ನೈಸರ್ಗಿಕ ಸಂಪನ್ಮೂಲಗಳು ವಿಭಾಗದಲ್ಲಿ ನಮ್ಮ ಪರಿಸರ ಮತ್ತು ಶಕ್ತಿಯ ಆಕರಗಳು (ರಿಸೋರ್ಸಸ್) ಪ್ರಮುಖ ವಿಷಯಗಳು.
ಜೀವಿಗಳು ಮತ್ತು ಭೌತಿಕ ಪರಿಸರ ಪರಸ್ಪರ ಪ್ರತಿವರ್ತನೆಯಿಂದ ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಳ್ಳುತ್ತವೆ. ಜೈವಿಕ ಮಟ್ಟದಲ್ಲಿ ಭಾಗವಹಿಸುವ ಜೀವಿಗಳು ಆಹಾರ ಸರಪಳಿ (ಫುಡ್ ಚೈನ್)/ ಜಾಲವನ್ನು ರೂಪಿಸುತ್ತವೆ. ಪೋಷಕ ಸ್ತರದಲ್ಲಿ (ಟ್ರೋಫಿಕ್ ಲೆವೆಲ್) ನಾಲ್ಕು ಹಂತಗಳಿವೆ. ಉತ್ಪಾದಕರು/ ಸ್ವಪೋಷಕರು (ಸಸ್ಯಗಳು), ಪ್ರ‍್ರಾಥಮಿಕ ಭಕ್ಷಕರು (ಸಸ್ಯಾಹಾರಿಗಳು), ದ್ವಿತೀಯ ಭಕ್ಷಕರು (ಮಾಂಸಾಹಾರಿಗಳು), ತೃತೀಯ ಭಕ್ಷಕರು (ಉನ್ನತ ಮಾಂಸಾಹಾರಿಗಳು). ಕೇವಲ ಶೇ 1ರಷ್ಟು ಸೌರಶಕ್ತಿಯನ್ನು ಸಸ್ಯಗಳು ಆಹಾರ ತಯಾರಿಕೆಗೆ ಬಳಸಿಕೊಳ್ಳುತ್ತವೆ. ಅವುಗಳಿಂದ ಮುಂದಿನ ಸ್ತರಗಳಿಗೆ ಕೇವಲ ಶೇ 10ರಷ್ಟು ಶಕ್ತಿ ಹರಿಯುತ್ತದೆ. ಆದ್ದರಿಂದ ಉನ್ನತ ಮಾಂಸಾಹಾರಿಗಳ ಸ್ತರಕ್ಕೆ ಶಕ್ತಿಯ ಹರಿವು ಬಹಳ ಕಡಿಮೆ ಇರುವುದರಿಂದ ಯಾವುದೇ ಆಹಾರ ಸರಪಳಿಯಲ್ಲಿ 4ಕ್ಕಿಂತ ಹೆಚ್ಚು ಸರಪಳಿಗಳಿಲ್ಲ. ಇದನ್ನು ‘ಶೇ 10ರ ನಿಯಮ’ ಎನ್ನುತ್ತಾರೆ.
ನಮ್ಮ ದೈನಂದಿನ ಚಟುವಟಿಕೆಗಳಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ನಮ್ಮನ್ನು ನೇರಳಾತೀತ (ಯುವಿ) ವಿಕಿರಣಗಳಿಂದ ರಕ್ಷಿಸುವ ಓಝೋನ್ ಪದರವು ಫ್ರಿಜ್ ಮತ್ತು ಅಗ್ನಿಶಾಮಕದಲ್ಲಿ ಬಳಸುವ ಕ್ಲೋರೊಫ್ಲೂರೋಕಾರ್ಬನ್‌ಗಳಂತಹ ಸಂಶ್ಲೇಷಿತ ರಾಸಾಯನಿಕಗಳಿಂದ ಶಿಥಿಲಗೊಳ್ಳುತ್ತಿದೆ.
ತ್ಯಾಜ್ಯಗಳು
ಇವುಗಳಲ್ಲಿ ಎರಡು ವಿಧಗಳಿವೆ. ಜೈವಿಕ ವಿಘಟನೆ (ಬಯೋ ಡೀಗ್ರೇಡಬಲ್)ಗೆ ಒಳಗಾಗುವಂತಹ ತ್ಯಾಜ್ಯಗಳು ಮತ್ತು ಒಳಗಾಗದಿರುವ ತ್ಯಾಜ್ಯಗಳು. ಪ್ಲಾಸ್ಟಿಕ್, ಒಮ್ಮೆ ಉಪಯೋಗಿಸಿ ಬಿಸಾಡುವಂತಹ ಸಾಮಗ್ರಿಗಳು ಎರಡನೇ ಬಗೆಯವು. ಇವು ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ತ್ಯಾಜ್ಯ ನಿರ್ವಹಣೆ ಇನ್ನೊಂದು ಗಂಭೀರ ಸಮಸ್ಯೆ.
ಶಕ್ತಿಯ ಆಕರಗಳು
ಸೂರ್ಯನು ಶಕ್ತಿಯ ಪ್ರಮುಖ ಆಕರ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಶಕ್ತಿ ಬೇಕು. ಉತ್ತಮ ಶಕ್ತಿಯ ಆಕರಗಳು ಮಿತವ್ಯಯದ್ದೂ, ಪರಿಣಾಮಕಾರಿಯೂ, ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ರವಾನಿಸಬಹುದಾದದ್ದೂ ಆಗಿರಬೇಕು. ಜೊತೆಗೆ ವಾಯು, ಜಲ ಹಾಗೂ ನೆಲಗಳ ಪ್ರದೂಷಣೆ ಉಂಟುಮಾಡಬಾರದು.
ಸಾಂಪ್ರದಾಯಿಕ (ಕನ್ವೆನ್ಷನಲ್) ಶಕ್ತಿಯ ಆಕರಗಳು
1 ಪಳೆಯುಳಿಕೆಗಳು (ಫಾಸಿಲ್ ಫ್ಯೂಯಲ್ಸ್) ಇವು ನವೀಕರಿಸಲಾರದ, ಮುಗಿದು ಹೋಗುವ ಘಟ್ಟದಲ್ಲಿರುವ, ಪ್ರದೂಷಣೆಯನ್ನು ಉಂಟುಮಾಡುವ ಆಕರಗಳು.
2ಉಷ್ಣ ವಿದ್ಯುತ್ ಸ್ಥಾವರ (ಥರ್ಮಲ್ ಪವರ್ ಪ್ಲಾಂಟ್). ಇದೂ ಸಹ ಪಳೆಯುಳಿಕೆಯ ಇಂಧನವಾದ ಕಲ್ಲಿದ್ದಲನ್ನು ಬಳಸುತ್ತದೆ.
3 ಜಲ ವಿದ್ಯುತ್ ಸ್ಥಾವರ (ಹೈಡ್ರೋ ಪವರ್ ಪ್ಲಾಂಟ್). ಅಣೆಕಟ್ಟನ್ನು ನಿರ್ಮಿಸಿ ಅದರಿಂದ ವಿದ್ಯುತ್ ಉತ್ಪಾದಿಸಲು ಹಾಗೂ ನೀರಾವರಿಗೆ ಬಳಸಲು ಸಾಧ್ಯವಿದ್ದರೂ ಇದರಿಂದಾಗಿ ಭೂ ಮುಳುಗಡೆ, ಸಾಮಾಜಿಕ, ಆರ್ಥಿಕ ಸಮಸ್ಯೆಗಳೊಂದಿಗೆ ಪರಿಸರಕ್ಕೂ ಹಾನಿಯಾಗುತ್ತದೆ.
ನವೀಕರಿಸಲು ಸಾಧ್ಯವಾಗುವ ಪರ್ಯಾಯ ಶಕ್ತಿಯ ಆಕರಗಳತ್ತ ಗಮನ ಹರಿಸೋಣ
1ಜೈವಿಕ ಅನಿಲ (ಬಯೋ ಗ್ಯಾಸ್). ಇದು ಕಡಿಮೆ ವೆಚ್ಚದಲ್ಲಿ ತಯಾರು ಮಾಡಬಹುದಾದಂತಹ, ಪರಿಸರ ಸ್ನೇಹಿ ಇಂಧನ. ಇದರ ತ್ಯಾಜ್ಯವನ್ನು ಸಹ ಗೊಬ್ಬರವಾಗಿ ಬಳಸಬಹುದಾಗಿದೆ.
2 ಪವನ ಶಕ್ತಿ: ಇದೂ ಸಹ ಪರಿಸರ ಸ್ನೇಹಿ. ಆದರೆ ಇದನ್ನು ಸ್ಥಾಪಿಸುವುದು ಬಹಳ ದುಬಾರಿ. ಜೊತೆಗೆ ಎತ್ತರದ ಸ್ಥಳಗಳ ಆಯ್ಕೆ, ಅದರಿಂದ ದೊರಕುವ ವಿದ್ಯುತ್ತಿನ ರವಾನೆ ಎಲ್ಲವೂ ಸವಾಲೊಡ್ಡುತ್ತವೆ.
ಅಸಾಂಪ್ರದಾಯಿಕ (ನಾನ್ ಕನ್ವೆನ್ಷನಲ್) ಶಕ್ತಿ
1 ಸೌರ ಶಕ್ತಿ ನಮಗೆ ಅಪರಿಮಿತವಾಗಿ ದೊರೆಯುವ ಕಾಸಿಲ್ಲದ ಆಕರ. ಆದರೆ ಇದನ್ನು ಹೀರಲು ಬೇಕಾದಂತಹ ಸಿಲಿಕಾನ್ ದುರ್ಲಭವಿರುವುದರಿಂದ ವೆಚ್ಚ ಅಧಿಕ. ಆದರೂ ಸೋಲಾರ್ ಕುಕ್ಕರ್‌ನಿಂದ ಹಿಡಿದು ಸೆಟಲೈಟ್‌ವರೆಗೂ ಇದರ ಬಳಕೆ ವಿಸ್ತೃತ.
ಸಮುದ್ರ ಶಕ್ತಿ: ಉಬ್ಬರ ಶಕ್ತಿ (ಟೈಡಲ್), ಅಲೆ (ವೇವ್), ಸಾಗರ ಉಷ್ಣ ಶಕ್ತಿ ಮತ್ತು ಭೂಗರ್ಭ ಉಷ್ಣ ಶಕ್ತಿ (ಜಿಯೊ ಥರ್ಮಲ್) ಮುಂತಾದ ಶಕ್ತಿಯನ್ನು ಬಳಕೆಗೆ ತರಲು ಪ್ರಯತ್ನಗಳು ನಡೆಯುತ್ತಿವೆ.
2 ನ್ಯೂಕ್ಲೀಯರ್ ಶಕ್ತಿ: ಯುರೇನಿಯಂನ ಪರಮಾಣು ವಿದಳನ (ನ್ಯೂಕ್ಲಿಯರ್ ಫಿಶನ್)ದಿಂದ ಅತಿ ಹೆಚ್ಚು ಶಕ್ತಿ ಉತ್ಪಾದಿಸಲು ಸಾಧ್ಯವಾಗುತ್ತಿದೆ. ಆದರೆ ಅದರ ನಿಯಂತ್ರಣ, ಉಪ ಪರಮಾಣೀಯ ವಿಕಿರಣ, ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು ವಿಲೇವಾರಿ, ವಿಕಿರಣಗಳ ಸೋರಿಕೆಯ ಅಪಾಯಗಳಿಂದಾಗಿ ಬಹು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.