ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಉರ್ದು ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಅದಕ್ಕಾಗಿ ಉರ್ದು ಮಾಧ್ಯಮ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ತಯಾರಿ ಮಾಡಿಕೊಳ್ಳುತ್ತಿದೆ.
ಉರ್ದು ಶಾಲೆಗಳಲ್ಲಿ 2013–14ನೇ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ, 2017–18ನೇ ಸಾಲಿನಲ್ಲಿ ಶೇ 46.41ರಷ್ಟು ದಾಖಲಾತಿ ಕುಸಿದಿದೆ. ಇದಕ್ಕೆ ಪೂರ್ವ ಪ್ರಾಥಮಿಕ ಕಲಿಕೆಯ ಅವಕಾಶ ಇಲ್ಲದಿರುವುದು ಸಹ ಒಂದು ಕಾರಣವೆಂದು ಗುರುತಿಸಲಾಗಿದೆ.
ಹಾಗಾಗಿ ‘ಉರ್ದು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಕಲಿಕೆ ಆರಂಭಿಸುವ ಒತ್ತಾಯ, ಅಗತ್ಯತೆ ಇದೆಯೇ?, ಹಾಗೇನಾದರೂ ಇದ್ದರೆ, ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರತಿ ಶಾಲಾ ವರದಿಗಳನ್ನು ಆದಷ್ಟು ಬೇಗ ಕಳುಹಿಸಿ’ ಎಂದು ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕರು ಎಲ್ಲ ಉಪನಿರ್ದೇಶಕರಿಗೆ ಸುತ್ತೋಲೆ ರವಾನಿಸಿದ್ದಾರೆ.
ಇಲಾಖೆಯ ಚಿಂತನೆ ಕಾರ್ಯಗತಗೊಂಡರೆ 3 ವರ್ಷ 6 ತಿಂಗಳಿನಿಂದಲೇ ಮಗು ಉರ್ದು ಅಕ್ಷರ ಜ್ಞಾನ ಗಳಿಸಲು ವಿದ್ಯಾಕೇಂದ್ರಗಳಲ್ಲಿ ಅವಕಾಶ ದೊರಕಲಿದೆ.
ಶಾಲಾ ವರದಿಯಲ್ಲಿ ಇರಬೇಕಾದ ಅಂಶಗಳು
* ಒಟ್ಟು ದಾಖಲಾತಿ, ಹಾಜರಾತಿ
* ಶಾಲೆಯಲ್ಲಿ ಮೂಲಸೌಕರ್ಯಗಳು ಇವೆಯೇ
* ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇದ್ದಾರೆಯೇ
‘ಸಂತಾನಾಭಿವೃದ್ಧಿ ಇಳಿಕೆಯಿಂದಾಗಿ ದಾಖಲಾತಿ ಕುಸಿತ’
‘ಕುಟುಂಬ ಯೋಜನೆಯ ಅರಿವು, ಜೀವನ ನಿರ್ವಹಣೆಗಾಗಿ ಹೆಚ್ಚುತ್ತಿರುವ ವೆಚ್ಚದಿಂದಾಗಿ ಮುಸ್ಲಿಂ ದಂಪತಿಗಳು 2–3 ಮಕ್ಕಳನ್ನು ಮಾತ್ರ ಹೊಂದುತ್ತಿದ್ದಾರೆ. ಇದರಿಂದಲೂ ಉರ್ದು ಶಾಲೆಗಳಲ್ಲಿ ದಾಖಲಾತಿ ಇಳಿಕೆಯಾಗುತ್ತಿದೆ’ ಎಂದು ಬಸವಕಲ್ಯಾಣ ತಾಲ್ಲೂಕಿನಲ್ಲಿನ ಉರ್ದು ಶಾಲೆಯೊಂದರ ಮುಖ್ಯ ಶಿಕ್ಷಕ ಮೊಹಮ್ಮದ್ ಖೈರುಲ್ ಮುಬಿನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸ್ವಾತಂತ್ರ್ಯದ ನಂತರ ಭಾಷಾವಾರು ಪ್ರಾಂತ್ಯಗಳ ಆಧರಿಸಿ ರಾಜ್ಯಗಳ ರಚನೆಯಾದ ಬಳಿಕ, ಉರ್ದು ಭಾಷೆ ಕಲಿಕೆಯೂ ಕಡಿಮೆಯಾಗುತ್ತಾ ಬಂತು. ಈಗ ಬಡ ಮುಸ್ಲಿಂಮರು ಹೆಣ್ಣು ಮಕ್ಕಳಿಗೆ ಅರಬ್ಬಿ ಭಾಷಾ ಶಿಕ್ಷಣ ಸಿಗದಿದ್ದಾಗ, ಕನಿಷ್ಠ ಪಕ್ಷ ಉರ್ದುವಾದರೂ ಕಲಿಯಲೆಂದು ದಾಖಲು ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಂದಲೇ ಬಹುತೇಕ ಉರ್ದುಶಾಲೆಗಳು ಉಳಿದಿವೆ’ ಎಂದು ಅವರು ತಿಳಿಸಿದರು.
ಅಂಕಿ–ಅಂಶ
* 2,111 ರಾಜ್ಯದಲ್ಲಿನ ಉರ್ದು ಕಿರಿಯ ಪ್ರಾಥಮಿಕ ಶಾಲೆಗಳು
* 2,415 ಉರ್ದು ಹಿರಿಯ ಪ್ರಾಥಮಿಕ ಶಾಲೆಗಳು
* 596 ಉರ್ದು ಪ್ರೌಢಶಾಲೆಗಳು
* ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಕಾರವನ್ನು ಪಡೆಯಲು ಮಾತುಕತೆ ನಡೆಯುತ್ತಿದೆ.
–ಎಂ.ಜೋಹರಾ ಜಬೀನಾ, ನಿರ್ದೇಶಕಿ,ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ
ದಾಖಲಾತಿ ಕುಸಿಯಲು ಕಾರಣ
* ಉರ್ದು ಓದಿದರೆ ಉದ್ಯೋಗ ಅವಕಾಶ ಕಡಿಮೆ ಎಂಬ ಮನಸ್ಥಿತಿ
* ಖಾಸಗಿ ಶಾಲೆಗಳ ಹೆಚ್ಚಳ
* ಪೋಷಕರ ಇಂಗ್ಲಿಷ್ ವ್ಯಾಮೋಹ
ಉರ್ದು ಪ್ರಾಥಮಿಕ ಶಾಲೆಗಳಲ್ಲಿನ ವಿದ್ಯಾರ್ಥಿಗಳು
ಶೈಕ್ಷಣಿಕ ವರ್ಷ;1ರಿಂದ 5ನೇ ತರಗತಿಯಲ್ಲಿನ ಮಕ್ಕಳು;1ನೇ ತರಗತಿಗೆ ದಾಖಲಾತಿ
2017–18;1.62 ಲಕ್ಷ;27,950
2016–17;1.72 ಲಕ್ಷ;33,905
2015–16;1.79 ಲಕ್ಷ;56,297
2014–15;1.87 ಲಕ್ಷ;58,291
2013–14;3.02 ಲಕ್ಷ;60,221
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.