ADVERTISEMENT

ವಾಣಿವಿಲಾಸ ಆಸ್ಪತ್ರೆಯಲ್ಲಿ ಇದೀಗ ಹೈಟೆಕ್ ವಾರ್ಡ್!

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 19:45 IST
Last Updated 29 ಏಪ್ರಿಲ್ 2019, 19:45 IST
ವಾಣಿವಿಲಾಸ ಆಸ್ಪತ್ರೆ ಚಿತ್ರ: ಬಿ.ಎಚ್. ಶಿವಕುಮಾರ(ಮೇಲಿನ ಚಿತ್ರ). ಮಗುವಿಗಾಗಿ ಎನ್ಎಸ್‌ಟಿ ಮಷೀನ್
ವಾಣಿವಿಲಾಸ ಆಸ್ಪತ್ರೆ ಚಿತ್ರ: ಬಿ.ಎಚ್. ಶಿವಕುಮಾರ(ಮೇಲಿನ ಚಿತ್ರ). ಮಗುವಿಗಾಗಿ ಎನ್ಎಸ್‌ಟಿ ಮಷೀನ್   

ಸಂಪೂರ್ಣ ಹವಾನಿಯಂತ್ರಿತ ಕೊಠಡಿ, ರಿಮೋಟ್ ಕಂಟ್ರೋಲ್‌ನಲ್ಲಿರುವ ಹೈಟೆಕ್ ಬೆಡ್‌ಗಳು, ರೋಗಿಗಳ ಖಾಸಗಿತನ ಕಾಪಾಡಲು ಶುಭ್ರ ಬಿಳಿ ಬಣ್ಣದ ಕರ್ಟನ್‌ಗಳು, ಹುಟ್ಟಿದ ಮಗುವಿನ ಹೃದಯಬಡಿತ ಪರೀಕ್ಷಿಸುವ, ಬೆಚ್ಚಗಿಡುವ ಎನ್‌ಎಸ್‌ಟಿ ಮಷೀನ್ ವ್ಯವಸ್ಥೆ...

ಇದು ನಗರದ ವಾಣಿವಿಲಾಸ ಸರ್ಕಾರಿ ಅಸ್ಪತ್ರೆಯಲ್ಲಿರುವ ಕ್ಲೀನ್ ಲೇಬರ್ ವಾರ್ಡ್‌ನ ಚಿತ್ರಣ.

ವಾಣಿವಿಲಾಸ ಆಸ್ಪತ್ರೆ ಈಗ ಹೈಟೆಕ್ ಆಗಿದೆ. ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಆರೋಗ್ಯಕ್ಕೆ ಬೇಕಾದ ಸಕಲ ಸೌಕರ್ಯಗಳೂ ಇಲ್ಲಿವೆ. ಇವೆಲ್ಲವೂ ಉಚಿತ. ಹೆರಿಗೆ ಮತ್ತು ಮಕ್ಕಳ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಗರ್ಭಿಣಿ ಮತ್ತು ಮಕ್ಕಳಿಗಾಗಿ ಸರ್ಕಾರ ರೂಪಿಸಿರುವ ಎಲ್ಲಾ ಯೋಜನೆಗಳನ್ನೂ ಇಲ್ಲಿ ಪಾಲಿಸಲಾಗುತ್ತಿದೆ.

ADVERTISEMENT

ಇತ್ತೀಚೆಗಷ್ಟೆ ರೂಪುಗೊಂಡಿರುವ ಕ್ಲೀನ್ ಲೇಬರ್ ವಾರ್ಡ್‌ನಲ್ಲಿ ಹೈಟೆಕ್ ಆಗಿರುವ 10 ಹೊಸ ಮಂಚದ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಮಂಚದ ವೆಚ್ಚ ₹10ಲಕ್ಷದಿಂದ ₹ 12 ಲಕ್ಷ ವೆಚ್ಚ. ಗರ್ಭಿಣಿಯರಿಗೆ ಹೆರಿಗೆ ಸುಲಭವಾಗಲೆಂದು ರೂಪುಗೊಂಡಿರುವ ಈ ಮಂಚವನ್ನು ರಿಮೋಟ್ ಕಂಟ್ರೋಲ್ ಸಹಾಯದಿಂದ ಬೇಕಾದ ಕಡೆಗೆ ತಿರುಗಿಸಬಹುದು. ಹೆರಿಗೆ ಸಮಯದಲ್ಲಿ ಹಿಡಿದುಕೊಳ್ಳಲು ಹಿಡಿಕೆ ಮತ್ತಿತರ ಅನುಕೂಲಕರ ವಿನ್ಯಾಸ ಈ ಮಂಚಕ್ಕಿದೆ. ಹೆರಿಗೆಯ ನಂತರ ಹೊಲಿಗೆ ಹಾಕುವಾಗ ಬೆಳಕಿನ ವ್ಯವಸ್ಥೆಗೆ ಫೋಕಸ್ ಲೈಟ್ ಇದೆ.

ನಿತ್ಯವೂ 50 ಹೆರಿಗೆಗೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸಿಬ್ಬಂದಿ ಸ್ಟೆರಿಲೈಸ್ಡ್ ಮಾಡಿ ಸಿದ್ಧ ಮಾಡಿಟ್ಟುಕೊಡಿರುತ್ತಾರೆ. ಮಗು ಮತ್ತು ಗರ್ಭಿಣಿಗೆ ಸೋಂಕು ತಗುಲಬಾರದೆಂದು ಕ್ಲೀನ್ ವಾರ್ಡ್‌ನೊಳಗೆ ರೋಗಿಗಳನ್ನು ನೋಡಲು ಹೋಗುವವರು ಕಡ್ಡಾಯವಾಗಿ ತಲೆಗೆ ಕ್ಯಾಪ್, ಮುಖಕ್ಕೆ ಮಾಸ್ಕ್, ಕಾಲುಗಳಿಗೆ ಹವಾಯಿ ಚಪ್ಪಲಿ ಮತ್ತು ಪಾದ ಮುಚ್ಚುವಷ್ಟು ಶೂ ಕವರ್, ಪ್ಲಾಸ್ಟಿಕ್ ಏಪ್ರಾನ್ ಧರಿಸಿಯೇ ಹೋಗಬೇಕು. ಆದಷ್ಟು ಸಹಜ ಹೆರಿಗೆಗೆ ಒತ್ತು ನೀಡುವ ವೈದ್ಯರು ಅಗತ್ಯ ಸಂದರ್ಭದಲ್ಲಿ ಮಾತ್ರ ಸಿಸೇರಿಯನ್ ಮೊರೆ ಹೋಗುತ್ತಾರೆ. ಹೆರಿಗೆ ಸಮಯದಲ್ಲಿ ಮಗು ಯಾವ ದಿಕ್ಕಿನಲ್ಲಿದೆ ಎಂದು ತಿಳಿಯಲು ಬೇಕಾದ ಅಗತ್ಯ ಸ್ಕ್ಯಾನಿಂಗ್ ಸೌಕರ್ಯವೂ ಇಲ್ಲಿದೆ.

ರೋಗಿಗಳ ಮಹಾಪೂರ

ಬೆಂಗಳೂರು ಸುತ್ತಮುತ್ತಲಿನ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ), ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಮತ್ತು ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಷ್ಟೇ ಅಲ್ಲ, ಹೊರ ಊರು ಮತ್ತು ಹೊರ ರಾಜ್ಯಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ರೋಗಿಗಳ ಸಂಖ್ಯೆಯೇನೋ ಹೆಚ್ಚಿದೆ. ಆದರೆ, ಸಿಬ್ಬಂದಿ ಸಂಖ್ಯೆ ಮಾತ್ರ ಆಸ್ಪತ್ರೆ ಶುರುವಾದಾಗ ಎಷ್ಟಿತ್ತೋ ಅಷ್ಟೇ ಇದೆ ಎನ್ನುತ್ತಾರೆವಾಣಿವಿಲಾಸ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರವೀಂದ್ರನಾಥ ಎಂ. ಮೇಟಿ.

ಸಹಜವಾಗಿ ಹೆರಿಗೆ ಆಗುವವರಿಗೆ ಕ್ಲೀನ್ ಲೇಬರ್ ವಾರ್ಡ್‌, ರಿಸ್ಕ್ ಇರುವಂಥವರಿಗೆ ಹೈ–ರಿಸ್ಕ್ ವಾರ್ಡ್ ಮತ್ತು ಗರ್ಭಪಾತ, ಎಚ್‌ಐವಿ, ಜ್ವರ ಇತ್ಯಾದಿಯಿಂದ ಬಳಲುತ್ತಿರುವವರಿಗೆ ಸೆಪ್ಟಿಕ್ ವಾರ್ಡ್‌ ಎನ್ನುವ ಪ್ರತ್ಯೇಕ ಹೆರಿಗೆ ವಾರ್ಡ್‌ಗಳು ಇಲ್ಲಿವೆ. ಮಾರ್ಚ್ ತಿಂಗಳಲ್ಲಿ 1,048 ಸಹಜ ಹೆರಿಗೆಗಳು, 513 ಸಿಸೇರಿಯನ್ ಹೆರಿಗೆ ಆಗಿವೆ ಎನ್ನುತ್ತವೆ ಆಸ್ಪತ್ರೆಯ ಅಂಕಿ–ಅಂಶಗಳು.

ಸಂಗೀತ ಚಿಕಿತ್ಸೆ

ಗರ್ಭಿಣಿಯರಲ್ಲಿ ಉದ್ವೇಗ, ಆತಂಕ, ಭಯ ಸಾಮಾನ್ಯ. ಇದರ ನಿವಾರಣೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ವಾಣಿವಿಲಾಸದಲ್ಲಿ ಗರ್ಭಿಣಿಯರಿಗೆ ಸಂಗೀತ ಚಿಕಿತ್ಸೆ ಆರಂಭಿಸಲಾಗಿದೆ. 3 ತಿಂಗಳಿನಿಂದ 9 ತಿಂಗಳವರೆಗೆ ಸಂಗೀತ ಚಿಕಿತ್ಸೆ ಪಡೆಯಬಹುದು. ನಿಯಮಿತವಾಗಿ ಇಲ್ಲಿಗೆ ಬರಲಾಗದವರಿಗೆ ಪೆನ್‌ಡ್ರೈವ್‌ ಮೂಲಕ ಕಂಪ್ಯೂಟರ್ ಇಲ್ಲವೇ ಮೊಬೈಲ್ ಮೂಲಕ ಸಂಗೀತ ಚಿಕಿತ್ಸೆ ಪಡೆಯುವ ವಿಧಾನವನ್ನೂ ಇಲ್ಲಿನ ಸಿಬ್ಬಂದಿ ಹೇಳಿಕೊಡುತ್ತಾರೆ.

ಪೋಷಕರಿಗೆ ಕೌನ್ಸೆಲಿಂಗ್

536 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಎನ್‌ಐಸಿಯು, ಪಿಐಸಿಯು, ಅಪೌಷ್ಟಿಕ ಮಕ್ಕಳಿಗಾಗಿ ಪೌಷ್ಟಿಕ ಪುನರ್ವಸತಿ ಕೇಂದ್ರವೂ ಇದೆ. ಮಗು ಸರಿಯಾಗಿ ಮಾತು ಕಲಿಯದಿದ್ದರೆ, ಮಾನಸಿಕ –ದೈಹಿಕ ಬೆಳವಣಿಗೆಯಲ್ಲಿ ಕುಂದು ಇದ್ದರೆ ಅಂಥ ಮಕ್ಕಳಿಗಾಗಿಯೇ ಫಿಜಿಯೊಥೆರಪಿ, ಸ್ಪೀಚ್ ಥೆರಪಿ, ಪೋಷಕರ ಕೌನ್ಸಿಲ್‌ಗಾಗಿ ಡಿಸ್ಟ್ರಿಕ್ ಅರ್ಲಿ ಇಂಟರ್‌ವೆನ್ಷನ್ ಸೆಂಟರ್ ಇದೆ.

ಉಚಿತ ಚಿಕಿತ್ಸೆಗೆ ಬೇಕಾದ ದಾಖಲೆಗಳು

ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯಲು ಆಧಾರ್ ಕಾರ್ಡ್‌/ಆರೋಗ್ಯ ಕಾರ್ಡ್/ಆಯುಷ್ಮಾನ್ ಭಾರತ್ ಕಾರ್ಡ್‌, ರೇಷನ್ ಕಾರ್ಡ್‌ ಮೂಲಪ್ರತಿ ಮತ್ತು ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.

ಗರ್ಭಿಣಿಯರಿಗೆ ತಾಯಿ ಕಾರ್ಡ್ ಮೂಲಕ ಜನನಿ ಸುರಕ್ಷಾ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ. ತಾಯಿ ಕಾರ್ಡ್ ಇಲ್ಲದವರು ಗರ್ಭಿಣಿಯಾಗಿರುವ ಕುರಿತು ಸ್ಕ್ಯಾನಿಂಗ್ ವರದಿ ಸಲ್ಲಿಸಿದರೂ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎನ್ನುತ್ತಾರೆ ಆರ್‌ಎಂಒ ಡಾ.ರವೀಂದ್ರನಾಥ ಎಂ. ಮೇಟಿ.

ಶೀಘ್ರದಲ್ಲೇ ಎದೆಹಾಲಿನ ಬ್ಯಾಂಕ್ ಉದ್ಘಾಟನೆ

ನಗರದ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲೂ ಎದೆಹಾಲಿನ ಬ್ಯಾಂಕ್ ಕೇಂದ್ರ ತೆರೆಯಲು ವಾಣಿವಿಲಾಸ ಆಸ್ಪತ್ರೆ ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಎದೆಹಾಲಿನ ಬ್ಯಾಂಕ್ ಉದ್ಘಾಟನೆಯಾಗಲಿದೆ.

ವಾಣಿವಿಲಾಸ ಆಸ್ಪತ್ರೆಯ ಇತಿಹಾಸ

* 1930ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಆಸ್ಪತ್ರೆಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು

* ಶ್ರೀಕೃಷ್ಣರಾಜೇಂದ್ರ ಒಡೆಯರ್ 1935ರ ಮಾರ್ಚ್ 8ರಂದು ಆಸ್ಪತ್ರೆಯನ್ನು ಉದ್ಘಾಟಿಸಿದರು

* ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರನ್ನು ಅರಮನೆಯ ಪರಿಚಾರಕರು ವಾಣಿವಿಲಾಸ ಸನ್ನಿಧಾನ ಎಂದು ಸಂಬೋಧಿಸುತ್ತಿದ್ದರು. ಹಾಗಾಗಿ, ಅವರ ನೆನಪಿಗಾಗಿ ಆಸ್ಪತ್ರೆಗೆ ‘ವಾಣಿವಿಲಾಸ ಆಸ್ಪತ್ರೆ’ ಎಂದು ನಾಮಕರಣ ಮಾಡಲಾಯಿತು.

* ಮೈಸೂರು ಮಹಾರಾಜರು ಹಾಗೂ ದಾನಿಗಳ ನೆರವಿನಿಂದ ₹ 4ಲಕ್ಷ ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥ್ಯದಲ್ಲಿ ಆಸ್ಪತ್ರೆಯ ನಿರ್ಮಾಣ

* ಡಾ.ಎಂ.ಸಿ. ಆಲ್ಬುಕರ್ಕ್ ಆಸ್ಪತ್ರೆಯ ಮೊದಲ ವೈದ್ಯಕೀಯ ಅಧೀಕ್ಷಕಿಯಾಗಿ ಸೇವೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.