ಬಳ್ಳಾರಿ: 'ಖಾಸಗಿ ಶಾಲೆಗಳು ಬೋಧನಾ ಶುಲ್ಕದಲ್ಲಿ ಶೇ 30 ರಷ್ಟು ಇಳಿಸಬೇಕು ಎಂಬ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು' ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎನ್.ಮರಿಸ್ವಾಮಿ ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಬಸವರೆಡ್ಡಿ ಆಗ್ರಹಿಸಿದರು.
'ಕೋವಿಡ್ ಸಂಕಷ್ಟ ದಲ್ಲಿ ಸಿಲುಕಿರುವ ಶಾಲೆಗಳಲ್ಲಿ ಈ ವರ್ಷ ಶೇ 10 ವಿದ್ಯಾರ್ಥಿಗಳ ದಾಖಲಾತಿಯೂ ನಡೆದಿಲ್ಲ. ಹಿಂದಿನ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯ ಶುಲ್ಕವೂ ಸಂದಾಯವಾಗಿಲ್ಲ. ಶಿಕ್ಷಕರು, ಸಿಬ್ಬಂದಿಗೆ ವೇತನ ಪಾವತಿಸಲು ಆಗದ ಪರಿಸ್ಥಿತಿಯಲ್ಲಿ ಬೋಧನಾ ಶುಲ್ಕವನ್ನು ಕಡಿತಗೊಳಿಸಲು ಆಗುವುದಿಲ್ಲ' ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
'ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೆರವು ದೊರಕಿಸಲಾಗುವುದು ಎಂಬ ಶಿಕ್ಷಣ ಸಚಿವರ ಭರವಸೆಯೂ ಈಡೇರಿಲ್ಲ. ಸರ್ಕಾರ ಒಂದು ರುಪಾಯಿ ನೆರವು ನೀಡಲಿಲ್ಲ. ಮಾನ್ಯತೆ ನವೀಕರಣಕ್ಕೆ ಹೊಸ ಷರತ್ತುಗಳನ್ನು ವಿಧಿಸಬೇಕಾಗಿರಲಿಲ್ಲ' ಎಂದು ಹೇಳಿದರು.
'ಎಲ್ಲ ಪೋಷಕರೂ ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ದಾಖಲಾತಿ ಮಾಡಿಸಬೇಕು ಎಂದು ಪೋಷಕರಿಗೆ ಸರ್ಕಾರ ಸೂಚಿಸಬೇಕಾಗಿತ್ತು. ಹಾಗೆ ಮಾಡದೆ ಇದ್ದುದರಿಂದ ದಾಖಲಾತಿ ಸಮರ್ಪಕವಾಗಿ ನಡೆದಿಲ್ಲ. 1ರಿಂದ 5ನೇ ತರಗತಿಗಳನ್ನು ಕೂಡಲೇ ಆರಂಭಿಸಬೇಕು. ಕೋವಿಡ್ ಸಂಕಷ್ಟ ದಿಂದ ಹೊರಬರಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು' ಎಂದು ಹೇಳಿದರು.
'ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸಡಿಲಿಸಬೇಕು. 1995ರಿಂದ 2016ರವರೆಗಿನ ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮದ ಎಲ್ಲ ಶಾಲೆಗಳಿಗೆ ವೇತನಾನುದಾನ ನೀಡಬೇಕು' ಎಂದು ಆಗ್ರಹಿಸಿದರು.
ಒಕ್ಕೂಟದ ಪ್ರಮುಖರಾದ ರಂಜಾನ್‌ಸಾಬ್, ಚಕ್ರವರ್ತಿ, ಪರಮೇಶ್ವರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.