ADVERTISEMENT

ಗುಣಮಟ್ಟದ ಶಿಕ್ಷಣ, ತಾಂಡಾ ನಿವಾಸಿಗಳ ಅಚ್ಚುಮೆಚ್ಚಿನ ಸರ್ಕಾರಿ ಶಾಲೆ

ಅಚ್ಚುಕಟ್ಟಾದ ಶಾಲಾ ವಾತಾವರಣ

ವೆಂಕಟೇಶ ಪಾಟೀಲ
Published 9 ಅಕ್ಟೋಬರ್ 2018, 19:45 IST
Last Updated 9 ಅಕ್ಟೋಬರ್ 2018, 19:45 IST
ದೇವದುರ್ಗ ಪಟ್ಟಣದ ಹೊರವಲಯ ಮರಿಗೆಮ್ಮ ದಿಬ್ಬ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೋಣೆಗೆ ಸರ್ಕಾರಿ ಬಸ್‌ ಆವರಣ 
ದೇವದುರ್ಗ ಪಟ್ಟಣದ ಹೊರವಲಯ ಮರಿಗೆಮ್ಮ ದಿಬ್ಬ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೋಣೆಗೆ ಸರ್ಕಾರಿ ಬಸ್‌ ಆವರಣ    

ದೇವದುರ್ಗ(ರಾಯಚೂರು ಜಿಲ್ಲೆ): ಪಟ್ಟಣದ ಹೊರವಲಯದ ಮರಿಗೆಮ್ಮ ದಿಬ್ಬ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ತಾಂಡಾದ ನಿವಾಸಿಗಳಿಗೆ ಅಚ್ಚುಮೆಚ್ಚು. ಅಕ್ಷರ ಜ್ಞಾನದಿಂದ ದೂರ ಉಳಿದಿರುವ ತಾಂಡಾದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಂತಸಪಡುತ್ತಾರೆ. ಮಕ್ಕಳ ಅಕ್ಷರ ಕಲಿಕೆ ಕಂಡು ಅವರು ಸಂಭ್ರಮಿಸುತ್ತಾರೆ.

ತಾಂಡಾ ಹಾಗೂ ದೊಡ್ಡಿ ಮಕ್ಕಳನ್ನು ಒಳಗೊಂಡ ಈ ಶಾಲೆ ಇಡೀ ತಾಲ್ಲೂಕಿಗೆ ಮಾದರಿ. ಮರಿಗೆಮ್ಮ ದಿಬ್ಬ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ತಾಂಡಾ ಮತ್ತು ದೊಡ್ಡಿಗಳು 2008ರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಂದಿವೆ. ದೇವದುರ್ಗ ಪಟ್ಟಣ ಪಂಚಾಯಿತಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದರಿಂದ ಅಕ್ಕಪಕ್ಕದ ತಾಂಡಾ ಮತ್ತು ದೊಡ್ಡಿಗಳೆಲ್ಲವೂ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಲ್ಲಿ ಸೇರ್ಪಡೆಯಾಗಿವೆ.

ವಾರ್ಡ್‌ ಸಂಖ್ಯೆ 22ರಲ್ಲಿ ಮರಿಗೆಮ್ಮ ದಿಬ್ಬ ತಾಂಡಾ ಇದೆ. ಅನಕ್ಷರಸ್ಥ ಜನರನ್ನು ಸಾಕ್ಷರರನ್ನಾಗಿಸಲು ಸರ್ಕಾರ ಹಲವು ವರ್ಷಗಳಿಂದ ವಿಶೇಷ ಆಸಕ್ತಿ ವಹಿಸಿದೆ. ವಯಸ್ಕರ ಶಿಕ್ಷಣದ ಜೊತೆಗೆ ಸಂಜೆ ಶಾಲೆಗಳ ಮೂಲಕವೂ ಜನರಿಗೆ ಪ್ರಾಥಮಿಕ ಶಿಕ್ಷಣ ನೀಡಲಾಯಿತು. ಇದೀಗ ಈ ಭಾಗದಲ್ಲಿ ಒಂದರ್ಥದಲ್ಲಿ ಅಕ್ಷರ ಕ್ರಾಂತಿಯೇ ನಡೆದಿದೆ.

ADVERTISEMENT

ಮರಿಗೆಮ್ಮ ದಿಬ್ಬ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1ರಿಂದ 7ನೇ ತರಗತಿಯ ಜೊತೆಗೆ ಉನ್ನತೀಕರಿಸಿದ ಶಾಲೆಯಾಗಿ ಬಡ್ತಿ ಪಡೆದಿದೆ. ಇಲ್ಲಿನ ಶಿಕ್ಷಕರ ಪ್ರಯತ್ನದಿಂದ ಒಟ್ಟು 176 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪ್ರತಿನಿತ್ಯ 160ಕ್ಕೂ ಹೆಚ್ಚು ಮಕ್ಕಳು ಹಾಜರಿರುವಂಥ ಈ ಶಾಲೆಯಲ್ಲಿ ತರಗತಿ ಕೋಣೆಯಲ್ಲಿನ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.

ಶಾಲೆ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದವರೆಗೂ ವಿದ್ಯಾರ್ಥಿಗಳು ಸ್ಪರ್ಧಿಸುತ್ತಿರುವುದು ಗಮನಾರ್ಹ. ಪ್ರತಿ ವರ್ಷ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ಶಾಲೆಯ ಮಕ್ಕಳು ಬಹುಮಾನಗಳನ್ನು ಪಡೆಯುತ್ತಿದ್ದಾರೆ. ಶಾಲೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅಚ್ಚುಕಟ್ಟಾದ ತರಗತಿ ಕೋಣೆಗಳು, ಶಾಲೆಗೆ ಸುಂದರವಾದ ಆವರಣ ಗೋಡೆಯಿದ್ದು ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಬಿಡಿಸಲಾಗಿದೆ. ಪಠ್ಯಕ್ಕೆ ಪೂರಕವಾಗಿ ಶಾಲಾ ಪರಿಸರ ವಿಶೇಷವಾಗಿ ಗಮನ ಸೆಳೆಯುತ್ತದೆ. ಮಕ್ಕಳ ಮನಸ್ಸಿನಲ್ಲಿ ಓದುವ ಹಂಬಲ ಉಳಿಯಲು ಹಲವು ಕ್ರಮಗಳನ್ನು ಕೈಗೊಂಡಿರುವುದು ಗಮನಾರ್ಹ.

ಶಾಲೆಯ ಮುಖ್ಯ ಶಿಕ್ಷಕ ತುಳಜಾರಾಮ ಹಾಗೂ ಮೂವರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾದರಿ ಶಾಲೆಯಾಗಿ ಹೆಸರು ಪಡೆದಿರುವುದರಿಂದ ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಈಗಾಗಲೇ ಶಾಲೆಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.