ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕರ ನೇಮಕಾತಿಗೆ ಕನಿಷ್ಠ ಅರ್ಹತೆಯನ್ನು ಅಳವಡಿಸಿಕೊಳ್ಳಲು ಟಿಇಟಿ (ಶಿಕ್ಷಕರ ಅಹರ್ತಾ ಪರೀಕ್ಷೆ)ಯನ್ನು ನಡೆಸುತ್ತಿದೆ. ಕರ್ನಾಟಕದಲ್ಲಿ ಟಿಇಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ನಡೆಸುತ್ತಿದ್ದು ಈ ವರ್ಷದ ಪರೀಕ್ಷೆ ಆಗಸ್ಟ್ 22ರಂದು ನಡೆಯಲಿದೆ. ಇಲ್ಲಿ ಎರಡು ಪ್ರತ್ಯೇಕ ಪರೀಕ್ಷೆಗಳು ಇರಲಿದ್ದು ಮೊದಲನೆಯದು 1ರಿಂದ 5ನೇ ತರಗತಿಯನ್ನು ತೆಗೆದುಕೊಳ್ಳುವ ಶಿಕ್ಷಕರಿಗಾದರೆ, ಎರಡನೆಯದು 6ರಿಂದ 8ನೇ ತರಗತಿಯ ತನಕ ಬೋಧಿಸುವ ಶಿಕ್ಷಕರಿಗೆ.
1ರಿಂದ 5ನೇ ತರಗತಿಯಲ್ಲಿ ಬೋಧಿಸಲು ಇಚ್ಛಿಸುವ ಶಿಕ್ಷಕರಿಗಾಗಿ ಟಿಇಟಿ ಪ್ರಶ್ನೆಪತ್ರಿಕೆಯಲ್ಲಿ ಇರುವ ವಿಷಯಗಳ ವಿವರಗಳು ಹೀಗಿವೆ.
ಇಲ್ಲಿ ಭಾಷೆ-1ಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಬೋಧನಾ ಮಾಧ್ಯಮದ ಕೌಶಲವನ್ನು ಆಧರಿಸಿರುತ್ತವೆ. ಭಾಷೆ 2ಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಆ ಭಾಷೆಯ ಮೂಲಭೂತ ಅಂಶಗಳು, ಸಂವಹನ ಮತ್ತು ವಿಷಯ ಗ್ರಹಿಕೆ ಸಾಮರ್ಥ್ಯವನ್ನು ಆಧರಿಸಿರುತ್ತವೆ.
ಶಿಶು ವಿಕಸನ ಹಾಗೂ ಬೋಧನಾ ಕ್ರಮವು 6ರಿಂದ 11 ವಯೋಮಾನದ ಮಕ್ಕಳ ಮನೋವಿಜ್ಞಾನ ಹಾಗೂ ಬೋಧನಾ ಮತ್ತು ಕಲಿಕೆಯ ಮೇಲೇ ಕೇಂದ್ರೀಕೃತವಾಗಿರುತ್ತದೆ. ವಿಭಿನ್ನ ಕಲಿಕೆಯ ಮಕ್ಕಳ ಅವಶ್ಯಕತೆ ಹಾಗೂ ಅವರ ಕಲಿಕೆಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರು ತಿಳಿದುಕೊಳ್ಳಬೇಕಾದ ಅಂಶಗಳ ಮೇಲೆ ಇರುತ್ತದೆ.
ಗಣಿತ ಮತ್ತು ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಆ ವಿಷಯದ ಮೂಲ ಪರಿಕಲ್ಪನೆಗಳು, ಸಮಸ್ಯೆಯನ್ನು ಬಿಡಿಸುವ ಸಾಮರ್ಥ್ಯ ಮತ್ತು ಬೋಧನಾ ಶಾಸ್ತ್ರದ ಅರ್ಥೈಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯಲ್ಲಿ ಬರುವ ಎಲ್ಲಾ ಪ್ರಶ್ನೆಗಳು ಎನ್‌ಸಿಇಆರ್‌ಟಿ ಅಥವಾ ರಾಜ್ಯಮಟ್ಟದ 1ರಿಂದ 8ನೇ ತರಗತಿಗೆ ಸಂಬಂಧಿಸಿದ ಪಠ್ಯವಸ್ತುವನ್ನು ಆಧರಿಸುತ್ತದೆ. ಆದರೆ ಪ್ರಶ್ನೆಗಳ ಕಠಿಣತೆಯು ಪ್ರೌಢ ಹಂತಕ್ಕೆ ಅಂದರೆ 10ನೇ ತರಗತಿಯವರೆಗೆ ಸೀಮಿತವಾಗಿರುತ್ತದೆ.
ಇದೇ ರೀತಿ 6 ರಿಂದ 8ನೇ ತರಗತಿಯಲ್ಲಿ ಬೋಧಿಸಲು ಇಚ್ಛಿಸುವ ಶಿಕ್ಷಕರಿಗಾಗಿ ಟಿಇಟಿ ಪ್ರಶ್ನೆಪತ್ರಿಕೆಯಲ್ಲಿ ಇರುವ ವಿಷಯಗಳು 1ರಿಂದ 5ನೇ ತರಗತಿಯಲ್ಲಿ ಬೋಧಿಸಲು ಇಚ್ಛಿಸುವ ಶಿಕ್ಷಕರಿಗೆ ಇರುವ ಮಾದರಿಯಲ್ಲೇ ಇರುತ್ತವೆ. ಆದರೆ 11– 14 ವರ್ಷ ವಯಸ್ಸಿನ ಮಕ್ಕಳ ಮನೋವಿಜ್ಞಾನ ಹಾಗೂ ಬೋಧನಾ ಮತ್ತು ಕಲಿಕೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಎಲ್ಲಾ ಪ್ರಶ್ನೆಗಳು ಎನ್‌ಸಿಇಆರ್‌ಟಿ ಅಥವಾ ರಾಜ್ಯಮಟ್ಟದ 6ರಿಂದ 10ನೇ ತರಗತಿಗೆ ಸಂಬಂಧಿಸಿದ ಪಠ್ಯವಸ್ತುವನ್ನು ಆಧರಿಸುತ್ತದೆ. ಪ್ರಶ್ನೆಗಳ ಕಠಿಣತೆಯು ಪಿಯುಸಿ ತರಗತಿಯವರೆಗೆ ಸೀಮಿತವಾಗಿರುತ್ತದೆ.
ಏನನ್ನು ಓದಬೇಕು?
ಇದಕ್ಕಾಗಿ ಹಳೆಯ ಪ್ರಶ್ನೆಪತ್ರಿಕೆಗಳನ್ನು ನೋಡಿಕೊಂಡರೆ ಅಂದಾಜು ಸಿಗುತ್ತದೆ.
l ಕನ್ನಡ ಭಾಷೆಗಾದರೆ (1) ಸ್ಪರ್ಧಾಕಲಿ- ಎನ್‌ಟಿಎಸ್‌ಇ ಮತ್ತು ಎನ್‌ಎಂಎಎಸ್ ಕೈಪಿಡಿ (ರಾಜ್ಯ ಸರ್ಕಾರದ ಪ್ರಕಟಣೆ)
(2) ಕನ್ನಡ ವ್ಯಾಕರಣ ದರ್ಪಣ- ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ (3) ರಾಜ್ಯ ಡಿಎಸ್‌ಆರ್‌ಟಿಸಿ ಪ್ರಕಟಿಸಿದ 1ರಿಂದ ಪಿಯುಸಿವರೆಗಿನ ಕನ್ನಡ ಪುಸ್ತಕಗಳು.
l ಇಂಗ್ಲಿಷ್ ಭಾಷೆಗಾದರೆ ಕರ್ನಾಟಕ ಟೆಕ್ಸ್ಟ್‌ಬುಕ್ ಸೊಸೈಟಿ, ಎನ್‌ಸಿಇಆರ್‌ಟಿ ಮತ್ತು ಡಿಎಸ್‌ಇಆರ್‌ಟಿ ಪ್ರಕಟಿಸಿದ ಪುಸ್ತಕಗಳು
l ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನಕ್ಕೆ ಕೂಡ ಇದೇ ರೀತಿಯ ಪುಸ್ತಕಗಳನ್ನು ಓದಬಹುದು.
ಸಲಹೆಗಳು
l ಪರೀಕ್ಷೆಯು ಇದೇ ತಿಂಗಳ 22ಕ್ಕೆ ಇರುವುದರಿಂದ ಸಹಜವಾಗಿಯೇ ಕಡಿಮೆ ದಿನಗಳಿವೆ, ಹ್ಯಾಗಪ್ಪ ತಯಾರಿ ನಡೆಸೋದು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಅದಕ್ಕಾಗಿ ಹೆದರಬೇಕಾದ ಅಗತ್ಯವಿಲ್ಲ. ಮೇಲೆ ಹೇಳಿದ ಪುಸ್ತಕಗಳನ್ನು ಗಮನಿಸಿದರೆ ಅವು ನಿಮಗೆ ಹೊಸದೇನೂ ಅಲ್ಲ. ಈಗಾಗಲೇ ನಿಮ್ಮ ಹಿಂದಿನ ತರಗತಿಗಳಲ್ಲಿ (ಬಿಎ/ ಬಿಎಸ್‌ಸಿ/ ಡಿಇಡಿ/ ಬಿಇಡಿ ಅಥವಾ ಶಿಕ್ಷಣ ಡಿಪ್ಲೊಮಾದಲ್ಲಿ) ಓದಿರುವ ಪುಸ್ತಕಗಳೇ ಆಗಿವೆ. ಅಲ್ಲದೇ ನೀವು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ನೀವು ತರಗತಿಯನ್ನು ತೆಗೆದುಕೊಳ್ಳಲು ಇರುವ ಪಠ್ಯಪುಸ್ತಕವನ್ನು ಓದಿಯೇ ಇರುತ್ತಿರಿ. ಮೊದಲು ಈ ಹಿಂದೆ ನಡೆದ ಈ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಯನ್ನು ತಿರುವಿಹಾಕಿ ಅದಾದ ನಂತರ ಪ್ರತಿಯೊಂದು ವಿಷಯದ ಪುಸ್ತಕಗಳನ್ನು ಪುನರಾವರ್ತನೆಯ ದೃಷ್ಟಿಯಿಂದ ಒಂದೊಂದೇ ಅಧ್ಯಾಯಗಳನ್ನು ತಿರುವಿ ಹಾಕುತ್ತಾ ಹೋಗಿ. ನೀವು ಈಗಾಗಲೇ ಹಲವು ಬಾರಿ ಆ ಎಲ್ಲಾ ಅಧ್ಯಾಯಗಳನ್ನು ಓದಿರುವುದರಿಂದ ಎಲ್ಲವೂ ನೆನಪಾಗುತ್ತಾ ಹೋಗುತ್ತದೆ. ಹೀಗಾಗಿ ಓದು ಬೇಗ ಮುಗಿಯುತ್ತದೆ ಹಾಗೂ ಪುನರಾವರ್ತನೆಯೂ ಆಗುತ್ತದೆ. ಪ್ರತಿ ದಿನ ಪರೀಕ್ಷೆ ಮುಗಿಯುವ ತನಕ ಕನಿಷ್ಠ 6-8 ಗಂಟೆಯನ್ನಾದರೂ ಓದಲು ಮೀಸಲಿಡಿ. ಅದರಲ್ಲಿ 1 ಗಂಟೆ ಬಹುಆಯ್ಕೆ ಪ್ರಶ್ನೆಗಳನ್ನು ಬಿಡಿಸಲು ಮೀಸಲಿಟ್ಟರೆ ಚೆನ್ನ.
l ಈ ಸಂದರ್ಭದಲ್ಲಿ, ಹೊಸ ವಿಷಯವನ್ನು ಕಲಿಯಲು ಹೆಚ್ಚು ಒತ್ತು ಕೊಡಬೇಡಿ. ಈಗಾಗಲೇ ಕಲಿತ ಎಲ್ಲಾ ವಿಷಯವನ್ನು ಗಟ್ಟಿ ಮಾಡಿಕೊಳ್ಳಲು ಹೆಚ್ಚಿನ
ಪ್ರಯತ್ನ ಇರಲಿ. ಮರೆತಿರುವ ವಿಷಯಗಳು ಈ ಅಧ್ಯಯನದಲ್ಲಿ ನೆನಪಾಗುತ್ತವೆ.
l ಯೂಟ್ಯೂಬ್ ಚಾನೆಲ್‌ನಲ್ಲಿ ಇರುವ ವಿಡಿಯೊ ಪಾಠಗಳನ್ನು ಕೂಡಾ ಕೇಳಿಸಿಕೊಳ್ಳಬಹುದು. ಇದು ಕೂಡಾ ನಿಮ್ಮ ಅಧ್ಯಯನಕ್ಕೆ ಸಹಾಯ ಮಾಡಲಿದೆ.
ಯಾವುದೇ ಕಾರಣಕ್ಕೂ ಪುಸ್ತಕದಲ್ಲಿರುವ ಅಂಶಗಳ ಟಿಪ್ಪಣಿ ತಯಾರಿಸಲು ಹೋಗಬೇಡಿ. ಸಮಯ ಕಡಿಮೆ ಇರೋದರಿಂದ ಸಹಜವಾಗಿ ಕಷ್ಟವಾಗುವುದು, ಹೀಗಾಗಿ ಪುಸ್ತಕಗಳಲ್ಲಿಯೇ ಬೇರೆ ಬೇರೆ ಬಣ್ಣಗಳ ಹೈಲೈಟರ್ ಬಳಸಿ ಗುರುತು ಹಾಕಿಕೊಳ್ಳುತ್ತಾ ಹೋಗಿ ಮತ್ತು ಆಗಾಗ ಹೈಲೈಟ್ ಆದ ಭಾಗವನ್ನು ನೋಡಿಕೊಳ್ಳುತ್ತಾ ಪುನರಾವರ್ತಿಸಿ.
(ಲೇಖಕ: ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.