ಮಕ್ಕಳ ಮನೋದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಭಾರದ ಪಠ್ಯಚೀಲ ಎನ್ನುವ ಹೊರೆಯನ್ನು ತಗ್ಗಿಸಬೇಕು ಎಂಬ ಚರ್ಚೆ ಶಾಲಾ ಆರಂಭದ ಸಂದರ್ಭದಲ್ಲಿ ಹೆಚ್ಚು ನಡೆಯುತ್ತದೆ. ಮಕ್ಕಳ ಪಠ್ಯಚೀಲದ ಹೊರೆ ಯಾವ ಪ್ರಮಾಣದಲ್ಲಿ ಇರಬೇಕು ಎಂಬ ನಿಯಮಾವಳಿಗಳನ್ನು ರೂಪಿಸಿದ ಭಾರತ ಸರ್ಕಾರ ಆಯಾ ರಾಜ್ಯ ಸರ್ಕಾರಗಳು ಇದನ್ನು ಪಾಲಿಸುವಂತೆ ಸೂಚಿಸಿತ್ತು.
ಈ ನೆಲೆಯಲ್ಲಿ ಮಕ್ಕಳ ಭುಜಗಳ ಮೇಲಿನ ಭಾರ ಇಳಿಸುವುದಕ್ಕೆ ಹಲವು ಶಿಕ್ಷಣ ಸಂಸ್ಥೆಗಳು ಕ್ರಮ ಕೈಗೊಳ್ಳಲು ಮುಂದಾಗಿವೆ. ಲೈಟ್‌ವೇಟ್ ಬ್ಯಾಗ್‌ಗಳನ್ನು ಅಂದರೆ ಹಗುರವಾದ ಚೀಲಗಳನ್ನು ಖರೀದಿಸುವಂತೆ ಪೋಷಕರಿಗೆ ಸೂಚಿಸುತ್ತಿವೆ. ಹೀಗಾಗಿ ಬಳೆಪೇಟೆಯ ಬ್ಯಾಗ್ ಅಂಗಡಿಗಳಲ್ಲೆಲ್ಲ ಲೈಟ್‌ವೇಟ್ ಬ್ಯಾಗ್‌ಗಳೇ ರಾರಾಜಿಸುತ್ತಿವೆ.
ಏನಿದು ಲೈಟ್‌ವೇಟ್ ಬ್ಯಾಗ್?
ಹಲವು ಬ್ಯಾಗ್ ತಯಾರಿಕಾ ಕಂಪನಿಗಳು ಲೈಟ್‌ವೇಟ್ ಬ್ಯಾಗ್‌ಗಳ ತಯಾರಿಕೆಗೆ ಗಮನ ಕೊಡುತ್ತಿವೆ. ತೆಳುವಾದ ಪದರ ಹೊಂದಿದ್ದರೂ ದೃಢವಾಗಿರುತ್ತದೆ ಎಂದು ಮಾರಟಾಗಾರರು ಹೇಳುತ್ತಿದ್ದಾರೆ. ಬ್ಯಾಗ್ ತೂಕವಾಗಿದ್ದರೆ ದೃಢವಾಗಿರುತ್ತದೆ, ಅಂತಹ ಬ್ಯಾಗ್‌ಗಳು ಹೆಚ್ಚು ಭಾರ ತಡೆಯಬಲ್ಲವು ಎಂಬ ಅಭಿಪ್ರಾಯ ಹಲವರಲ್ಲಿ ಇದೆ.
ಆದರೆ ಬ್ಯಾಗ್‌ನ ಪರದೆಗಳು ಮಂದವಾಗಿರ ಬೇಕೆಂದರೆ ರಬ್ಬರ್ ಸೇರಿಸಬೇಕಾಗುತ್ತದೆ. ರಬ್ಬರ್ ಬೆರತಷ್ಟೂ ಬ್ಯಾಗ್‌ನ ನೂಲುಗಳು ಜಾಳಾಗುತ್ತವೆ. ಈ ರೀತಿ ಜಾಳಾದ ಬ್ಯಾಗ್‌ನಲ್ಲಿ ತೂಕ ಹೆಚ್ಚಾದರೆ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಇದರಿಂದ ಪ್ರತಿ ವರ್ಷ ಹೊಸ ಬ್ಯಾಗ್ ಖರೀದಿಸಬೇಕಾದ ಅನಿವಾರ್ಯತೆ ಇರುತ್ತದೆ. ಇವನ್ನು ಪಿವಿಸಿ ಕೋಟ್ ಬ್ಯಾಗ್‌ಗಳು ಎನ್ನುತ್ತಾರೆ. ಈ ಬ್ಯಾಗ್‌ಗಳನ್ನು ಪ್ರಯಾಣಕ್ಕೆ ಅಥವಾ ಅಪರೂಪವಾಗಿ ಬಳಸುವುದು ಸೂಕ್ತ. ನಿತ್ಯ ಬಳಕೆಗೆ ಪಿವಿ ಕೋಟ್ ಬ್ಯಾಗ್‌ಗಳೇ ಉತ್ತಮ. ಇವು ದೃಢವಾಗಿಯೂ ಇರುತ್ತವೆ, ಹೆಚ್ಚು ತೂಕವನ್ನೂ ಹೊರುವ ಸಾಮರ್ಥ್ಯ ಹೊಂದಿರುತ್ತವೆ. ಹೀಗಾಗಿ ಶಾಲಾ ಮಕ್ಕಳಿಗೆ ಇವೇ ಹೆಚ್ಚು ಸೂಕ್ತ ಎಂಬುದು ಮಾರಾಟಗಾರರ ಅಭಿಪ್ರಾಯ.
ಆದರೆ ಮಂದ ಬ್ಯಾಗ್‌ಗಳಗಿಂತ ಹಗುರ ಬ್ಯಾಗ್‌ಗಳ ಬೆಲೆ ತುಸು ಹೆಚ್ಚು.
ಆಲಂಕಾರಿಕ ಬ್ಯಾಗ್ ಮೇಲೂ ಆಸಕ್ತಿ
‘ಸಾಮಾನ್ಯ ಬ್ಯಾಗ್‌ಗಳಿಗಿಂತ ಮಕ್ಕಳು ಇಷ್ಟಪಡುವ ಬ್ಯಾಗ್‌ಗಳನ್ನು ಖರೀದಿಸುವುದಕ್ಕೆ ಪೋಷಕರು ಇಷ್ಟಪಡುತ್ತಾರೆ. ಸ್ಪೈಡರ್ ಮ್ಯಾನ್, ಸೂಪರ್‌ಮ್ಯಾನ್, ಚೋಟಾ ಭೀಮ್‌ನಂತಹ ಕಾರ್ಟೂನ್ ಪಾತ್ರಗಳಿರುವ ಬ್ಯಾಗ್‌ಗಳನ್ನು ಮಕ್ಕಳು ಇಷ್ಟಪಡುತ್ತಾರೆ. ಆದರೆ ಅಂತಹ ಬ್ಯಾಗ್‌ಗಳು ಆಕರ್ಷಣೆಗಷ್ಟೇ ಸೀಮಿತ. ಹೆಚ್ಚು ತೂಕವನ್ನೂ ಹೊರಲಾಗದು’ ಎನ್ನುತ್ತಾರೆ ಬಳೆಪೇಟೆಯ ಬ್ಯಾಗ್ ಮಾರಾಟಗಾರ ಆನಂದ್.
ಟ್ರೆಂಡ್ ಪಾಲಿಸುವುದರಲ್ಲಿ ಬೆಂಗಳೂರಿಗರೇ ಮೊದಲು
ಹಲವು ವರ್ಷಗಳಿಂದ ಬ್ಯಾಗ್ ಮಾರಾಟ ಮಳಿಗೆಯನ್ನು ನಡೆಸುತ್ತಿದ್ದೇವೆ. ನಮ್ಮದೇ ಸ್ವಂತ ತಯಾರಿಕಾ ಘಟಕಗಳಿವೆ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೂ ಪೂರೈಸಿತ್ತಿದ್ದೇವೆ. ಆ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನವರ ಅಭಿರುಚಿಯೇ ಉತ್ತಮವಾಗಿದೆ. ಇಲ್ಲಿನವರು ಹೊಸ ಟ್ರೆಂಡ್‌ಗೆ ಒಗ್ಗಿಕೊಂಡು ಉತ್ತಮವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಬಹುತೇಕ ಪೋಷಕರು ಲೈಟ್‌ವೇಟ್ ಬ್ಯಾಗ್‌ಗಳನ್ನೇ ಕೇಳುತ್ತಿದ್ದಾರೆ. ಇವು ದೀರ್ಘಕಾಲ ಬಾಳಿಕೆ ಬರುವುದರ ಜತೆಗೆ, ಹಗುರವೂ ಆಗಿರುವುದರಿಂದ ಮಕ್ಕಳ ಬಳಕೆಗೆ ಇವೇ ಉತ್ತಮ.
-ಹಿತೇಂದರ್, ಹಿತೇಂದರ್ ಬ್ಯಾಗ್ ಹೌಸ್, ಬಳೆಪೇಟೆ.
**
ಐದು ವರ್ಷ ಬಾಳಿಕೆ ಬರಬೇಕು
ನಮ್ಮ ಶಾಲಾ ಮಕ್ಕಳಿಗೆ ಗುಣಮಟ್ಟದ ಬ್ಯಾಗ್‌ಗಳನ್ನೇ ನೀಡುತ್ತಿದ್ದೇವೆ. ಪ್ರತಿ ವರ್ಷ ಖರೀದಿಸಬೇಕೆಂದರೆ ಪೋಷಕರಿಗೆ ಹೊರೆ. ಹೀಗಾಗಿ ದುಬಾರಿಯಾದರೂ ಪರವಾಗಿಲ್ಲ ಐದು ವರ್ಷ ಬಾಳಿಕೆ ಬರುವಂತಹ ಬ್ಯಾಗ್‌ಗಳನ್ನು ನೀಡುತ್ತಿದ್ದೇವೆ. ಮಕ್ಕಳ ಭುಜಗಳ ಮೇಲೆ ಹೆಚ್ಚು ಹೊರೆಹಾಕುವುದು ಸರಿಯಲ್ಲ. ಹೀಗಾಗಿ ಆಯಾ ದಿನದ ಪಾಠಗಳಿಗೆ ತಕ್ಕಂತೆ ಪುಸ್ತಕಗಳನ್ನು ತರುವಂತೆ ಸೂಚಿಸುತ್ತೇವೆ. ಇದರಿಂದಲೂ ಹೊರೆ ಕಡಿಮೆಯಾಗುತ್ತಿದೆ.
-ಕವಿತಾ, ಶಾರದಾ ಹೈಸ್ಕೂಲ್, ಕೋಣನಕುಂಟೆ
**
ಬ್ಯಾಗ್ ಕೂಡ ಹೊರೆಯಾದರೆ ಹೇಗೆ?
ಇಂದಿನ ಮಕ್ಕಳು ಮಣಭಾರ ಬ್ಯಾಗ್‌ಗಳನ್ನು ಹೊತ್ತು ಶಾಲೆಗೆ ಹೋಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಪುಸ್ತಕಗಳ ಭಾರವೇ ಹೊರೆಯಾಗಿರುವಾಗ ಬ್ಯಾಗ್ ಕೂಡ ತೂಕವಾಗಿದ್ದರೆ ಹೊರೆಯಾಗುತ್ತದೆ. ಹೀಗಾಗಿ ಲೈಟ್‌ವೇಟ್ ಬ್ಯಾಗ್‌ಗಳೇ ಉತ್ತಮ. ಈ ಬ್ಯಾಗ್‌ಗಳಿಗೆ 10 ಕೆ.ಜಿ.ವರೆಗೆ ತೂಕ ಹೊರುವ ಸಾಮರ್ಥ್ಯವಿರುತ್ತದೆ. ನಗರದ ಹಲವು ಶಾಲೆಗಳು, ಇಂತಹ ಬ್ಯಾಗ್‌ಗಳನ್ನೇ ತಯಾರಿಸಿಕೊಡುವಂತೆ ಕೇಳುತ್ತಿವೆ. ನಮ್ಮಲ್ಲಿ ಖರೀದಿಗೆ ಬರುವ ಪೋಷಕರಿಗೂ ಇಂತಹ ಬ್ಯಾಗ್‌ಗಳೇ ಸೂಕ್ತ ಎಂದು ಹೇಳುತ್ತಿದ್ದೇವೆ.
-ಆನಂದ್, ಎಸ್‌ಎಲ್‌ಬಿ ಬ್ಯಾಗ್ಸ್, ಬಳೆಪೇಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.