ಕಲಬುರ್ಗಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ವಿಷಯದಲ್ಲಿ ಮುತುವರ್ಜಿ ವಹಿಸುವ ಸಾಕಷ್ಟು ಪೋಷಕರು ಸುರಕ್ಷತೆ ವಿಚಾರದಲ್ಲಿ ನಿಗಾ ವಹಿಸುವುತ್ತಿಲ್ಲವೇ?
ಶಾಲಾ ವಾಹನಗಳಲ್ಲಿ ಮಕ್ಕಳನ್ನು ದನಗಳಂತೆ ತುಂಬಿಕೊಂಡು ಹೋಗುವುದನ್ನು ಕಂಡರೆ ಈ ಪ್ರಶ್ನೆ ಎದುರಾಗದೆ ಇರದು.
ಹಲವು ಶಾಲೆಗಳಲ್ಲಿಯೂ ಅಷ್ಟೇ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೀಡುವಷ್ಟು ಕಾಳಜಿಯನ್ನು ರಕ್ಷಣೆ ವಿಚಾರದಲ್ಲಿ ವಹಿಸುತ್ತಿಲ್ಲ. ಇದನ್ನು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಶಾಲೆ ಆರಂಭ ಮತ್ತು ಮುಕ್ತಾಯದ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಹೋಗಿ– ಬರುವಾಗ ಕಣ್ಣಾರೆ ಕಾಣಬಹುದು.
ಪ್ರಸ್ತುತ ಎಲ್ಲ ವರ್ಗದ ಪೋಷಕರಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಬಗ್ಗೆ ಅರಿವು ಬೆಳೆದಿದೆ. ಮಕ್ಕಳನ್ನು ಎಲ್‌ಕೆಜಿಯಿಂದಲೇ ಲಕ್ಷಾಂತರ ರೂಪಾಯಿ ವಂತಿಗೆ ತೆತ್ತು ಅತ್ಯುತ್ತಮ ಎನ್ನುವಂತಹ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಪ್ರತಿನಿತ್ಯ ಶಾಲೆಗೆ ಹೋಗಿ ಬರುವ ಮಾರ್ಗದಲ್ಲಿ ತಮ್ಮ ಮಕ್ಕಳು ಎಷ್ಟು ಸುರಕ್ಷಿತ ಎಂಬುದಕ್ಕೆ ಗಮನ ಕೊಡುವುದಿಲ್ಲ.
ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಅತ್ಯುತ್ತಮ ವಾಹನ ವ್ಯವಸ್ಥೆಯನ್ನು ಮಾಡುವಲ್ಲಿ ಸಾಕಷ್ಟು ಪೋಷಕರು ನಿಗಾ ವಹಿಸುವುದಿಲ್ಲ. ಸಾಮಾನ್ಯ ಆಟೊಗಳಲ್ಲಿ ಮಕ್ಕಳನ್ನು ದನಕರುಗಳಂತೆ ತುಂಬಿ ಕೊಂಡು ಹೋಗುವುದನ್ನು ಕಣ್ಣಾರೆ ನೋಡುತ್ತಲೇ ಆಟೋ ಹತ್ತಿಸುತ್ತಾರೆ. ಆ ಆಟೊಗಳು ಹತ್ತಾರು ಮಕ್ಕಳನ್ನು ನಿಲ್ಲಲು ಸ್ಥಳಾವಕಾಶ ಇಲ್ಲದಂತೆ ತುಂಬಿಕೊಂಡು ಕೊಂಡೊಯ್ಯುತ್ತಾರೆ. ಮಕ್ಕಳಿಗಿಂತ ಹೆಚ್ಚು ತೂಕದ ಶಾಲಾ ಬ್ಯಾಗ್‌ಗಳು ಆಟೊಗಳ ಎರಡೂ ಬದಿಯಲ್ಲಿ ತೂಗಾಡುತ್ತಿರುತ್ತವೆ. ಆಟೊಗಳು ಜೋಲಿ ಹೊಡೆಯುತ್ತಾ ಸಂಚರಿಸುತ್ತಿದ್ದರೆ ಆತಂಕವಾಗುತ್ತದೆ.
ಕೆಲವು ಪ್ರತಿಷ್ಠಿತ ಶಾಲೆಗಳು ಮಾತ್ರ ಎಲ್ಲ ನಿಯಮಗಳನ್ನು ಅನುಸರಿಸಿ ಶಾಲಾ ಬಸ್‌ಗಳನ್ನು ನಿಯೋಜಿಸಿರುತ್ತಾರೆ. ಇಂತಹ ಶಾಲೆಗಳಲ್ಲಿ ಮಕ್ಕಳನ್ನು ಕರೆದೊಯ್ಯಲು ದುಬಾರಿ ಶುಲ್ಕ ವಿಧಿಸಿದರೂ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಆದರೆ ಸಾಕಷ್ಟು ಶಾಲೆಗಳಲ್ಲಿ ಶಾಲಾ ವಾಹನಗಳ ವ್ಯವಸ್ಥೆಯೇ ಇರುವುದಿಲ್ಲ. ಕೆಲವು ಕಡೆ ಇದ್ದರೂ, ನಿಯಮದಂತೆ ಸುರಕ್ಷಿತ ವ್ಯವಸ್ಥೆ ಇರುವುದಿಲ್ಲ. ವಾಹನ ಇಲ್ಲದ ಶಾಲೆಗಳಲ್ಲಿ ಪೋಷಕರು ಚೌಕಾಸಿ ಮಾಡಿ ಆಟೊಗಳನ್ನು ಗೊತ್ತು ಮಾಡುತ್ತಾರೆ. ಇದರಲ್ಲಿ ಶಾಲಾ ಆಡಳಿತ ಮಂಡಳಿಗಳು ಆಸ್ಥೆ ವಹಿಸುವುದಿಲ್ಲ. ಅದು ಪೋಷಕರ ಹಣೆಬರಹ ಎಂಬಂತೆ ನಿರ್ಲಿಪ್ತರಾಗಿರುತ್ತಾರೆ.
ಕೆಲವು ಶಾಲೆಗಳಲ್ಲಿ ಮೆಟಡೋರ್/ಮಾರುತಿ ವ್ಯಾನ್ ನಂತಹ ವಾಹನಗಳನ್ನು ನಿಯೋಜಿಸುತ್ತಾರೆ. ಅಲ್ಲಿಯೂ ಮಕ್ಕಳಿಗೆ ಅಗತ್ಯ ಅನುಕೂಲಗಳಿರುವುದಿಲ್ಲ. ಶಾಲಾ ಬ್ಯಾಗಗಳಿನ್ನಿಡಲು ಸ್ಥಳಾವಕಾಶ ಇರುವುದಿಲ್ಲ. ಸೀಟ್‌ಗಳ ಪ್ರಮಾಣಕ್ಕಿಂತ ಎರಡು, ಮೂರು ಪಟ್ಟು ಮಕ್ಕಳನ್ನು ಹತ್ತಿಸಿಕೊಂಡು ಸಾಗುತ್ತಾರೆ. ಅಲ್ಲದೆ ಸಾಕಷ್ಟು ಶಾಲೆಗಳಲ್ಲಿ ಸ್ವಂತ ವಾಹನಗಳು ಇಲ್ಲದ ಕಾರಣ ಹೊರಗುತ್ತಿಗೆ ನೀಡುತ್ತಾರೆ. ಪೋಷಕರಿಂದ ಪಡೆಯುವ ಶುಲ್ಕದಲ್ಲಿ ಅಲ್ಪ ಪ್ರಮಾಣವನ್ನು ವಾಹನಗಳ ಗುತ್ತಿಗೆದಾರರಿಗೆ ನೀಡುತ್ತಾರೆ. ಇದರಿಂದ ಗುತ್ತಿಗೆದಾರರು ಸಹ ಗುಣಮಟ್ಟದ ಸೇವೆ ನೀಡುವುದಿಲ್ಲ.
ಕೆಎಸ್‌ಆರ್‌ಟಿಸಿ ಮತ್ತು ಸಾರಿಗೆ ನಿಗಮಗಳು ಅವಧಿ ಮುಗಿದ ಲಕ್ಷಾಂತರ ಕಿ.ಮೀ ಓಡಿರುವ ಬಸ್‌ಗಳನ್ನು ಗುಜರಿಗೆ ಹಾಕಿ, ನಂತರ ಟೆಂಡರ್ ಕರೆದು ಮಾರಾಟ ಮಾಡುತ್ತಾರೆ. ಇವುಗಳನ್ನು ಕೊಂಡುಕೊಳ್ಳುವ ಶಾಲಾ ಆಡಳಿತ ಮಂಡಳಿಗಳು ಅಂತಹ ಬಸ್‌ಗಳಿಗೆ ಬಣ್ಣ ಬಳಿದು ಓಡಿಸುತ್ತವೆ. ಪ್ರಯಾಣಿಕರು ಬಳಸಲು ಬಾರದಂತಿರುವ ಬಸ್‌ಗಳು ಶಾಲಾ ಮಕ್ಕಳ ಬಳಕೆಗೆ ಬರುತ್ತವೆ. ಇಂತಹ ಬಸ್‌ಗಳಿಗೆ ಆರ್‌ಟಿಒ ಕಚೇರಿಗಳಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಕೆಲವು ಶಾಲೆಗಳಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ ಸೇರಿಂದತೆ ಯಾವುದೇ ದಾಖಲೆ ಇಲ್ಲದಿದ್ದರೂ ಬಣ್ಣ ಬದಲಿಸಿ ಓಡಿಸಲಾಗುತ್ತದೆ.
ಚಾಲಕರು ಕುಡಿದು ವಾಹನ ಓಡಿಸುವಂತಿಲ್ಲ. ಚಾಲಕನಿಗೆ ಕನಿಷ್ಠ 5 ವರ್ಷಗಳ ಅನುಭವ ಇರಬೇಕು. ಮಕ್ಕಳ ನಿಗಾವಹಿಸಲು ವಾಹನದಲ್ಲಿ ಶಿಕ್ಷಕರು ಅಥವಾ ಆಯಾಗಳನ್ನು ನಿಯೋಜಿಸಿರಬೇಕು. ಇಂತಹ ಹಲವು ವಿಚಾರಗಳ ಬಗ್ಗೆ ಪೋಷಕರು ಸಹ ನಿಗಾವಹಿಸಬೇಕಿದೆ.
ನಿಯಮ ಇರುವುದು ಹೀಗೆ...
ಶಾಲಾ ಮಕ್ಕಳ ಸುರಕ್ಷತೆಗಾಗಿ ವಾಹನಗಳ ವ್ಯವಸ್ಥೆ ಮಾಡುವಲ್ಲಿ ನಿಯಮಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಸರ್ಕಾರ ನಿಯಮಗಳನ್ನು ರೂಪಿಸಿ ಜಾರಿಗೆ ತಂದಿದೆ.
ಆದರೆ ಇದರಲ್ಲಿ ಸಾಕಷ್ಟು ನಿಯಮಗಳ ಪಾಲನೆ ಆಗುತ್ತಿಲ್ಲ. ಅಲ್ಲದೆ ಶಾಲಾ ವಾಹನವಾಗಿ ಆಟೊ ಬಳಸಲು ಅವಕಾಶವಿಲ್ಲ. ಜಿಲ್ಲಾಮಟ್ಟದ ಸಮಿತಿ ಈ ಬಗ್ಗೆ ನಿಗಾವಹಿಸಬೇಕಾಗಿದೆ. ನಿಯಮಗಳನ್ನು ಪಾಲಿಸದ ಶಾಲೆಯ ಮಾನ್ಯತೆ ರದ್ದು ಪಡಿಸಲು ಶಿಫಾರಸು ಮಾಡುವ ಅಧಿಕಾರ ಈ ಸಮಿತಿಗೆ ಇದೆ.
ನಿಯಮಗಳು
* ಪ್ರತಿ ಶಾಲೆಯಲ್ಲಿ ಕ್ಯಾಬ್ (ವಾಹನ) ಸುರಕ್ಷತಾ ಸಮಿತಿ ರಚಿಸಬೇಕು. ಸಮಿತಿ ವಾಹನಗಳನ್ನು ಪರಿಶೀಲಿಸಿ ಅನುಮೋದನೆ ನೀಡಬೇಕು.
* ವಾಹನವು ಪರ್ಮಿಟ್ ಹೊಂದಿರಬೇಕು. ಎಲ್ಲ ದಾಖಲಾತಿಗಳು ಸಮರ್ಪಕವಾಗಿರಬೇಕು. ವಾಹನ ಸುಸ್ಥಿತಿಯಲ್ಲಿರಬೇಕು. 15 ವರ್ಷಗಳಿಗಿಂತ ಹಳೆಯ ವಾಹನ ಆಗಿರಬಾರದು. ಸ್ಪೀಡ್ ಗವರ್ನರ್ ಅಳವಡಿಸಿರಬೇಕು. 40 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಚಲಿಸಲು ಅವಕಾಶವಿರಬಾರದು. ವಾಹನದ ಕವಚವನ್ನು ಉಕ್ಕಿನಿಂದ ಮಾಡಿರಬೇಕು.
* ವಾಹನದ ತಯಾರಿಕೆ ಸಂದರ್ಭದಲ್ಲಿ ಅಳವಡಿಸಿರುವ ಸೀಟುಗಳು ಪುನರ್ ನಿರ್ಮಾಣ ಮಾಡಿರಬಾರದು. ಇರುವ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಸಾಗಿಸಬಾರದು. ಅಲ್ಲದೆ ಮಕ್ಕಳು ಬ್ಯಾಗಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ ಇರಬೇಕು.
* ವಾಹನ ಸಂಪೂರ್ಣ ವಿಮಾ ರಕ್ಷಣೆ ಹೊಂದಿರಬೇಕು. ಪ್ರಾಥಮಿಕ ಚಿಕಿತ್ಸೆ ಸಾಧನಗಳನ್ನು (Frist Aid) ಅಳವಡಿಸಿರಬೇಕು. ಬೆಂಕಿ ನಂದಕ ಉಪಕರಣ ಹೊಂದಿರಬೇಕು.
* ವಾಹನ ಸಂಪೂರ್ಣವಾಗಿ ಹಳದಿ ಬಣ್ಣ ಹೊಂದಿರಬೇಕು. ವಾಹನದ ಹಿಂದೆ ಮತ್ತು ಮುಂದೆ ಶಾಲಾ ವಾಹನ ಎಂದು ದಪ್ಪ ಅಕ್ಷರದಲ್ಲಿ (100 ಮಿ.ಮೀ.ಗಿಂತ ಹೆಚ್ಚು) ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರಬೇಕು. ಉಳಿದ ಎರಡು ಕಡೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು.
* ಮಕ್ಕಳನ್ನು ಹತ್ತಿಸಿಕೊಳ್ಳಲು ಮತ್ತು ಸುರಕ್ಷಿತವಾಗಿ ಇಳಿಸಿ ಪಾಲಕರಿಗೆ ಒಪ್ಪಿಸಲು ಪ್ರತಿಯೊಂದು ವಾಹನದಲ್ಲಿ ಶಾಲೆಯ ಸಿಬ್ಬಂದಿಯನ್ನು ನೇಮಕ ಮಾಡಬೇಕು. ನಿಗದಿತ ಪೋಷಕರನ್ನು ಹೊರತುಪಡಿಸಿ ಬೇರೆಯವರಿಗೆ ಮಕ್ಕಳನ್ನು ಒಪ್ಪಿಸುವಂತಿಲ್ಲ.
* ವಾಹನಕ್ಕೆ ಅಧಿಕೃತ ಕಂಪನಿಗಳ ಎಲ್‌ಪಿಜಿ ಕಿಟ್‌ಗಳನ್ನು ಮಾತ್ರ ಅಳವಡಿಸಬೇಕು. ಸಿಲಿಂಡರ್ ಮೇಲೆ ಆಸನದ ವ್ಯವಸ್ಥೆ ಮಾಡುವಂತಿಲ್ಲ. ಸಂಪೂರ್ಣ ಪಾರದರ್ಶಕ ಗಾಜುಗಳನ್ನು ಅಳವಡಿಸಿರಬೇಕು. ಬಾಗಿಲುಗಳು ಸರಳವಾಗಿ ತೆರೆದುಕೊಳ್ಳುವಂತೆ ಲಾಕ್‌ಗಳನ್ನು ಅಳವಡಿಸಬೇಕು. ತುರ್ತು ನಿರ್ಗಮನ ಬಾಗಿಲುಗಳು ಕಡ್ಡಾಯವಾಗಿರಬೇಕು.
* ವಾಹನ ಚಾಲಕನಿಗೆ ಕನಿಷ್ಠ 5 ವರ್ಷಗಳ ಅನುಭವ ಇರುವುದು ಕಡ್ಡಾಯ. ಇದುವರೆಗೆ ಆತನ ವಿರುದ್ಧ ಅಪಘಾತದ ದೂರು ದಾಖಲಾಗಿರಬಾರದು. ಕುಡಿದು ಚಾಲನೆ ಮಾಡಿದ ಬಗ್ಗೆ ದಂಡ ಕಟ್ಟಿರಬಾರದು. ಚಾಲಕನ ಸಂಪೂರ್ಣ ಮಾಹಿತಿಯನ್ನು ಶಾಲೆ ಸಮಿತಿ ಹೊಂದಿರಬೇಕು.
ಸಮಿತಿ ರಚಿಸಲಾಗಿದೆ: ಆರ್‌ಟಿಒ
ಶಾಲಾ ವಾಹನಗಳು ಸೇರಿದಂತೆ ಶಾಲೆಗಳ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈಗಾಗಲೇ ಮೇ ತಿಂಗಳಲ್ಲಿ ಶಾಲೆಗಳ ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಿದ್ದು, ಅವರಿಗೆ ಸೂಚನೆಗಳನ್ನು ನೀಡಲಾಗಿದೆ. ಮತ್ತೇ ಶೀಘ್ರ ಸಭೆ ನಡೆಸಲಾಗುವುದು. ಮೊದಲಿಗೆ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚನೆ ನೀಡಲಾಗುವುದು. ನಂತರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ತಿಳಿಸಿದರು.
ದಾಖಲಾತಿ ಸರಿ ಇಲ್ಲದ ಹಾಗೂ ತೆರಿಗೆ ಪಾವತಿ ಮಾಡದ 13 ಶಾಲಾ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳಿಂದ ₹51,018 ತೆರಿಗೆ ಹಾಗೂ ₹89,700 ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ಮಾಹಿತಿ ಕೇಳಲಾಗಿದೆ: ಡಿಡಿಪಿಐ
ಶಾಲಾ ಮಕ್ಕಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳು ಮತ್ತು ವಾಹನಗಳನ್ನು ಯಾವ ಮೂಲಗಳಿಂದ ಪಡೆಯಲಾಗಿದೆ ಎಂಬ ಬಗ್ಗೆ ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳಿಂದ ಮಾಹಿತಿ ಕೇಳಲಾಗಿದೆ. ಮಾಹಿತಿ ಪಡೆದು ಪರಿಶೀಲನೆ ನಡೆಸಿದ ನಂತರ ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳಿಗೆ ನೋಟಿಸ್ ನೀಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಪಾಟೀಲ ಹೇಳಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಶಾಲಾ ವಾಹನಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಕ್ರಮಕೈಗೊಳ್ಳುವ ಅಧಿಕಾರ ಆರ್‌ಟಿಒ ಅಧಿಕಾರಿಗಳಿಗೆ ಇದೆ. ಆರ್‌ಟಿಒ, ಪೊಲೀಸ್, ಲೋಕೋಪಯೋಗಿ ಮುಂತಾದ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಈ ಬಗ್ಗೆ ಪರಿಶೀಲಿಸುವ ಅಧಿಕಾರ ಇದೆ ಎಂದು ತಿಳಿಸಿದರು.
ನಿಯಮಗಳನ್ನು ಪಾಲಿಸದಿದ್ದರೆ ಶಾಲೆಯ ಲೈಸನ್ಸ್ ನವೀಕರಣ ಮಾಡದೆ ಇರಬಹುದು. ಮಾನ್ಯತೆ ರದ್ದುಪಡಿಸುವ ಅಧಿಕಾರಿ ಶಿಕ್ಷಣ ಇಲಾಖೆಗೆ ಇದೆ. ಅದಕ್ಕೂ ಮೊದಲು ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗೆ ತಿಳಿವಳಿಕೆ ನೀಡುವ ಕೆಲಸ ಮಾಡುತ್ತೇವೆ ಎಂದರು.
ಪ್ರತಿಯೊಂದು ಶಾಲೆಯಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಸರ್ಕಾರಿ ಶಾಲೆಗಳು ಸೇರಿದಂತೆ ಎಲ್ಲ ಕಟ್ಟಡಗಳ ಮಾಹಿತಿಯನ್ನು ಪಡೆಯಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆಯನ್ನು ಕೋರಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.