ADVERTISEMENT

ಪರೀಕ್ಷಾ ತಯಾರಿಗೆ ತಂತ್ರಜ್ಞಾನ ಸಮರ್ಥವಾಗಿ ಬಳಸಿಕೊಳ್ಳಿ! ಯುಪಿಎಸ್‌ಸಿ ಟಾಪರ್ ಕೆ.ಸೌರಭ್‌

ಮೈಸೂರಿನ ವಿಜಯನಗರದ ಕೆ.ಸೌರಭ್‌ ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಪರೀಕ್ಷೆಯಲ್ಲಿ 260ನೇ ರ‍್ಯಾಂಕ್‌ ಪಡೆದಿದ್ದಾರೆ.

​ಪ್ರಜಾವಾಣಿ ವಾರ್ತೆ
Published 22 ಜೂನ್ 2023, 2:48 IST
Last Updated 22 ಜೂನ್ 2023, 2:48 IST
ಪೋಷಕರಾದ ಡಾ.ಕೆಂಪರಾಜು–ಡಾ.ಎಂ.ಜಾನಕಿ ಅವರೊಂದಿಗೆ 260ನೇ ರ‍್ಯಾಂಕ್ ಪಡೆದ ಕೆ.ಸೌರಭ್‌
ಪೋಷಕರಾದ ಡಾ.ಕೆಂಪರಾಜು–ಡಾ.ಎಂ.ಜಾನಕಿ ಅವರೊಂದಿಗೆ 260ನೇ ರ‍್ಯಾಂಕ್ ಪಡೆದ ಕೆ.ಸೌರಭ್‌   

ಮೋಹನ್ ಕುಮಾರ ಸಿ.

ಪವರ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಟೆಕ್‌ ಪದವಿ ಪಡೆದಿರುವ ಮೈಸೂರಿನ ವಿಜಯನಗರದ ಕೆ.ಸೌರಭ್‌ ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಪರೀಕ್ಷೆಯಲ್ಲಿ  260ನೇ ರ‍್ಯಾಂಕ್‌ ಪಡೆದಿದ್ದಾರೆ. ಸದ್ಯ ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಭಾರತೀಯ ಅರಣ್ಯ ಸೇವೆ ತರಬೇತಿಯಲ್ಲಿರುವ ಅವರು, ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಮುಂದುವರಿಸಿ ವಿದೇಶಾಂಗ ಸೇವೆ ಸೇರುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. 

***

ADVERTISEMENT

ನಿಮ್ಮ ಸಾಧನೆಗೆ ಪುನೀತ್‌ ರಾಜ್‌ ಕುಮಾರ್ ಅವರ ಪೃಥ್ವಿ ಸಿನಿಮಾ ಪ್ರೇರಣೆಯಂತೆ?

ಪದವಿ ಓದುವಾಗ, ಪುನೀತ್‌ ಅವರ ಪೃಥ್ವಿ ಸಿನಿಮಾ ಆಕರ್ಷಿಸಿತ್ತು. ಈಗಲೂ ಸಿನಿಮಾವನ್ನು ನೆನೆದರೆ ರೋಮಾಂಚನವಾಗುತ್ತದೆ. ಜಿಲ್ಲಾಧಿಕಾರಿ ಪುನೀತ್‌ ಅವರು ಬಳ್ಳಾರಿ ಗಣಿಗಾರಿಕೆಯಿಂದ ಕಲುಷಿತಗೊಂಡ ನೀರನ್ನು ಸಚಿವರ ಎದುರು ನಿರ್ಭಯವಾಗಿ ‘ಈ ಬಾಟಲಿ ನೀರನ್ನು ಕುಡಿಯಿರಿ. ಜನರು ಇದೇ ನೀರನ್ನು ಕುಡಿಯುತ್ತಿದ್ದಾರೆ. ಕುಡಿದರೆ ನಿಮ್ಮ ಕಡತಕ್ಕೆ ಸಹಿ ಹಾಕುವೆ’ ಎನ್ನುತ್ತಾರೆ. ಅದೊಂದು ದೃಶ್ಯವು ನಾನೂ ನಾಗರಿಕ ಸೇವೆ ಸೇರಲು ಪ್ರೇರೇಪಿಸಿತು

ಪರೀಕ್ಷೆಗೆ ತಯಾರಿ ನಡೆಸಿದ್ದು ಹೇಗೆ? ಪದವಿಯಿಂದಲೇ ಓದಲು ಆರಂಭಿಸಿದ್ದೀರಾ?

ಮೈಸೂರಿನ ಸಿಎಫ್‌ಟಿಆರ್‌ಐ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ, ವಿಜಯನಗರದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ (ಎಸ್‌ವಿಇಐ) ಪಿಯು ಹಾಗೂ ಎಸ್‌ಜೆಸಿಇ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಮಾಡಿದೆ. ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಪವರ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೆ. ನಂತರ ಆಗಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದೆ. ಈ ವೇಳೆ 2017ರಲ್ಲಿ ಮರ್ಚೆಂಟ್‌ ನೇವಿ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ವರ್ಷಕ್ಕೆ ₹ 33 ಲಕ್ಷ ಸಂಬಳವಿತ್ತು. ಆದರೆ, ವಿದೇಶಾಂಗ ಸೇವೆ ಸೇರುವ ಆಸೆಯಿಂದ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಕೆಲಸಕ್ಕೆ ಹೋಗಲಿಲ್ಲ. ನಾನು ಕೆಲಸಕ್ಕೆ ಹೋಗದೆ, ದೆಹಲಿಗೆ ಹೋಗಿ ವಾಜಿರಾಮ್ ಅಂಡ್‌ ರವಿಯಲ್ಲಿ ಕೋಚಿಂಗ್‌ ಪಡೆದೆ. ನಂತರ ಮನೆಯಲ್ಲಿ ತಯಾರಿ ನಡೆಸಿದೆ.

ಎಷ್ಟನೇ ಪ್ರಯತ್ನಕ್ಕೆ ನೀವು ಪಾಸು ಮಾಡಿದಿರಿ?

2019ರಲ್ಲಿ ಮೊದಲ ಬಾರಿಯ ಪ್ರಿಲಿಮ್ಸ್‌ನಲ್ಲಿ 50 ಅಂಕವೂ ಬಂದಿರಲಿಲ್ಲ. ಅತಿ ಕೆಟ್ಟ ಅಂಕ ಪಡೆದಿದ್ದೆ. 2020ರಿಂದ ಯೋಜಿತವಾಗಿ ತಯಾರಿ ಆರಂಭಿಸಿದೆ.  2021ರಲ್ಲಿ ಭಾರತೀಯ ಅರಣ್ಯ ಸೇವೆ ಹಾಗೂ ನಾಗರಿಕ ಸೇವಾ ಪರೀಕ್ಷೆಗಳೆರಡಲ್ಲೂ ಉತ್ತೀರ್ಣನಾದೆ. ನಾಗರಿಕ ಸೇವಾ ಪರೀಕ್ಷೆಯಲ್ಲೂ 725ನೇ ರ‍್ಯಾಂಕ್ ಪಡೆದಿದ್ದ ನನಗೆ, ಭಾರತೀಯ ಅಂಚೆ ಸೇವೆ ಸಿಕ್ಕಿತ್ತು. ಆದರೆ, ಅರಣ್ಯ ಸೇವಾ ಪರೀಕ್ಷೆಯಲ್ಲಿ 45ನೇ ರ‍್ಯಾಂಕ್‌ ಪಡೆದಿದ್ದರಿಂದ, ಅದನ್ನೇ ಆಯ್ಕೆ ಮಾಡಿಕೊಂಡೆ. ನಾಲ್ಕನೇ ಪ್ರಯತ್ನಲ್ಲಿ ಇದೀಗ ವಿದೇಶಾಂಗ ಸೇವೆ ಸಿಗುವ ನಿರೀಕ್ಷೆಯಿದೆ.

ಪೋಷಕರ ಪ್ರೋತ್ಸಾಹ ಹೇಗಿತ್ತು?

ತಂದೆ, ಮೈಸೂರು ವಿಶ್ವವಿದ್ಯಾಲಯದ ಬಯೊಕೆಮಿಸ್ಟ್ರಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಕೆಂಪರಾಜು, ತಾಯಿ ಡಾ.ಎಂ.ಜಾನಕಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ. ಇಬ್ಬರ ಪ್ರೋತ್ಸಾಹ ದೊಡ್ಡದು. ‍2019ರ ಪರೀಕ್ಷೆಯಲ್ಲಿ ನಿರಾಶೆಯಾದಾಗ ಬೆನ್ನುತಟ್ಟಿದರು. ಆಗೆಲ್ಲ ಕೆಲವು ದಿನ 16 ಗಂಟೆ ಓದುತ್ತಿದ್ದೆ. ನಿರಂತರತೆ ಇರಲಿಲ್ಲ. ತಂದೆ ಅವರು ದೇಹಕ್ಕೆ ವ್ಯಾಯಾಮ ಸಿಗದಿದ್ದರೆ ಕಷ್ಟ ಎಂದು ನಿತ್ಯ ಸಂಜೆ ಪಾರ್ಕ್‌ಗೆ ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸುತ್ತಿದ್ದರು. ದಿನಕ್ಕೆ ತಲಾ 8 ಗಂಟೆ ನಿದ್ದೆ, ಓದು ಇತ್ತು. ಇನ್ನು 8 ಗಂಟೆ ವ್ಯಾಯಾಮ, ಸ್ನೇಹಿತರೊಂದಿಗೆ ಮಾತು ಇವುಗಳಿದ್ದವು.

ಪರೀಕ್ಷೆ ತಯಾರಿಗೆ ಕೋಚಿಂಗ್‌ ಸೆಂಟರ್‌ಗೆ ಸೇರಲೇ ಬೇಕೆ?

ಈಗಿನ ಸಂದರ್ಭದಲ್ಲಿ ಅಗತ್ಯವಿಲ್ಲ. ಆದರೆ, ಅಣಕು ಪರೀಕ್ಷೆ ಹಾಗೂ ಸಂದರ್ಶನಕ್ಕೆ ಮಾತ್ರ ಅಗತ್ಯವಷ್ಟೇ. ತಂತ್ರಜ್ಞಾನ ಇರುವುದರಿಂದ ಸುಲಭವಾಗಿ ಆಕರಗಳು ಸಿಗುತ್ತವೆ. ನಿತ್ಯ ದಿನಪತ್ರಿಕೆಗಳನ್ನು ಓದಿ ನೋಟ್ಸ್‌ ಮಾಡಿಕೊಳ್ಳುತ್ತಿದ್ದೆ. ಕೈಯಲ್ಲಿ ಬರೆಯುತ್ತ ಕೂರಲಿಲ್ಲ. ತಂತ್ರಜ್ಞಾನ ಸಹಾಯದ ಮೂಲಕ ವಾಯ್ಸ್‌ ಟು ಟೆಕ್ಟ್ಸ್‌ ಮೂಲಕ ಪ್ರಚಲಿತ ವಿದ್ಯಾಮಾನಗಳನ್ನು ಲ್ಯಾಪ್‌ಟಾಪ್‌ನಲ್ಲಿ ದಾಖಲಿಸುತ್ತಿದ್ದೆ. ವಿಷನ್‌ ಐಎಎಸ್‌ನ ತಿಂಗಳ ನೋಟ್ಸ್‌ ಅನ್ನು ಓದಿ ಟೈಪ್‌ ಮಾಡಿಕೊಳ್ಳುತ್ತಿದ್ದೆ. 300 ಪುಟವನ್ನು 10 ಪುಟಗಳ ಕಿರು ಟಿಪ್ಪಣಿ ಮಾಡಿ ಪುನರ್‌ ಓದು ನಡೆಸುತ್ತಿದ್ದೆ. ಅದು ಪರೀಕ್ಷೆಗೆ ಸಹಕರಿಸಿದೆ.

ಮುಖ್ಯ ಪರೀಕ್ಷೆಗೆ ತಯಾರಿ ಹೇಗೆ?

ಬರವಣಿಗೆ ವೇಗವಿದ್ದರಿಂದ ಕಷ್ಟವಾಗಲಿಲ್ಲ. ಮೂರು ಅಣಕು ಪರೀಕ್ಷೆಗಳನ್ನು ಮಾತ್ರ ತೆಗೆದುಕೊಂಡಿದ್ದಷ್ಟೇ. ಸಮಾಜಶಾಸ್ತ್ರ ನನ್ನ ಐಚ್ಚಿಕ ವಿಷಯ. ಅದನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ಇತ್ತು. ಎಲ್ಲರೂ ಹೆಚ್ಚು ಅಂಕ ಬರುತ್ತದೆಂದು ಇನ್ನೊಬ್ಬರ ಸಲಹೆ ಪರಿಗಣಿಸದೇ ಯಾವುದು ಇಷ್ಟ, ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಅದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯ. 

ಸಂದರ್ಶನವನ್ನು ಎದುರಿಸಿದ್ದು ಹೇಗೆ?

ಜ್ಞಾನ ಹಾಗೂ ಕೌಶಲಗಳನ್ನು ಈಗಾಗಲೇ ಪ್ರಿಲಿಮ್ಸ್‌ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಮಾಡಲಾಗಿದೆ. ಸಂದರ್ಶನ ವ್ಯಕ್ತಿತ್ವದ ಪರೀಕ್ಷೆಯಷ್ಟೇ. ನಾವು ಸತ್ಯವನ್ನೇ ಹೇಳಬೇಕು. ಸುಳ್ಳು ಹೇಳಿದರೆ ಸಂದರ್ಶಕರಿಗೆ ಗೊತ್ತಾಗುತ್ತದೆ. ವಿಷಯದ ಬಗ್ಗೆ ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆಂದೇ ಹೇಳಬೇಕು. ನನಗೆ 187 ಅಂಕ ಸಿಕ್ಕಿದ್ದವು. ಕಳೆದ ಬಾರಿ 149 ಸಿಕ್ಕಿತ್ತು. ಸಂದರ್ಶನದ ಅಂಕಗಳು ರ‍್ಯಾಂಕ್‌ನ ನಿರ್ಧಾರಕಗಳು. 

ತುಂಬಾ ವರ್ಷ ಓದಿಯೂ ತೇರ್ಗಡೆಯಾಗಿರುವುದಿಲ್ಲ. ಒತ್ತಡ ನಿವಾರಣೆ ಹೇಗೆ?

ನಾಗರಿಕ ಸೇವಾ ಪರೀಕ್ಷೆಯೇ ಎಲ್ಲವೂ ಅಲ್ಲ. ಜೀವನ ಹಾಗೂ ಸಾವಿನಂತೆ ಪರೀಕ್ಷೆಯನ್ನು ನೋಡಬಾರದು. ಪಾಸು ಮಾಡುವುದೇ ಅಂತಿಮವಲ್ಲ. ಎಲ್ಲ ಉದ್ಯೋಗಗಳಂತೆ ಸವಾಲುಗಳಿರುತ್ತವೆ. ಪರಿಶ್ರಮ ಹಾಗೂ ಅದೃಷ್ಟ ಎರಡೂ ಈ ಪರೀಕ್ಷೆ ಬೇಡುತ್ತದೆ. ನಿರಾಶೆಯಾದಾಗ ಬೇಸರ ಬೇಡ. ನಾಗರಿಕ ಸೇವೆಗೆ ತಯಾರಿ ನಡೆಸುತ್ತಲೇ, ಇತರ ಸರ್ಕಾರಿ ಕೆಲಸಗಳ ಪರೀಕ್ಷೆಯನ್ನು ಬರೆಯುವುದೂ ಒಳಿತು. 

  ಕೆ.ಸೌರಭ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.