ADVERTISEMENT

ಬಾಹ್ಯಾಕಾಶ ಕ್ಷೇತ್ರ | ವಿವಿಧ ಕೋರ್ಸ್ – ವಿಪುಲ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 23:30 IST
Last Updated 27 ಆಗಸ್ಟ್ 2023, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುರುರಾಜ್ ಎಸ್‌. ದಾವಣಗೆರೆ

ಚಂದ್ರಯಾನ–3 ಯಶಸ್ವಿಯಾಗುತ್ತಿದ್ದಂತೆ ಅದಕ್ಕಾಗಿ ದುಡಿದ ವಿಜ್ಞಾನಿ ಮತ್ತು ತಂತ್ರಜ್ಞರು  ಒಬ್ಬೊಬ್ಬರಾಗಿ ಜನಪ್ರಿಯರಾಗುತ್ತಿದ್ದಾರೆ. ಇವರು ನಮ್ಮೂರಿನವರು, ನಮ್ಮ ಶಾಲೆಯಲ್ಲಿ ಕಲಿತವರು, ಕನ್ನಡ ಮಾಧ್ಯಮದಲ್ಲಿ ಓದಿದವರು.. ನಮ್ಮ ಸಹಪಾಠಿಯಾಗಿದ್ದವರು.. ಹೀಗೆ ಅಭಿಮಾನದ ಹೊಳೆ ಹರಿಯುತ್ತಿದೆ. ಇಸ್ರೊದ ಈ ಸಾಧನೆಯಿಂದ ಬಾಹ್ಯಾಕಾಶ ಕ್ಷೇತ್ರ ಮತ್ತೆ ಮುನ್ನೆಲೆಗೆ ಬಂದಿದೆ.

ಈಗ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಅನೇಕರು ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ. ಯಾವ ಡಿಪ್ಲೊಮಾ, ಪದವಿ ಓದಿದರೆ ನಾಸಾ, ಇಸ್ರೊಗಳಲ್ಲಿ ಕೆಲಸ ಸಿಗುತ್ತದೆ ಎಂದು ಲೆಕ್ಕ ಹಾಕುತ್ತಿದ್ದಾರೆ. ಇದರ ಜೊತೆಗೆ, ಯಾವ ಕಾಲೇಜುಗಳಲ್ಲಿ ಕೋರ್ಸ್‌ಗಳು ಲಭ್ಯವಿವೆ? ಶುಲ್ಕ ಎಷ್ಟು,  ಪ್ರವೇಶ ಪರೀಕ್ಷೆ ಇರುತ್ತದೆಯೇ? ಆನ್‌ಲೈನೋ/ ಆಫ್‌ಲೈನ್‌ ಕೋರ್ಸ್‌.. ಯಾವುದು ಸರಿ? ವೇತನವೆಷ್ಟಿರಬಹುದು ? ಹೀಗೆ ಹಲವು ಪ್ರಶ್ನೆಗಳೊಂದಿಗೆ ಚರ್ಚೆ ಶುರುವಾಗಿದೆ.

ಯಾರಿಗೆಲ್ಲ ಅವಕಾಶ?

ADVERTISEMENT

ಹೈಸ್ಕೂಲು ಶಿಕ್ಷಣ ಮುಗಿಸಿ ಪಿಯುಸಿಯಲ್ಲಿ ಗಣಿತ, ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ (ಪಿಸಿಎಂ) ವಿಷಯಗಳನ್ನು ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು, ಮುಂದೆ ಏರೋಸ್ಪೇಸ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಫಿಸಿಕ್ಸ್, ರೇಡಿಯೊ ಎಂಜಿನಿಯರಿಂಗ್, ಮೆಕಾನಿಕಲ್ ಕಂಪ್ಯೂಟರ್ ಸೈನ್ಸ್ , ಎಲೆಕ್ಟ್ರಾನಿಕ್ಸ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಬೇಕು. ಓದಿದ ಪದವಿಯಲ್ಲಿ ಶೇ 65ರಷ್ಟು ಅಂಕಗಳನ್ನು ಪಡೆದವರು ಇಸ್ರೊ ನಡೆಸುವ ಐಸಿಆರ್‌ಬಿ(ಇಸ್ರೊ ಸೆಂಟ್ರಲೈಸ್ಡ್ ರೆಕ್ರೂಟ್‌ಮೆಂಟ್‌ ಬೋರ್ಡ್) ಪರೀಕ್ಷೆ ಎದುರಿಸಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಇಸ್ರೊ ನಡೆಸುವ ಮತ್ತೊಂದು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಎದುರಿಸಿ ಯಶಸ್ವಿಯಾಗಬೇಕು. ಎಂಜಿನಿಯರಿಂಗ್ ಅಲ್ಲದೆ ಡಿಪ್ಲೊಮಾ,  ಜನರಲ್ ಫಿಸಿಕ್ಸ್,  ಜಿಯೊ ಫಿಸಿಕ್ಸ್,  ಜಿಯೊ ಇನ್ಫಾರ್ಮ್ಯಾಟಿಕ್ಸ್ , ಆಸ್ಟ್ರೊ ಫಿಸಿಕ್ಸ್ ಇನ್‌ಸ್ಟ್ರುಮೆಂಟೇಶನ್, ಅಪ್ಲೈಡ್ ಮ್ಯಾಥಮ್ಯಾಟಿಕ್ಸ್‌ಗಳಲ್ಲಿ ಪದವಿ , ಸ್ನಾತಕೋತ್ತರ ಪದವಿ ಇಲ್ಲವೇ ಪಿಎಚ್‌.ಡಿ  ಗಳಿಸಿದವರು ಇಸ್ರೊ ನಡೆಸುವ ಪರೀಕ್ಷೆಗೆ ಹಾಜರಾಗಬಹುದು. ಈ ಮೂರು ಹಂತಗಳನ್ನು ಯಶಸ್ವಿಯಾಗಿ ದಾಟುವವರಿಗೆ ಇಸ್ರೊ ಉದ್ಯೋಗ ನೀಡುತ್ತದೆ.

ಎಲ್ಲೆಲ್ಲಿ ಕೋರ್ಸ್‌ಗಳು ಲಭ್ಯ?

ಇಸ್ರೊ ಮತ್ತು ಇತರ ದೇಶಗಳ ಬಾಹ್ಯಾಕಾಶ ಸಂಶೋಧನೆ- ವಿಜ್ಞಾನ- ತಂತ್ರಜ್ಞಾನ ಸಂಸ್ಥೆಗಳಲ್ಲಿ ಕೆಲಸ ಮಾಡಲು ಬೇಕಾಗುವ ಶಿಕ್ಷಣವನ್ನು ಈ ಕೆಳಗಿನ ಸಂಸ್ಥೆಗಳು ಭಾರತ ಮತ್ತು ವಿದೇಶಗಳಲ್ಲಿ ನೀಡುತ್ತವೆ.

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ತಿರುವನಂತಪುರಂ, ಕೇರಳ

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ,ಬೆಂಗಳೂರು.

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೊ ಫಿಸಿಕ್ಸ್, ಬೆಂಗಳೂರು.

  • ನ್ಯಾಷನಲ್ ಸೆಂಟರ್ ಫಾರ್ ರೇಡಿಯೊ ಆಸ್ಟ್ರೊನಮಿ, ಪುಣೆ.

  • ಆರ್ಯಭಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸ್, ನೈನಿತಾಲ್.

  • ಸೆಂಟರ್ ಫಾರ್ ಅರ್ಥ ಅಂಡ್ ಸ್ಪೇಸ್ ಸೈನ್ಸ್ ಸ್ , ಹೈದ್ರಾಬಾದ್ 

  • ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು

  • ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಸ್ರಾ

  • ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಏರೋ ಸ್ಪೇಸ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಜೈನ್ ವಿಶ್ವವಿದ್ಯಾಲಯ, ಬೆಂಗಳೂರು.

  • ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಬೆಂಗಳೂರು

  • ರೇಡಿಯೊ ಅಸ್ಟ್ರೊನಮಿ ಸೆಂಟರ್, ಉದಕಮಂಡಲ(ಊಟಿ)

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್, ಡೆಹ್ರಾಡೂನ್

  • ಮುಂಬೈ, ಮದ್ರಾಸ್, ಖರಗ್‌ಪುರ, ಕಾನ್ಪುರ ಐಐಟಿ ಗಳು

  • ಹಿಂದುಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್

ವಿದೇಶಗಳಲ್ಲಿ ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್ ಹಾರ್ವರ್ಡ್, ಪ್ರಿನ್‌ಸ್ಟನ್‌ ವಿಶ್ವವಿದ್ಯಾಲಯಗಳು, ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಾರ್ಜಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ವಿಟ್ಜರ್‌ಲೆಂಡ್‌ನ ಜುರಿಚ್ ಇಟಿಎಚ್‌ಗಳು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕೋರ್ಸ್‌ಗಳನ್ನು ಕಲಿಸುತ್ತವೆ.

ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ಯುವಿಕಾ’

ಅಭಿವೃದ್ಧಿ ಕಾರ್ಯಕ್ರಮಗಳಿಂದ ದೂರವೇ ಇರುವ ಗ್ರಾಮೀಣ ವಿದ್ಯಾರ್ಥಿಗಳನ್ನು ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗಳ ಕಡೆ ಸೆಳೆಯಲು ಇಸ್ರೊದವರು ‘ಯುವ ವಿಜ್ಞಾನಿ ಕಾರ್ಯಕ್ರಮ’- ಯುವಿಕಾ ನಡೆಸುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನದ ಪ್ರಾಥಮಿಕ ತಿಳುವಳಿಕೆ ಮತ್ತು ಪ್ರಾಯೋಗಿಕ ಸಾಧ್ಯತೆಗಳನ್ನು ತಿಳಿ ಹೇಳುವ ಈ ಕಾರ್ಯಕ್ರಮ ಮುಂಬರುವ ದಿನಗಳಲ್ಲಿ ವಿಜ್ಞಾನ ,ತಂತ್ರಜ್ಞಾನ , ಎಂಜಿನಿಯರಿಂಗ್  ಮತ್ತು  ಗಣಿತ (STEM) ವಿಷಯಗಳ ಸಂಶೋಧನೆಗಳ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತದೆ  ಎಂದು ನಂಬಲಾಗಿದೆ. ಚಂದ್ರಯಾನ-3 ಯಶಸ್ಸಿನಿಂದ ಉತ್ತೇಜಿತರಾಗಿರುವ ವಿದ್ಯಾರ್ಥಿಗಳು  ಯುವಿಕಾದಲ್ಲಿ ತರಬೇತಿ ಪಡೆಯಬಹುದು. 

ಹೆಚ್ಚಿನ ಸಾಧನೆಗೆ ‘ಉನ್ನತಿ’

ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿರುವ ವಿದೇಶಿ ವಿದ್ಯಾರ್ಥಿಗಳಿಗಾಗಿಯೇ ನ್ಯಾನೊ ಉಪಗ್ರಹಗಳ ಜೋಡಣೆ ಮತ್ತು ನಿರ್ಮಾಣ ಹೇಗೆ ಎಂಬುದನ್ನು ಕಲಿಸಲು ಇಸ್ರೊ, 2018ರಿಂದ ಉನ್ನತಿ (UNispace Nanosatellite Assembly and Training by ISRO ) ಎಂಬ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದೆ.

ಬಾಹ್ಯಾಕಾಶವನ್ನು ಸಂಶೋಧನೆ ಮತ್ತು ಶಾಂತಿಯ ಕೆಲಸಗಳಿಗಾಗಿ ಮಾತ್ರ ಬಳಸಿಕೊಳ್ಳಬೇಕು ಎಂಬ ವಿಶ್ವಸಂಸ್ಥೆಯ ಸಂಘಟನೆ ‘ಯೂನಿಸ್ಪೇಸ್‌ಗೆ’ 50 ವರ್ಷ ತುಂಬಿದಾಗ ವಿಯೆನ್ನಾದಲ್ಲಿ  ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಇಲ್ಲಿವರೆಗೆ 33 ದೇಶಗಳ 600 ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಬೆಂಗಳೂರಿನ ಯು.ಆರ್‌.ರಾವ್ ಉಪಗ್ರಹ ಕೇಂದ್ರದಲ್ಲಿ ವಸತಿ ಸೌಕರ್ಯಗಳೊಂದಿಗೆ ತರಬೇತಿ ಪಡೆದುಕೊಂಡಿದ್ದಾರೆ. 

ಇ–ಲರ್ನಿಂಗ್ ಪ್ರೋಗ್ರಾಂ

ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ರಿಮೋಟ್ ಸೆನ್ಸಿಂಗ್ ಸಂಸ್ಥೆಯು(ಐಐಆರ್‌ಎಸ್) ವಿದ್ಯಾರ್ಥಿಗಳಿಗಾಗಿ ಬಾಹ್ಯಾಕಾಶಗಳ ವಲಯ ವಿನ್ಯಾಸ ಮತ್ತು ಅವುಗಳ ಬಳಕೆಯ ಕುರಿತು ಆನ್‌ಲೈನ್‌ ಮೂಲಕ  ವಿಶೇಷ ತರಬೇತಿ ನೀಡುತ್ತದೆ. ಶಿಕ್ಷಣ ಸಂಸ್ಥೆಗಳ ತಜ್ಞರು ಮತ್ತು ಆಸಕ್ತ ವಿದ್ಯಾರ್ಥಿಗಳಿಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಕುರಿತ ನೇರ ತರಗತಿಗಳು(ಲೈವ್ ಕ್ಲಾಸಸ್) ಮತ್ತು  ಮುದ್ರಿತ ಪಾಠಗಳನ್ನು ಇ - ಕ್ಲಾಸ್( ಎಲೆಕ್ಟ್ರಾನಿಕ್ ಕೊಲ್ಯಾಬರೇಟಿವ್ ಲರ್ನಿಂಗ್ ಅಂಡ್ ನಾಲೆಡ್ಜ್  ಶೇರಿಂಗ್ ಸಿಸ್ಟಮ್) ಗಳ ಮೂಲಕ ಹೆಚ್ಚಿನ ಕಲಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. 2007  ರಿಂದ ಜಾರಿಯಲ್ಲಿರುವ ಈ ಕಾರ್ಯಕ್ರಮಗಳು ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಸ್ರೊದ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯುತ್ತಿವೆ. ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮೂಲಕ ಈಗಾಗಲೇ ಅಧ್ಯಯನ ಪೂರೈಸಿದ್ದಾರೆ.

ಸ್ಟೂಡೆಂಟ್ ಸ್ಯಾಟಲೈಟ್ ಪ್ರೋಗ್ರಾಮ್ (SSP)

ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕೃತಕ ಉಪಗ್ರಹ ರಚನೆ, ಜೋಡಣೆ ಮತ್ತು ಉಡಾವಣೆ ಕುರಿತು ತಿಳುವಳಿಕೆ ನೀಡಲು ಮತ್ತು ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ವಿಜ್ಞಾನ ಅಧ್ಯಯನಕ್ಕೆ ಬೇಕಾದ ವಿದ್ಯಾರ್ಥಿ ಸಮೂಹವನ್ನು ಸಜ್ಜುಗೊಳಿಸಲು ಇಸ್ರೊ ‘ಸ್ಟೂಡೆಂಟ್ ಸ್ಯಾಟಲೈಟ್  ಪ್ರೋಗ್ರಾಮ್ (ಎಸ್ ಎಸ್ ಪಿ)’ ಎಂಬ ವಿನೂತನ ಕಾರ್ಯಕ್ರಮ ನಡೆಸುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ ಕಲಿಯುವ ಜೊತೆಗೆ, ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆಯಲ್ಲೂ ಉದ್ಯೋಗಾವಕಾಶಗಳಿವೆ ಎಂಬುದನ್ನು ಮನದಟ್ಟು ಮಾಡಿಕೊಡುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಉಪಗ್ರಹಗಳಷ್ಟೇ ಅಲ್ಲ, ಅವುಗಳಲ್ಲಿ ಅಡಕಗೊಳ್ಳುವ ಪೇ ಲೋಡ್ (ವಿವಿಧ ಬಗೆಯ ಪ್ರಯೋಗ ಕೈಗೊಳ್ಳಬಲ್ಲ ಸಲಕರಣೆ) ತಯಾರಿಸುವುದು ಹೇಗೆ ಎಂಬುದನ್ನೂ ಕಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶಕ್ಕೆ ಏರಲಿರುವ ದಿವಂಗತ ಪುನೀತ್ ರಾಜಕುಮಾರ್ ನೆನಪಿನ ‘ಅಪ್ಪು ಉಪಗ್ರಹ' ವನ್ನು  ತಜ್ಞರ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳೇ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಸ್ಟಾರ್ಟ್’(START)  ತರಬೇತಿ

ಮೂಲ ವಿಜ್ಞಾನ ವಿಷಯಗಳಲ್ಲಿಉನ್ನತ ಅಧ್ಯಯನ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳನ್ನು ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನದ ಕಡೆಗೆ ಆಕರ್ಷಿಸಲು ಇಸ್ಟೊ, ಸ್ಟಾರ್ಟ್‌ (ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಅವೇರ್ನೆಸ್ ಟ್ರೈನಿಂಗ್) ಎಂಬ ಆನ್‌ಲೈನ್‌ ತರಬೇತಿ ಕಾರ್ಯಕ್ರಮವನ್ನು ಅಂತಿಮ ವರ್ಷದ ಪದವಿಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಿದೆ. ತರಬೇತಿಯು  ಖಭೌತ ವಿಜ್ಞಾನ( ಆಸ್ಟ್ರೊ ಫಿಸಿಕ್ಸ್) ಸೂರ್ಯಭೌತ ವಿಜ್ಞಾನ (ಹೆಲಿಯೋ ಫಿಸಿಕ್ಸ್), ಭೂಮಿ- ಸೂರ್ಯರ ಪರಸ್ಪರ  ವರ್ತನೆ, ಖಗೋಳ ವಿಜ್ಞಾನ, ಮೇಲಾಕಾಶದ ಅಧ್ಯಯನವನ್ನು ಒಳಗೊಂಡಿರುತ್ತದೆ.

(ಮುಂದಿನ ವಾರ: ಸ್ಪೇಸ್ ಟೆಕ್ನಾಲಜಿಗೆ ಸಂಬಂಧಿಸಿದ ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು ಹಾಗೂ ಉದ್ಯೋಗಾವಕಾಶಗಳು)

(ಲೇಖಕರು: ಪ್ರಾಚಾರ್ಯರು, ವಿಡಿಯಾ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.