ADVERTISEMENT

ಕನ್ನಡದಲ್ಲಿ ತಂತ್ರಜ್ಞಾನ ಮಾಹಿತಿಗೆ ‘ಟೆಕ್‌ಕನ್ನಡ.ಇನ್‌’

ಬೇಂದ್ರೆ ಮಂಜುನಾಥ್‌ ಕೆ.ಟಿ.ಹಳ್ಳಿ
Published 27 ಆಗಸ್ಟ್ 2019, 19:30 IST
Last Updated 27 ಆಗಸ್ಟ್ 2019, 19:30 IST
   

ಡಾಟ್‌ಕಾಂಗಳ ಮಹಾಪೂರ ನಿಂತೇ ಹೋಯಿತು ಎಂದು ಭಾವಿಸಿದ ಸಂದರ್ಭದಲ್ಲಿಯೇ ಕನ್ನಡದ ಮೂಲಕ ತಂತ್ರಜ್ಞಾನ ಮಾಹಿತಿಯನ್ನು ಹಂಚಿಕೊಳ್ಳುವ, ಪುಸ್ತಕಲೋಕದ ಬಾಗಿಲನ್ನು ತೆರೆಯುವ, ವೈದ್ಯವಿಸ್ಮಯಗಳನ್ನು ಸರಳವಾಗಿ ವಿವರಿಸುವ, ಅಂತರಿಕ್ಷ ವಿದ್ಯಮಾನಗಳನ್ನು ಕಣ್ಣಿಗೆ ಕಟ್ಟುವಂತೆ ಸರಳವಾಗಿ ನಿರೂಪಿಸುವ ಕೆಲವು ವೆಬ್‌ಸೈಟ್‌ಗಳು ಅನಾವರಣಗೊಳ್ಳುತ್ತಿವೆ. ಈ ರೀತಿಯ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಒದಗಿಸುತ್ತಿರುವ ಲಕ್ಷಾಂತರ ತಾಣಗಳಿದ್ದರೂ ಕನ್ನಡದ ಮೂಲಕ ಆಸಕ್ತರನ್ನು ತಲುಪಲು, ಅದರಲ್ಲೂ ವಿಶೇಷವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಸಕ್ತಿ ಕೆರಳಿಸಿ ಅವರ ಜ್ಞಾನದ ಸೀಮೆಯನ್ನು ವಿಸ್ತರಿಸಲು ಇದೀಗ ಹೊಸ ಹೊಸ ತಾಣಗಳು ಲೋಕಾರ್ಪಣೆಯಾಗಿವೆ. ಇತ್ತೀಚೆಗಷ್ಟೇ ಜಾಲಲೋಕದ ಜಗಲಿಯನ್ನೇರಿರುವ ಟೆಕ್‌ಕನ್ನಡ.ಇನ್ ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳು ಮಾಹಿತಿಯನ್ನು ದೃಕ್-ಶ್ರವಣ ಮಾಧ್ಯಮದ ಮೂಲಕ ಕನ್ನಡದಲ್ಲಿ ನೀಡುವ ಅಪರೂಪದ ಕೆಲಸ ಮಾಡುತ್ತಿದೆ.

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮೊತ್ತಮೊದಲ ತಾಣವಿದು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಸಮಕಾಲೀನ ಬೆಳವಣಿಗೆಗಳನ್ನು ಕನ್ನಡದ ಓದುಗರಿಗೆ ಲಭ್ಯವಾಗುವಂತೆ ಮಾಡುವುದು ಈ ತಾಣದ ಉದ್ದೇಶ. ಯಾವುದೇ ಒಂದು ಕಾಲಘಟ್ಟದ ಪ್ರಜ್ಞೆಯನ್ನು ರೂಪಿಸುವಲ್ಲಿ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಹೇಗೆ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೋ, ಹಾಗೆಯೇ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅದರಲ್ಲಿ ಅಷ್ಟೇ ಮಹತ್ವದ ಪಾತ್ರವನ್ನು ಹೊಂದಿರುತ್ತವೆ. ತಂತ್ರಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಈ ಕಾಲದಲ್ಲಿ ಅದನ್ನು ಹೇಗೆ ನೋಡಬೇಕು, ಹೇಗೆ ಸ್ವೀಕರಿಸಬೇಕು ಎಂಬ ತಿಳಿವು ಮತ್ತು ಒಳನೋಟಗಳನ್ನು ನೀಡುವ ಪ್ರಯತ್ನವಾಗಿ ಈ ತಾಣ ಹೊರಬರುತ್ತಿದೆ ಎನ್ನುತ್ತಾರೆ ಟೆಕ್‌ಕನ್ನಡ.ಇನ್ ಜಾಲ ನಿರ್ವಹಿಸುತ್ತಿರುವ ದುರ್ಗದ ಹುಡುಗ ಎಸ್. ಕುಮಾರ್.

ಈ ತಾಣದಲ್ಲಿ ಹೊಸ ಫೋನ್‌ಗಳು, ನಮ್ಮ ಅಗತ್ಯಗಳನ್ನು ಪೂರೈಸುವ ಮೊಬೈಲ್ ಆ್ಯಪ್‌ಗಳು, ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆ ಕುರಿತ ಬರಹಗಳು, ವಿಜ್ಞಾನಿಗಳು-ತಂತ್ರಜ್ಞರು ಬರೆಯುವ ಅಂಕಣಗಳು, ತಂತ್ರಜ್ಞಾನ-ವಿಜ್ಞಾನ ಕುರಿತು ಪುಸ್ತಕಗಳ ಪರಿಚಯ, ಮಹಿಳೆ ಮತ್ತು ತಂತ್ರಜ್ಞಾನ ಕುರಿತು ವರದಿ ಮತ್ತು ಲೇಖನಗಳು, ಸಾಮಾಜಿಕ ಜಾಲತಾಣಗಳ ಕುರಿತು ಹೊಸ ವಿಷಯಗಳು, ಆಟೊಮೊಬೈಲ್ ಕ್ಷೇತ್ರದ ಆಗುಹೋಗುಗಳನ್ನು ಕುರಿತು ಸುದ್ದಿಗಳು, ಮೊಬೈಲ್-ಕಂಪ್ಯೂಟರ್-ಇಂಟರ್‌ನೆಟ್‌ಗೆ ಸಂಬಂಧಿಸಿದ ಟಿಪ್ಸ್‌ಗಳು ಓದಿಗೆ ಲಭ್ಯ.

ADVERTISEMENT

ವಿಶೇಷವಾಗಿ ಓದಿನ ಜೊತೆಗೆ ಕೇಳುವುದಕ್ಕೂ ಈ ತಾಣದಲ್ಲಿ ಅವಕಾಶವಿದೆ. ವಿಜ್ಞಾನದ ಬೆಳವಣಿಗೆಗಳನ್ನು ಶ್ರವ್ಯ ಮಾಧ್ಯಮವಾದ - ಪಾಡ್‌ಕಾಸ್ಟ್ ರೂಪದಲ್ಲಿ ನೀಡಲಾಗುತ್ತಿದೆ. ಜಾಣ ಸುದ್ದಿ ಹೆಸರಿನಲ್ಲಿ ಪ್ರಕಟವಾಗುವ ಈ ಪಾಡ್‌ಕಾಸ್ಟ್ ತಾಣಕ್ಕೆ ಭೇಟಿ ನೀಡುವವರಿಗೆ ಹೊಸ ಅನುಭವವನ್ನು ನೀಡಲಿದೆ. ಮೊಬೈಲ್‌ಗಳನ್ನು ಪರಿಚಯಿಸುವ ವಿಡಿಯೊಗಳು ಇಲ್ಲಿ ಕಾಣಿಸಿಕೊಳ್ಳಲಿವೆ. ಅಷ್ಟೇ ಅಲ್ಲ, ಇಲ್ಲಿ ಪ್ರಕಟವಾಗುವ ಎಲ್ಲ ಸುದ್ದಿಗಳನ್ನು ಆಡಿಯೊ ರೂಪದಲ್ಲಿ ಕೇಳಿ, ತಿಳಿದುಕೊಳ್ಳಬಹುದು. ಭಾಷೆ ಮತ್ತು ತಂತ್ರಜ್ಞಾನ ಅಭಿವೃದ್ಧಿ, ಭವಿಷ್ಯದ ತಂತ್ರಜ್ಞಾನ, ಸಮಾಜಮುಖಿಯಾದ ವಿಜ್ಞಾನ-ತಂತ್ರಜ್ಞಾನ ಕುರಿತ ಇಲ್ಲಿನ ಬರಹಗಳು ಮಾಹಿತಿಯ ಜೊತೆಗೆ ಒಳನೋಟಗಳನ್ನು ನೀಡುವ ಪ್ರಯತ್ನವನ್ನು ಮಾಡಲಿವೆ.

ಕನ್ನಡಿಗರಿಂದ ಕನ್ನಡಿಗರಿಗಾಗಿ ತಂತ್ರಜ್ಞಾನದ ಇತ್ತೀಚಿನ ಮಾಹಿತಿಯನ್ನು ಕನ್ನಡದಲ್ಲಿಯೇ ನೀಡುವ ಸಲುವಾಗಿ ಅವತರಿಸಿರುವ ಟೆಕ್‌ಕನ್ನಡ.ಇನ್ ತಾಣದಲ್ಲಿ ಕರ್ನಾಟದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ತಾವು ಹೊಸದಾಗಿ ರೂಪಿಸುವ ಆ್ಯಪ್‌ಗಳು, ನಡೆಸುವ ಸಂಶೋಧನೆಗಳು, ಪ್ರಾಜೆಕ್ಟ್‌ಗಳು, ಪ್ರೆಸೆಂಟೇಷನ್‌ಗಳನ್ನು ಹಂಚಿಕೊಳ್ಳಲು ಮುಂದೆ ಬಂದಲ್ಲಿ ಇದೊಂದು ಬೃಹತ್ ಮಾಹಿತಿ ಕಣಜವಾಗಿ ಬೆಳೆಯುತ್ತದೆ. ಈಗಾಗಲೇ ಯೂಟ್ಯೂಬ್ ಮತ್ತು ಬ್ಲಾಗ್/ವ್ಲಾಗ್‌ಗಳಲ್ಲಿ ಸಕ್ರೀಯವಾಗಿ ತಂತ್ರಜ್ಞಾನದ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಯುವಜನರು ಈ ಜಾಲತಾಣದ ಲಿಂಕ್ ಬಳಸಿಕೊಂಡು ಇನ್ನೂ ಎತ್ತರೆತ್ತರಕ್ಕೆ ಬೆಳೆಯುವ ಸಾಧ್ಯತೆ ಇದೆ. ನವೋದ್ಯಮಗಳು ತಮ್ಮ ವಿಶೇಷತೆಯನ್ನು ಜನರೊಂದಿಗೆ ಹಂಚಿಕೊಳ್ಳಲು ಟೆಕ್‌ಕನ್ನಡ.ಇನ್ ಬಳಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ: URL : www.techkannada.in FaceBook Page : tech-kannada
Twitter : Techkannada19

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.