*ಕಳೆದ ಹತ್ತು ವರ್ಷಗಳಿಂದ ರಾಜ್ಯ ಸರ್ಕಾರದಲ್ಲಿ ಶುಶ್ರೂಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ ಯಾವುದೇ ಬಡ್ತಿ ಇಲ್ಲ. ವೃತ್ತಿ ಸಮಾಧಾನಕರವಾಗಿಲ್ಲ; ಯಾವುದೇ ರಜೆ ಸಿಗುತ್ತಿಲ್ಲ. ತಂದೆ- ತಾಯಿಯನ್ನು ನೋಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಈ ನರ್ಸಿಂಗ್ ಸೇವೆಯ ಬದಲು ನಾನು ಬೇರಾವ ವೃತ್ತಿಯನ್ನು ಮಾಡಬಹುದು.
ಸಂಜೀವ ಶ್ರೀ ಬೆಳ್ಳೆನವರ, ವಿಜಯಪುರ
ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಹಾಗಿದ್ದರೆ ಮಾತ್ರ, ನಿಮ್ಮ ಕಾರ್ಯಾಚರಣೆ ನಿರೀಕ್ಷೆಯಂತಿರುತ್ತದೆ. ಆದರೆ, ವೃತ್ತಿಯಲ್ಲಿ ಕುಂದುಕೊರತೆಗಳಿದ್ದರೆ, ಅತೃಪ್ತಿಯಿದ್ದರೆ ಮೇಲಾಧಿಕಾರಿಗಳೊಡನೆ ಮುಕ್ತವಾಗಿ ಚರ್ಚಿಸಬೇಕು ಅಥವಾ ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಕಾರಣಗಳನ್ನೂ, ಪರಿಹಾರಗಳನ್ನೂ ಕಂಡುಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವೃತ್ತಿಯಲ್ಲೂ ಯಶಸ್ಸನ್ನು ಗಳಿಸಲು ಕಷ್ಟವಾಗಬಹುದು.
ನೀವು ಈಗಿರುವ ವೃತ್ತಿ ಸಂಬಂಧಿತ ಅನೇಕ ಪ್ಯಾರಾ ಮೆಡಿಕಲ್ ವೃತ್ತಿಗಳಿವೆ. ನಿಮ್ಮ ಸ್ವಾಭಾವಿಕ ಆಸಕ್ತಿಯ ಅನುಸಾರ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಿ ವೃತ್ತಿಯನ್ನು ಬದಲಾಯಿಸಬಹುದು. ಇನ್ನೂ ಗೊಂದಲವಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.
*ನಾನು ಎಂಎ (ಅರ್ಥ ಶಾಸ್ತ್ರ) ಮುಗಿಸಿ ಪೊಲೀಸ್ ಹೋಮ್ ಗಾರ್ಡ್ಸ್ ಕೆಲಸ ಮಾಡಿದ್ದೇನೆ. ನನಗೆ ಅಪರಾಧ ಶಾಸ್ತ್ರದಲ್ಲಿ ಆಸಕ್ತಿ ಇದೆ. ಈ ಕೋರ್ಸ್ ಬಗ್ಗೆ ಮತ್ತು ಈ ಕುರಿತ ಪುಸ್ತಕಗಳ ಬಗ್ಗೆ ತಿಳಿಸಿ.
ಮುನಿರಾಜು ಕೆ, ಊರು ತಿಳಿಸಿಲ್ಲ.
ಅಪರಾಧ ಶಾಸ್ತ್ರದ ಕೋರ್ಸ್ ಕುರಿತು ಇದೇ ತಿಂಗಳ 6ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಅಪರಾಧ ಶಾಸ್ತ್ರ ಸಂಬಂಧಿತ ಅನೇಕ ವಿಷಯಗಳಿವೆ. ಹಾಗಾಗಿ, ನಿಮಗೆ ಆಸಕ್ತಿಯಿರುವ ವಿಷಯದ ಅನುಸಾರ ಪುಸ್ತಕಗಳನ್ನು ಆರಿಸಿಕೊಳ್ಳಬೇಕು.
*ನಾನು ಪಿಯುಸಿ ಓದಿದ್ದೇನೆ ಹಾಗೂ 2018 ರಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಪಿಎಸ್‌ಐ ಆಗಬೇಕೆಂಬ ಆಸೆ ಇದೆ. ಪದವಿ ಮಾಡುತ್ತಿದ್ದೇನೆ. ಮುಂದೇನು ಮಾಡಬೇಕೆಂದು ತಿಳಿಸಿ.
ಹುಸೇನ್ ಮುಲ್ತಾನಿ, ಬೆಳಗಾವಿ.
ನಾನು ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿ. ಪಿಎಸ್‌ಐ ಪರೀಕ್ಷೆಯ ದೈಹಿಕ ಮಾನದಂಡಗಳೇನು?
ಹೆಸರು, ಊರು ತಿಳಿಸಿಲ್ಲ.
ಪೊಲೀಸ್ ಇಲಾಖೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯ ನಂತರ, ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ, ದೈಹಿಕ ಮಾನದಂಡಗಳು ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam
*ನಾನು ದ್ವೀತಿಯ ಪಿಯುಸಿ (ವಿಜ್ಞಾನ) ದಲ್ಲಿ ಎರಡು ಬಾರಿ ಅನುತ್ತೀರ್ಣನಾಗಿ ಈಗಷ್ಟೇ ಉತ್ತೀರ್ಣನಾಗಿದ್ದೇನೆ. ನನಗೆ ಮುಂದಿನ ನಿರ್ಧಾರಗಳ ಬಗ್ಗೆ ಗೊಂದಲವಿದೆ. ಏನು ಮಾಡಿದರೆ ಒಳಿತು?
ಹೆಸರು, ಊರು ತಿಳಿಸಿಲ್ಲ.
ನೀವು ಇಷ್ಟಪಡುವ ವೃತ್ತಿಗೂ, ನಿಮ್ಮಲ್ಲಿರುವ ಪ್ರತಿಭೆಗೂ ಸಾಮ್ಯತೆ ಇರಬೇಕು. ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ಮೊದಲು ಸೂಕ್ತವಾದ ವೃತ್ತಿ ಮತ್ತು ಅದರಂತೆ ಕೋರ್ಸ್ ಆಯ್ಕೆಯಿರಲಿ.
ಪಿಯುಸಿ (ವಿಜ್ಞಾನ) ನಂತರ ವೃತ್ತಿಯ ಆಯ್ಕೆಯಂತೆ ಮಾಡಬಹುದಾದ ಕೋರ್ಸ್‌ಗಳೆಂದರೆ ಎಂಬಿಬಿಎಸ್, ಬಿಇ/ ಬಿಟೆಕ್/ ಬಿಆರ್ಕ್, ಬಿಎಸ್‌ಸಿ (50ಕ್ಕೂ ಹೆಚ್ಚು ವಿಷಯಗಳು), ಬಿಎಸ್‌ಸಿ-ಕೃಷಿ/ ಫಾರ್ಮ್ ಸಂಬಂಧಿತ, ಬಿಎಸ್‌ಸಿ-ಪ್ಯಾರಾ ಮೆಡಿಕಲ್, ಬಿಫಾರ್ಮ, ಬಿಸಿಎ, ಬಿಬಿಎ, ಎಂಬಿಎ (ಇಂಟಗ್ರೇಡೆಡ್), ಬಿಕಾಂ, ಸಿಎ, ಎಸಿಎಸ್ ಇತ್ಯಾದಿ.
*ನಾನು ಬಿಎಸ್‌ಸಿ (ಪಿಸಿಎಂ) ದ್ವಿತೀಯ ವರ್ಷ ಓದುತ್ತಿದ್ದೇನೆ. ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರಿಯಬೇಕೆಂದಿದ್ದೇನೆ. ಯಾವ ವಿಷಯಗಳನ್ನು ಓದಬೇಕು ಮತ್ತು ಹೇಗೆ ತಯಾರಿ ನಡೆಸಬೇಕು ತಿಳಿಸಿ.
ಕಾವೇರಿ, ಊರು ತಿಳಿಸಿಲ್ಲ.
ಯುಪಿಎಸ್‌ಸಿ ಕುರಿತ ಪ್ರಶ್ನೆಗಳನ್ನು ಇದೇ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.