ಶಾಲಾ–ಕಾಲೇಜುಗಳಲ್ಲಿ ಪಾಠಗಳೆಲ್ಲ ಮುಗಿದಿವೆ. ಪರೀಕ್ಷೆ ದಿನಾಂಕವೂ ಘೋಷಣೆಯಾಗಿದೆ. ವಿದ್ಯಾರ್ಥಿಗಳೀಗ ಕೊನೆಯ ಹಂತದ ಸಿದ್ಧತೆಯಲ್ಲಿದ್ದಾರೆ. ಆ ಸಿದ್ಧತೆ ಹೇಗಿರಬೇಕು. ಇಲ್ಲಿದೆ ಮಾಹಿತಿ.
ವಿದ್ಯಾರ್ಥಿಗಳೀಗ ಪುಸ್ತಕದ ಕೊನೆಯ ಪುಟದಲ್ಲಿದ್ದಾರೆ ಎಂದರೆ, ಇನ್ನೇನು ಪರೀಕ್ಷೆ ಅವನ ಕೈಗೆ ಎಟುಕುವ ದೂರದಲ್ಲಿದೆ ಎಂತಲೇ ಅರ್ಥ. ಸುಮ್ಮನೆ ಹಾಗೆ ದಿನಪತ್ರಿಕೆಯನ್ನು ಗಮನಿಸಿದರೆ ಸಾಕು ಪರೀಕ್ಷೆಯ ವೇಳಾಪಟ್ಟಿ ದೊಡ್ಡ ಅಕ್ಷರದಲ್ಲಿ ಮುದ್ರಿತವಾಗಿರುತ್ತದೆ. ವಿದ್ಯಾರ್ಥಿಗೆ ಭಯ, ಆತಂಕ. ಎಲ್ಲ ಪಠ್ಯಗಳು(ಸಿಲಬಸ್) ಮುಗಿದಿವೆ, ಪರೀಕ್ಷೆ ದಿನಾಂಕವೂ ಬಂದಿದೆ. ಆದರೆ ತಯಾರಿ ಹೇಗೆ? ಎಂಬ ದೊಡ್ಡ ಪ್ರಶ್ನೆ ಎದುರಾಗುತ್ತದೆ.
ನೋಡಿ, ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯು ತರಗತಿಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿ ತಿಂಗಳಾಯ್ತು. ಬಹುಶಃ ಆ ಮಕ್ಕಳ ಆಯಾ ತರಗತಿಯ ಪಠ್ಯಗಳು ಕೂಡ ಇನ್ನೇನು ಮುಗಿಯಲ್ಲಿವೆ. ಪರೀಕ್ಷೆಗೆ ತಯಾರಿ ಗಂಭೀರವಾಗಬೇಕಿದೆ.
ವಿದ್ಯಾರ್ಥಿಯ ಓದನ್ನು ನಾವು ಎರಡು ರೀತಿಯಲ್ಲಿ ವಿಭಾಗಿಸಬಹುದು. ಸಿಲಬಸ್ ಮುಗಿಯುವ ಮೊದಲಿನ ಓದು ಮತ್ತು ನಂತರದ ಓದು. ವಿದ್ಯಾರ್ಥಿಗಳು ಅಂದಂದಿನ ಪಾಠವನ್ನು ಅಂದಂದು ಓದಿ, ಕಿರುಪರೀಕ್ಷೆ ಬರೆದು ಮುಚ್ಚಿಟ್ಟು ಮುಂದೆ ಹೋಗಿರುತ್ತಾರೆ. ಪೂರ್ತಿ ಪಠ್ಯ ಮುಗಿದ ಮೇಲೆ ಎಲ್ಲವನ್ನೂ ಮುಂದೆ ಹರಡಿಕೊಂಡು ಮಾಡಿಕೊಳ್ಳಬೇಕಾದ ತಯಾರಿ ಬಹಳ ಮುಖ್ಯವಾದದ್ದು. ಇದು ಮಗುವಿಗೆ ನಿಜಕ್ಕೂ ಬಂಗಾರದ ಅವಧಿ. ಸಿಲಬಸ್ ಮುಗಿದ ಮೇಲೆ ವಿದ್ಯಾರ್ಥಿಯ ತಯಾರಿಗಳೇನು? ಒಂದಷ್ಟು ಮಾಹಿತಿ ಇಲ್ಲಿದೆ.
ಓದಿನ ಸ್ವರೂಪ
ಏನನ್ನು ಓದಬೇಕು? ಎಷ್ಟು ಓದಬೇಕು? ಪ್ರಶ್ನೆಗಳ ಸ್ವರೂಪ ಹೇಗಿರುತ್ತದೆ? ಇಷ್ಟು ಬರೆಯಲು ಎಷ್ಟು ಸಮಯಬೇಕು? ಎಂಬುದನ್ನು ತಿಳಿಯಲು ಪ್ರಶ್ನೆಪತ್ರಿಕೆಯ ನೀಲನಕ್ಷೆ ಸಹಾಯ ಮಾಡುತ್ತದೆ. ಸಂಬಂಧಿಸಿದ ಶಿಕ್ಷಕರಿಂದ ಅದನ್ನು ಸಂಗ್ರಹಿಸಿಕೊಳ್ಳಬೇಕು. ಈ ಹಿಂದೆ ಬಂದ ಪ್ರಶ್ನೆಪತ್ರಿಕೆಗಳು ನಿಮ್ಮ ದಾರಿ ದೀಪ. ಅದರ ಸಹಾಯದಿಂದ ತಯಾರಿ ನಡೆಸಬಹುದು. ಮೌಲ್ಯಮಾಪನದಲ್ಲಿ ಉತ್ತರಕ್ಕೆ ಅಂಕಗಳನ್ನು ಹೇಗೆ ಹಂಚಲಾಗಿರುತ್ತದೆ? ಉತ್ತರ ಬರೆಯುವ ಕ್ರಮ ಹೇಗೆ? ಯಾವ ಪ್ರಶ್ನೆಗೆ ಎಷ್ಟು ಉತ್ತರ ಬೇಕಾಗುತ್ತದೆ ಎಂಬುದು ಉತ್ತರ ಸೂಚಿಯಲ್ಲಿ ಇರುತ್ತದೆ. ಶಿಕ್ಷಕರಿಗೆ ಕೇಳಿದರೆ ಅದನ್ನು ಒದಗಿಸಿಕೊಡುತ್ತಾರೆ.
ಪುನರಾವರ್ತನೆ ಮತ್ತು ಅಭ್ಯಾಸ
ಪಾಠ ಬೋಧಿಸುವಾಗ ಶಿಕ್ಷಕರಿಗೆ ಕೇವಲ ಪರೀಕ್ಷೆ ಗಮನದಲ್ಲಿರುವುದಿಲ್ಲ. ಮಗುವಿಗೆ ವಿಷಯ ಜ್ಞಾನ ನೀಡುವುದಾಗಿರುತ್ತದೆ. ವಿದ್ಯಾರ್ಥಿಗಳು ಕೂಡ ಪಾಠದ ಆಶಯ ಕಲಿಯುತ್ತಾ ಹೋಗುತ್ತಾರೆ. ಆದರೆ ಸಿಲಬಸ್ ಮುಗಿದ ನಂತರದ ಎಲ್ಲಾ ಅವಧಿಯು ಕೇವಲ ಪರೀಕ್ಷೆ ದೃಷ್ಟಿಯದ್ದಾಗಿರುವುದರಿಂದ ಆ ಸಮಯವನ್ನು ಪರೀಕ್ಷಾ ದೃಷ್ಟಿಯಿಂದ ಪುನರಾವರ್ತನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಓದದ್ದನ್ನು ಪದೇ ಪದೇ ಓದುವುದರಿಂದ ನೆನಪಿನಲ್ಲಿ ಉಳಿಯುತ್ತದೆ. ತರಗತಿಯಲ್ಲಿನ ಪಾಠದಷ್ಟೇ ಪುನರಾವರ್ತನೆಯೂ ಕೈ ಹಿಡಿಯುವುದರಿಂದ ಇದನ್ನು ಜತನವಾಗಿ ಮಾಡಬೇಕು. ಅದಕ್ಕೊಂದು ವೇಳಾಪಟ್ಟಿ, ಶಿಸ್ತುಬದ್ದ ಕ್ರಮ ಬೇಕಾಗುತ್ತದೆ.
ಪೂರ್ವ ಸಿದ್ಧತೆ ಮತ್ತು ಅಣಕು ಪರೀಕ್ಷೆಗಳು
ಪಠ್ಯಮುಗಿಸಿ ಒಂದೆರಡು ವಾರಗಳ ಪುನರಾವರ್ತನೆಯ ನಂತರ ಶಾಲೆ-ಕಾಲೇಜುಗಳಲ್ಲಿ ಒಂದೆರಡು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿ ಯಾವ ಕಾರಣಕ್ಕೂ ಇದನ್ನು ತಪ್ಪಿಸಿಕೊಳ್ಳಬಾರದು. ಮುಖ್ಯ ಪರೀಕ್ಷೆಗೆ ನಡೆಸುವ ತಾಲೀಮು ಇದು. ಇಲ್ಲಿ ನೀವು ನಿಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಅನುಕೂಲ. ನೀವು ಉತ್ತರ ಬರೆಯುವ ಕ್ರಮ ಸರಿಯಾದದ್ದೇ ಎಂಬುದು ಸ್ಪಷ್ಟವಾಗುತ್ತದೆ. ಅದಲ್ಲದೆ ಮನೆಯಲ್ಲಿ ವಿದ್ಯಾರ್ಥಿಗಳು ತಾವೇ ಒಂದಷ್ಟು ಅಣಕು ಪರೀಕ್ಷೆಗಳಿಗೆ ಒಡ್ಡಿಕೊಳ್ಳಬೇಕು. ತಮ್ಮ ಉತ್ತರವನ್ನು ತಾವೇ ಅವಲೋಕಿಸಕೊಳ್ಳಬೇಕು. ಇದು ಅವರಿಗೆ ಆತ್ಮಸ್ಥೈರ್ಯವನ್ನು, ಭರವಸೆಯನ್ನು, ಪರೀಕ್ಷೆ ಬಗ್ಗೆ ಹಿಡಿತವನ್ನು ದಯಪಾಲಿಸುತ್ತದೆ.
ತುಂಬಾ ಮೌಲ್ಯಯುತ ಅವಧಿ
ವರ್ಷವಿಡೀ ಓದಿದ ಓದು ಒಂದು ಹದಕ್ಕೆ ಬರುವ ಸಮಯವಿದು. ಬರೀ ಈ ಅವಧಿಯನ್ನಷ್ಟೆ ಚೆನ್ನಾಗಿ ದುಡಿಸಿ ಕೊಂಡು ಪರೀಕ್ಷೆಯಲ್ಲಿ ಗೆದ್ದವರು ತುಂಬಾ ಜನರಿದ್ದಾರೆ. ಈ ಸಮಯದ ಪ್ರತಿ ಗಂಟೆಗಳೂ ಮುಖ್ಯವಾಗುತ್ತವೆ. ಬೇರೆ ಯಾವುದೇ ವಿಚಾರಕ್ಕೆ ಸಮಯ ವ್ಯರ್ಥ ಮಾಡದೇ ಕೇವಲ ಪರೀಕ್ಷೆ ದೃಷ್ಟಿಯಿಂದ ಜಿಪುಣನೊಬ್ಬ ಹಣವನ್ನು ಖರ್ಚು ಮಾಡುವಂತೆ ಸಮಯವನ್ನು ಖರ್ಚು ಮಾಡಬೇಕು. ಪರೀಕ್ಷೆಗೆ ತುಂಬಾ ಹತ್ತಿರದ ಸಮಯವಾದ್ದರಿಂದ ಈ ಸಮಯದ ಪ್ರಾಮಾಣಿಕ ಓದು ನಿಮಗೆ ಪರೀಕ್ಷೆಯಲ್ಲಿ ಕೈ ಹಿಡಿಯುತ್ತದೆ.
ಆರೋಗ್ಯ ಮತ್ತು ಆತ್ಮವಿಶ್ವಾಸ
ಸಿಲಬಸ್ ಮುಗಿದು, ಪರೀಕ್ಷಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ಸಾಮಾನ್ಯವಾಗಿ ಕೆಲವು ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಅದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಈ ಅವಧಿಯ ಪರೀಕ್ಷೆಗೆ ತುಂಬಾ ಮುಖ್ಯಕಾಲ. ಹಾಗಾಗಿ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಸರಿಯಾದ ಊಟ, ನಿದ್ದೆ, ವಿಶ್ರಾಂತಿ ಅಗತ್ಯವಾಗಿ ಬೇಕು. ಇದರ ಮಧ್ಯೆ ವಿದ್ಯಾರ್ಥಿ ತಮ್ಮ ಆತ್ಮವಿಶ್ವಾಸವನ್ನು ಕಾಯ್ದಿಟ್ಟುಕೊಳ್ಳಬೇಕಾಗುತ್ತದೆ. ನಾನು ಸರಿಯಾಗಿ ಓದಿದ್ದೇನೆ. ಪರೀಕ್ಷೆ ಚೆನ್ನಾಗಿಯೇ ಬರೆಯುತ್ತೇನೆ. ಒಳ್ಳೆಯ ಅಂಕಗಳು ಬರುತ್ತವೆ ಎಂಬ ಸಕಾರಾತ್ಮಕ ಭಾವನೆಯು ಪರೀಕ್ಷೆಯಲ್ಲಿ ವಿದ್ಯಾರ್ಥಿಯನ್ನು ಗೆಲ್ಲಿಸುತ್ತವೆ.
ನಕಾರಾತ್ಮಕ ತಂತ್ರದ ಯೋಚನೆಯೇ ಬೇಡ
ಪತ್ರಿಕೆ ತೀರಾ ಸುಲಭ ಇರಬಹುದಾ, ಅಯ್ಯೊ ತುಂಬಾ ಕಷ್ಟ ಇದ್ರೆ? ಪರೀಕ್ಷೆ ರೂಮಿನಲ್ಲಿ ಏನಾದ್ರೂ ಸಹಾಯವಾಗಬಹುದಾ? ಗ್ರೇಸ್ ಮಾರ್ಕ್ಸ್‌ಗೆ ಅವಕಾಶ ಸಿಗಬಹುದಾ? ಕೋವಿಡ್ ಹೆಚ್ಚಾಗಿ ಲಾಕ್‌ಡೌನ್ ಆಗಬಹುದು? ಇಂತಹ ವಿಚಿತ್ರ ಯೋಚನೆಗಳಿಂದ ದೂರ ಇರಿ. ಇವು ನಿಮ್ಮ ಶಿಸ್ತುಬದ್ಧ ಓದನ್ನು ಕೊಲ್ಲುತ್ತವೆ.
ಶಿಕ್ಷಕರ ಸಂಪರ್ಕದಲ್ಲಿರಿ
ಸಿಲಬಸ್ ಮುಗೀತು ಅಂದರೆ ಶಾಲೆ- ಕಾಲೇಜು ಬಾಗಿಲು ಮುಚ್ಚಿತು ಅಂತಲ್ಲ. ಶಿಕ್ಷಕರು ಹೇಳುವವರೆಗೂ ಶಾಲೆಗೆ ಹೋಗಿ. ನಿಮ್ಮ ಶಿಕ್ಷಕರೊಂದಿಗೆ ಸಂಪರ್ಕದಲ್ಲಿರಿ. ನಿಮ್ಮ ಓದಿನ ಅನುಮಾನಗಳನ್ನು ಗುರುತು ಮಾಡಿಕೊಂಡು ಅವರ ಮುಂದಿಟ್ಟು ಉತ್ತರ ಕಂಡುಕೊಳ್ಳಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವರು ಖಂಡಿತ ನಿಮಗೆ ಸಲಹೆ-ಸೂಚನೆ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.