ಸಿಬಂತಿ ಪದ್ಮನಾಭ ಕೆ.ವಿ.
ಸಿನಿಮಾರಂಗದಿಂದ ಜಾಹೀರಾತಿನವರೆಗೆ, ಟಿವಿ ಚಾನೆಲ್‌ಗಳಿಂದ ಅನಿಮೇಶನ್ ಉದ್ಯಮದವರೆಗೆ- ಎಲ್ಲೆಡೆ ವಿಡಿಯೊ ಎಡಿಟರ್‌ಗಳದ್ದೇ ಕಾರುಬಾರು. ವಿಡಿಯೊ ಎಡಿಟಿಂಗ್ ಕರಗತ ಮಾಡಿಕೊಳ್ಳಬಯಸುವವರಿಗೆ ಸಹಾಯ ಮಾಡಲೆಂದೇ ಹತ್ತಾರು ಸಂಪನ್ಮೂಲಗಳು ಲಭ್ಯ ಇವೆ.
ವಿಡಿಯೊ ಮಾಧ್ಯಮ ಹಿಂದೆಂದಿಗಿಂತಲೂ ಈಗ ಜನಪ್ರಿಯವಾಗಿದೆ. ಬರಹ ರೂಪದ ಮಾಹಿತಿಗಿಂತಲೂ ವಿಡಿಯೊ ನೋಡುವುದನ್ನೇ ಜನರು ಹೆಚ್ಚು ಇಷ್ಟಪಡುತ್ತಿರುವುದು ಹೊಸ ಕಾಲದ ಬೆಳವಣಿಗೆ. ಯಾವುದೇ ಸಾಮಾಜಿಕ ಜಾಲತಾಣವನ್ನು ಗಮನಿಸಿದರೂ ವಿಡಿಯೊಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗಮನಿಸಬಹುದು. ಶೇ 90ಕ್ಕಿಂತಲೂ ಹೆಚ್ಚು ಕಂಪೆನಿಗಳು ವಿಡಿಯೊ ರೂಪದ ಜಾಹೀರಾತುಗಳನ್ನೇ ನೆಚ್ಚಿಕೊಂಡಿವೆ ಎಂದು ಸಮೀಕ್ಷೆಗಳು ಹೇಳುತ್ತವೆ. ಹೀಗಾಗಿ ವಿಡಿಯೊ ಎಡಿಟರ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ವಿಡಿಯೊ ಎಡಿಟಿಂಗ್ ಕೌಶಲವನ್ನು ಚೆನ್ನಾಗಿ ರೂಢಿಸಿಕೊಂಡಿರುವ ವ್ಯಕ್ತಿಗೆ ಈಚಿನ ವರ್ಷಗಳಲ್ಲಿ ಕೈತುಂಬ ಕೆಲಸ, ಆಕರ್ಷಕ ಆದಾಯ. ಸಿನಿಮಾರಂಗದಿಂದ ತೊಡಗಿ ಜಾಹೀರಾತಿನವರೆಗೆ, ಟಿವಿ ಚಾನೆಲ್‌ಗಳಿಂದ ತೊಡಗಿ ಅನಿಮೇಶನ್ ಉದ್ಯಮದವರೆಗೆ- ಎಲ್ಲೆಡೆ ವಿಡಿಯೊ ಎಡಿಟರ್‌ಗಳದ್ದೇ ಕಾರುಬಾರು. ವಿಡಿಯೊ ಎಡಿಟಿಂಗ್ ಕರಗತ ಮಾಡಿಕೊಳ್ಳಬಯಸುವವರಿಗೆ ಸಹಾಯ ಮಾಡಲೆಂದೇ ಹತ್ತಾರು ಸಂಪನ್ಮೂಲಗಳು ಲಭ್ಯ ಇವೆ. ಇದಕ್ಕಾಗಿ ಔಪಚಾರಿಕ ಕೋರ್ಸ್‌ಗಳನ್ನೇ ನೆಚ್ಚಿಕೊಳ್ಳಬೇಕೆಂದೇನೂ ಇಲ್ಲ. ಆನ್‌ಲೈನ್ ಸಂಪನ್ಮೂಲಗಳನ್ನು ಬಳಸಿಯೂ ಅಗತ್ಯ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಳ್ಳಬಹುದು. ಕೆಲವು ಆನ್‌ಲೈನ್ ಕೋರ್ಸುಗಳಿಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗಬಹುದು, ಅನೇಕ ಕೋರ್ಸುಗಳನ್ನು ಉಚಿತವಾಗಿಯೂ ಪಡೆಯಬಹುದು.
ಏನಿದು ಕೋರ್ಸು?
ವಿಡಿಯೊ ಎಡಿಟಿಂಗ್ ಕಲಿಯುವುದೆಂದರೆ ಅದಕ್ಕೆ ಬೇಕಾದ ಸಾಫ್ಟ್‌ವೇರ್ ನಿರ್ವಹಿಸಲು ಕಲಿಯುವುದು ಎಂದರ್ಥ. ಅಡೋಬ್ ಪ್ರೀಮಿಯರ್ ಪ್ರೊ, ಅಡೋಬ್ ಪ್ರೀಮಿಯರ್ ರಶ್, ಫೈನಲ್ ಕಟ್ ಪ್ರೊ, ಡ-ವಿನ್ಸಿ ರಿಸಾಲ್ವ್, ಬ್ಲೆಂಡರ್, ಪ್ರೆಝಿ – ಇವು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್ಟಾಪ್ ಮೇಲೆ ಬಳಸಬಹುದಾದ ವೃತ್ತಿಪರ ವಿಡಿಯೊ ಎಡಿಟಿಂಗ್ ತಂತ್ರಾಂಶಗಳು. ಇನ್‌ಶಾಟ್, ಕ್ವಿಕ್, ಪ್ರೀಮಿಯರ್ ರಶ್, ಕೈನ್ ಮಾಸ್ಟರ್, ವಿಎನ್ ವಿಡಿಯೋ ಎಡಿಟರ್- ಇವೆಲ್ಲ ಮೊಬೈಲ್ ಫೋನಿನಲ್ಲೇ ಸುಲಭವಾಗಿ ಬಳಸಬಹುದಾದ ತಂತ್ರಾಂಶಗಳು/ ಆ್ಯಪ್‌ಗಳು.
ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಕೆಲವೇ ದಿನಗಳಲ್ಲಿ ಕರಗತ ಮಾಡಿಕೊಳ್ಳಬಹುದಾದ ಸಾಫ್ಟ್ವೇರ್‌ಗಳು ಇವು. ಅಭ್ಯಾಸ ಮಾಡುವ ಹಂತಗಳನ್ನು ಹೇಳಿಕೊಡುವ ಅನೇಕ ಕೋರ್ಸುಗಳು, ಟ್ಯುಟೋರಿಯಲ್‌ಗಳು ಇವೆ. ಔಪಚಾರಿಕ ಅಥವಾ ತಾಂತ್ರಿಕ ಪದವಿಗಳು ಇಲ್ಲದವರೂ ಇವುಗಳಲ್ಲಿ ತೊಡಗಿಸಿಕೊಳ್ಳಬಹುದು. ಪಿಯುಸಿ/ ಪದವಿ ಹಂತದಲ್ಲಿ ಓದುತ್ತಿರುವವರೂ ತಮ್ಮ ಬಿಡುವಿನ ವೇಳೆಯಲ್ಲಿ ಈ ಕೌಶಲವನ್ನು ರೂಢಿಸಿಕೊಳ್ಳಬಹುದು. ಒಮ್ಮೆ ಕಲಿತರೆ ಅದು ಇಡೀ ಜೀವನಕ್ಕೆ ಆಧಾರವಾಗಬಲ್ಲ ವಿದ್ಯೆ.
ಎಲ್ಲಿ ಉಪಯೋಗ?
ಆರಂಭದಲ್ಲಿ ಹೇಳಿರುವಂತೆ, ಆಧುನಿಕ ಕಾಲದಲ್ಲಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವಿಡಿಯೋಗಳು ಹೆಚ್ಚು ಬಳಕೆಯಾಗುತ್ತಿವೆ. ಜಾಹೀರಾತು, ಮಾರಾಟವರ್ಧನೆ, ಪ್ರಚಾರ ಮೊದಲಾದ ಉದ್ದೇಶಗಳಿಗೆ ವಿಡಿಯೋ ಅಗತ್ಯ ಇರುವುದರಿಂದ ವಿಡಿಯೊ ಸಂಕಲನಕಾರರ ಬೇಡಿಕೆ ಹೆಚ್ಚು. ಮನರಂಜನಾ ಉದ್ದಿಮೆಗಳಲ್ಲಂತೂ ವಿಡಿಯೊ ಇಲ್ಲದೆ ದಿನನಿತ್ಯದ ವ್ಯವಹಾರವೇ ಇಲ್ಲ. ಮಕ್ಕಳ ಮನರಂಜನಾತ್ಮಕ ವಿಡಿಯೊಗಳು, ವೃತ್ತಿಪರವಾಗಿ ಬೆಳೆದಿರುವ ಯೂಟ್ಯೂಬ್ ಚಾನೆಲ್‌ಗಳು, ಸುದ್ದಿ ವಾಹಿನಿಗಳು, ಟಿವಿ ಧಾರಾವಾಹಿಗಳು, ಸಿನಿಮಾ, ಮದುವೆ ಮತ್ತಿತರ ಕೌಟುಂಬಿಕ ಕಾರ್ಯಕ್ರಮಗಳ ಚಿತ್ರೀಕರಣ ಮತ್ತು ಎಡಿಟಿಂಗ್- ಎಲ್ಲೆಡೆಯೂ ಬೇಡಿಕೆಯಿರುವುದು ವಿಡಿಯೊ ಎಡಿಟರ್‌ಗಳಿಗೆ. ಕೊರೋನ ನಂತರದ ಕಾಲದಲ್ಲಂತೂ ಆನ್‌ಲೈನ್
ಶಿಕ್ಷಣ ಜನಪ್ರಿಯವಾಗಿರುವುದರಿಂದ ಆಡಿಯೊ-ವಿಶುವಲ್ ಕಂಟೆಂಟ್‌ಗಳನ್ನು ಸಿದ್ಧಪಡಿಸುವ ಕ್ರಿಯಾಶೀಲ ಎಡಿಟರ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಎಲ್ಲಿ ಲಭ್ಯ:
ವಿಡಿಯೋ ಎಡಿಟಿಂಗ್‌ಗೆ ಸಂಬಂಧಿಸಿದ ಅನೇಕ ಉಚಿತ ಕೋರ್ಸುಗಳನ್ನು ಗ್ರೇಟ್ ಲರ್ನಿಂಗ್ ಅಕಾಡೆಮಿ ಸಿದ್ಧಪಡಿಸಿದೆ.
ಇಲ್ಲಿ ಗಮನಿಸಿ: https://www.mygreatlearning.com/academy/learn-for-
free/courses/video-editing-basics
ಶಿಕ್ಷಣ ಸಚಿವಾಲಯದ ‘ಸ್ವಯಂ’ ವೇದಿಕೆಯಲ್ಲಿ ‘ಬೇಸಿಕ್ ಕಾನ್ಸೆಪ್ಟ್ ಆಫ್ ಫಿಲ್ಮ್ ವಿಡಿಯೊ ಎಡಿಟಿಂಗ್’, ‘ಎಜುಕೇಶನಲ್ ವಿಡಿಯೋ ಪ್ರೊಡಕ್ಷನ್’ ಎಂಬ ಉಚಿತ ಕೋರ್ಸುಗಳು ಲಭ್ಯವಿವೆ. ಈ ಕೊಂಡಿ
ಬಳಸಿ ಪಾಠಗಳನ್ನು ಕೇಳಬಹುದು: https://onlinecourses.swayam2.ac.in/
ಯುಡೆಮಿ ಸಂಸ್ಥೆ ಕೂಡ ವಿಡಿಯೋ ಸಂಕಲನಕ್ಕೆ ಸಂಬಂಧಿಸಿದ ಸಾಕಷ್ಟು ಕೋರ್ಸುಗಳನ್ನು ನೀಡುತ್ತಿದೆ. ಕೆಲವನ್ನು ಇಲ್ಲಿ ಗಮನಿಸಬಹುದು: https://www.udemy.com/topic/video-editing/
ಲಿಂಕ್ಡ್ಇನ್ ಸಂಸ್ಥೆಯು ಸಾಕಷ್ಟು ಸುಧಾರಿತ ಕೌಶಲಗಳನ್ನು ಒದಗಿಸುತ್ತಿದೆ. ಅವುಗಳಲ್ಲಿ ವಿಡಿಯೋ ಎಡಿಟಿಂಗ್ ಕೂಡ ಒಂದು.
ಇಲ್ಲಿ ನೋಡಿ: https://www.linkedin.com/learning/topics/video-editing
ಸ್ಕಿಲ್‌ಶೇರ್ ಎಂಬ ಆನ್‌ಲೈನ್ ವೇದಿಕೆಯಲ್ಲಿ ವಿಡಿಯೊ ಎಡಿಟಿಂಗ್ ಸಂಬಂಧಿಸಿದ ಸಾಕಷ್ಟು ಪಾಠಗಳು ಉಚಿತವಾಗಿ ದೊರೆಯುತ್ತವೆ.
ಇಲ್ಲಿ ಭೇಟಿಕೊಡಿ: https://www.skillshare.com/en/browse/video-editing
(ಸಹಾಯಕ ಪ್ರಾಧ್ಯಾಪಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ)
(ಇ-ಕೋರ್ಸ್ ಸರಣಿ ಮುಗಿಯಿತು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.