ADVERTISEMENT

ತೆರೆದ ಪುಸ್ತಕ ಮೌಲ್ಯಾಂಕನವೆಂದರೆ...

valuation

ಪ್ರಜಾವಾಣಿ ವಿಶೇಷ
Published 23 ಜೂನ್ 2024, 22:42 IST
Last Updated 23 ಜೂನ್ 2024, 22:42 IST
   

‘ಪರೀಕ್ಷೆಗಳಲ್ಲಿ ಕಾಪಿ ಹೊಡೆಸುತ್ತಾರೆ, ತನ್ಮೂಲಕ ಹೆಚ್ಚಿನ ಫಲಿತಾಂಶ ತೋರಿಸುತ್ತಾರೆ,’ ಎಂಬ ಆಪಾದನೆಯನ್ನು ದೂರಮಾಡಲು ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ, ಪರೀಕ್ಷಾ ಪ್ರಕ್ರಿಯೆ ಮುಗಿಯುವವರೆಗೂ ರೆಕಾರ್ಡ್ ಮಾಡಿಕೊಂಡದ್ದೇ ಅಲ್ಲದೆ ಅದನ್ನು ವೆಬ್‌ಕ್ಯಾಸ್ಟಿಂಗ್ ಮಾಡಿದ್ದರ ಪರಿಣಾಮ ಪರೀಕ್ಷಾ ಫಲಿತಾಂಶದಲ್ಲಿ 10% ರಷ್ಟು ಕುಸಿತ ಕಂಡುಬಂದಿದೆ. ಗ್ರೇಸ್ ಮಾರ್ಕ್ಸ್ ನೀಡಿದ್ದರಿಂದ 20% ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ.  ಗ್ರೇಸ್ ಅಂಕಗಳಿಲ್ಲದಿದ್ದಲ್ಲಿ ಫಲಿತಾಂಶ ಇನ್ನೂ ಕಳಪೆಯಾಗಿರುತ್ತಿತ್ತು ಎಂದು ವರದಿಯಾಗಿದೆ.  ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿ.ಇ.ಒ.ಗಳು ಪ್ರತಿ ಪರೀಕ್ಷಾ ಕೇಂದ್ರದ ವೆಬ್‌ಕ್ಯಾಸ್ಟಿಂಗ್ ಪರಿಶೀಲಿಸಿದ್ದರು.  ಹೀಗಾಗಿ ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದ್ದು ಇದರಿಂದ ಒಟ್ಟಾರೆ ಫಲಿತಾಂಶದಲ್ಲಿ ಭಾರೀಪ್ರಮಾಣದ ಕುಸಿತ ಉಂಟಾಗಿದೆಯಂತೆ! 

ಇಂತಹ ಕಟ್ಟೆಚ್ಚರದ ಪರೀಕ್ಷೆಗಳು ನಿಜವಾಗಿಯೂ ಅಗತ್ಯವೇ?  ಇದರಿಂದ ಮಕ್ಕಳ ಮನಸ್ಸಿನಲ್ಲಿ ಭಯ, ಆತಂಕ, ಒತ್ತಡ ಉಂಟಾಗಿ ಕಲಿಯುವುದಕ್ಕಿಂತ ಉರುಹೊಡೆಯುವುದು, ಗಿಳಿಪಾಠ ಒಪ್ಪಿಸುವುದು, ಬರೆದದ್ದನ್ನೇ ಮತ್ತೆ ಮತ್ತೆ ಬರೆದು ತಲೆಚಿಟ್ಟುಹಿಡಿಸಿಕೊಂಡು ಕಲಿಕೆಯೆಂದರೇನೇ ರೇಜಿಗೆಗೆ ಒಳಗಾಗುವುದು ಸಹಜ.  ಇಂತಹ ವ್ಯತಿರಿಕ್ತ ಪರಿಣಾಮವನ್ನು ದೂರಮಾಡಿ, ಮಕ್ಕಳು ಸಂತೋಷದಿAದ ಕಲಿಯುವಂತೆ ಮಾಡುವ ‘ನಲಿ-ಕಲಿ’ ವಿಧಾನ ಜಾರಿಯಾಗಿ ಕಾಲುಶತಮಾನ ಕಳೆದರೂ ಅಂತಹ ವಿಶೇಷ ಉಪಯೋಗವೇನೂ ಆದಂತಿಲ್ಲ.  ಅದಕ್ಕಾಗಿ ಮತ್ತೊಂದು ಪ್ರಯೋಗ ‘ತೆರೆದ ಪುಸ್ತಕ ಮೌಲ್ಯಾಂಕನ’ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಯಾಗುತ್ತಿದೆ.  ಪರೀಕ್ಷೆಯ ಪ್ರಶ್ನೆಗಳನ್ನು ‘ಅತಿಮುಖ್ಯ (ಇಂಪಾರ್ಟೆಂಟ್)’ ಎಂದು ಮೊದಲೇ ಬರೆಸಿ, ಅದಕ್ಕೆ ಉತ್ತರಗಳನ್ನು ಉರುಹೊಡೆಸಿಕೊಂಡು, ಉತ್ತರ ಬರೆಸಿ, ಉತ್ತಮ ಫಲಿತಾಂಶ ನೀಡುತ್ತಿರುವ ಹಲವು ಖಾಸಗಿ ಶಾಲೆಗಳ ಶಿಕ್ಷಕರಿಗೆ ಇದು ‘ತೂಕಡಿಸುವವರಿಗೆ ಹಾಸಿಗೆ ಹಾಸಿಕೊಂಟ್ಟAತೆ,’ ಆಗುತ್ತದೆ!

ಇದೇ 2024-25ರ ಶೈಕ್ಷಣಿಕ ವರ್ಷದ ನವೆಂಬರ್-ಡಿಸೆAಬರ್‌ನಲ್ಲಿ ಸಿ.ಬಿ.ಎಸ್.ಸಿ.ಯು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ತೆರೆದ ಪುಸ್ತಕ ಪರೀಕ್ಷೆ (ಔಠಿeಟಿ ಃooಞ ಇxಚಿm  - ಔಃಇ)’ ನಡೆಸಲು ಪೈಲಟ್ ಪ್ರಾಜೆಕ್ಟ್ ಹಾಕಿಕೊಂಡಿದೆ.  9 ಮತ್ತು 10 ನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲೂ, 11 ಮತ್ತು 12 ನೇ ತರಗತಿಯ ಮಕ್ಕಳಿಗೆ ಗಣಿತ ಮತ್ತು ಜೀವಶಾಸ್ತç ವಿಷಯಗಳಲ್ಲೂ ಈ ಪುಸ್ತಕ ನೋಡಿ ಉತ್ತರ ಬರೆಯುವ ಪರೀಕ್ಷೆಗಳನ್ನು ಪ್ರಾಯೋಗಿಕವಾಗಿ ನಡೆಸಲಿದೆ.

ADVERTISEMENT

ಏನಿದು ತೆರೆದ ಪುಸ್ತಕ ಪರೀಕ್ಷೆ? (Open Book Exam - OBE)

ಪರೀಕ್ಷೆಯ ಪತ್ರಿಕೆಗಳಲ್ಲಿನ ಪ್ರಶ್ನೆಗಳಿಗೆ ಪುಸ್ತಕ ಮತ್ತು ಅಧ್ಯಯನ ಸಾಮಗ್ರಿ (ನೋಟ್ಸ್) ನೋಡಿಕೊಂಡು, ಅರ್ಥಮಾಡಿಕೊಂಡು, ಸ್ವಂತ ವಾಕ್ಯಗಳಲ್ಲಿ ಉತ್ತರ ಬರೆಯಲು ಕೊಡಮಾಡಲಾದ ಅವಕಾಶ ಇದಾಗಿದೆ. 

ಇದರಲ್ಲಿ ಎರಡು ವಿಧಗಳಿವೆ:

1. ನಿರ್ಬಂಧಿತ ತೆರೆದ ಪುಸ್ತಕ ಮೌಲ್ಯಮಾಪನ (Restricted open book assessment)
ಇದರಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಪ್ರಾಧಿಕಾರ ಅಂಗೀಕರಿಸಿದ ಪಠ್ಯಪುಸ್ತಕ ಅಥವಾ ಅಧ್ಯಯನ ಸಾಮಗ್ರಿ (ನೋಟ್ಸ್) ನೊಡಿಕೊಂಡು ಉತ್ತರ ಬರೆಯುವ ಅವಕಾಶವಿರುತ್ತದೆ. 

2. ಅನಿರ್ಬಂಧಿತ ತೆರೆದ ಪುಸ್ತಕ ಮೌಲ್ಯಮಾಪನ (Free type open book assessment) : 
ಇದರಲ್ಲಿ ವಿದ್ಯಾರ್ಥಿಗಳು ತಮಗೆ ಸೂಕ್ತಕಂಡ ಪುಸ್ತಕ ಅಥವಾ ಅಭ್ಯಾಸ ಟಿಪ್ಪಣಿಗಳನ್ನು ತಂದು, ನೋಡಿಕೊಂಡು, ಉತ್ತರಿಸಲು ಅವಕಾಶವಿರುತ್ತದೆ.


ಇದೇನೂ ಹೊಸತಲ್ಲ ಬಿಡಿ!


ಈ ತೆರೆದ ಪುಸ್ತಕ ಮೌಲ್ಯಾಂಕನ ಅಥವಾ ಪರೀಕ್ಷೆಯ ಚಿಂತನೆ ಭಾರತಕ್ಕೆ ಹೊಸತೇನೂ ಅಲ್ಲ.   2014ರಲ್ಲಿ ಸಿ.ಬಿ.ಎಸ್.ಸಿ.ಯು 9ನೇ ತರಗತಿಯ ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಮತ್ತು 11ನೇ ತರಗತಿಯ ಅರ್ಥಶಾಸ್ತç, ಜೀವಶಾಸ್ತç ಮತ್ತು ಭೂಗೋಳಶಾಸ್ತ್ರ ವಿಷಯಗಳಿಗಾಗಿ ‘ತೆರೆದ ಪಠ್ಯಪುಸ್ತಕ ಆಧಾರಿತ ಮೌಲ್ಯಾಂಕನ (ಔಠಿeಟಿ ಖಿexಣ ಃಚಿseಜ ಂssessmeಟಿಣ - ಔಃಖಿಂ)’ ಜಾರಿಗೊಳಿಸಿತ್ತು.  ಕಂಠಪಾಠ ಮಾಡುವುದು, ನೆನಪಿನಲ್ಲಿ ಇಟ್ಟುಕೊಂಡು ಬರೆಯುವುದು ಮಕ್ಕಳಿಗೆ ತೀವ್ರತರ ಒತ್ತಡ ಉಂಟುಮಾಡುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮತ್ತು ಕೌಶಲಗಳನ್ನು ಕಲಿಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಮೌಲ್ಯಾಂಕನವನ್ನು ಪರಿಚಯಿಸಲಾಗಿತ್ತು.  ಆದರೆ ಇದು ನಿರೀಕ್ಷಿತ ಫಲಿತಾಂಶವನ್ನು ನೀಡುವಲ್ಲಿ ಅಷ್ಟೇನೂ ಯಶಸ್ವಿ ಆಗಲಿಲ್ಲ ಮತ್ತು ಸೃಜನಾತ್ಮಕ ಚಿಂತನೆ ಮತ್ತು ಕಲಿಕೆಯನ್ನು ಉತ್ತೇಜಿಸುವಲ್ಲಿ ಅಸಫಲವಾಗಿತ್ತು ಎಂಬ ಫಲಿತಾಂಶದ ಆಧಾರದಲ್ಲಿ 2017-18ನೇ ಸಾಲಿನಿಂದ ಇದನ್ನು ಹಿಂಪಡೆಯಲಾಗಿತ್ತು.

2019 ರಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಮಂಡಳಿಯ ಶಿಫಾರಸ್ಸಿನ ಅನುಸಾರ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಂಟಟ Iಟಿಜiಚಿ ಅouಟಿಛಿiಟ ಜಿoಡಿ ಖಿeಛಿhಟಿiಛಿಚಿಟ ಇಜuಛಿಚಿಣioಟಿ - ಂIಅಖಿಇ) ತೆರೆದ ಪುಸ್ತಕ ಮೌಲ್ಯಾಂಕನವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು.  2021ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ತೆರೆದ ಪುಸ್ತಕ ಮೌಲ್ಯಾಂಕನ ಫಲಿತಾಂಶ ಗಮನಿಸಿದರೆ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾದರೂ ಕೌಶಲ್ಯಾಧಾರಿತ ಕಲಿಕೆಯಲ್ಲಿ ಹಿಂದುಳಿದರು.  2020 - 21ರ ಕೋವಿಡ್ ಸಾಂಕ್ರಾಮಿಕದ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ., ಜವಹರಲಾಲ್ ನೆಹರು ವಿ.ವಿ., ಅಲಿಗಢ್ ಮುಸ್ಲಿಂ ವಿ.ವಿ., ದೆಹಲಿ, ಇಂದೋರ್ ಮತ್ತು ಮುಂಬೈಗಳಲ್ಲಿನ ಐಐಟಿಗಳಲ್ಲಿ ಈ ತೆರೆದ ಪುಸ್ತಕ ಮೌಲ್ಯಾಂಕವನ್ನು ಜಾರಿಗೊಳಿಸಲಾಗಿತ್ತು.

ತೆರೆದ ಪುಸ್ತಕ ಮೌಲ್ಯಾಂಕನ ಅಗತ್ಯವೇ?

ಹೊಸ ರಾಷ್ಟಿçÃಯ ಶಿಕ್ಷಣ ನೀತಿ 2020ರ ಅನ್ವಯ ಕ್ರಿಯಾತ್ಮಕ ಮತ್ತು ಸೃಜನಶೀಲ ಕಲಿಕೆಯನ್ನು ಉತ್ತೇಜಿಸಲು, ಪರೀಕ್ಷಾ ಭಯ ಹೋಗಲಾಡಿಸಿ ಸಂತಸ ಕಲಿಕೆಯ ಮೂಲಕ ನಿರಂತರ ಮೌಲ್ಯಮಾಪನ ನಡೆಸಲು ಈ ತೆರೆದ ಪುಸ್ತಕ ಮೌಲ್ಯಾಂಕನವನ್ನು ಸಿ.ಬಿ.ಎಸ್.ಸಿ. ಜಾರಿಗೊಳಿಸಲಿದೆ.  ಕೇವಲ ಅಂಕಗಳಿಕೆಯನ್ನು ಗುರಿಯಾಗಿಟ್ಟುಕೊಂಡ,  ಗಿಳಿಪಾಠದಂತಹ ಕಲಿಕೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನಗಂಡು, ರಾಷ್ಟಿçÃಯ ಪಠ್ಯಕ್ರಮ ಚೌಕಟ್ಟಿನಲ್ಲಿ ಹೊಸತನ್ನು ಕಲಿಯುವ ಉತ್ಸಾಹವನ್ನು ಮಕ್ಕಳಲ್ಲಿ ಉತ್ತೇಜಿಸಲು ಈ ತೆರೆದ ಪುಸ್ತಕ ಮೌಲ್ಯಾಂಕನವನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಬೆಂಜಮಿನ್ ಬ್ಲೂಮ್ ರೂಪಿಸಿದ ‘ಬ್ಲೂಮ್ಸ್ ಟ್ಯಾಕ್ಸಾನಮಿ’ ಎಂಬ ಕಲಿಕಾ ವಿಶ್ಲೇಷಣಾ ವಿಂಗಡಣಾ ವಿಧಾನದ ಅನ್ವಯ ಮಕ್ಕಳಿಗೆ ಅರ್ಥವಾಗುವಂತೆ ಬೋಧಿಸುವುದರ ಜೊತೆಗೆ ಕಲಿಕಾಂಶಗಳನ್ನು ನಿಜಜೀವನದಲ್ಲಿ ಯಶಸ್ವಿಯಾಗಿ ಅಳವಡಿಸುವುದರ ಕುರಿತು ಅರಿವು ಮೂಡಿಸಬೇಕು ಮತ್ತು ಬೌದ್ಧಿಕ ವಿಕಾಸದ ಜೊತೆ ಕ್ರಿಯಾತ್ಮಕ ಅಭಿವ್ಯಕ್ತಿಗೂ ಅವಕಾಶ ನೀಡಬೇಕು.  ಇದರ ಸಾಕಾರ ತೆರೆದ ಪುಸ್ತಕ ಮೌಲ್ಯಾಂಕನದಿAದ ಸಾಧ್ಯ.  ಅದಕ್ಕಾಗಿ 1950ರ ದಶಕದಲ್ಲಿಯೇ ತಿಳಿಸಲಾಗಿದ್ದ ಈ ವಿಧಾನ ಈಗ ಜಾರಿಯಾಗುತ್ತಿದೆ! 

ತೆರೆದ ಪುಸ್ತಕ ಮೌಲ್ಯಾಂಕನದ ಲಾಭಗಳೇನು?

ಪಠ್ಯಪುಸ್ತಕದಲ್ಲಿ ಮುದ್ರಿಸಿರುವುದನ್ನು ಉರುಹಚ್ಚಿ, ಗಿಳಿಪಾಠ ಒಪ್ಪಿಸುವ ವಿಧಾನವನ್ನು ಬದಲಿಸಿ ಮೂಲಾಂಶಗಳನ್ನು ಅರ್ಥಮಾಡಿಕೊಳ್ಳಲು, ಕೌಶಲಗಳನ್ನು ವರ್ಧಿಸಿಕೊಳ್ಳಲು ಮತ್ತು ಸ್ವಯಂ ಕಲಿಕೆ ಉತ್ತೇಜಿಸಲು ಈ ವಿಧಾನ ಸಹಕಾರಿ.  ಪಠ್ಯಕ್ರಮದಲ್ಲಿರುವ ಅಂಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ, ಜೀವನ ಕೌಶಲಗಳ ಕಲಿಕೆಗೆ ಪಠ್ಯಪೂರಕ ಅಂಶಗಳು ಹೇಗೆ ಸಹಕಾರಿ, ತಾರ್ಕಿಕ ಆಲೋಚನೆ, ಸೃಜನಶೀಲ ಕಲಿಕೆ, ಬೌದ್ಧಿಕ ವಿಕಸನ ಹೇಗೆ ಸಾಧ್ಯವಾಗುವುದು ಎಂಬುದನ್ನು ವಿದ್ಯಾರ್ಥಿಗಳು ಸ್ವಂತವಾಗಿ ತಿಳಿದುಕೊಳ್ಳಲು ಅವಕಾಶವಿದೆ. 

ಟ್ಯೂಷನ್ ಹಾವಳಿ ತಪ್ಪಿಸಲು, ಪಠ್ಯಪುಸ್ತಕದಲ್ಲಿರುವುದನ್ನು ಮತ್ತೆ ಮತ್ತೆ ಉರುಹಚ್ಚುವುದರ ಬದಲು ಸ್ವತಂತ್ರವಾಗಿ ವಿಷಯ ಅರ್ಥಮಾಡಿಕೊಂಡು ಪರೀಕ್ಷೆಗಳನ್ನು ಯಾವುದೇ ಭಯವಿಲ್ಲದೆ ಎದುರಿಸಲು ಈ ತೆರೆದ ಪುಸ್ತಕ ಮೌಲ್ಯಾಂಕನ ಸಹಕಾರಿ.  ಇದು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಕಡಿಮೆ ಮಾಡಿ, ಆತ್ಮವಿಶ್ವಾಸದಿಂದ ತಲೆ ಎತ್ತಿ ನಿಲ್ಲಲು ಮತ್ತು ನಿರ್ವಹಣಾ ಕೌಶಲಗಳನ್ನು ಕಲಿತುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು 2021ರಲ್ಲಿ  ಭುವನೇಶ್ವರದಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ   ನಡೆಸಿದ ಅಧ್ಯಯನದ ವರದಿ ತಿಳಿಸಿದೆ.

2020ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯವು ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿರುವಂತೆ ತೆರೆದ ಪುಸ್ತಕ ಮೌಲ್ಯಾಂಕನಕ್ಕಾಗಿ ಆಯ್ದ ವಿದ್ಯಾರ್ಥಿಗಳಲ್ಲಿ 78.6% ರಷ್ಟು ಮಂದಿ ತೇರ್ಗಡೆಯಾದರೆ 21.4% ರಷ್ಟು ಮಂದಿ ಫೇಲ್ ಆದರು.  55% ರಷ್ಟು ವಿದ್ಯಾರ್ಥಿಗಳ ಅಭಿಪ್ರಾಯದಲ್ಲಿ ಇದು ಆತಂಕವನ್ನು ಕಡಿಮೆ ಮಾಡುವುದು ಹಾಗೂ ಒತ್ತಡ ಇಲ್ಲದೆ ಸಂತೋಷವಾಗಿ ಕಲಿಯಲು ಪ್ರೇರೇಪಿಸುವಂಥ ವಿಧಾನವಾಗಿದೆ.  

ಸಂಪನ್ಮೂಲ ಸಾಮಗ್ರಿ ಅಂದರೆ ಪಠ್ಯಪುಸ್ತಕ ಅಥವಾ ಪಠ್ಯಪೂರಕ ಅಧ್ಯಯನ ಸಾಮಗ್ರಿಯ (ನೋಟ್ಸ್) ಸಮರ್ಪಕ ಬಳಕೆ ಮತ್ತು ನಿರ್ವಹಣಾ ಕೌಶಲ ಕಲಿಯಲು ಈ ತೆರೆದ ಪುಸ್ತಕ ಮೌಲ್ಯಾಂಕನ ಸಹಕಾರಿಯಾಗಿದೆ.  ಪಠ್ಯಪುಸ್ತಕದ ಯಾವ ಭಾಗದಲ್ಲಿ ಉತ್ತರ ಲಭ್ಯವಿದೆ ಮತ್ತು ಅದನ್ನು ಬಳಸಿಕೊಂಡು ಸ್ವಂತ ವಾಕ್ಯಗಳಲ್ಲಿ ಹೇಗೆ ಉತ್ತರಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ಬೇಗನೇ ಅರ್ಥಮಾಡಿಕೊಂಡು ಉತ್ತರಿಸುತ್ತಾರೆ.  ಪರೀಕ್ಷಾ ಭಯ ಮತ್ತು ಪರೀಕ್ಷೆಯ ಒತ್ತಡ ನಿವಾರಣೆಗೆ ಇದು ಸಿದ್ಧಸೂತ್ರ.  


ತೆರೆದ ಪುಸ್ತಕ ಪರೀಕ್ಷೆಯ ಸವಾಲುಗಳೇನು?


ಭಾರತೀಯ ಶಿಕ್ಷಕರಿಗೆ ಇದು ಬಹುದೊಡ್ಡ ಸವಾಲು.  ಪಠ್ಯಪುಸ್ತಕದಲ್ಲಿರುವ  ಪರಿಕಲ್ಪನೆಗಳು ಮತ್ತು ಮೂಲಾಂಶಗಳು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸುವುದರ ಜೊತೆಗೆ ಪ್ರಯೋಗಗಳನ್ನು ಒಳಗೊಂಡAತೆ ವಿಶೇಷವಾದ ಮೌಲ್ಯಾಂಕನ ವಿಧಾನ ರೂಪಿಸುವುದು ಹಳೆಯ ಪದ್ಧತಿಗೆ ಒಗ್ಗಿಕೊಂಡ ಶಿಕ್ಷಕರಿಗೆ ಕಷ್ಟವಾದ ಕೆಲಸ.  ಸುಮ್ಮನೇ ಮನಬಂದAತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಯತ್ನಿಸುವಂತಿಲ್ಲ.  ಪ್ರಶ್ನೆಗಳಿಗೆ ಪಠ್ಯಪುಸ್ತಕದಲ್ಲಿ ಮುದ್ರಿತವಾಗಿರುವ ವಾಕ್ಯಗಳನ್ನು ಯಾಥಾ ನಕಲು ಮಾಡುವಂತಿಲ್ಲ!
ವಿದ್ಯಾರ್ಥಿಗಳು ಹೊಸತನ್ನು ಕಲಿಯುವಂತೆ ಪ್ರೇರೇಪಣೆ ನೀಡುವಲ್ಲಿ ಈ ವಿಧಾನ ಸಫಲವಾಗುವುದಿಲ್ಲ.  ಹೇಗೂ ಪಠ್ಯಪುಸ್ತಕ  ಇಲ್ಲವೇ ಅಧ್ಯಯನ ಸಾಮಗ್ರಿಯನ್ನು ನೋಡಿಕೊಂಡು ಉತ್ತರಿಸಲು ಅವಕಾಶವಿರುವುದರಿಂದ ಪಠ್ಯವಿಷಯವನ್ನು ಓದಿ, ಅರ್ಥಮಾಡಿಕೊಂಡು, ಜ್ಞಾಪಕದಲ್ಲಿ ಇಟ್ಟುಕೊಂಡು, ಉತ್ತರಿಸುವ ಅಂತಃಪ್ರೇರಣೆಯು ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಇಲ್ಲವಾಗುತ್ತದೆ.
ಯಾವ ಪ್ರಶ್ನೆಗೆ ಎಲ್ಲಿ ಉತ್ತರ ಇದೆ ಎಂದು ಪಠ್ಯಪುಸ್ತಕವನ್ನು ತಡಕಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅರೆಬರೆ ಉತ್ತರಗಳನ್ನು ನೀಡುವ ಮತ್ತು ನಿಗದಿತ ಸಮಯದೊಳಗೆ ಸೂಕ್ತ ಉತ್ತರ ಹುಡುಕಲು ಸೋಲುವ ಸಾಧ್ಯತೆಗಳಿರುವುದರಿಂದ ಸಮಯ ನಿರ್ವಹಣೆ ಸವಾಲು ಎದುರಾಗುತ್ತದೆ. 
ಈ ವಿಧಾನದಲ್ಲಿ ವಿದ್ಯಾರ್ಥಿಗಳಲ್ಲಿ ಅಸಮಾನತೆ ಹೆಚ್ಚುವ ಸಾದ್ಯತೆಗಳಿವೆ.  ಪಠ್ಯಪುಸ್ತಕ ಅಥವಾ ಅತ್ಯುತ್ತಮ ಅಧ್ಯಯನ ಸಾಮಗ್ರಿ ಎಲ್ಲರಿಗೂ ಲಭ್ಯವಾಗದಿರುವ ಸಾಧ್ಯತೆಗಳು ಮತ್ತು ಹಣಕೊಟ್ಟು ಉತ್ತಮ ಸಾಮಗ್ರಿ ಕೊಂಡುಕೊಳ್ಳುವ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗಿಂತ ಹೆಚ್ಚು ಅಂಕಗಳಿಸುವ ಸಾಧ್ಯತೆಗಳು ಇರುವುದರಿಂದ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.  ವಿದ್ಯಾರ್ಥಿಗಳು ಪುಸ್ತಕಗಳಿಂದ ಇಲ್ಲವೇ ಅನಧೀಕೃತ ಪಠ್ಯಪೂರಕ ಸಾಮಗ್ರಿಯಿಂದ ವಾಕ್ಯಗಳನ್ನು ಯಥಾವತ್ತಾಗಿ ಬಳಸುವುದರಿಂದ ಕೃತಿಚೌರ್ಯದ ಸಾಧ್ಯತೆ ಹೆಚ್ಚಿದೆ.
ಇದರಿಂದಾಗಿ ಸಾಗಾಣಿಕೆಯ ಸಮಸ್ಯೆ ಕೂಡಾ ಉಂಟಾಗಬಹುದು. ತೆರೆದ ಪುಸ್ತಕ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಪಠ್ಯಪುಸ್ತಕದೊಂದಿಗೆ ಹೆಚ್ಚಿನ ಅಧ್ಯಯನ ಸಾಮಗ್ರಿಯನ್ನು ಪರೀಕ್ಷಾ ಕೇಂದ್ರಕ್ಕೆ ತರುವ ಅವಶ್ಯಕತೆ ಹೆಚ್ಚಾಗಲಿದ್ದು ಅವುಗಳನ್ನು ಸಾಗಿಸುವುದು ತಲೆನೋವಿನ ಸಂಗತಿಯಾಗಬಹುದು.


ಸಮಸ್ಯೆಗಳಿಗೆ ಪರಿಹಾರ ಏನು?


ಪ್ರೊ. ಯಶ್‌ಪಾಲ್ ಸಮಿತಿಯ ವರದಿಯಲ್ಲಿ ಸೂಚಿಸಲಾಗಿರುವ ಒತ್ತಡ ರಹಿತ ಕಲಿಕೆ ಅಥವಾ ಸಂತಸ ಕಲಿಕೆಯನ್ನು ಪ್ರೋತ್ಸಾಹಿಸಲು ತೆರೆದ ಪುಸ್ತಕ ಮೌಲ್ಯಾಂಕನವನ್ನು ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.  ಪಾಶ್ಚಾತ್ಯ ದೇಶಗಳಲ್ಲಿನ ಕಲಿಕಾ ಮಟ್ಟವನ್ನು ಭಾರತೀಯ ವಿದ್ಯಾರ್ಥಿಗಳೂ ಮುಟ್ಟಬೇಕು ಎಂಬ ಹುಮ್ಮಸ್ಸಿನಲ್ಲಿ ವಿವಿಧ ರೀತಿಯ ಕಠಿಣತಮ ಪರೀಕ್ಷೆಗಳನ್ನು ನಡೆಸುವುದನ್ನು ನಿಲ್ಲಿಸಿ ಕಲಿಕೆಯತ್ತ ಮುಖಮಾಡಲು ಇದರಿಂದ ಅನುಕೂಲವಾಗುತ್ತದೆ.
ಕಲಿಕೆಯಲ್ಲಿ ವಿಮರ್ಶಾತ್ಮಕ ವಿಧಾನವನ್ನು ಅಳವಡಿಸುವುದು, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಕಲಿಕೆಯನ್ನು ಆಪ್ತವಾಗಿಸಬೇಕು ಮತ್ತು ಕೇವಲ ಪಠ್ಯಕ್ರಮವನ್ನು ಪೂರ್ತಿಗೊಳಿಸಿ ಪರೀಕ್ಷೆಗೆ ಸಿದ್ಧಗೊಳಿಸುವುದನ್ನು ಕೈಬಿಡಬೇಕು ಎಂಬುದು ಇದರ ಸಾರಾಂಶವಾಗಿದೆ.
ತೆರೆದ ಪುಸ್ತಕ ಮೌಲ್ಯಾಂಕನದ ಗರಿಷ್ಟ ಪ್ರಯೋಜನ ಪಡೆದುಕೊಳ್ಳಲು ಪಠ್ಯಕ್ರಮದಲ್ಲಿರುವ ಪರಿಕಲ್ಪನೆಗಳನ್ನ ಅರ್ಥಮಾಡಿಕೊಳ್ಳುವಂತೆ ಮತ್ತು ಸೂಕ್ತ ಸಮಯದಲ್ಲಿ ಅದನ್ನು ಹುಡುಕಿ ಸ್ವಂತ ವಾಕ್ಯಗಳಲ್ಲಿ ಉತ್ತರಿಸುವಂತೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಬೇಕು.  ಅಂಕಗಳಿಕೆಯ ಜೊತೆಗೆ ಸಂತಸ ಕಲಿಕೆಗೆ ಆದ್ಯತೆ ನೀಡಬೇಕು.
ಸಾಂಪ್ರದಾಯಿಕ ಚಾಕ್ ಅಂಡ್ ಟಾಕ್ ವಿಧಾನವನ್ನು ಬದಿಗಿರಿಸಿ, ಗಿಳಿಪಾಠದ ಗೀಳನ್ನು ತೊರೆದು, ಹೊಸ ರೀತಿಯಲ್ಲಿ ಪಠ್ಯಕ್ರಮದಲ್ಲಿನ ಪರಿಕಲ್ಪನೆಗಳನ್ನು ವಿವರಿಸಿ, ಅದಕ್ಕೆ ಸೂಕ್ತವಾದ ಪ್ರಶ್ನೆಗಳನ್ನು, ಪ್ರಯೋಗಗಳನ್ನು ರೂಪಿಸುವಂತೆ ಶಿಕ್ಷಕರನ್ನು ತರಬೇತುಗೊಳಿಸಬೇಕು.
ಬಹುಶಃ ತೆರೆದ ಪುಸ್ತಕ ಮೌಲ್ಯಾಂಕನ ಎಂದರೆ ‘ಕಾಪಿ ಹೊಡೆಯುವುದು’, ‘ನೋಡಿಕೊಂಡು ಬರೆದು ಪಾಸುಮಾಡುವುದು’, ಎಂಬ ಉಡಾಫೆಯನ್ನು ತೊರೆದು ಕಲಿಕೆಯ ಗುಣಮಟ್ಟವನ್ನು ಖಾತ್ರಿಮಾಡಿಕೊಳ್ಳಲು ಇರುವ ನೂತನ ವಿಧಾನ ಎಂದು ಪರಿಗಣಿಸಿ, ಪಾಠಗಳಿಗೆ ಜೀವ ತುಂಬುವ ‘ಶಿಕ್ಷಕರು’ ಭವಿಷ್ಯದ ಸಾಧಕರನ್ನು ಸೃಷ್ಟಿಸಬಲ್ಲರು, ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.