ಬೆಂಗಳೂರು: ‘ಸಿಬಿಎಸ್‌ಇ 12ನೇ ತರಗತಿಯ ಭೌತಶಾಸ್ತ್ರ (ಫಿಸಿಕ್ಸ್) ಪ್ರಶ್ನೆಪತ್ರಿಕೆ ಸರಿಯಿರಲಿಲ್ಲ.ಇದೇ ಕಾರಣದಿಂದ ಸಾಕಷ್ಟು ವಿದ್ಯಾರ್ಥಿಗಳು ಫೇಲ್ ಆಗುವ ಭೀತಿ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಫಿಸಿಕ್ಸ್‌ಗೆ ಮರು ಪರೀಕ್ಷೆ ನಡೆಸಬೇಕು ಅಥವಾ ಕೃಪಾಂಕ ಘೋಷಿಸಿ ಮಕ್ಕಳನ್ನು ಕಾಪಾಡಬೇಕು’ ಎಂಬ ಆನ್‌ಲೈನ್ ಅಭಿಯಾನ ಆರಂಭವಾಗಿದೆ. change.org ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬೆಂಬಲ ಸೂಚಿಸಿದ್ದಾರೆ.
ಟ್ವಿಟರ್‌ನಲ್ಲಿ #cbsephysics ಹ್ಯಾಷ್‌ಟ್ಯಾಗ್‌ನೊಂದಿಗೆ ಆಕ್ರೋಶ ತೋಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ‘ಚುನಾವಣೆಯ ಧಾವಂತ ಮತ್ತು ರಾಜಕೀಯ ಮೇಲಾಟದಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ’ ಎಂದು ಬರೆಯುತ್ತಿದ್ದಾರೆ. ಮೆಸೇಜ್‌ಗಳನ್ನು ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಸಿಬಿಎಸ್‌ಇ ಮಂಡಳಿಗೆ ಟ್ಯಾಗ್ ಮಾಡುತ್ತಿದ್ದಾರೆ.
‘ಜೆಇಇ ಕೋಚಿಂಗ್ ಪಡೆದ ವಿದ್ಯಾರ್ಥಿಈ ಪ್ರಶ್ನೆಪತ್ರಿಕೆಯನ್ನು ಸುಲಭವಾಗಿ ಬಿಡಿಸಬಹುದು. ಆದರೆ ಅಧ್ಯಾಪಕರ ಪಾಠ ಮತ್ತು ಅವರು ಕೊಡುವ ನೋಟ್ಸ್ ನೆಚ್ಚಿಕೊಂಡಸಾಮಾನ್ಯ ವಿದ್ಯಾರ್ಥಿಗಳ ಪಾಡೇನು?’ ಎಂದು ಹಲವರು ಪ್ರಶ್ನಿಸಿದ್ದಾರೆ.
ಕೆಲ ಪೋಷಕರು ಮೌಲ್ಯಮಾಪನದಲ್ಲಿ ಉದಾರತೆ ತೋರಬೇಕು ಎಂದು ಬಯಸಿದ್ದರೆ, ಕೆಲವರುಕಷ್ಟದ ಪ್ರಶ್ನೆಗಳಿಗೆ ಕೃಪಾಂಕ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಮಂಡಳಿ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು ಎಂದೂ ಹಲವರು ಒತ್ತಾಯಿಸಿದ್ದಾರೆ.
ಪ್ರಶ್ನಪತ್ರಿಕೆ ಕಷ್ಟವಾಗಿತ್ತು ಎನ್ನುವುದರ ಜೊತೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಸಮಯವೂ ಸಿಗಲಿಲ್ಲ ಎನ್ನುವುದು ಕೆಲ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ‘ಈ ಬಾರಿ ಸಿಬಿಎಸ್‌ಇ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಿದ ಪುಣ್ಯಾತ್ಮರಿಗೆ ಪ್ರಜ್ಞೆಯೇ ಇರಲಿಲ್ಲ ಎನ್ನಿಸುತ್ತೆ. ಗಣಿತ ಮತ್ತು ಜೀವಶಾಸ್ತ್ರದ ನಡುವೆ ಎರಡು ದಿನಗಳ ಅಂತರ ಇದೆ. ಆದರೆ ಇವೆಲ್ಲದರ ಬಗ್ಗೆ ಯೋಚಿಸಲು ಯಾರಿಗೆ ಪುರುಸೊತ್ತಿದೆ. ಮಕ್ಕಳಿಗೆ ಏನಾದರೆ ನಿಮಗೇನಾಗಬೇಕು. ನೀವು ಚುನಾವಣೆ ಕಡೆಗೆ ಗಮನಕೊಡಿ. ಮೋದಿ ಸಹ ಆರಾಮವಾಗಿರಲಿ. ಶಿಕ್ಷಣ ಪದ್ಧತಿ ಹಾಳಾಗಲಿ’ ಎಂದು ಮೃಣಾಲ್ ರೇ ಎನ್ನುವವರು ಸಿಟ್ಟು ಹೊರಹಾಕಿದ್ದಾರೆ.
‘ಈ ಸಲದ ಪ್ರಶ್ನಪತ್ರಿಕೆ ಕಠಿಣವಾಗಿತ್ತು ಎನ್ನುವುದಕ್ಕಿಂತ ಅದನ್ನು ಮಾದರಿಗೆ ತಕ್ಕಂತೆ (ಪ್ಯಾಟರ್ನ್)ಸಿದ್ಧಪಡಿಸಿರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ’ ಎಂದು ಕುಮಾರ್ ಆಶೀಶ್ ಹೇಳಿದ್ದಾರೆ.
ವಿವಾದ ಕುರಿತು ಪ್ರತಿಕ್ರಿಯಿಸಿದ ಸಿಬಿಎಸ್‌ಇ ಅಧಿಕಾರಿ, ‘ಪ್ರಶ್ನಪತ್ರಿಕೆಗೆ ಸಂಬಂಧಿಸಿದಂಥೆಪರೀಕ್ಷೆ ದಿನವೇ ವಿಷಯ ತಜ್ಞರು, ಶಾಲೆಗಳ (ಸಿಬ್ಬಂದಿ) ಮತ್ತು ಇತರರ (ಪೋಷಕರ)ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಈ ಅಭಿಪ್ರಾಯಗಳ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.
‘ಈ ಬಾರಿಯ ಫಿಸಿಕ್ಸ್ ಪ್ರಶ್ನಪತ್ರಿಕೆಯ ದೋಷಗಳನ್ನು ಪರಿಗಣಿಸಿ 8 ಗ್ರೇಸ್ಅಂಕಗಳನ್ನು ನೀಡಲು ನಿರ್ಧರಿಸಲಾಗಿದೆ’ ಎನ್ನುವ ಫೇಕ್ (ಸುಳ್ಳು)ಮೆಸೇಜ್ ಸಹ ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಾಸ್ತವವಾಗಿ ಈ ಕುರಿತು ಸಿಬಿಎಸ್‌ಇ ಈವರೆಗೆ ಏನನ್ನೂ ಹೇಳಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.