ADVERTISEMENT

ಮಾರ್ಕೆಟಿಂಗ್‌ ಕಲಿಕೆಯ ತಂತ್ರ

ಪ್ರೊ.ಗಿರೀಶ ಯರಲಕಟ್ಟಿಮಠ
Published 25 ಫೆಬ್ರುವರಿ 2024, 23:40 IST
Last Updated 25 ಫೆಬ್ರುವರಿ 2024, 23:40 IST
   
ಮಾರ್ಕೆಟಿಂಗ್‌ ತಂತ್ರವನ್ನು ಕಲಿಯುವುದು ಮತ್ತು ಕಲಿಸುವುದು ಇಂದಿನ ತುರ್ತು. ಪ್ರಚಲಿತ ಮಾರುಕಟ್ಟೆಯನ್ನು ಉದಾಹರಿಸಿ, ಅಳವಡಿಸಿಕೊಳ್ಳ ಬೇಕಾದ ತಂತ್ರಗಳ ಬಗ್ಗೆ ತಿಳಿ ಹೇಳುವುದು ಮುಖ್ಯ.

ನಾಲ್ಕು ಗೋಡೆಗಳ ನಡುವೆ ಎಂಬಿಎ ಕಲಿಸುವುದು ಎಂದಿಗೂ ಉಚಿತವಲ್ಲ. ಕೇವಲ ಪಠ್ಯ ಪುಸ್ತಕದಲ್ಲಿ ಅಚ್ಚಾದ ವಿಷಯವನ್ನು ಬೋಧಿಸುತ್ತಾ ಹೋದರೆ ಎಂಬಿಎ ವಿದ್ಯಾರ್ಥಿಗಳನ್ನು ಕಾರ್ಪೊರೇಟ್‌ ಜಗತ್ತಿಗೆ ತಯಾರು ಮಾಡುವುದು ಕಷ್ಟ.

ಎಂಬಿಎ ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್ ಕಲಿಯುವುದು ಹಾಗೂ ಕಲಿಸುವುದು ಹೆಚ್ಚು ಕ್ರಿಯಾಶೀಲ. ಅನೇಕ ವಿಷಯಗಳಲ್ಲಿ ಮಾರ್ಕೆಟಿಂಗ್ ಶಿಕ್ಷಣವು ಇತರ ವ್ಯಾಪಾರ ವಿಭಾಗಗಳನ್ನು ಕಲಿಸುವುದಕ್ಕಿಂತ ವಿಭಿನ್ನವಾಗಿದೆ. ವ್ಯಾಪಾರೋದ್ಯಮದ ವ್ಯಾಪ್ತಿಯು ಹಣಕಾಸು, ಮಾನವ ಸಂಪನ್ಮೂಲಗಳು. ಲಾಜಿಸ್ಟಿಕ್ಸ್ ಮತ್ತು ವಿಶ್ಲೇಷಣೆ ಅಂತರ್‌ಶಿಸ್ತೀಯ ಕ್ಷೇತ್ರಗಳಿಗೆ ವ್ಯಾಪಿಸಿದೆ.

ಮಾರಾಟಗಾರರಿಗೆ ಮನೋವಿಜ್ಞಾನ, ತಂತ್ರ, ಸಂವಹನ, ಉತ್ಪನ್ನ ವಿನ್ಯಾಸ, ಸಿಬ್ಬಂದಿ ಪ್ರೇರಣೆ, ಸಂಖ್ಯೆಗಳು ಮತ್ತು ಬೆಲೆಗಳು, ವ್ಯಾಪಾರ ಕೌಶಲ ಕ್ಷೇತ್ರಗಳನ್ನು ತಿಳಿಸುವ ಅಗತ್ಯವಿದೆ. ಮಾರ್ಕೆಟಿಂಗ್‌ನ ವಿಶಾಲ ವ್ಯಾಪ್ತಿಯ ಜತೆಗೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರ. ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ದೃಷ್ಟಿಕೋನದಿಂದ ಇದನ್ನು ಕಲಿಸಬೇಕಿದೆ.

ADVERTISEMENT
  • ಪ್ರಾಯೋಗಿಕ ಮಾರುಕಟ್ಟೆಯನ್ನು ಆಧರಿಸಿರಲಿ: ಪ್ರತಿ ತರಗತಿಯನ್ನು ಪ್ರಾಯೋಗಿಕವಾಗಿ ಮಾಡುವುದು. ಕೇಸ್‌ಸ್ಟಡಿಯನ್ನು ಬಳಸಿಕೊಳ್ಳುವುದು. ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ನಿತ್ಯದ ಉದಾಹರಣೆಗಳನ್ನು ಬಳಸುವುದು, ಕಾಲ್ಪನಿಕ ಸನ್ನಿವೇಶಗಳು ಯೂಟ್ಯೂಬ್ ವಿಡಿಯೊಗಳು, ಮಾಧ್ಯಮದಲ್ಲಿ ಬಂದ ವರ್ತಮಾನ ವಿಷಯಗಳನ್ನು ಕಥನ ರೂಪದಲ್ಲಿ ಹೇಳುವುದರಿಂದ ಉಪನ್ಯಾಸಗಳು ಹೆಚ್ಚು ಆಸಕ್ತಿದಾಯಕವೆನಿಸುತ್ತವೆ.

  • ಫ್ಲಿಪ್ಡ್ ಬೋಧನೆಯ ಪ್ರಯೋಗ: ಪ್ರತಿ ವಿದ್ಯಾರ್ಥಿಯ ಕಲಿಕಾ ಶೈಲಿ ವಿಭಿನ್ನವಾಗಿರುತ್ತದೆ. ಫ್ಲಿಪ್ಡ್ ತರಗತಿಯ ಬೋಧನೆ ಎಂದರೆ, ಚಟುವಟಿಕೆಗಳ ಆಧಾರದ ಮೇಲೆ ತರಗತಿಗಳನ್ನು ಬೋಧಿಸುವುದು. ಅಂದರೆ, ಒಂದು ಸಿದ್ಧಾಂತವನ್ನು ಪ್ರಯೋಗಿಸುವುದು, ಚರ್ಚಿಸುವುದು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸುವುದು. ಇಲ್ಲಿ ವಿದ್ಯಾರ್ಥಿಗಳು ‘ಸಕ್ರಿಯ ಕಲಿಕೆಯ’ ಪಾತ್ರ ನಿರ್ವಹಿಸುತ್ತಾರೆ.

  • ಪವರ್‌ಪಾಯಿಂಟ್ ಪ್ರಸ್ತುತಿ: ತರಗತಿಗಳಲ್ಲಿ ವಿಷಯ ವಸ್ತುವಿನ ಬಗ್ಗೆ ಆಗಾಗ ‘ಪ್ರಸ್ತುತಿ’ ಮೂಲಕ ವಿಷಯಗಳನ್ನು ತಿಳಿಸಬೇಕು. ಈ ಸಮಗ್ರ ಪ್ರಸ್ತುತಿಯು ಜಾಹೀರಾತು ಉದ್ದೇಶ, ಪ್ರಭಾವ, ಪ್ರೇರಣೆ ತಂತ್ರಗಳು, ಗುಪ್ತ ಜಾಹೀರಾತುಗಳು, ಉತ್ಪನ್ನಗಳ ಯೋಜನೆ, ಸೆಲೆಬ್ರಿಟಿಗಳ ಅನುಮೋದನೆಗಳು, ಮಾರ್ಗಸೂಚಿಗಳ ಬಗ್ಗೆ ಇರಲಿ.

  • ಜಾಹೀರಾತು ಅಭಿಯಾನ: ತರಗತಿಯಲ್ಲಿ ತಯಾರು ಮಾಡಲು ಹೇಳಿ. ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ರಚಿಸಿ. ಪ್ರತಿ ತಂಡಕ್ಕೆ ತಮಗೆ ಕೊಟ್ಟಿದ್ದ ಉತ್ಪನ್ನದ ಅಥವಾ ಸರಕು ಅಥವಾ ಸೇವೆಗಳ ಬಗ್ಗೆ ಜಾಹೀರಾತನ್ನು ತಯಾರಿಸಲು 15 ನಿಮಿಷಗಳ ಕಾಲಾವಕಾಶ ಕೊಡಿ. ಜಾಹೀರಾತಿನ ಅವಧಿಯು ಒಂದು ನಿಮಿಷಕ್ಕಿಂತ ಹೆಚ್ಚಿರಬಾರದು.

  • ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಗಳ ಮಾಹಿತಿ: ವಿದ್ಯಾರ್ಥಿಗಳು ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಹೆಚ್ಚು ಪರಿಚಿತರಾಗಿದ್ದಾರೆ. ಸಾಮಾಜಿಕ ಮಾಧ್ಯಮ, ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು, ವಿಡಿಯೊ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿವೆ. ಆದರೆ ವಾಸ್ತವದಲ್ಲಿ ಅನೇಕ ವ್ಯವಹಾರಗಳಿಗೆ ‘ಡಿಜಿಟಲ್ ವ್ಯವಹಾರ ಮಾದರಿ’ ಮುಖ್ಯಪಾತ್ರವನ್ನು ವಹಿಸುತ್ತದೆ.

  • ಉದಾಹರಣೆಗೆ ಬಿ ಟು ಬಿ ಸಂಸ್ಥೆಗಳು, ಸಣ್ಣ ಚಿಲ್ಲರೆ ವ್ಯಾಪಾರಗಳು, ಲೆಕ್ಕಪತ್ರ ನಿರ್ವಹಣೆ ಸಂಸ್ಥೆಗಳು ಡಿಜಿಟಲ್ ವ್ಯವಹಾರ ಮಾದರಿ ಹೊಂದಿದ್ದರೆ ಒಟ್ಟಾರೆ ಅವರ ವ್ಯಾಪಾರ ಯಶಸ್ಸಿನಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಡಿಜಿಟಲ್ ಉಪಕರಣಗಳು, ತಂತ್ರಗಳ ಹಾಗೂ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಬೋಧಿಸುವಾಗ ಹೆಚ್ಚಿನ ಸಮತೋಲನಗಳನ್ನು ಸಾಧಿಸಬೇಕಾಗಿದೆ.

  • ನಿರ್ಧಾರ ತೆಗೆದುಕೊಳ್ಳುವ ಕೌಶಲ: ಮಾರುಕಟ್ಟೆ ಹಾಗೂ ಅದರ ನಿರ್ವಹಣೆಯ ಬಗ್ಗೆ ಚರ್ಚಿಸುವಾಗ, ಅಲ್ಲಿ ಚರ್ಚಿಸುವ ವಿಷಯಗಳು ತಪ್ಪಾಗಬಹುದು.ವಿದ್ಯಾರ್ಥಿಗಳು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಿರಬಹುದು. ಬೋಧಕರು, ಯಾವ ನಿರ್ಧಾರ ಏಕೆ ಸೂಕ್ತ ಎಂಬುದನ್ನು ಪ್ರಚಲಿತ ಮಾರುಕಟ್ಟೆಯನ್ನು ಉದಾಹರಿಸಿ ಹೇಳಬೇಕು. ಮಾರುಕಟ್ಟೆ ನಿರ್ವಹಣೆಗೆ ಸಂಬಂಧಿಸಿದ ನಿಯತಕಾಲಿಕೆ ಓದಲು ಹೇಳಿ. ‘ಮಿನಿಕೇಸ್ ಸ್ಟಡಿ’ ಸ್ಪರ್ಧೆಗಳನ್ನು ಹಮ್ಮಿಕೊಳ್ಳಿ.

  • ಸಂಶೋಧನಾಧಾರಿತ ಕಲಿಕೆಗೆ ಒತ್ತು ನೀಡಿ: ವಿದ್ಯಾರ್ಥಿಗಳಿಗೆ ತರಬೇತಿ ಕಡ್ಡಾಯವಾಗಿರಲಿ. ನೈಜ ಪ್ರಾಜೆಕ್ಟ್‌ಗಳನ್ನು ತಯಾರಿಸಲು ಹೇಳಿ. ತಮ್ಮ ಸಂಶೋಧನೆಗಳಲ್ಲಿ ಗುರಿ ಸಿದ್ಧಪಡಿಸಿಕೊಳ್ಳುವುದು, ಈವರೆಗೂ ಆದ ಸಂಶೋಧನೆಗಳ ಸಮಗ್ರ ಅಧ್ಯಯನ, ಗ್ಯಾಪ್ ಅನಾಲಿಸಿಸ್ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಕಲಿಯಬೇಕು.

ಚರ್ಚೆಗೆ ಅವಕಾಶ
ವ್ಯಾಪಾರದ ಉನ್ನತ ಮಟ್ಟದ ಗುರಿಗಳನ್ನು ಸಾಧಿಸಲು ಮಾರ್ಕೆಟಿಂಗ್ ಅಂಶಗಳು ಒಟ್ಟಾಗಿ ಕೆಲಸ ಮಾಡಬೇಕಾಗಿರುತ್ತದೆ. ಉದಾಹರಣೆಗೆ, ಸಾಮಾಜಿಕ ಮಾಧ್ಯಮದಲ್ಲಿ ಕ್ಲಿಕ್‌ಗಳು ಮತ್ತು ವೀಕ್ಷಣೆಗಳನ್ನು ಪಡೆಯುವುದು ಸಂತೋಷಕ್ಕಾದರೂ ಅದು ಗ್ರಾಹಕರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗುವಂತಿರಬೇಕು. ಮಾಲೀಕರಿಗೆ ಮಾರಾಟ ಹಾಗೂ ಹೆಚ್ಚಿನ ಲಾಭ ತಂದು ಕೊಡುವಂತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.