ಹೂವಿನಹಡಗಲಿ: ಪಟ್ಟಣದಿಂದ ಕೇವಲ ಆರು ಕಿ.ಮೀ. ದೂರದಲ್ಲಿ ಇರುವ ಗುಜನೂರು ಅನೇಕರಿಗೆ ಗೊತ್ತಿಲ್ಲ. ಆದರೆ, ಹಳ್ಳಿಯ ಯಾವ ಮಗುವೂ ಖಾಸಗಿ ಶಾಲೆಗೆ ಹೋಗಲ್ಲ. ಹಿಂದಿನ ವರ್ಷ ಖಾಸಗಿ ಶಾಲೆಗೆ ಹೋಗಿದ್ದ ಮಕ್ಕಳು ಇಲ್ಲಿಗೇ ಮರಳಿದ್ದಾರೆ!
ಅತ್ಯಾಧುನಿಕ ಸ್ಮಾರ್ಟ್‌ಕ್ಲಾಸ್, ನಲಿಕಲಿ ಅನುಷ್ಠಾನ ಕುರಿತು ಪ್ರಾಯೋಗಿಕವಾಗಿ ಅರಿಯಲು ಶಿಕ್ಷಣ ಇಲಾಖೆ ಅಧಿಕಾರಿಗಳು ಬೇರೆ ಶಾಲೆಗಳ ಶಿಕ್ಷಕರನ್ನು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಳಿಸುತ್ತಾರೆ. ಇದು ಈ ಶಾಲೆಯ ಹೆಗ್ಗಳಿಕೆ.
ಮುಖ್ಯಶಿಕ್ಷಕ ಎಸ್.ನಾಗರಾಜಪ್ಪ ನೇತೃತ್ವದಕ್ರಿಯಾಶೀಲ ಶಿಕ್ಷಕ ಬಳಗ ಮಕ್ಕಳಿಗೆ ಆಪ್ತವೆನಿಸುವ ಕಲಿಕಾ ವಿಧಾನ ಅಳವಡಿಸುವ ಜತೆಗೆ ಶಾಲೆಗೆವಿಶಿಷ್ಟ ರೂಪ ನೀಡಿದ್ದಾರೆ. ಇಲ್ಲಿನ ಶೈಕ್ಷಣಿಕ ಪರಿಸರವನ್ನು ಗ್ರಾಮದ ಜನರು ಮೆಚ್ಚಿಕೊಂಡಿದ್ದಾರೆ.
ಶಿಕ್ಷಕರು ನಲಿಕಲಿ ವಿಭಾಗವನ್ನು ಮಕ್ಕಳಿಗೆ ಆಪ್ತವಾಗುವ ರೀತಿಯಲ್ಲಿ ವಿಶಿಷ್ಟವಾಗಿ ಅಣಿಗೊಳಿಸಿದ್ದಾರೆ. ಪೋಷಕರ ನೆರವು ಪಡೆದು 1 ರಿಂದ 3ನೇ ತರಗತಿ ಮಕ್ಕಳಿಗೆ ಕುರ್ಚಿ ವ್ಯವಸ್ಥೆ ಮಾಡಿದ್ದಾರೆ. ಕನ್ನಡ, ಇಂಗ್ಲಿಷ್ ವರ್ಣಮಾಲೆ, ಮಗ್ಗಿಗಳನ್ನು ಮುದ್ರಿಸಿರುವ ಕಲಿಕೆಗೆ ಪೂರಕವಾದ ವಿಶೇಷ ಮೇಜುಗಳನ್ನು ರೂಪಿಸಿದ್ದಾರೆ. ಪಾಠೋಪಕರಣ, ಪೀಠೋಪಕರಣ, ಪ್ರಗತಿ ದಾಖಲೆಯ ಕಲಿಕಾ ಸ್ಟ್ಯಾಂಡ್, ಅಕ್ಷರ ಚಪ್ಪರ, ಗೋಡೆ ಬರಹ ಎಲ್ಲವೂ ವಿಭಿನ್ನವಾಗಿವೆ.
ಈ ರೀತಿಯ ನಲಿಕಲಿ ವಿಭಾಗ ತಾಲ್ಲೂಕಿನ ಯಾವ ಶಾಲೆಯಲ್ಲೂ ಇಲ್ಲ. ನಲಿಕಲಿ ವಿಭಾಗ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಶಾಲೆಗೆ ಪ್ರಶಸ್ತಿ ಹಾಗೂ ₹ 5 ಸಾವಿರ ನಗದು ಬಹುಮಾನ ಲಭಿಸಿದೆ.
ಸ್ಮಾರ್ಟ್ ಶಾಲೆ: ಗ್ರಾಮಸ್ಥರು ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಶಾಲೆಯಲ್ಲಿ ₹ 70ಸಾವಿರ ವೆಚ್ಚದ ಆಧುನಿಕ ಸ್ಮಾರ್ಟ್‌ಕ್ಲಾಸ್ ತೆರೆಯಲಾಗಿದೆ. ಕಂಪ್ಯೂಟರ್ ಶಿಕ್ಷಣ, ತಂತ್ರಜ್ಞಾನ ಬಳಕೆ ಕೌಶಲವನ್ನು ಕಲಿಸಿಕೊಡಲಾಗುತ್ತಿದ್ದು, ಮಕ್ಕಳು ತಾವೇ ಸ್ಮಾರ್ಟ್‌ಕ್ಲಾಸ್ ನಿರ್ವಹಿಸುತ್ತಿರುವುದು ಇನ್ನೊಂದು ವಿಶೇಷ. ಶಿಕ್ಷಕರಾದ ಬಿ.ಶಿವಪ್ಪ, ಮಂಜುನಾಥ ರಾಜು, ಅತಿಥಿ ಶಿಕ್ಷಕ ಕೆ.ಪಕ್ಕೀರಪ್ಪ ಸ್ಮಾರ್ಟ್‌ಕ್ಲಾಸ್ ನೇತೃತ್ವ ವಹಿಸಿದ್ದಾರೆ.
36 ವಿವಿಧ ಜಾತಿಯ 216 ಗಿಡಗಳ ನಡುವೆ ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಕೈತೋಟದಲ್ಲಿ ಬೆಳೆದ ಬಾಳೆಹಣ್ಣನ್ನು ಮಕ್ಕಳಿಗೆ ನೀಡಲಾಗುತ್ತಿದೆ. ತೆಂಗು, ತರಕಾರಿಗಳನ್ನು ಬಿಸಿಊಟಕ್ಕೆ ಬಳಸಲಾಗುತ್ತಿದೆ.
ಗ್ರಾಮದ ಶಿಕ್ಷಣ ಪ್ರೇಮಿಗಳು, ದಾನಿಗಳಿಂದ ₹ 2.50 ಲಕ್ಷ ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗಿದೆ. ಅದರ ಬಡ್ಡಿ ಹಣದಲ್ಲಿ ರಾಷ್ಟ್ರಿಯ ಹಬ್ಬ, ಶಾಲೆ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.