ADVERTISEMENT

ತಾಂತ್ರಿಕ ವಿದ್ಯಾರ್ಥಿಗಳಿಗೆ ಕೌಶಲದ ಅವಕಾಶ

ಅರ್ಜುನ್ ಶೆಣೈ
Published 25 ಜೂನ್ 2019, 19:30 IST
Last Updated 25 ಜೂನ್ 2019, 19:30 IST
   

ವಿದ್ಯಾರ್ಥಿಯೊಬ್ಬ ಪದವಿಪೂರ್ವ ಹಂತದಲ್ಲಿ ಕಲಿತ ತಂತ್ರಜ್ಞಾನಗಳು ಆತ ಪದವಿ ಮುಗಿಸುವಷ್ಟರಲ್ಲಿ ಹಳತಾಗಿರುತ್ತವೆ. ಅಷ್ಟೇ ಅಲ್ಲ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಕೇವಲ ಪದವಿ ಅಂಕಪಟ್ಟಿ ದೊರೆತರೆ ಉದ್ಯೋಗ ಸಿಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಹೊಸ ತಂತ್ರಜ್ಞಾನದೊಂದಿಗೆ, ಆವಿಷ್ಕಾರಗಳೊಂದಿಗೆ ಹೆಜ್ಜೆ ಹಾಕುವುದು ತೀರಾ ಅಗತ್ಯ. ಈ ನಿಟ್ಟಿನಲ್ಲಿ ಇಂದು ಅನೇಕ ಸಂಸ್ಥೆಗಳು ತಾಂತ್ರಿಕ ವಲಯದಲ್ಲಿ ಹೊಸಹೊಸ ವಿಷಯಗಳನ್ನು ಕಲಿಸುವುದರ ಜೊತೆಗೆ ಪ್ರಮಾಣಪತ್ರವನ್ನು ಒದಗಿಸುತ್ತವೆ. ಈ ಪಟ್ಟಿಯಲ್ಲಿ ಎನ್‌ಪಿಟಿಇಎಲ್ ಪ್ರಮುಖವಾಗಿ ಕಾಣುವಂತಹದ್ದು.

ಏನಿದು ಎನ್‌ಪಿಟಿಇಎಲ್?

ಎನ್‌ಪಿಟಿಇಎಲ್ ಅಂದರೆ ನ್ಯಾಶನಲ್ ಪ್ರೋಗ್ರಾಮ್ ಆನ್ ಟೆಕ್ನಾಲಜಿ ಎನ್ಹಾನ್ಸಡ್ ಲರ್ನಿಂಗ್. ಇದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿ ದೇಶದ ಏಳು ಐಐಟಿಗಳು (ಮುಂಬೈ, ದೆಹಲಿ, ಕಾನ್ಪುರ, ಖರಗ್‌ಪುರ, ಮದ್ರಾಸ್‌, ಗುವಾಹಟಿ, ರೂರ್ಕಿ) ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಲಯದ ಸಹಯೋಗದೊಂದಿಗೆ 2003ರಲ್ಲಿ ಹುಟ್ಟುಹಾಕಿದ ಒಂದು ಸಂಸ್ಥೆ. ತಾಂತ್ರಿಕ ವಿಷಯಗಳನ್ನು ಆನ್‌ಲೈನ್‌ ನಲ್ಲಿ ಉಚಿತ ತರಬೇತಿ ನೀಡುವ ಮೂಲಕ ಹಳ್ಳಿಹಳ್ಳಿಗಳ ವಿದ್ಯಾರ್ಥಿ, ಉದ್ಯೋಗಸ್ಥರನ್ನು ತಲುಪುವುದು ಅದರ ಮೂಲೋದ್ದೇಶವಾಗಿತ್ತು. ಪ್ರಮುಖವಾಗಿ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಸಿವಿಲ್ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 235 ಕೋರ್ಸ್‌ಗಳೊಂದಿಗೆ ಇದು ಜಾರಿಗೆ ಬಂದಿತು. ಕಾಲಕ್ರಮೇಣ ಇದು ಈ ಕ್ಷೇತ್ರಗಳನ್ನೂ ಸೇರಿ ವೈದ್ಯಕೀಯ ಮತ್ತು ಮೂಲ ವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ಕೋರ್ಸ್‌ಗಳನ್ನೂ ಆಯೋಜಿಸಲು ತೊಡಗಿತು.

ADVERTISEMENT

ಕಾರ್ಯನಿರ್ವಹಣೆ ಹೇಗೆ?

ಎನ್‌ಪಿಟಿಇಎಲ್ ಕೋರ್ಸ್‌ಗಳು ವರ್ಷಕ್ಕೆ ಎರಡು ಬಾರಿ ನಡೆಯುತ್ತವೆ. ಜನವರಿಯಿಂದ ಮೇವರೆಗೆ, ಜುಲೈನಿಂದ ಡಿಸೆಂಬರ್‌ನವರೆಗೆ. ಪ್ರತಿ ಬಾರಿಯೂ ಕೋರ್ಸ್‌ಗಳನ್ನು ಪರಿಷ್ಕರಿಸಲಾಗುತ್ತದೆ. ಕೆಲವೊಂದು ಕೋರ್ಸ್‌ಗಳು ಯಾವಾಗಲೂ ಲಭ್ಯವಿದ್ದರೆ, ಹೆಚ್ಚು ಬೇಡಿಕೆಗಳಿರದ ಕೋರ್ಸ್‌ಗಳನ್ನು ತೆಗೆದುಹಾಕಲಾಗುತ್ತದೆ. ಯಾವುದೇ ಕೋರ್ಸ್‌ಗಳನ್ನು ಸಂಪೂರ್ಣ ಉಚಿತವಾಗಿ ಕಲಿಯಬಹುದು. ಬಹುತೇಕ ಕೋರ್ಸ್‌ಗಳು 4, 8 ಅಥವಾ 12 ವಾರಗಳ ಅವಧಿಯದ್ದಾಗಿರುತ್ತವೆ. ಅಭ್ಯರ್ಥಿ ತನಗೆ ಬೇಕಾದ ಕೋರ್ಸ್‌ಗಳನ್ನು ಆಯ್ದ ಬಳಿಕ ಪ್ರತಿವಾರ ಕನಿಷ್ಠ ಮೂರು ಗಂಟೆಯ ವಿಡಿಯೊ ಅಥವಾ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ವಿಷಯ ತಜ್ಞರು ಅಂದರೆ ಏಳು ಐಐಟಿಯಲ್ಲಿನ ಯಾವುದೇ ಪ್ರಾಧ್ಯಾಪಕರು ಅಥವಾ ಐಐಟಿಗಳ ಒಡಂಬಡಿಕೆಯ ಇನ್ನಿತರ ಕಾಲೇಜುಗಳ ಉಪನ್ಯಾಸಕರು ವಿಷಯವನ್ನು ಬೋಧಿಸುತ್ತಾರೆ.

ಅಭ್ಯರ್ಥಿಯು ವಿಷಯಕ್ಕೆ ಸಂಬಂಧಿಸಿದ ಸಂದೇಹವನ್ನು ಉಪನ್ಯಾಸಕರೊಡನೆ ಬಗೆಹರಿಸಿಕೊಳ್ಳಬಹುದು. ವಾರಾಂತ್ಯಕ್ಕೆ ಆ ವಾರದ ಪಾಠಕ್ಕೆ ಸಂಬಂಧಿಸಿದಂತೆ ಅಸೈನ್‌ಮೆಂಟ್‌ ಅನ್ನು ನೀಡಲಾಗುವುದು ಮತ್ತು ನಿರ್ದಿಷ್ಟ ದಿನಾಂಕದೊಳಗೆ ಅಭ್ಯರ್ಥಿ ಅದನ್ನು ಆನ್‌ಲೈನ್ ಮುಖಾಂತರವೇ ಸಲ್ಲಿಸಬೇಕಾಗುತ್ತದೆ.

ಪ್ರಮಾಣಪತ್ರ ಸಿಗುತ್ತದೆಯೇ?

ಎನ್‌ಪಿಟಿಇಎಲ್ ಕೇವಲ ಉಚಿತ ಶಿಕ್ಷಣವಷ್ಟೇ ಅಲ್ಲ, ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಸಹ ನೀಡುತ್ತದೆ. ಆದರೆ ಪ್ರಮಾಣಪತ್ರ ಬೇಕಿದ್ದಲ್ಲಿ ಒಂದು ಸಾವಿರ ರೂಪಾಯಿ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮುಖಾಂತರವೇ ಸಲ್ಲಿಸಬೇಕಾಗುತ್ತದೆ ಮತ್ತು ಕೋರ್ಸ್‌ನ ಮುಕ್ತಾಯದ ಬಳಿಕ ಅಂತಿಮ ಪರೀಕ್ಷೆಯನ್ನು ಬರೆದು ಅದರಲ್ಲಿ ಉತ್ತೀರ್ಣರಾಗುವುದು ಕೂಡ ಕಡ್ಡಾಯ. ಅದಕ್ಕೆಂದೇ ದೇಶದ ಸುಮಾರು ನೂರಕ್ಕೂ ಹೆಚ್ಚು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳು ಇರುತ್ತವೆ. ಅಭ್ಯರ್ಥಿ ಪ್ರತಿವಾರ ಸಲ್ಲಿಸಿದ ಅಸೈನ್‌ಮೆಂಟ್‌ನ
ಶೇ 25 ಮತ್ತು ಕೊನೆಯ ಪರೀಕ್ಷೆಯ ಶೇ 75 ಅಂಕಗಳನ್ನು ಕೂಡಿಸಿ ಅಂಕಪಟ್ಟಿಯನ್ನು ನೀಡಲಾಗುತ್ತದೆ.

ಪ್ರಮಾಣಪತ್ರದ ಲಾಭವೇನು?

ಇಲ್ಲಿ ಲಭ್ಯವಿರುವ ಯಾವುದೇ ಕೋರ್ಸ್‌ಗಳು ಖಾಸಗಿ ಸಂಸ್ಥೆಗಳಲ್ಲೂ ದೊರೆಯುತ್ತವೆ. ಆದರೆ ಶಿಕ್ಷಣ ದುಬಾರಿಯಾಗಿರುತ್ತದೆ. ಇಲ್ಲಿ ಶಿಕ್ಷಣ ಸಂಪೂರ್ಣ ಉಚಿತ. ಇನ್ನು ಕಾಲಘಟ್ಟಕ್ಕೆ ತಕ್ಕುದಾಗಿ ಔದ್ಯೋಗಿಕ ರಂಗ ಅಪೇಕ್ಷಿಸುತ್ತಿರುವ ವಿಷಯಗಳು ಇಲ್ಲಿ ಲಭ್ಯ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಿಷಯಾಧಾರಿತ ಜ್ಞಾನ ಬಲಗೊಂಡರೆ ಉದ್ಯೋಗಸ್ಥರಿಗೆ ಕಾಲಕಾಲಕ್ಕೆ ತಮ್ಮನ್ನು ಹೊಸಹೊಸ ವಿಷಯಗಳೊಂದಿಗೆ ಅಪ್‌ಡೇಟ್ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ಇನ್ನು ಉದ್ಯೋಗ ಹುಡುಕುತ್ತಿರುವವರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಪದವಿಯ ಬಳಿಕ ರೆಸ್ಯೂಮೆಯಲ್ಲಿ ಈ ಪ್ರಮಾಣಪತ್ರ ಜಾಗ ಪಡೆದುಕೊಳ್ಳುತ್ತದೆ ಮತ್ತು ಸಂದರ್ಶನದ ಸಮಯದಲ್ಲಿ ಕಂಪನಿಗಳು ಇದನ್ನು ವಿಶೇಷ ಪರಿಣತಿ ಎಂದು ಪರಿಗಣಿಸುತ್ತವೆ.

ಹೆಚ್ಚಿನ ಮಾಹಿತಿಗಾಗಿ www.nptel.ac.inಗೆ ಲಾಗ್‌ಆನ್ ಮಾಡಬಹುದು.

(ಲೇಖಕ ಹೆಬ್ರಿಯ ಅಮೃತಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಉಪನ್ಯಾಸಕ)

ಮ್ಯಾನೇಜ್‌ಮೆಂಟ್‌ ಕೋರ್ಸ್‌ ಸೇರ್ಪಡೆ

- ಅಮರೇಶ ಬಿ. ಚರಂತಿಮಠ

2009– 14ರ ಅವಧಿಯಲ್ಲಿ ಎನ್‌ಪಿಟಿಇಎಲ್ ಮೂಕ್ಸ್‌ ( ಮ್ಯಾಸಿವ್ ಓಪನ್ ಆನಲೈನ್ ಕೋರ್ಸ್) ಅನ್ನು ಪರಿಚಯಿಸಲಾಯಿತು. ಹೆಚ್ಚುವರಿ 600 ವೆಬ್ ಮತ್ತು ವಿಡಿಯೊ ಆಧಾರಿತ ಕೋರ್ಸ್‌ಗಳನ್ನು ಎಂಜಿನಿಯರಿಂಗ್‌ನ ಮುಖ್ಯ ವಿಭಾಗಗಳಲ್ಲಿ, ಭೌತವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ, ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಸ್ನಾತಕೋತ್ತರ ಹಂತದಲ್ಲಿ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಎಲ್ಲ ವಿಡಿಯೊಗಳ ಇಂಡೆಕ್ಸಿಂಗ್ ಮತ್ತು ಕೀ ವರ್ಡ್ ಸರ್ಚಿಂಗ್‌ನಂತಹ ಸಾಕಷ್ಟು ಸುಧಾರಣೆಗಳನ್ನು ಜಾರಿಗೊಳಿಸಲಾಯಿತು.

ಮಾರ್ಚ್ 2014ರಿಂದ ಈ ಮೂಕ್ಸ್‌ ಆನ್‌ಲೈನ್ ಕೋರ್ಸ್‌ಗಳನ್ನು ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ನ ಪದವಿ ಮತ್ತು ಸ್ನಾತಕೋತ್ತರ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಿ ಯಶಸ್ವಿಯಾಗಿ ಕೋರ್ಸ್ ಪೂರೈಸಿದವರಿಗೆ ಐಐಟಿ ಮತ್ತು ಐಐಎಸ್‌ಸಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಈ ಒಂದು ಕ್ರಾಂತಿಕಾರಿ ಹೆಜ್ಜೆಯಿಂದ ಐಐಟಿಯ ಹೊರಗಡೆ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಎನ್‌ಪಿಟಿಇಎಲ್ ಮುಖಾಂತರ ಈ ಆನ್‌ಲೈನ್ ಕೋರ್ಸ್‌ಗಳನ್ನು ಕಲಿಯಲು ಸಾಧ್ಯವಾಯಿತು.

ವಿಡಿಯೊ ಉಪನ್ಯಾಸಗಳು, ಲೇಖನಗಳು, ಚರ್ಚೆಗಳು, ಕಾರ್ಯಯೋಜನೆಗಳು ಮತ್ತು ಸಾಮಾಜಿಕ ನೆಟ್‌ವರ್ಕ್‌ ಬಳಸಿ ಕೋರ್ಸ್‌ ಅನ್ನು ಬೋಧಿಸಲಾಗುತ್ತದೆ. ಇಲ್ಲಿ ಕಾಲಕಾಲಕ್ಕೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಣ್ಣ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಪೂರಕ ಡಿವಿಡಿ ಮತ್ತು ಮೊಬೈಲ್ ಆಧಾರಿತ ವಿಷಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಪಡೆಯುವಂತೆ ಮಾಡಲಾಗುತ್ತದೆ.

ವಿಶೇಷತೆ

ದೇಶ ವಿದೇಶಗಳ ಖ್ಯಾತ ಪ್ರಾಧ್ಯಾಪಕರೊಂದಿಗೆ ಸಂಬಂಧಪಟ್ಟ ವಿಷಯಗಳಲ್ಲಿ ನಿರಂತರ ಸಂಪರ್ಕ ಮತ್ತು ಉತ್ಕ್ರಷ್ಟ ಕಲಿಕೆ.

ವಿದ್ಯಾರ್ಥಿಯ ಮೂಲಭೂತ ಜ್ಞಾನ ಹೆಚ್ಚಳ.

ದೇಶ ಮತ್ತು ವಿದೇಶಗಳ ವಿದ್ಯಾರ್ಥಿಗಳ ಸಂಗಮವಾಗಿದ್ದು, ಪರಸ್ಪರ ಸಂವಹನದ ಮೂಲಕ ಜ್ಞಾನದ ಹೆಚ್ಚಳ.

(ಲೇಖಕ ಬಾಗಲಕೋಟೆಯ ಬಿ.ವಿ.ವಿ.ಎಸ್‌. ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಪ್ರಾಧ್ಯಾಪಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.