ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ನೈಸರ್ಗಿಕ ಸಂಪನ್ಮೂಲದ ಸುಸ್ಥಿರ ನಿರ್ವಹಣೆ

ಶ್ರೀಲತ ಎಸ್.
Published 29 ಮೇ 2020, 19:30 IST
Last Updated 29 ಮೇ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ನಮ್ಮ ದೈನಂದಿನ ಜೀವನಕ್ಕೆ ಅವಶ್ಯಕವಿರುವ ಪುಸ್ತಕ, ಬಟ್ಟೆ, ಸಲಕರಣೆ, ಪೀಠೋಪಕರಣ ಇತ್ಯಾದಿಗಳು ನಮಗೆ ದೊರೆಯುವುದು ಅರಣ್ಯಗಳು, ವನ್ಯ ಮೃಗಗಳು, ಜಲ, ನೆಲ ಮತ್ತು ಪಳೆಯುಳಿಕೆಯ ಇಂಧನಗಳಿಂದ. ಆದ್ದರಿಂದ ನಮಗೆ ಈ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸುವ ಅಗತ್ಯವಿದೆ. ಈ ಸಂಪನ್ಮೂಲಗಳ ವಿವೇಚನಾಹೀನ ದುರ್ಬಳಕೆಯಿಂದ ಅನೇಕ ಸಮಸ್ಯೆಗಳು ತಲೆ ಎತ್ತಿವೆ. ಅದರ ಜಾಗೃತಿಯಲ್ಲಿ ಮೂಡಿದ ಯೋಜನೆಯೇ ಬಹುಕೋಟಿಯ ‘ಗಂಗಾ ಕಾರ್ಯಯೋಜನೆ’ (ಗಂಗಾ ಆ್ಯಕ್ಷನ್ ಪ್ಲಾನ್).

ನೀರಿನಲ್ಲಿರುವ ಕೋಲಿಫಾರ್ಮ್ ಬ್ಯಾಕ್ಟೀರಿಯದ ಪ್ರಮಾಣ ಜಲ ಮಾಲಿನ್ಯತೆಯ ಮಾನದಂಡ. 2500 ಕಿ. ಮೀ. ದೂರ ಕ್ರಮಿಸುವ ಗಂಗೆಯಲ್ಲಿ ಶುದ್ಧೀಕರಿಸದ ಚರಂಡಿಯ ನೀರು, ಕಾರ್ಖಾನೆಯ ತ್ಯಾಜ್ಯಗಳು, ಅರೆಬೆಂದ ಹೆಣಗಳು ಜಲಮಾಲಿನ್ಯಕ್ಕೆ ಮುಖ್ಯಕಾರಣ. ಜಲ ಪ್ರತಿ ಜೀವಿಯ ಮೂಲಭೂತ ಅವಶ್ಯಕತೆ ಮತ್ತು ನವೀಕರಿಸಲು ಸಾಧ್ಯವಾಗುವಂತಹ ಸಂಪನ್ಮೂಲ. ಆದರೆ ಮಾನವನ ಚಟುವಟಿಕೆಗಳಿಂದಾಗಿ ಉಂಟಾಗುತ್ತಿರುವ ಮಾಲಿನ್ಯ ಅತ್ಯಂತ ಗಂಭೀರ ಸಮಸ್ಯೆ. ನೀರಿನ ಕೊಯಿಲಿನಿಂದ ಈ ಸಂಪನ್ಮೂಲವನ್ನು ರಕ್ಷಿಸಬಹುದಾಗಿದೆ. ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿರುವ ಖಾದಿಮ್‌ನಂತಹ ಅನೇಕ ವ್ಯವಸ್ಥೆಗಳು ಇದರ ಮಹತ್ವವನ್ನು ವಿಷದಪಡಿಸುತ್ತದೆ.

ಜೀವ ವೈವಿಧ್ಯತೆ

ADVERTISEMENT

ಅರಣ್ಯಗಳು ಜೀವ ವೈವಿಧ್ಯತೆಯ ಸೂಕ್ಷ್ಮ ತಾಣಗಳು. (ಬಯೋ ಡೈವರ್ಸಿಟಿ ಹಾಟ್ ಸ್ಪಾಟ್ಸ್). ಇವು ಔಷಧೀಯ ಗಿಡಮೂಲಿಕೆಗಳು, ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಸಂಕುಲದಿಂದ ಸಮೃದ್ಧವಾಗಿವೆ. ಇದರ ಪಾಲುದಾರರು ಅರಣ್ಯದ ಉತ್ಪನ್ನಗಳ ಮೇಲೆ ಅವಲಂಬಿತವಾದ ಗುಡ್ಡಗಾಡು ಜನಾಂಗ, ಸರ್ಕಾರದಿಂದ ಅರಣ್ಯದ ಸಂಪನ್ಮೂಲಗಳ ರಕ್ಷಣೆ ಮಾಡುತ್ತಿರುವವರು, ಗೃಹ ಕೈಗಾರಿಕೆಗಾಗಿ ವಿವಿಧ ಅರಣ್ಯಗಳ ಒಂದು ರೀತಿಯ ಉತ್ಪನ್ನದ(ತೆಂಡು ಎಲೆಗಳು) ಮೇಲೆ ಅವಲಂಬಿತವಾಗಿರುವವರು, ವನ್ಯ ಜೀವಿ ಮತ್ತು ನಿಸರ್ಗವನ್ನು ಪ್ರೀತಿಸುವ ಹಾಗೂ ಅದರ ಸಂರಕ್ಷಣೆಗಾಗಿ ಕಾರ್ಯೋನ್ಮುಖರಾಗಿರುವ ಜನ. 1731ರಲ್ಲಿ ರಾಜಸ್ಥಾನದಲ್ಲಿ ಕೇಜ್ರಿ ಮರಗಳ ಉಳಿವಿಗಾಗಿ ಮಾಡಿದ ಚಳವಳಿಯಲ್ಲಿ ಭಾಗವಹಿಸಿ ಅಮೃತಾದೇವಿ ಬಿಷ್ನೋಯಿ ಮತ್ತು 363 ಮಂದಿಯು ಜೀವ ತೆತ್ತಿದ್ದು ವನ್ಯ ಸಂರಕ್ಷಣೆಯ ಕುರಿತಾದ ಅತಿ ಮಹತ್ವದ ಮಜಲು. ಮುಂದೆ ಸುಂದರ್‌ಲಾಲ್‌ ಬಹುಗುಣ ಅವರ ಚಿಪ್ಕೋ ಆಂದೋಲನ ಹಾಗೂ ಕರ್ನಾಟಕದಲ್ಲಿನ ‘ಅಪ್ಪಿಕೋ ಚಳುವಳಿ’ ವನ್ಯ ರಕ್ಷಣೆಗಾಗಿ ನಡೆದ ಪ್ರಮುಖ ಆಂದೋಲನಗಳು. ಹಾಗೆಯೇ ಜನರ ಸಹಭಾಗಿತ್ವದಲ್ಲಿ ಅರಣ್ಯದ ಅಧಿಕಾರಿ ಎ.ಕೆ. ಬ್ಯಾನರ್ಜಿಯವರ ದೂರಾಲೋಚನೆ ಅರಣ್ಯದ ಸಂರಕ್ಷಣೆಯೊಂದಿಗೆ ಅದರ ಮೌಲ್ಯವನ್ನೂ ವರ್ಧಿಸಿತು.

ಯಾವುದೇ ಸಂಪನ್ಮೂಲದ ನಿರ್ವಹಣೆಗಾಗಿ ಅದರ ಪಾಲುದಾರರ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳನ್ನು ನಿರಾಕರಣೆ (ರೆಫ್ಯೂಸ್), ಮಿತಬಳಕೆ, ಮರುಬಳಕೆ (ರೀಯೂಸ್), ಮರು ಉದ್ದೇಶ (ರೀಪರ್ಪಸ್) ಮತ್ತು ಮರುಸಂಸ್ಕರಣವನ್ನು (ರೀಸೈಕಲ್) ಅಳವಡಿಸಿಕೊಂಡು ಕಾಪಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.