ಸೌಲಭ್ಯವುಳ್ಳ ಮಕ್ಕಳು ಆನ್‌ಲೈನ್ ಕಲಿಕೆಯಲ್ಲಿ ಸಕ್ರಿಯರಾಗಿದ್ದಾರೆ. ತುತ್ತಿಗಾಗಿ ಪರದಾಡುವ ಕೃಷಿ – ಕಾರ್ಮಿಕರ ಮಕ್ಕಳು ತಂದೆ, ತಾಯಿ ಜೊತೆ ಕೆಲಸಗಳಿಗೆ ಹೆಗಲು ಕೊಟ್ಟರೆ, ಕೊಳೆಗೇರಿ ಮಕ್ಕಳು ಪೋಷಕರೊಂದಿಗೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ವ್ಯಸನಗಳಿಗೆ ತುತ್ತಾಗಿ ಬೀದಿ ಬೀದಿ ಅಂಡಲೆಯುತ್ತಿದ್ದಾರೆ. ಇದು ಕೋವಿಡ್ ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟು.
ಭವಿಷ್ಯವನ್ನು ಕತ್ತಲೆ ಕೂಪಕ್ಕೆ ದೂಡಿಕೊಳ್ಳುತ್ತಿರುವ ಮಕ್ಕಳನ್ನು ಗುರುತಿಸಿ ಗುಣಾತ್ಮಕ ಶಿಕ್ಷಣದೊಂದಿಗೆ ಅವರನ್ನು ರಹದಾರಿಗೆ ತರುವ ಕೆಲಸವನ್ನು ’ಸ್ವರೋಸ್’ (ರಾಜ್ಯ ಕಲ್ಯಾಣಕ್ಕಾಗಿ ವಿದ್ಯಾರ್ಥಿಗಳ ಮುಗಿಲೆತ್ತರ ಕನಸು) ಕಲಿಕಾ ಕೇಂದ್ರಗಳು ಮಾಡುತ್ತಿವೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ ಸೇರಿದಂತೆ ಕೆಲ ಜಿಲ್ಲೆಗಳು, ದಕ್ಷಿಣ ಕರ್ನಾಟಕದ ತುಮಕೂರಿನ ಚಿಕ್ಕನಾಯಕನಹಳ್ಳಿ, ಬೆಂಗಳೂರು ಸುತ್ತಮುತ್ತಲಿನ ಊರುಗಳಲ್ಲಿ ಈ ಕೇಂದ್ರಗಳು ಕಳೆದ ಜುಲೈನಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಆಯಾ ಊರಿನ ವಿದ್ಯಾವಂತ ಯುವಕ – ಯುವತಿಯರೇ ಈ ಕಲಿಕಾ ಕೇಂದ್ರದ ಶಿಕ್ಷಕರು.
ಕಲಿಕೆ ಹೇಗೆ: ಮನೆ ಪಡಸಾಲೆ, ಜಗಲಿ ಕಟ್ಟೆ, ಸಮುದಾಯ ಭವನಗಳೇ ಈ ಸ್ವರೋಸ್ ಕಲಿಕಾ ಕೇಂದ್ರಗಳು. ಅಂತರ ಕಾಯ್ದುಕೊಂಡು ಪ್ರತಿದಿನವೂ ನಿಯಮಿತವಾಗಿ ಕಲಿಸಲಾಗುತ್ತದೆ. ಪಠ್ಯದ ಜತೆಗೆ ಸಾಮಾನ್ಯ ಜ್ಞಾನ, ಇಂಗ್ಲಿಷ್ ಸರಳ ಪದಗಳ ಬಳಕೆಯನ್ನು ಆಟೋಟದೊಂದಿಗೆ ಕಲಿಸುವುದು ಇಲ್ಲಿ ವಿಶೇಷ.
ಮಕ್ಕಳು ಕೂಡ ಒತ್ತಡಮುಕ್ತರಾಗಿ ಸ್ವಚ್ಛಂದವಾಗಿ ಕಲಿಯುತ್ತಿದ್ದಾರೆ. ಪೋಷಕರು ಮಕ್ಕಳ ಕಲಿಕೆ, ಆಟೋಟ ಖುದ್ದು ಅವಲೋಕಿಸಿ ಖುಷಿಪಡುತ್ತಿದ್ದಾರೆ ಎಂದು ಜಮಖಂಡಿ ತಾಲ್ಲೂಕಿನ ಸಾವಳಗಿಯ ಡಾ.ಅನ್ನಪೂರ್ಣ ಹೇಳುತ್ತಾರೆ. ಇವರ ಮನೆ ವಠಾರವೇ ಕಲಿಕಾ ಕೇಂದ್ರ. ಸ್ಥಳೀಯ ಕಾಲೇಜೊಂದರ ಉಪನ್ಯಾಸಕಿ ಆಗಿರುವ ಇವರು, ಈ ಕಲಿಕಾ ಕೇಂದ್ರದ ಶಿಕ್ಷಕಿಯೂ ಹೌದು.
ಚಿಕ್ಕನಾಯಕನಹಳ್ಳಿ ಗಾಂಧಿನಗರ ನಿವಾಸಿ ಶಾಂತರಾಜು ಚಿಂದಿ ಆಯುವ ಬೀದಿ ಮಕ್ಕಳಿಗೆ ಬಂಧು, ಮಾರ್ಗದರ್ಶಿ. ನಿರ್ಗತಿಕ ಮಕ್ಕಳನ್ನು ಕಲಿಕಾ ಕೇಂದ್ರಗಳಿಗೆ ಕರೆ ತಂದು ಹಾಲು, ಬಿಸ್ಕತ್ತು ನೀಡುತ್ತಾ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಲ್ಲಿನ ಮಕ್ಕಳ ಪೋಷಕರು ಬಹುತೇಕರು ಪೌರಕಾರ್ಮಿಕರು, ಹೇರ್ ಪಿನ್ ವ್ಯಾಪಾರ ಮಾಡುವ ಅಲೆಮಾರಿಗಳು. ಕೊರೊನಾದಿಂದ ಮಕ್ಕಳು ಕಲಿಕೆಯಿಂದ ದೂರ ಉಳಿದಿದ್ದರು. ಈ ಮಕ್ಕಳಿಗೆಲ್ಲಾ ಒಂದೇ ಸೂರಿನಡಿ ಕಲಿಯುವ ವ್ಯವಸ್ಥೆ ಮಾಡಿದ್ದಾರೆ.
‘ಗಾರೆ ಕೆಲಸ ಮಾಡುತ್ತಿದ್ದ ಅಪ್ಪ ತೀರಿ ಹೋದರು. ಅವ್ವ ಅಂಗವಿಕಲೆ. ಊರೂರು ಅಲೆದು ಹೇರ್‌ಪಿನ್ ವ್ಯಾಪಾರ ಮಾಡುತ್ತಾರೆ. ಕೊರೊನಾದಿಂದ ಶಾಲೆ ಮುಚ್ಚಿದ್ದರಿಂದ ಬಿಸಿಯೂಟ ಇಲ್ಲ. ಓದು ಮರೆತೇಹೋಗಿತ್ತು. ಈಗ ಕಲಿಯುತ್ತಾ, ಹೊಟ್ಟ ತುಂಬಾ ಊಟ ಮಾಡುತ್ತಾ ಖಷಿಯಾಗಿ ಇದ್ದೇನೆ’ ಎಂದು 12 ವರ್ಷದ ರೂಪಾ ಲವಲವಿಕೆಯಿಂದ ನುಡಿದಳು.
’ಅವ್ವ ಇಲ್ಲಾ ರೀ, ಅಪ್ಪ ವ್ಯಾಪಾರಕ್ಕೆ ಅಂತಾ ಹೋದರೆ ವಾರಗಟ್ಟಲೇ ಬರಲ್ಲ. ಶಾಲೆಯೂ ಇಲ್ಲ. ಊಟನೂ ಇಲ್ಲ‘ ಎಂದು ಚಿಕ್ಕನಾಯಕನಹಳ್ಳಿ ಕೆ.ಗುಡಿಯ ಶಾಲಾ ಬಾಲಕ ಕಿರಣ್, ಹನಿಗಣ್ಣಾದ. ಇಂತಹ ಅದೆಷ್ಟೋ ಅಸಹಾಯಕ ಮಕ್ಕಳಿಗೆ ಸ್ವರೋಸ್ ಕಲಿಕಾ ಕೇಂದ್ರಗಳು ಆಸರೆ ಆಗಿವೆ.
ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ಮಂಜುಳಾ ಮಾಳಗಿ, ಈ ಭಾಗದಲ್ಲಿ ಕಲಿಕಾ ಕೇಂದ್ರಗಳನ್ನು ನಡೆಸುತ್ತಿರುವ ಮಾದರಿ ಯುವತಿ. ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ. ಕಲಿಕೆಯಲ್ಲಿ ಹಿಂದುಳಿದ ಬಡ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತುವ ಕನಸು ಇವರದ್ದು.
ಸ್ವರೋಸ್ ಕೇಂದ್ರಗಳ ಪ್ರೇರಕ ಶಕ್ತಿ: ತೆಲಂಗಾಣದ ಐಪಿಎಸ್ ಅಧಿಕಾರಿ, ರಾಷ್ಟ್ರಪತಿ ಪದಕ ವಿಜೇತ ಡಾ.ಆರ್.ಎಸ್.ಪ್ರವೀಣ್ ಕುಮಾರ್ ಈ ಸ್ವರೋಸ್ ಕೇಂದ್ರಗಳ ಪ್ರೇರಕ ಶಕ್ತಿ. ಸಾಮಾನ್ಯ ಸ್ಥಿತಿಯಲ್ಲಿದ್ದ ತೆಲಂಗಾಣ ಸರ್ಕಾರದ ವಸತಿ ಶಾಲೆಗಳನ್ನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮಾದರಿಯಾಗಿ ರೂಪಿಸಿರುವ ಆದರ್ಶಪ್ರಾಯ ಆಡಳಿಗಾರ.
‘ಶೋಷಿತರು ಅವಮಾನ, ಅಸಹಾಯಕತೆಯಿಂದ ಬಿಡುಗಡೆ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ’ಎಂದು ಪ್ರತಿಪಾದಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿರುವ ಜನಪರ ಕಾಳಜಿಯ ಅಧಿಕಾರಿ.
ತೆಲಂಗಾಣ ರಾಜ್ಯದಲ್ಲಿ ಸ್ವರೋಸ್ ಕೇಂದ್ರಗಳನ್ನು ತೆರೆದು ಅಲ್ಲಿನ ದಲಿತ, ಹಿಂದುಳಿದ ವರ್ಗಗಳ ಶೈಕ್ಷಣಿಕ ಸಾಧನೆಗೆ ನೀರೆರೆಯುತ್ತಿದ್ದಾರೆ. ಐಪಿಎಸ್ ಅಧಿಕಾರಿ ಆಗಿದ್ದ ಅವರು, ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳ ಸಂಸ್ಥೆಗೆ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದಾರೆ.
ನಕ್ಸಲ್‌ಪೀಡಿತ ಪ್ರದೇಶದಲ್ಲಿದ್ದ ವಸತಿ ಶಾಲೆಗಳು ಈ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ ತಾಣಗಳಾಗಿದ್ದವು. ಪ್ರಭುತ್ವದ ಸಹಕಾರದೊಂದಿಗೆ ಈ ವಸತಿ ಶಾಲೆಗಳಿಗೆ ಮರುಜನ್ಮ ನೀಡುವ ಪಣತೊಟ್ಟು ಹತ್ತೇ ವರ್ಷಗಳಲ್ಲಿ ಇಡೀ ವ್ಯವಸ್ಥೆ ಬದಲಿಸಿ ಹೊಸ ಮುನ್ನುಡಿ ಬರೆದಿದ್ದಾರೆ. ಅವರು ಸ್ಥಾಪಿಸಿರುವ ಸ್ವರೋಸ್ ಕೇಂದ್ರಗಳು ಮಾದರಿ ಎಂದೆನಿಸಿಕೊಂಡಿವೆ. ಇದಕ್ಕೆ ಅಲ್ಲಿನ ಸರ್ಕಾರದ ಬೆಂಬಲವೂ ಇದೆ.
ತೆಲಂಗಾಣದ ಸ್ವರೋಸ್ ಕೇಂದ್ರಗಳು ಕೊರೊನಾ ಸಂದರ್ಭದಂತೂ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿವೆ. ಈ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯಗಳ ಅಧ್ಯಯನ ಕೇಂದ್ರ ತನ್ನ ಸಹಯೋಗದಲ್ಲಿ ಸ್ವರೋಸ್ ಕಲಿಕಾ ಕೇಂದ್ರಗಳನ್ನು ರಾಜ್ಯದ ಆಯ್ದ ಭಾಗಗಳಲ್ಲಿ ತೆರೆದು ಕೊರೊನಾದಿಂದ ತತ್ತರಿಸಿರುವ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವು ನೀಡುತ್ತಿದೆ ಎನ್ನುತ್ತಾರೆ ಇದರ ಹೊಣೆ ಹೊತ್ತಿರುವ ರಾಷ್ಟ್ರೀಯ ಕಾನೂನು ಶಾಲೆಯ ಡಾ.ಪ್ರದೀಪ್ ರಮಾವತ್, ಡಾ.ಆರ್.ವಿ ಚಂದ್ರಶೇಖರ್.
’ಈ ಕಲಿಕಾ ಕೇಂದ್ರದ ಸ್ವಯಂಸೇವಕ ಶಿಕ್ಷಕ, ಶಿಕ್ಷಕಿಯರಿಗೆ ಸಂಬಳ, ಭತ್ಯೆ ಇರುವುದಿಲ್ಲ. ಸೇವೆಯೇ ಮುಖ್ಯ ಧ್ಯೇಯ. ಆದರೆ, ಕಲಿಕೆಗೆ ಬೇಕಾದ ಬೋಧನಾ ಉಪಕರಣ, ವಿದ್ಯಾರ್ಥಿಗಳಿಗೆ ಊಟ ಒದಗಿಸಲಾಗುತ್ತಿದೆ’ ಎನ್ನುತ್ತಾರೆ ಸ್ವರೋಸ್ ರಾಜ್ಯ ಮಟ್ಟದ ಸಮಿತಿ ಸದಸ್ಯರಾದ ದೇವರಾಜ್, ಓಬಳೇಶ್ ಹಾಗೂ ಷರಿಷ್ ಬಿಳಿಯಾಳಿ.
ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಜಿ ಲಕ್ಷ್ಮಿಪತಿ, ಪಶು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ನಾರಾಯಣಸ್ವಾಮಿ, ಹೊಸಪೇಟೆಯ ಡಾ.ಭಾಗ್ಯಲಕ್ಷ್ಮಿ ಮೊದಲಾದವರು ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.