ADVERTISEMENT

ಇದು ಬನಸಿರಿಯ ಮಡಿಲ ಶಾಲೆ

ಶಾಲಾ ಆವರಣದಲ್ಲಿ ವೈವಿಧ್ಯಮಯ ಸಸ್ಯ ಸಂಪತ್ತು l ಜಿಲ್ಲಾ ಮಟ್ಟದ ‘ಪರಿಸರ ಮಿತ್ರ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:45 IST
Last Updated 4 ಡಿಸೆಂಬರ್ 2019, 19:45 IST
ಬನಶಂಕರಿ ಶಾಲೆಯ ಮುಂದಿನ ಆವರಣದ ನೋಟ
ಬನಶಂಕರಿ ಶಾಲೆಯ ಮುಂದಿನ ಆವರಣದ ನೋಟ   

ಬಾದಾಮಿ: ಬನಶಂಕರಿ ದೇವಾಲಯದ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದೊಳಗೆ ಪ್ರವೇಶಿಸಿದರೆ ಕಟ್ಟಡ ಕಾಣುವುದಿಲ್ಲ; ಬದಲಿಗೆ ವೈವಿಧ್ಯಮಯ ಸಸ್ಯಸಂಪತ್ತು ಕಣ್ಮನ ಸೆಳೆಯುತ್ತದೆ.

ಶಾಲೆಯ ಮುಂದೆ ವೃತ್ತಾಕಾರದ ಬಳ್ಳಿಯೊಂದಿಗೆ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ’ ಎಂಬ ಫಲಕ ಕಾಣಸಿಗುತ್ತದೆ. ಪಕ್ಕದಲ್ಲಿ ಕೆಟ್ಟದನ್ನು ಕೇಳಬಾರದು, ನೋಡಬಾರದು, ಹೇಳಬಾರದು ಎಂದು ಸಂದೇಶ ಸಾರುವ ಮೂರು ಮಂಗಗಳ ಮೂರ್ತಿ ಶಿಲ್ಪ ಸ್ವಾಗತಿಸುತ್ತದೆ.

ಇಲ್ಲಿ ಎಲೆಬಳ್ಳಿ, ತೆಂಗು, ಬಾಳೆ ಬೆಳೆಯಲಾಗುತ್ತಿದೆ. ಈ ತೋಟಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯಲು ಬೇರೆ ಬೇರೆ ಗ್ರಾಮಗಳಿಂದ ಬಂದವರು ಇಲ್ಲಿಯೇ ಗುಡಿಸಲಿನಲ್ಲಿ ವಾಸವಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳು ಶಾಲೆಯಿಂದ ವಂಚಿತರಾಗಬಾರದು ಎಂದು ಸರ್ಕಾರ 1998ರಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯಡಿ ಶಾಲೆ ತೆರೆದು ಮಕ್ಕಳಿಗೆ ಅನುಕೂಲ ಕಲ್ಪಿಸಿದೆ. ಆರಂಭದಲ್ಲಿ 10 ಮಕ್ಕಳು ಇದ್ದರು. ಈಗ ಒಂದರಿಂದ ಆರನೇ ತರಗತಿವರೆಗೆ 58 ಮಕ್ಕಳು ಓದುತ್ತಿದ್ದಾರೆ.

ADVERTISEMENT

ಶಿಕ್ಷಣ ಇಲಾಖೆ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದ ಪಾರ್ವತಿ ಚಳಗೇರಿ ಈ ಶಾಲೆಗೆ ಮುಖ್ಯ ಶಿಕ್ಷಕಿ. ಕಸದಿಂದ ತುಂಬಿದ್ದ ಶಾಲಾ ಬಯಲು ಜಾಗವನ್ನು ಶಿಕ್ಷಕರ ಸಹಕಾರ, ಚೊಳಚಗುಡ್ಡ ಗ್ರಾಮ ಪಂಚಾಯ್ತಿ ನೆರವಿನಿಂದ ಸ್ವಚ್ಛಗೊಳಿಸಿ ವೈವಿಧ್ಯಮಯ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಬಿಸಿಯೂಟಕ್ಕೆ ಬೇಕಾದ ತರಕಾರಿ ಕೂಡ ಬೆಳೆಯುತ್ತಾರೆ.

ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳಿಗೆ ನಲಿ-ಕಲಿ ಮೂಲಕ ಶಿಕ್ಷಣ, ನಾಲ್ಕು, ಐದು ಮತ್ತು ಆರನೇ ತರಗತಿಗಳಿಗೆ ಸ್ಮಾರ್ಟ್ ಬೋರ್ಡ್ ಮೂಲಕ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಪಾಠಗಳನ್ನು ಬೋಧನೆ ಮಾಡಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

‘ಮಕ್ಕಳು ಭವಿಷ್ಯದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಎಲ್ಲ ತರಬೇತಿ ಇಲ್ಲಿ ಕೊಡಲಾಗುತ್ತಿದೆ. ಪರಿಸರ ರಕ್ಷಣೆ ಪಾಠ, ತರಕಾರಿ, ಹಣ್ಣು, ಹೂವು ಬೆಳೆಯುವ ಬಗೆ ಮತ್ತು ಹನಿ ನೀರಾವರಿ ಪದ್ಧತಿ, ಸಾವಯವ, ಎರೆಹುಳು, ಜೈವಿಕ ಗೊಬ್ಬರದ ತಯಾರಿಕೆ, ಅಗರಬತ್ತಿ ತಯಾರಿಕೆ, ದಾಸವಾಳ ಜ್ಯೂಸ್ ತಯಾರಿಕೆ’ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಕೊಡಲಾಗುತ್ತಿದೆ. ಶಾಲೆಯ ಕಾಂಪೌಂಡ್ ಮೇಲೆ ಗಾದೆ ಮಾತುಗಳನ್ನು ಬರೆಸಲಾಗಿದೆ. ಭಾರತದ ನಕ್ಷೆಗೆ ಕಾರಂಜಿ ನೀರು ಚಿಮ್ಮುವಂತೆ ಮಾಡಿದ್ದಾರೆ. 2017-18ರಲ್ಲಿ ಈ ಶಾಲೆಯು ಜಿಲ್ಲಾ ಮಟ್ಟದಲ್ಲಿ ಈ ಶಾಲೆ ‘ ಪರಿಸರ ಮಿತ್ರ ‘ಪ್ರಶಸ್ತಿ ಪಡೆದಿದೆ. ಮುಖ್ಯ ಶಿಕ್ಷಕರು ಸೇರಿ ಒಟ್ಟು ಐವರು ಶಿಕ್ಷಕರು ಕೃಷಿ ಕೂಲಿ ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.

‘ನಾವು ಕುಷ್ಟಗಿ ತಾಲ್ಲೂಕಿನ ಮಡಿಕ್ಕೇರಿ ಗ್ರಾಮದಿಂದ ದುಡಿಯಾಕ ಇಲ್ಲಿ ಬನಶಂಕ್ರೀಗೆ ಬಂದೀವ್ರಿ. ಈ ಸಾಲ್ಯಾಗ ನಮ್ಮ ಮಕ್ಕಳು ಕನ್ನಡ,ಇಂಗ್ಲಿಷ್, ಗಣಿತ ಚೋಲೋ ಕಲಿಯಾಕ ಹತ್ಯಾರ್ರಿ. ಶಿಕ್ಷಕರು ಚೊಲೊ ಕಲಸ್ತಾರಿ ‘ ಎಂದು ಪಾಲಕ ಮಂಜುನಾಥ ಈಳಗೇರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.