟ್ ಸೀಟು ಸಿಕ್ಕಿದೆ. ಈ ಯೋಜನೆಯ ಪ್ರಯೋಜನ ಪಡೆದು, ಎಂಬಿಬಿಎಸ್ ಯಶಸ್ವಿಯಾಗಿ ಮುಗಿಸಿದ ಮೊದಲ ಬ್ಯಾಚ್ ವಿದ್ಯಾರ್ಥಿನಿಯರು ರಾಜ್ಯದ ನಾನಾ ಭಾಗಗಳಿಗೆ ಸೇರಿದವರಾಗಿದ್ದಾರೆ.
ಅರ್ಹತೆ ಏನು?
ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿರುವ ಬಡತನ ಹಿನ್ನೆಲೆಯ 9ನೇ ತರಗತಿಯಲ್ಲಿ ಶೇ 85ರಷ್ಟು ಅಂಕ ಪಡೆದ ವಿದ್ಯಾರ್ಥಿನಿಯರಾಗಿರಬೇಕು. ಅಕ್ಟೋಬರ್‌ನಲ್ಲಿ ಅರ್ಜಿ ನೀಡಲಾಗುತ್ತದೆ. ಕುಟುಂಬದ ಆದಾಯ 2 ಲಕ್ಷ ಮಿತಿಯಲ್ಲಿರಬೇಕು.
ಪ್ರಕ್ರಿಯೆ ಹೇಗಿರಲಿದೆ?
ರಾಜ್ಯದಾದ್ಯಂತ ಸುಮಾರು ಎಂಟರಿಂದ 9 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತವೆ. 50 ಕೇಂದ್ರಗಳಲ್ಲಿ ಡಿಸೆಂಬರ್ 25ರಂದು ಮೊದಲ ಹಂತದ ಪ್ರವೇಶ ಪರೀಕ್ಷೆ ನಡೆಯಲಿದ್ದು, 2ನೇ ಹಂತದ ಪ್ರವೇಶ ಪರೀಕ್ಷೆ ಜನವರಿ 26ರಂದು ಇರಲಿದೆ.
ಪರೀಕ್ಷೆ ಬರೆದು ಪಾಸಾದವರ ಮನೆ ಮನೆಗೆ ತೆರಳಿ ನೀಡಿರುವ ಮಾಹಿತಿಯನ್ನು ವೈಯಕ್ತಿಕವಾಗಿ ಪರಿಶೀಲನೆ ಮಾಡುತ್ತದೆ ಪರಿಷತ್. ನಂತರ 200 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅವರಿಗೆ ಒಂದು ವಾರಗಳ ಕಾಲ ಮಾದರಿ ತರಗತಿ ನೀಡಿ, ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ 40ರಿಂದ 50 ಮಂದಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಯಾವ ಸೌಲಭ್ಯ ಸಿಗಲಿದೆ?
ಆಯ್ಕೆ ಆದವರಿಗೆ ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣದ ಜತೆಗೆ, ನೀಟ್, ಸಿಇಟಿ ಕೋಚಿಂಗ್ ಉಚಿತವಾಗಿ ನೀಡಲಾಗುತ್ತದೆ. ವಸತಿ ನಿಲಯದ ಸೌಲಭ್ಯವೂ ಉಚಿತವಾಗಿರುತ್ತದೆ.
ಇದರ ಜತೆಗೆ ಶಿಕ್ಷಕರಾಗಬೇಕೆಂಬ ಕನಸು ಹೊತ್ತ ವಿದ್ಯಾರ್ಥಿನಿಯರಿಗೆ ಪಿಯುಸಿ, ಬಿಎಸ್‍ಸಿ ಮತ್ತು ಇಂಟಿಗ್ರೇಟೆಡ್ ಬಿ.ಇಡಿ ಶಿಕ್ಷಣವನ್ನು ನೀಡಲಾಗುತ್ತದೆ. ಕೃಷಿ, ತಾಂತ್ರಿಕ, ಫಾರ್ಮಸಿ ಮತ್ತು ಬಯೋ ಇನ್‌ಫಾರ್ಮೇಷನ್ ಮುಂತಾದ ವಿಷಯಗಳಲ್ಲಿ ಅಧ್ಯಯನ ನಡೆಸಲು ಅವಕಾಶ ನೀಡುತ್ತದೆ.
‘ತಿಪಟೂರಿನ ಮಾದಿಹಳ್ಳಿಯಂಥ ಕುಗ್ರಾಮದಿಂದ ಬಂದ ನನಗೆ ಏನು ಓದಬೇಕು ಎಂಬುದಕ್ಕೆ ಸೂಕ್ತ ಮಾರ್ಗದರ್ಶನ ಇರಲಿಲ್ಲ. ರಾಷ್ಟ್ರೋತ್ಥಾನ ನೀಡಿದ್ದು ಸುವರ್ಣ ಅವಕಾಶ. ಪರಿಷತ್ ನನ್ನನ್ನು ಕುಟುಂಬದಂತೆ ಎರಡು ವರ್ಷಗಳ ಕಾಲ ಸಲಹಿ ಉತ್ತಮ ತರಬೇತಿ ನೀಡಿತು. ಇದರಿಂದಲೇ ಈ ಹಂತಕ್ಕೆ ಬರಲು ಸಾಧ್ಯವಾಯಿತು’ ಎನ್ನುತ್ತಾರೆ ‘ಸಾಧನಾ’ ಯೋಜನೆಯ ಫಲಾನುಭವಿ ತಿಪಟೂರಿನ ಎಂಬಿಬಿಎಸ್ ಪದವೀಧರೆ ಡಾ.ವಿದ್ಯಾಶ್ರೀ ಎಂ.ವೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.