ADVERTISEMENT

ಆನ್‌ಲೈನ್‌ನಲ್ಲಿ ಅಧ್ಯಯನ ಸಾಮಗ್ರಿ ಹುಡುಕಾಟ ಬಲು ಸುಲಭ!

ಕೀರ್ತಿ ಟಿ.ಎಸ್‌.
Published 26 ಆಗಸ್ಟ್ 2021, 2:55 IST
Last Updated 26 ಆಗಸ್ಟ್ 2021, 2:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಪರ್ಧಾತ್ಮಕ ಪರೀಕ್ಷೆಯೆಂದರೆ ಸ್ಪರ್ಧಾರ್ಥಿಯು ತನ್ನ ಜ್ಞಾನವನ್ನು ಹೇಗೆ ಪ್ರಾಯೋಗಿಕವಾಗಿ ಜಾರಿಗೊಳಿಸುತ್ತಾನೆ ಎಂಬುದನ್ನು ಪರೀಕ್ಷಿಸುವುದೇ ಹೊರತು ಥಿಯರಿಯನ್ನಲ್ಲ. ಹೀಗಾಗಿ ಅತ್ಯುತ್ತಮವಾದ ಅಧ್ಯಯನ ಸಾಮಗ್ರಿಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅಧ್ಯಯನ ಸಾಮಗ್ರಿ ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತಿರಬೇಕು; ಕಲಿಕಾಸ್ನೇಹಿಯಾಗಿರಬೇಕು. ಅಧ್ಯಯನ ಸಾಮಗ್ರಿಯಲ್ಲಿರುವ ವಿಷಯ ಇತ್ತೀಚಿನದಾಗಿದ್ದು, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಹಾಯಕವಾಗುವಂತಿರಬೇಕು.

ಗುಣಮಟ್ಟದ ಅಧ್ಯಯನ ಸಾಮಗ್ರಿಯನ್ನು ಓದಿ

ಹೆಚ್ಚು ಓದುವುದಕ್ಕಿಂತ ಗುಣಮಟ್ಟಕ್ಕೆ ಒತ್ತು ಕೊಡಿ. ಒಂದಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದುವುದಕ್ಕಿಂತ ಉತ್ತಮವಾದ ಒಂದೇ ಪುಸ್ತಕವನ್ನು ಹಲವು ಸಲ ಓದಿ. ಈ ವಿಧಾನ ಒಂದು ವಿಷಯದ ಬಗ್ಗೆ ನಿಮ್ಮಲ್ಲಿ ಸ್ಪಷ್ಟ ಅರಿವನ್ನು ಮೂಡಿಸುತ್ತದೆ. ಓದಿಕೊಂಡು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಇದರಿಂದ ನೀವು ಓದಿದ ಅಂಶಗಳನ್ನು ಪರೀಕ್ಷೆಯಲ್ಲಿ ಸರಿಯಾಗಿ ಬರೆಯುವ ಮೂಲಕ ಒಳ್ಳೆಯ ಅಂಕಗಳನ್ನು ಗಳಿಸಬಹುದು. ಇದು ನಿಮ್ಮ ಸಿದ್ಧತೆಗೆ ಹಿಡಿದ ಕೈಗನ್ನಡಿ ಎನ್ನಬಹುದು.

ADVERTISEMENT

ಹುಡುಕುವುದು ಹೇಗೆ?

ಈಗ ಅಂತರ್ಜಾಲ ಎಂಬುದು ಪ್ರತಿಯೊಬ್ಬ ಸ್ಪರ್ಧಾರ್ಥಿಯ ಜೇಬಿನಲ್ಲೇ ಇರುತ್ತದೆ ಎನ್ನಲಡ್ಡಿಯಿಲ್ಲ. ಹಾಗೆಯೇ ಅಧ್ಯಯನ ನಡೆಸಲು, ಒಳ್ಳೆಯ ಜ್ಞಾನ ಸಂಪಾದಿಸಲು ಇದೊಂದು ಅತ್ಯುತ್ತಮ ವೇದಿಕೆ. ತನಗೆ ಬೇಕಾದ ಅಧ್ಯಯನ ಸಾಮಗ್ರಿಯನ್ನು ಸ್ಪರ್ಧಾರ್ಥಿಯು ಆನ್‌ಲೈನ್‌ನಲ್ಲಿ ಸುಲಭವಾಗಿ ಹುಡುಕಿಕೊಳ್ಳಬಹುದು. ಕೆಲವು ಸಂಸ್ಥೆಗಳು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂತಹ ಸಾಮಗ್ರಿಗಳನ್ನು ಒದಗಿಸುತ್ತವೆ.

ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುವುದು ಕಷ್ಟವಾಗಬಹುದು. ಅಂದರೆ ಅಗತ್ಯವಿರುವ ವಿಷಯಗಳನ್ನು ಹುಡುಕಾಡುವುದು ಸವಾಲಾಗಿಬಿಡುತ್ತದೆ. ಆಗ ಯಾವ ವೆಬ್‌ಸೈಟ್‌ಗಳಲ್ಲಿ ಉತ್ಕೃಷ್ಟ ಅಧ್ಯಯನ ಸಾಮಗ್ರಿ ಇರುತ್ತದೆ ಎಂಬುದನ್ನು ತಿಳಿಸುವ ಮೂಲಗಳನ್ನು ಕೂಡ ಅಂತರ್ಜಾಲದಲ್ಲೇ ಹುಡುಕಾಡಿ ಪಟ್ಟಿ ಮಾಡಿಕೊಳ್ಳಬಹುದು.

ಮೊದಲು ನಿಮಗೆ ಬೇಕಾದ ಪುಸ್ತಕಗಳನ್ನು ಪಟ್ಟಿ ಮಾಡಿಕೊಳ್ಳಿ. ಅಂದರೆ ನಿಮಗೆ ಬೇಕಾದ ವಿಷಯಗಳು ಯಾವ ಪುಸ್ತಕದಲ್ಲಿವೆ ಎಂಬುದನ್ನು ಗುರುತು ಹಾಕಿಕೊಳ್ಳಿ. ನಂತರ ಅದನ್ನು ಆನ್‌ಲೈನ್‌ನಲ್ಲಿ ಹುಡುಕಾಡಿ. ವೆಬ್‌ಸೈಟ್‌ನಲ್ಲಿ ಉಪಯುಕ್ತವಾದಂತಹ ವಿಷಯ ಗೋಚರಿಸುತ್ತದೆ. ಅವುಗಳನ್ನು ಬುಕ್‌ಮಾರ್ಕ್‌ ಮಾಡಿಕೊಳ್ಳಿ.

ಕೆಲವೊಂದು ವೆಬ್‌ಸೈಟ್‌ಗಳು, ಯೂಟ್ಯೂಬ್‌ಗಳು ಉಚಿತವಾಗಿ ಸಾಮಗ್ರಿ ಒದಗಿಸುತ್ತವೆ. ಇನ್ನು ಕೆಲವೊಂದು ಶುಲ್ಕ ವಿಧಿಸುತ್ತವೆ. ಹಾಗೆಯೇ ನಿಮಗೆ ಅಗತ್ಯವಿರುವ ಪುಸ್ತಕಗಳನ್ನು ಖರೀದಿಸಲು ಕೂಡ ಅಂತರ್ಜಾಲ ನೆರವಿಗೆ ಬರುತ್ತದೆ. ಆನ್‌ಲೈನ್‌ನಲ್ಲಿ ಇಂತಹ ಪುಸ್ತಕಗಳನ್ನು ಖರೀದಿಸಬಹುದು.

ಕೆಲವೊಮ್ಮೆ ನಿಮಗೆ ಬೇಕಾದಂತಹ ಲೇಖಕರ ಪುಸ್ತಕ ಸಿಗದೆ ಇರಬಹುದು. ಆಗ ಆ ಲೇಖಕ ಬರೆದಂತಹ ಲೇಖನಗಳನ್ನು ಹುಡುಕಿ. ಅಂದರೆ ಹೋಂಪೇಜ್‌ನಲ್ಲಿ ಹುಡುಕಿದರೆ ಖಂಡಿತ ನಿಮಗೆ ಬೇಕಾದಂತಹ ಪುಸ್ತಕ ಲಭ್ಯವಾಗುತ್ತದೆ. ಇದಲ್ಲದೇ ಲಿಂಕ್ಸ್‌ ಸೇವ್‌ ಮಾಡಿಟ್ಟುಕೊಳ್ಳಿ.

----

ಸ್ನೇಹಿತರ ಬಳಿ ಚರ್ಚೆ ಮಾಡಿ

ಗೂಗಲ್‌ನಲ್ಲಿ ‘ಮೋಸ್ಟ್‌ ಸರ್ಚ್ಡ್‌’ ಆಯ್ಕೆಯಲ್ಲಿಯೂ ನಿಮಗೆ ಬೇಕಾದಂತಹ ವಿಷಯ ಲಭ್ಯ. ಹೆಚ್ಚಿನ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಆಯ್ಕೆ ನೀಡಿರುತ್ತಾರೆ. ಹಾಗೆಯೇ ವೆಬ್‌ಸೈಟ್‌ನಲ್ಲಿ ವಿಭಾಗಗಳಿದ್ದು, ಇವು ಕೂಡ ನಿಮಗೆ ಹುಡುಕಲು ಉಪಯುಕ್ತ. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ಓದುವಾಗ ಕೆಲವೊಮ್ಮೆ ಕೆಲವೊಂದು ಆನ್‌ಲೈನ್‌ ಅಧ್ಯಯನ ಸಾಮಗ್ರಿಯಲ್ಲಿ ತೊಡಕುಂಟಾಗಬಹುದು. ಹೀಗಾಗಿ ಆನ್‌ಲೈನ್‌ ಅಣಕು ಪರೀಕ್ಷೆ ತೆಗೆದುಕೊಂಡು ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.