ನವದೆಹಲಿ: ‘ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಟ್ಸ್ ಆಫ್ ಇಂಡಿಯಾ(ಐಸಿಎಐ)’ ಹೊಸ ನಿಯಮದ ಪ್ರಕಾರ ಐಸಿಎಐ ಫೌಂಡೇಷನ್ ಕೋರ್ಸ್‌ಗೆ ಹತ್ತನೇ ತರಗತಿ ತೇರ್ಗಡೆಯಾದ ಬಳಿಕ ತಾತ್ಕಾಲಿಕ ಪ್ರವೇಶ ಪಡೆಯಬಹುದಾಗಿದೆ.
ಆದರೆ, ಅಭ್ಯರ್ಥಿಯು 12ನೇ ತರಗತಿ ಪರೀಕ್ಷೆ ಉತ್ತೀರ್ಣರಾದ ಬಳಿಕವಷ್ಟೇ ಫೌಂಡೇಷನ್ ಕೋರ್ಸ್‌ನ ತಾತ್ಕಾಲಿಕ ಪ್ರವೇಶವನ್ನು ಪರಿಗಣಿಸಲಾಗುವುದು. ಹೊಸ ನಿಯಮದಿಂದಾಗಿ ವಿದ್ಯಾರ್ಥಿಗಳು ಪ್ರಸ್ತುತ ಇರುವ ಅವಧಿಗಿಂತಲೂ ಆರು ತಿಂಗಳು ಮುಂಚಿತವಾಗಿ ‘ಚಾರ್ಟರ್ಡ್ ಅಕೌಂಟೆಂಟ್(ಸಿ.ಎ)’ ಆಗಬಹುದಾಗಿದೆ.
‘ಚಾರ್ಟರ್ಡ್ ಅಕೌಂಟೆಂಟ್ಸ್ ನಿಯಂತ್ರಣ, 1988ರ 25ಇ, 25 ಎಫ್ ಹಾಗೂ 28ಎಫ್‌ಗೆ ಸಂಸ್ಥೆಯು ತಂದ ತಿದ್ದುಪಡಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಹತ್ತನೇ ತರಗತಿ ತೇರ್ಗಡೆಯಾದ ಬಳಿಕ ಐಸಿಎಐ ಫೌಂಡೇಷನ್ ಕೋರ್ಸ್‌ಗೆ ವಿದ್ಯಾರ್ಥಿಗಳು ನೋಂದಣಿಯಾಗಬಹುದಾಗಿದೆ’ ಎಂದು ಐಸಿಎಐ ಅಧ್ಯಕ್ಷ ಅತುಲ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
‘ಇದರಿಂದಾಗಿ 11ನೇ ಮತ್ತು 12ನೇ ತರಗತಿ ಕಲಿಯುವಾಗಲೇ ಸಿಎ ಫೌಂಡೇಷನ್ ಕೋರ್ಸ್ ತೇರ್ಗಡೆಯಾಗಲು ವಿದ್ಯಾರ್ಥಿಗಳು ಸಿದ್ಧತೆ ನಡೆಸಬಹುದಾಗಿದೆ. ಇದಕ್ಕೆ ಸಾಕಷ್ಟು ಕಾಲಾವಕಾಶವೂ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಐಸಿಎಐ, ವಿದ್ಯಾರ್ಥಿಗಳಿಗಾಗಿ ಉಚಿತ ಆನ್‌ಲೈನ್ ತರಬೇತಿ ತರಗತಿಗಳನ್ನೂ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.
‘ಫೆಬ್ರುವರಿ, ಮಾರ್ಚ್‌ನಲ್ಲಿ ನಡೆಯುವ ದ್ವಿತೀಯ ಪಿ.ಯು ಪರೀಕ್ಷೆಯ ಬಳಿಕ ಮೇ ಅಥವಾ ಜೂನ್‌ನಲ್ಲಿ ನಡೆಯುವ ಫೌಂಡೇಷನ್ ಕೋರ್ಸ್ ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ಅರ್ಹರಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.