ಪ್ರತಿಭೆಗಳು ಅರಳುವುದೇ ಗುಡಿಸಲಿನಲ್ಲಿ! ಬಡತನಕ್ಕೂ ಸಾಧನೆಗೂ ಏನೋ ಒಂದು ಅವ್ಯಕ್ತ ನಂಟಿದೆ. ಅಂತಹ ಕೆಲ ಸವಾಲುಗಳ ಕುಲುಮೆಯಲ್ಲಿ ಅರಳಿದ ಪ್ರತಿಭೆಗಳು ಈ ಬಾರಿಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ‘ವಿವೇಕಾ ಸ್ಕಾಲರ್ಸ್ ಪ್ರೋಗ್ರಾಂ(ವಿ.ಎಸ್.ಪಿ)’ ಅಡಿ ಬೆಳಕಿಗೆ ಬಂದಿವೆ.
ವಿಪರೀತ ಆರ್ಥಿಕ ಸಂಕಷ್ಟ. ಜೊತೆಗೆ ಸಾಮಾಜಿಕ, ಕೌಟುಂಬಿಕ ದೌರ್ಜನ್ಯಗಳಂತಹ ಹತ್ತಾರು ಅಡೆತಡೆಗಳ ಮುಳ್ಳಬೇಲಿ ಮಧ್ಯೆ, ಗುಡಿಸಲಿನ ಬಡ ಮಕ್ಕಳ ಗಣನೀಯ ಸಾಧನೆ, ಶ್ರಮ ಸಂಸ್ಕೃತಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸ್ವಯಂ ಸೇವಕರ (ಎಸ್.ವಿ.ವೈ.ಎಂ) ಕಣ್ಣಾಲಿಗಳನ್ನು ತೇವಗೊಳಿಸಿದೆ. ದಾನಿಗಳು ಮತ್ತು ದತ್ತು ಪಡೆದವರ ಹೃದಯಗಳಲ್ಲಿ ಸಾರ್ಥಕ್ಯ ಭಾವ ಮೈವತ್ತಂತಿದೆ.
ಅಂತಹ ನೂರಾರು ಪ್ರತಿಭಾಶಾಲಿ ಮಕ್ಕಳ ಪೈಕಿ, ಪ್ರಾತಿನಿಧಿಕವಾಗಿರುವ ಹುಡುಗಿ ಪಲ್ಲವಿ ಕುರುವಿನ ಕೊಪ್ಪ. ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಂಭ್ಯಾಪುರದ ಕಡುಬಡತನದ ಕುಟುಂಬಕ್ಕೆ ಸೇರಿದ ಯುವತಿ. ಅಪ್ಪ ಮದ್ಯ ವ್ಯಸನಿ. ಕೂಲಿ ಮಾಡಿದ ಹಣವನ್ನೆಲ್ಲ ಕುಡಿತಕ್ಕೆ ಹಾಕುವಷ್ಟು ಬೇಜವಾಬ್ದಾರಿ. ಹೆಂಡತಿಯನ್ನೂ ಬಡಿದು ಆಕೆ ದುಡಿದು ತಂದ ಮೂರು ಕಾಸನ್ನೂ ಕಸಿದು ಕುಡಿಯುವ ಜಾಯಮಾನ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಗಂಭ್ಯಾಪುರದ ಸರ್ಕಾರಿ ಶಾಲೆಯಲ್ಲಿ ಕಲಿತು, ಎಸ್.ಎಸ್.ಎಲ್.ಸಿ ಯಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಗಳಿಸಿದ ಪಲ್ಲವಿ, ವಿ.ಎಸ್.ಪಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಧಾರವಾಡದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇ 77 ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದಾಳೆ.
ಪರೀಕ್ಷೆಯ ಸಂದರ್ಭದಲ್ಲೇ ಲಾಕ್‍ಡೌನ್‌ನಿಂದಾಗಿ, ಸಾರಾಯಿ ಅಂಗಡಿ ಬಂದ್ ಆಗಿದ್ದರಿಂದ ಆಕೆಯ ಅಪ್ಪ ‘ಸ್ಯಾನಿಟೈಸರ್’ ಕುಡಿದು, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅಸುನೀಗಿದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪಲ್ಲವಿ ಉತ್ತಮ ಸಾಧನೆ ಮಾಡಿದ್ದಾಳೆ.
ಪ್ರಥಮ ಪಿ.ಯು.ಸಿ ಆರಂಭದಲ್ಲಿ ಮೊದಲ ತರಗತಿ ಪರೀಕ್ಷೆಯಲ್ಲೇ ಅತೀ ಕಡಿಮೆ ಅಂಕ ಪಡೆದ ಕಾರಣ ಕೇಳಿದಾಗ, ‘ನಾನು ಕಾಲೇಜಿನಲ್ಲಿ ಎಷ್ಟು ಓದುತ್ತೇನೋ ಅಷ್ಟೇ ಸರ್; ಮನೆಯಲ್ಲಿ ಓದುವ ವಾತಾವರಣ ಇಲ್ಲ. ಅಪ್ಪ ನಿತ್ಯ ಕುಡಿದು ಬಂದು ಅಮ್ಮನ್ನು ಬಡಿಯುತ್ತಾರೆ’ ಎಂದು ಎಲ್ಲ ಮಕ್ಕಳ ಮುಂದೆ ಹೇಳಿ, ಬಿಕ್ಕಿ ಅತ್ತಿದ್ದನ್ನು ಎಸ್.ವಿ.ವೈ.ಎಂ. ಉತ್ತರ ಕರ್ನಾಟಕ ಸಂಯೋಜಕ ಜಯಂತ್ ಕೆ.ಎಸ್. ತುಂಬ ವಿಹ್ವಲರಾಗಿ ಹೇಳುತ್ತಾರೆ.
ವಿ.ಎಸ್.ಪಿ ಅಡಿ ಧಾರವಾಡ ಜಿಲ್ಲೆಯಲ್ಲಿ ಮೊದಲನೇ ತಂಡದಲ್ಲಿ ಪಿಯುಸಿ ವಿಜ್ಞಾನ ಓದಿದ 28 ಹೆಣ್ಣು ಮಕ್ಕಳಲ್ಲಿ, ಇಬ್ಬರು ಡಿಸ್ಟಿಂಕ್ಷನ್ ಫಲಿತಾಂಶ ಗಳಿಸಿದ್ದಾರೆ. 22 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಶೇ 93 ರಷ್ಟು ಫಲಿತಾಂಶ ಬಂದಿದೆ.
ಇನ್ನೋರ್ವ ಮಾದರಿ ವಿದ್ಯಾರ್ಥಿನಿ ಕಾವ್ಯಾ ಎಸ್. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದವರು. ಇದೇ ಸ್ಕಾಲರ್‌ಶಿಪ್ ಕಾರ್ಯಕ್ರಮದ ಅಡಿ ಮೈಸೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿದವರು. ತಂದೆ ಸೋಮಣ್ಣ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ತಾಯಿ ಹೋಟೆಲ್‍ನಲ್ಲಿ ದಿನಗೂಲಿ. ಅವರ ದುಡಿಮೆ ಕುಟುಂಬಕ್ಕೆ ಆಧಾರ. ಕಾವ್ಯಾಳೊಂದಿಗೆ ಓದುತ್ತಿರುವ ಅಣ್ಣ, ಅಕ್ಕ ಹಾಗೂ ತಂಗಿ ಇದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಕಾವ್ಯಾ 10ನೇ ತರಗತಿಯಲ್ಲಿ ಶೇ.87.20, ದ್ವಿತೀಯ ಪಿಯುಸಿಯಲ್ಲಿ ಶೇ 90.33 ಅಂಕ ಪಡೆದಿದ್ದಾರೆ. ಕಿವಿ, ಮೂಗು ಮತ್ತು ಗಂಟಲು ತಜ್ಞೆಯಾಗಬೇಕೆಂಬ ಹೆಬ್ಬಯಕೆ ಆಕೆಯದ್ದು. ಹಳ್ಳಿ ಹುಡುಗಿ, ಇಂಗ್ಲಿಷ್ ಅಷ್ಟಕ್ಕಷ್ಟೇ. ನಗರದ ಜನಜೀವನ ನೋಡಿ ಭಯಗೊಂಡಿದ್ದರು. ಹೀಗಾಗಿ ವರ್ಗದ ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ಅಮರೇಶ ಮೇಷ್ಟ್ರ ಸಹಕಾರದಿಂದ ಇಂಗ್ಲಿಷ್‍ನಲ್ಲಿ ಓದಲು ಬರೆಯಲು ತುಂಬ ಪರಿಶ್ರಮವಹಿಸಿದ್ದು, ಈ ಫಲಿತಾಂಶಕ್ಕೆ ಕಾರಣವಾಯಿತು.
‘2019-20ನೇ ಸಾಲಿನಲ್ಲಿ ವಿ.ಎಸ್.ಪಿ ಅಡಿ, ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ 224, ದ್ವಿತೀಯ ವರ್ಷದಲ್ಲಿ 135, ಒಟ್ಟು 359 ವಿದ್ಯಾರ್ಥಿಗಳಿಗೆ ಧಾರವಾಡ, ಬೆಂಗಳೂರು, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಹಣಕಾಸು ಸಹಾಯ ಒದಗಿಸಲಾಗಿದೆ. ಈ ಪೈಕಿ 74 ಮಕ್ಕಳು ಆಂಗ್ಲ ಮಾಧ್ಯಮದಿಂದ, 61 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ, 56 ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಿಂದ, 79 ಮಕ್ಕಳು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಂದ ಆಯ್ಕೆಯಾಗಿದ್ದು, 29 ವಿದ್ಯಾರ್ಥಿಗಳು ‘ಡಿಸ್ಟಿಂಕ್ಷನ್’ ಶ್ರೇಣಿ ಮತ್ತು 86 ಜನ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ವಿಶೇಷ’ ಎನ್ನುತ್ತಾರೆ ವಿವೇಕಾ ಸ್ಕಾಲರ್ಸ್ ಪ್ರೋಗ್ರಾಂ ಪ್ರಬಂಧಕಿ ಮೈಸೂರಿನ ಸವಿತಾ.
ಕಡು ಬಡತನ ಹಾಗೂ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ಅರಳಿ ನಿಂತ ಈ ಪ್ರತಿಭೆಗಳ ಸಾಧನೆ, ಅತ್ಯಂತ ಕ್ಷುಲ್ಲಕ ಕಾರಣಗಳನ್ನು ಮುಂದು ಮಾಡಿ, ಆತ್ಮಹತ್ಯೆಗೆ ಶರಣಾಗುವ ಹದಿಹರೆಯದ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬಲ್ಲುದು.
**
10ನೇ ಕ್ಲಾಸ್‌ವರೆಗೂ ಯಾದವಾಡದ ಸರ್ಕಾರಿ ಶಾಲೆಯೊಳಗ ಓದಿ, ಶೇ.85 ರಷ್ಟು ಮಾರ್ಕ್ಸ್ ಪಡೆದೆ. ವಿವೇಕಾ ಸ್ಕಾಲರ್ಸ್ ಪ್ರೋಗ್ರಾಂ ಪರೀಕ್ಷೆ ಬರೆದು ಶಿಷ್ಯ ವೇತನಕ್ಕೆ ಆಯ್ಕೆಯಾದೆ. ಪಿಯು ವಿಜ್ಞಾನದಲ್ಲಿ ಶೇ.81ರಷ್ಟು ಅಂಕಗಳಿಸಿದೆ. ನಮ್ಮ ತಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕರಾಗಿ ಕೆಲಸ ಮಾಡ್ತಾರ. ಎಂಜಿನಿಯರಿಂಗ್ ಓದಬೇಕು ಅಂತ ಗುರಿ ಇದೆ’
-ಲಕ್ಷ್ಮೀ ಚಂದರಗಿ, ಯಾದವಾಡ
**
ಎಸ್ಸೆಸ್ಸೆಲ್ಸಿವರೆಗೆ ಹೆಬ್ಬಳ್ಳಿಯ ಸರ್ಕಾರಿ ಶಾಲೆಯಲ್ಲಿಕನ್ನಡ ಮಾಧ್ಯಮದೊಳಗೆ ಓದಿ ಶೇ.93 ಅಂಕ ಗಳಿಸಿದೆ. ಅಪ್ಪ, ಅಮ್ಮ ಕೂಲಿ ಕೆಲಸ ಮಾಡಿ ಓದಿಸಿದರು. ವಿವೇಕಾ ಸ್ಕಾಲರ್ಸ್ ಪ್ರೋಗ್ರಾಂ ಅಡಿ ಆಯ್ಕೆಯಾಗಿ, ಪಿಯು ವಿಜ್ಞಾನ ವಿಷಯ ಓದಿ ಶೇ. 77ರಷ್ಟು ಅಂಕಗಳಿಸಿರುವೆ. ಎಂಜಿನಿಯರಿಂಗ್ ಓದಬೇಕು ಅಂತ ಆಸೆ’.
–ಯಲ್ಲಮ್ಮ ಕುಸುಗಲ್, ಹೆಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.