ADVERTISEMENT

ಸಂವಹನ | ರಜೆಗೆ ಕಟ್ಟಿ ಅಕ್ಷರತೋರಣ

ರಘು ವಿ
Published 3 ಏಪ್ರಿಲ್ 2023, 19:30 IST
Last Updated 3 ಏಪ್ರಿಲ್ 2023, 19:30 IST
   

ಮಕ್ಕಳ ಪದಸಂಪತ್ತು ಬೆಳೆದಾಗ ಮಾತ್ರ ಅವರು ಉತ್ತಮ ಸಂವಹನ ನಡೆಸಬಲ್ಲರು. ಪದಸಂಪತ್ತು ಬೆಳೆಯುವುದು ಓದಿನಿಂದ.

***

ಹಬ್ಬದಂದು ಮನೆಯ ಬಾಗಿಲಿಗೆ ತೋರಣ ಕಟ್ಟುತ್ತೇವೆ. ಇದು ಶುಭದ, ಸಂಭ್ರಮದ ಸಂಕೇತ. ಮನದ ಬಾಗಿಲಿಗೂ ತೋರಣವಿದೆ. ಆದರೆ ಅದು ವ್ಯಕ್ತವಾಗುವುದು ಮಾತಿನ ಮೂಲಕ, ಬರಹದ ಮೂಲಕ. ತೋರಣ ಕಟ್ಟುವುದು ಸಾಮಾನ್ಯವಾಗಿ ಮನೆಯ ಕಿರಿಯರ ಕೆಲಸ. ಆದರೆ ಕಿರಿಯರ ಮನದ ಬಾಗಿಲಿಗೆ ಅಕ್ಷರತೋರಣ ಕಟ್ಟುವುದು ಹಿರಿಯರ ಕೆಲಸ. ಮಕ್ಕಳ ಪದಸಂಪತ್ತು ಬೆಳೆದಾಗ ಮಾತ್ರ ಅವರು ಉತ್ತಮ ಸಂವಹನ ನಡೆಸಬಲ್ಲರು. ಪದಸಂಪತ್ತು ಬೆಳೆಯುವುದು ಓದಿನಿಂದ. ಇಡೀ ಪದಕೋಶವನ್ನು ಬಾಯಿಪಾಠ ಮಾಡಿದರೂ ಪದಗಳ ಝಲಕನ್ನು ಅರಿತು ಅವುಗಳನ್ನು ಸಮರ್ಪಕವಾಗಿ ಬಳಸುವ ಕಲೆ ಸಿದ್ಧಿಸುವುದು ವಿಪುಲ ಓದಿನಿಂದ. ವಾಕ್ಯರಚನೆಯ ಕ್ರಮ, ಭಾಷೆಯ ಪಲುಕು, ವೈವಿಧ್ಯ ಇವುಗಳ ಸೊಗಸನ್ನು ಅನುಭವಿಸುವ ಸಂಸ್ಕಾರ ಒದಗಿಸುವುದು ಓದು. ಕೇವಲ ಪದಸಂಪತ್ತಷ್ಟೇ ಅಲ್ಲದೆ ಕಲ್ಪನೆಗಳು ಗರಿಗೆದರಲು ಓದು ಬಹಳ ಪ್ರಯೋಜನಕಾರಿ. ಜೊತೆಗೆ ಮಕ್ಕಳ ಭಾವನಾತ್ಮಕ ಬೆಳವಣಿಗೆಗೂ ಇದು ಪೋಷಕ. ಅವರನ್ನು ಅಕ್ಷರಲೋಕಕ್ಕೆ ಪರಿಚಯಿಸಲು ಇರುವ ಏಕೈಕ ಮಾರ್ಗ ಓದು. ಈ ಬೇಸಿಗೆಯ ರಜೆಯಲ್ಲಿ ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸೋಣ.

ADVERTISEMENT

ಓದಿನ ವಾತಾವರಣ
ಮೊದಲಿಗೆ ಮನೆಯಲ್ಲಿ ಓದಿನ ವಾತಾವರಣ ನಿರ್ಮಾಣವಾಗಬೇಕು. ನನಗೆ ಬಾಲ್ಯದ ಒಂದು ಮುಖ್ಯ ನೆನಪು, ಮಧ್ಯಾಹ್ನದ ಊಟವಾದ ಬಳಿಕ ನನ್ನ ಅಮ್ಮ ನಮ್ಮನ್ನು ಸುತ್ತ ಕೂರಿಸಿಕೊಂಡು ಓದುತ್ತಿದ್ದ ರಾಮಾಯಣ ಮಹಾಭಾರತಗಳು. ಮುಗ್ಧಮನಸ್ಸಿನಲ್ಲಿ ಆ ಪಾತ್ರಗಳು ಜೀವತಳೆಯುತ್ತಿದ್ದುದು ಒಂದು ಸುಂದರ ಅನುಭವ. ಹಿರಿಯರು ಮೊದಲಿಗೆ ಓದಿ ಹೇಳಿದರೆ (ವಿವರಿಸಬಾರದು) ಮಕ್ಕಳ ಮನಸ್ಸಿನಲ್ಲಿ ಕಥೆ ಆಕಾರ ಪಡೆದುಕೊಳ್ಳುತ್ತ ಸಾಗುವುದು. ಇದಕ್ಕೆ ದೊಡ್ಡ ಗ್ರಂಥಾಲಯವೇ ಬೇಕಿಲ್ಲ. ಕೇವಲ ಹತ್ತು ಉತ್ತಮ ಪುಸ್ತಕಗಳು ಸಾಕು. ಮನೆಯಲ್ಲಿ ಪುಸ್ತಕಗಳು ಇರಬೇಕು, ಮಕ್ಕಳ ಕೈಗೆಟಕುವಂತೆ ಇರಬೇಕು. ಬೇರೆ ಬೇರೆ ವಯಸ್ಸಿನ ಮಕ್ಕಳಿದ್ದರೆ ಆಯಾ ವಯೋಮಾನಕ್ಕೆ ತಕ್ಕಂತಹ ಪುಸ್ತಕಗಳಿರಲಿ. ಇವು ಒಪ್ಪ ಓರಣ ಕೆಡುತ್ತವೆ, ಹಾಳಾಗುತ್ತವೆ ಎಂದು ಜತನ ಮಾಡದೆ ಮಕ್ಕಳು ಅವುಗಳನ್ನು ಉಪಯೋಗಿಸುವುದನ್ನು ಪ್ರೋತ್ಸಾಹಿಸಬೇಕು. ಆರಂಭದ ದಿನಗಳಲ್ಲಿ ಹಿರಿಯರು ಓದಿ ಒಂದು ರೋಚಕ ಘಟ್ಟದಲ್ಲಿ ನಿಲ್ಲಿಸಿಬಿಡಬೇಕು. ಮುಂದೇನಾಯಿತು ತಿಳಿಯಲು ನೀವು ಓದಿ ಎಂದು ಓದಲು ಪ್ರೇರೇಪಿಸಬೇಕು. ಇಂದು ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆ ಹೆಚ್ಚಿರುವ ದಿನಗಳಲ್ಲಿ ಇ-ಬುಕ್‌ ರೀಡರ್‌ಗಳು ಲಭ್ಯವಿವೆ. ಅದನ್ನೂ ಬಳಸಲು ಪ್ರೋತ್ಸಾಹಿಸಬಹುದು.

ಪದಗಮನ
–ಈಗ ಹೆಜ್ಜೆ ಹೆಜ್ಜೆಯಾಗಿ ಓದುವ ಅಭ್ಯಾಸವನ್ನು ಮಕ್ಕಳಿಗೆ ಕಲಿಸುವುದು ಹೇಗೆಂದು ತಿಳಿಯೋಣ. ಮೊದಲಿಗೆ ಮಕ್ಕಳ ನೆರವಿನಿಂದಲೇ ಅವರು ಓದಬಯಸುವ ಪುಸ್ತಕಗಳ ಪಟ್ಟಿ ರಚಿಸಬೇಕು. ಅದರಲ್ಲಿ ಮುಖ್ಯವಾದ ಪುಸ್ತಕ ಬಿಟ್ಟುಹೋಗಿದೆ ಎನಿಸಿದರೆ ಅದನ್ನು ಹಿರಿಯರು ಸೇರಿಸಬಹುದು. ಹೀಗೆ ರಚಿತವಾದ ಪಟ್ಟಿ ದೊಡ್ಡದಿರಲಿ. ಪಟ್ಟಿ ದೊಡ್ಡದಿರಬೇಕು. ಏಕೆಂದರೆ ಮನೆಯಲ್ಲಿರುವ ನಾಲ್ಕು ಪುಸ್ತಕ ಓದಿ, ತಾನೆಲ್ಲ ಓದಿದೆ ಎಂದು ಕಿರಿಯರು ತಿಳಿಯಬಾರದು. ಓದಬೇಕಾದ್ದು ಬಹಳವಿದೆ ಎಂಬ ಅರಿವು, ಜವಾಬ್ದಾರಿಯನ್ನು ಈ ಪಟ್ಟಿ ನೆನಪಿಸುತ್ತಿರುತ್ತದೆ.

ಎರಡನೆಯದಾಗಿ, ಎಲ್ಲ ಕಾರ್ಯಸಾಧನೆಗೆ ಕಾಲಪರಿಮಿತಿ ರೂಪಿಸುವಂತೆ ಓದಿಗೂ ಚೌಕಟ್ಟು ನಿರ್ಮಿಸಿಕೊಳ್ಳಬೇಕು. ಅಂದರೆ, ಇಂತಿಷ್ಟು ದಿನಗಳಲ್ಲಿ ಇಷ್ಟು ಪುಸ್ತಕ ಓದುತ್ತೇನೆ ಎಂದು ನಿರ್ಧರಿಸಿ ಅದನ್ನು ಪಾಲಿಸಬೇಕು. ಓದಿನ ವೇಗ ಹೆಚ್ಚಿದಂತೆ, ಪುಸ್ತಕಗಳ ಸಂಖ್ಯೆಯೂ ಹೆಚ್ಚಿ ಖುಷಿ ಕಾಣಬಹುದು.

ಮೂರನೆಯದಾಗಿ, ಓದಿಗೆಂದು ಪ್ರತಿನಿತ್ಯ ಸಮಯವನ್ನು ಮೀಸಲಿರಿಸಬೇಕು. ಊಟದ ಬಳಿಕ ಅಥವಾ ರಾತ್ರಿ ಮಲಗುವ ಮುನ್ನ – ಹೀಗೆ ನಮಗೆ ಅನುಕೂಲಕರವಾದ ಸಮಯವನ್ನು ನಿಗದಿಪಡಿಸಿಕೊಂಡು, ಅದನ್ನು ಬಿಡದೆ ಸತತವಾಗಿ ಪಾಲಿಸಬೇಕು. ಒಮ್ಮೆ ಇದು ಅಭ್ಯಾಸವಾಗಿಬಿಟ್ಟರೆ, ತಪ್ಪಿಸಲು ಸಾಧ್ಯವಾಗದು. ನಾಲ್ಕನೆಯದಾಗಿ ಓದಲು ಕುಳಿತುಕೊಳ್ಳುವ ಜಾಗ ಪ್ರಶಾಂತವಾಗಿದ್ದು ಯಾವುದೇ ರೀತಿಯ ಅಡೆತಡೆ ಇರದ, ಕನಿಷ್ಠ ಶಬ್ದಮಾಲಿನ್ಯ ಇರುವಂತಹದ್ದಾಗಿರಬೇಕು. ಆ ಸಮಯದಲ್ಲಿ ಮನೆಯವರೂ ನಮ್ಮನ್ನು ವಿಚಲಿತರಾಗಿಸದಂತೆ ಎಚ್ಚರ ವಹಿಸಬೇಕು. ನಮ್ಮ ಪಾಲಿನ ಮನೆಗೆಲಸ ಮುಗಿಸಿ ಕುಳಿತರೆ ಅವರು ನಮ್ಮ ತಂಟೆಗೆ ಬಾರರು.

ಐದನೆಯದಾಗಿ, ಓದುವ ಸಮಯದಲ್ಲಿ ಕಥೆಯನ್ನು ಭಾವಿಸಿ ಅನುಭವವನ್ನು ಶ್ರೀಮಂತಗೊಳಿಸಿಕೊಳ್ಳಬೇಕು. ಕಣ್ಣು ಪದವನ್ನು ಓದಿ, ಬುದ್ಧಿ ಅರ್ಥವನ್ನು ನೀಡಿದರೆ ಮನಸ್ಸು ಅದಕ್ಕೆ ಭಾವವನ್ನೂ ಭಾವಕ್ಕೆ ತಕ್ಕಂತೆ ರೂಪವನ್ನು ನೀಡುತ್ತದೆ. ಆರಂಭದಲ್ಲಿ ನಿಧಾನವಾಗಿ ಓದಿ ಈ ಪ್ರಕ್ರಿಯೆಗೆ ನಾವು ಒಳಪಟ್ಟರೆ, ಕ್ರಮೇಣ ಇದು ಸಹಜವಾಗಿ ವೇಗವೂ ಹೆಚ್ಚಿ ಆನಂದವೂ ವೃದ್ಧಿಸುತ್ತದೆ. ಟಿ. ವಿ., ಸಿನೆಮಾ ಇತ್ಯಾದಿ ದೃಶ್ಯಮಾಧ್ಯಮಗಳಲ್ಲಿ ನಿರ್ಮಾಪಕ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಚಿತ್ರೀಕರಣವಾಗಿರುತ್ತದೆ. ಆದರೆ ಓದುವಾಗ, ನಾವೇ ನಿರ್ದೇಶಕರು, ನಮ್ಮ ಕಲ್ಪನೆಯ ತಾಕತ್ತಿನ ಮೇಲೆ ಮನಸ್ಸು ಚಿತ್ರಗಳನ್ನು ನಮ್ಮ ಮುಂದಿಡುತ್ತದೆ. ಹೀಗಾಗಿ ಓದಿನ ಅನುಭವ ನಮ್ಮ ಸ್ವಂತದ್ದು, ಹೆಚ್ಚು ಖುಷಿ ಕೊಡುವಂತಹದ್ದು. ನಮ್ಮ ಸಮಯವನ್ನು ಟ.ವಿ. ಸಿನೆಮಾಗಳಲ್ಲಿ ವ್ಯಯವಾಗಿಸುವ ಬದಲು ಓದಿನಲ್ಲಿ ತೊಡಗಿಸುವುದು ಹೆಚ್ಚು ಲಾಭದಾಯಕ.

ಆರನೆಯದಾಗಿ, ಟಿಪ್ಪಣಿ ತೆಗೆಯುವಂತಹ ಅಭ್ಯಾಸ ಮಾಡಿಕೊಂಡರೆ ಓದಿನ ಹೆಚ್ಚಿನ ಲಾಭ ಹೊಂದಬಹುದು. ಇದು ನಮ್ಮ ಓದಿನ ಹರಹನ್ನು ಗುರುತಿಸುವಲ್ಲೂ ನೆರವಾಗುವುದು.

ಏಳನೆಯದಾಗಿ, ಪುಸ್ತಕವೊಂದು ಸದಾ ಜೊತೆಯಲ್ಲಿದ್ದರೆ ಒಳ್ಳೆಯದು. ಸ್ವಲ್ಪ ಸಮಯ ದೊರೆತರೂ ನಾಲ್ಕೇ ಪುಟ ಓದಿದರೂ ಅದರಿಂದ ಲಾಭವೇ.

ಕೊನೆಯದಾಗಿ ಒಂದಿಷ್ಟು ಗ್ರಂಥಮಿತ್ರರು ನಮ್ಮವರಾಗಲಿ. ಅಂದರೆ ಓದಿದ್ದನ್ನು ಹಂಚಿಕೊಳ್ಳುವ ಬಳಗ. ಸಾಧ್ಯವಾದರೆ ಪುಸ್ತಕ ವಿನಿಮಯವೂ ಆಗಲಿ. ಆಗ ಓದಲು ಮತ್ತಷ್ಟು ಪ್ರೇರಣೆ ದೊರೆಯುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.