ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ಪರೀಕ್ಷೆಗೆ ಸಾಧ್ಯವಾದಷ್ಟು ಓದಿದ್ದೇನೆ; ಕಡಿಮೆ ಅಂಕಗಳು ಬಂದರೆ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತ ಅನಿಸುತ್ತಿದೆ. ನನಗೆ ವಿಎಫ್‌ಎಕ್ಸ್/ಅನಿಮೇಷನ್ ಕ್ಷೇತ್ರದಲ್ಲಿ ಆಪಾರ ಜ್ಞಾನ ಇದೆ. ಆದರೆ ಮನೆಯಲ್ಲಿ ಈ ಕ್ಷೇತ್ರಕ್ಕೆ ಬೆಲೆ ಕೊಡುತ್ತಿಲ್ಲ. ನೀನು ಎಂಜಿನಿಯರಿಂಗ್ ಓದು ಅಂತ ಹೇಳುತ್ತಿದ್ದಾರೆ. ಆದರೆ, ನನಗೆ ಇಷ್ಟ ಇಲ್ಲ. ನಾನು ಏನು ಮಾಡಲಿ? ಜೀವನದಲ್ಲಿ ಅಂಕಗಳು ಬಹು ಮುಖ್ಯವೇ?
ಹೆಸರು, ಊರು ತಿಳಿಸಿಲ್ಲ.
ಪರೀಕ್ಷೆಗಳ ಅಂಕಪಟ್ಟಿಯೇ ಜೀವನದ ಸರ್ವಸ್ವವಲ್ಲ. ನಮ್ಮ ದೇಶದ ಶ್ರೇಷ್ಠ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಆಟಗಾರರು, ಚಿಂತಕರು, ಸಾಹಿತಿಗಳು ರ‍್ಯಾಂಕ್ ಪಡೆದೇ ಸಾಧಕರಾಗಲಿಲ್ಲ. ಅವರಲ್ಲಿ ಹೆಚ್ಚಿನವರು, ಬದುಕಿನ ಅನುಭವದಿಂದ, ನಿರಂತರ ಪರಿಶ್ರಮದಿಂದ ಕಲಿತವರು.
ಆದ್ದರಿಂದ, ನೀವು ವೃತ್ತಿಯಲ್ಲೂ, ವೈಯಕ್ತಿಕ ಜೀವನದಲ್ಲೂ ಬೆಳೆದು ಸಂತೃಪ್ತಿಯನ್ನು ಪಡೆಯಬೇಕಾದರೆ, ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನೇ ಅರಸಬೇಕು. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿ, ವೃತ್ತಿಯ ಆಯ್ಕೆಗೆ ಪೂರಕವಾಗುವ ಸಾಮರ್ಥ್ಯ ಮತ್ತು ಸನ್ನದ್ದತೆಯನ್ನು ನಿಮ್ಮ ಪೋಷಕರಿಗೆ ಮನವರಿಕೆ ಮಾಡಿ, ಅವರ ಆತಂಕವನ್ನು ಹೋಗಲಾಡಿಸಿ. ಏಕೆಂದರೆ, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ಒಂದು ಮುಕ್ತ ವಾತಾವರಣದಲ್ಲಿ ಪರಸ್ಪರ ಚರ್ಚಿಸಿ, ವೃತ್ತಿಯ ಆಯ್ಕೆ ಮತ್ತು ಯೋಜನೆಯನ್ನು ಮಾಡಿ, ಅದರಂತೆ ಕೋರ್ಸ್ ಆಯ್ಕೆಯನ್ನು ಮಾಡಿ, ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ.
ಮುಖ್ಯವಾಗಿ, ಆತ್ಮಹತ್ಯೆಯಂತಹ ಕ್ಷಣಿಕ ನಕಾರಾತ್ಮಕ ಆಲೋಚನೆಯಿಂದ ದೂರ ಸರಿದು, ಸಕಾರಾತ್ಮಕ ದೃಷ್ಟಿಕೋನ ಉಳ್ಳವರಾಗಿ. ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಸ್ವ-ಸಲಹೆಗಳು (ಆಟೊ ಸಜೆಷನ್), ಆಂತರಿಕ ಪ್ರೇರಣೆಗೆ ಪ್ರಯೋಜನಕಾರಿ. ಉದಾಹರಣೆಗೆ, ‘ಏಷ್ಟೇ ಕಷ್ಟವಾದರೂ ನಾನು ನನ್ನ ವೃತ್ತಿಯ ಗುರಿಯಿಂದ ವಿಮುಖನಾಗುವುದಿಲ್ಲ’, ಎನ್ನುವ ಚಿಂತನೆಗಳು ನಿಮಗೆ ಪ್ರೇರಣಕಾರಿ. ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ, ವಿಶ್ವಾಸವನ್ನು ಬೆಳೆಸಿಕೊಂಡರೆ, ನಿಮ್ಮ ಪೋಷಕರ ಮನವೊಲಿಕೆ ಸುಲಭವಾಗುತ್ತದೆ. ವೃತ್ತಿ ಯೋಜನೆಯನ್ನು ಮಾಡುವುದರ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant
ಹೆಚ್ಚಿನ ಸಹಾಯ, ಮಾರ್ಗದರ್ಶನಕ್ಕಾಗಿ ಸಂಕೋಚವಿಲ್ಲದೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.
***
ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ ಜಿಲ್ಲಾಧಿಕಾರಿ ಆಗಬೇಕೆನ್ನುವುದು ನನ್ನ ಆಸೆ. ಅದಕ್ಕಾಗಿ ಹೇಗೆ ತಯಾರಿ ಮಾಡಬೇಕು ಎಂದು ತಿಳಿಸಿಕೊಡಿ.
ಕಾವ್ಯ, ಊರು ತಿಳಿಸಿಲ್ಲ.
ಪಿಯುಸಿ ಓದುತ್ತಿರುವ ನಿಮಗೆ ಜಿಲ್ಲಾಧಿಕಾರಿ ಆಗಬೇಕೆಂದಿರುವ ಕನಸು ಶ್ಲಾಘನೀಯ. ಯಾವುದೇ ಪದವಿಯನ್ನು ಪೂರ್ಣಗೊಳಿಸಿದ ನಂತರ ಯುಪಿಎಸ್‌ಸಿ ನಡೆಸುವ ಮೂರು ಹಂತದ ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಮೊದಲನೇ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಹಾಗೂ ಮೂರನೇ ಹಂತದಲ್ಲಿ ಸಂದರ್ಶನವನ್ನು ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಬಹುಆಯ್ಕೆ ಮಾದರಿಯಲ್ಲಿದ್ದು, ಮುಖ್ಯ ಪರೀಕ್ಷೆಯು ವಿಸ್ಕೃತ ಮಾದರಿಯಲ್ಲಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ನೀವು ಒಂದು ಐಚ್ಛಿಕ ವಿಷಯವನ್ನು ಆಯ್ದುಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಅತ್ಯುನ್ನತ ರ‍್ಯಾಂಕ್ ಗಳಿಸಿದರೆ ನಿಮ್ಮ ಆಸೆ ನೆರವೇರುವ ಸಾಧ್ಯತೆಯಿರುತ್ತದೆ. ಇಲ್ಲದಿದ್ದರೆ, ಐಎಎಸ್ ಅಧಿಕಾರಿಯಾಗಿ ಸರ್ಕಾರದ ಸೇವೆಯಲ್ಲಿದ್ದುಕೊಂಡು ನಿಮ್ಮ ದಕ್ಷತೆ ಮತ್ತು ಹಿರಿತನದ ಆಧಾರದ ಮೇಲೆ ಕಾಲಕ್ರಮೇಣ ಜಿಲ್ಲಾಧಿಕಾರಿಯಾಗಬಹುದು.
ಕಠಿಣವಾದ ಈ ಪರೀಕ್ಷೆಯ ಯಶಸ್ಸಿಗೆ ಸೂಕ್ತವಾದ ಕಾರ್ಯತಂತ್ರ, ಸಾಕಷ್ಟು ಪರಿಶ್ರಮ ಹಾಗೂ ಏಕಾಗ್ರತೆಯಿರಬೇಕು. ಇದಕ್ಕೆ ಬೇಕಾದ ಪುಸ್ತಕಗಳನ್ನು ಖರೀದಿಸಿ ಸ್ವತಂತ್ರವಾಗಿ ತಯಾರಾಗಬಹುದು ಅಥವಾ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಈ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು, ಆಡಳಿತಾತ್ಮಕ ವಿಷಯಗಳ ಕುರಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಶುಭಹಾರೈಕೆಗಳು.
***
ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಶೇ 50 ಬೋರ್ಡ್ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವ ಬಗ್ಗೆ ಮತ್ತು ರ‍್ಯಾಂಕಿಂಗ್ ಪ್ರಕ್ರಿಯೆ ಬಗ್ಗೆ ತಿಳಿಸಿ.
ಹೆಸರು, ಊರು ತಿಳಿಸಿಲ್ಲ.
ಎಂಜಿನಿಯರಿಂಗ್, ಬಿಫಾರ್ಮಾ, ಬಿಎಸ್‌ಸಿ (ಕೃಷಿ) ಇತ್ಯಾದಿ ಕೋರ್ಸ್‌ಗಳ ಪ್ರವೇಶವನ್ನು ನಿರ್ಧರಿಸಲು ಸಿಇಟಿ ಪರಿಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುತ್ತದೆ. ಉದಾಹರಣೆಗೆ, ವಿದ್ಯಾರ್ಥಿಗಳು, ಸಿಇಟಿ-2022 ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಮತ್ತು ಅರ್ಹತಾ ಪರೀಕ್ಷೆ(ಪಿಯುಸಿ/ತತ್ಸಮಾನ-ಕನಿಷ್ಠ ಶೇ 45 ಅಂಕಗಳು) ಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಸಮಾನ ಪ್ರಮಾಣದಲ್ಲಿ ಪರಿಗಣಿಸಿ ಎಂಜಿನಿಯರಿಂಗ್ ರ‍್ಯಾಂಕ್ ಪಟ್ಟಿಯನ್ನು ನಿರ್ಧರಿಸಲಾಗುವುದು. ಸಿಇಟಿ ಪರೀಕ್ಷೆಯಲ್ಲಿ ಇಂತಿಷ್ಟೇ ಅಂಕಗಳನ್ನು ಪಡೆಯಬೇಕೆಂಬ ನಿಯಮವಿಲ್ಲ. ಇದೇ ರೀತಿ ಇನ್ನಿತರ ಕೋರ್ಸ್‌ಗಳಿಗೂ ನಿಗದಿತ ಮಾನದಂಡದಂತೆ ರ‍್ಯಾಂಕ್ ಪಟ್ಟಿಯನ್ನು ನಿರ್ಧರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/kea/cet2022
***
ನಾನು ಎರಡನೇ ವರ್ಷದ ಬಿಕಾಂ ಓದುತ್ತಿದ್ದೇನೆ. ಪದವಿ ಮುಗಿದ ಮೇಲೆ ಬ್ಯಾಂಕಿಂಗ್ ಕೋರ್ಸ್ ಮಾಡಬೇಕೆಂದಿದ್ದೇನೆ. ಬ್ಯಾಂಕ್ ಕ್ಷೇತ್ರಕ್ಕೆ ಯಾವ ರೀತಿ ತಯಾರಿ ನಡೆಸಬೇಕು? ಯಾವ ಪರೀಕ್ಷೆ ಬರೆಯಬೇಕು? ದಯವಿಟ್ಟು ಮಾಹಿತಿ ನೀಡಿ.
ಶುಭಾ, ಊರು ತಿಳಿಸಿಲ್ಲ.
ಬಿಕಾಂ ಪದವಿಯ ನಂತರ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹುದ್ದೆಗಳಿಗೆ ಪ್ರಯತ್ನಿಸಬಹುದು. ಸಾಮಾನ್ಯವಾಗಿ, ಪ್ರೊಬೆಷನರಿ ಆಫೀಸರ್ ಹುದ್ದೆಗೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ವೈಯಕ್ತಿಕ ಸಂದರ್ಶನ
ವೈಯಕ್ತಿಕ ಸಂದರ್ಶನದ ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ, ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು; ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು. ಈ ಆಯ್ಕೆ ಪ್ರಕ್ರಿಯೆಯ ಹಂತಗಳು, ಮಾದರಿ, ಪಠ್ಯಕ್ರಮ, ಅವಕಾಶಗಳು, ಸವಾಲುಗಳು ಇತ್ಯಾದಿಗಳನ್ನು ಅರಿತು ಖುದ್ದಾಗಿ ನೀವೇ ತಯಾರಾಗಬಹುದು ಅಥವಾ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಉನ್ನತ ಶಿಕ್ಷಣಕ್ಕಾಗಿ ಎಂಬಿಎ (ಬ್ಯಾಂಕಿಂಗ್ ಮತ್ತು ಫೈನಾನ್ಸ್) ಮಾಡಬಹುದು.
***
ನಾನು ಕರ್ನಾಟಕ ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನ್ನ ಪ್ರಾಥಮಿಕ ಶಿಕ್ಷಣ ಅಂದರೆ 5ನೇ ತರಗತಿಯವರೆಗೆ ಆಂಧ್ರಪ್ರದೇಶದ ಗಡಿನಾಡಿನ ಕನ್ನಡ ಮಾದ್ಯಮ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ನಂತರದ ವಿದ್ಯಾಭ್ಯಾಸವನ್ನು ಕರ್ನಾಟಕದಲ್ಲಿ ಮಾಡಿದ್ದೇನೆ. ನನ್ನ ಈ ಪೊಲೀಸ್ ಪರೀಕ್ಷೆಗೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.
ನೀವು ಯಾವ ಪೊಲೀಸ್ ಹುದ್ದೆಯ ಪರೀಕ್ಷೆಗೆ ತಯಾರಾಗುತ್ತಿದ್ದೀರಿ ಎಂದು ತಿಳಿಯದು. ನಮಗಿರುವ ಮಾಹಿತಿಯಂತೆ ನೀವು ಕನಿಷ್ಠ 6 ವರ್ಷ ಸತತವಾಗಿ ಕರ್ನಾಟಕದ ನಿವಾಸಿಯಾಗಿದ್ದರೆ, ನಿವಾಸಿ ಪ್ರಮಾಣ ಪತ್ರವನ್ನು ಸಲ್ಲಿಸಿ ಪೊಲೀಸ್ ಇಲಾಖೆಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಕನ್ನಡ ಆಡಳಿತ ಭಾಷೆಯಾಗಿರುವುದರಿಂದ, ಕನ್ನಡ ಮಾತನಾಡುವ, ಓದುವ ಮತ್ತು ಬರೆಯುವ ನಿಪುಣತೆಯಿರಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:
https://prepp.in/karnataka-police-exam
***
ನಾನು ಎಂಎ ಪದವಿ ಮುಗಿಸಿದ್ದೇನೆ. ನಾನು ಯಾವ ಸರ್ಕಾರಿ ಹುದ್ದೆಗಳಿಗೆ ಪ್ರಯತ್ನಿಸಬಹುದು?
ಮಹೇಶ್, ಊರು ತಿಳಿಸಿಲ್ಲ.
ನಿಮಗೆ ಸರ್ಕಾರದ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂದು ತಿಳಿದು ದೀರ್ಘಾವಧಿ ವೃತ್ತಿಯೋಜನೆಯನ್ನು ಮಾಡಬೇಕು. ಅದರಂತೆ, ಆಯಾ ಕ್ಷೇತ್ರ/ಇಲಾಖೆಗೆ ಸಂಬಂಧಪಟ್ಟ ಹುದ್ದೆಗಳಿಗೆ ಪ್ರಯತ್ನಿಸಬಹುದು. ಸರ್ಕಾರದ ಪ್ರತಿಷ್ಟಿತ ಹುದ್ದೆಗಳಿಗಾಗಿ, ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗಳ ಮುಖಾಂತರ ಪ್ರಯತ್ನಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.