ADVERTISEMENT

ಗೋಡೆಗಳ ಬಣ್ಣಗಳೂ ನಿಮ್ಮ ಕತೆ ಹೇಳುತ್ತವೆ...!

ಸುಕೃತ ಎಸ್.
Published 31 ಅಕ್ಟೋಬರ್ 2021, 19:30 IST
Last Updated 31 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಬಣ್ಣಗಳು ಸಂದೇಶಗಳನ್ನು ರವಾನಿಸುತ್ತವೆ’ ಎನ್ನುವ ಮಾತಿದೆ. ಅದು ಸತ್ಯ. ನಾವು ಹಾಕುವ ಬಟ್ಟೆಯ ಬಣ್ಣದಿಂದ ಹಿಡಿದು, ಮನೆಯ ಗೋಡೆಗಳಿಗೆ ಬಳಸುವ ಬಣ್ಣದ ಆಯ್ಕೆಯು ನಮ್ಮ ವ್ಯಕ್ತಿತ್ವವನ್ನು, ನಮ್ಮ ಮನಃಸ್ಥಿತಿಯನ್ನು ತೋರಿಸುತ್ತದೆ ಎನ್ನುತ್ತಾರೆ. ಮನೆಯ ಗೋಡೆಗಳ ಬಣ್ಣಗಳ ಪ್ರಭಾವ ಮನೆಯೊಳಗಿರುವವರ ಮನಸ್ಸಿನ ಆಗುತ್ತದೆ.

ಗೋಡೆಗಳಿಗೆ ಬಣ್ಣದ ಆಯ್ಕೆ ಕುರಿತ ಅಧ್ಯಯನಗಳು, ಅಲಂಕಾರದ ವ್ಯಾಖ್ಯಾನಗಳು ಎಲ್ಲವೂ ಇತ್ತೀಚಿನದು. ಹಿಂದಿನ ಕಾಲದಲ್ಲಿ ಮನೆ ಎಂದರೆ, ಮಣ್ಣಿನ ಗೋಡೆ ಮತ್ತು ನೆಲ. ಅದನ್ನು ಸೆಗಣಿ ಹಾಕಿ ಸಾರಿಸುವ ಅಭ್ಯಾಸ ನಮ್ಮ ಹಿರಿಯರಲ್ಲಿ ಇತ್ತು. ಇತ್ತೀಚೆಗೆ ಮನೆಯ ಒಳಾಂಗಣ ವಿನ್ಯಾಸದಲ್ಲಿ ಗೋಡೆಗಳಿಗೆ ಬಣ್ಣದ ಆಯ್ಕೆಯು ಹೆಚ್ಚು ಮಹತ್ವ ಪಡೆದಿದೆ. ಗೋಡೆಗಳಿಗೆ ಹಚ್ಚುವ ಬಣ್ಣವು ಮನೆಯೊಳಗೆ ಬದುಕುವವನ ಮನಃಸ್ಥಿತಿಯ ಕನ್ನಡಿ ಎನ್ನುತ್ತದೆ ಹಲವು ಅಧ್ಯಯನ.

ಮೊದಲೆಲ್ಲಾ ಗೋಡೆಗಳಿಗೆ ಬಣ್ಣಗಳನ್ನು ಆಯ್ಕೆ ಮಾಡುವಾಗ, ಮನೆಗೆ ಒಪ್ಪುತ್ತವೆಯೇ ಎಂದಷ್ಟೇ ನೋಡುತ್ತಿದ್ದೆವು ವಿನಃ ಆ ಬಣ್ಣಗಳು ಮನೆಯಲ್ಲಿ ವಾಸಿಸುವವರ ಮತ್ತು ಮನೆಗೆ ಬರುವವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ನೋಡುತ್ತಿರಲಿಲ್ಲ. ಹೀಗೆ, ಮಾನಸಿಕ ನೆಲೆಯಿಂದಲೂ ಬಣ್ಣಗಳನ್ನು ಆಯ್ಕೆ ಮಾಡುವ ಪರಿಪಾಠ ತೀರಾ ಇತ್ತೀಚಿನ ಬೆಳವಣಿಗೆ ಆಗಿದೆ.

ADVERTISEMENT

ಗೋಡೆಯ ಬಣ್ಣಗಳು ನಮ್ಮ ಹೃದಯದ ಬಡಿತ, ಉತ್ಸಾಹದ ಮಟ್ಟ, ನಮ್ಮ ನಡವಳಿಕೆಗಳ ಮೇಲೂ ಪರಿಣಾಮ ಬೀರುತ್ತವೆ ಎನ್ನುತ್ತಾರೆ ಮನೆಯ ಒಳಾಂಗಣ ವಿನ್ಯಾಸಕಾರರು. ಕ್ರಿಯಾಶೀಲತೆಗೆ ಗುಲಾಬಿ ಬಣ್ಣ ಉತ್ತಮ. ನೀಲಿಯು ಮನಸ್ಸಿನ ಬಣ್ಣ ಎಂದೇ ಹೇಳಲಾಗುತ್ತದೆ. ಮನೆಯಿಂದಲೇ ಕೆಲಸ ಮಾಡುವವರು ನೀಲಿ ಬಣ್ಣವನ್ನು ತಮ್ಮ ಕೆಲಸದ ಜಾಗದ ಗೋಡೆಗಳಿಗೆ ಬಳಸಬಹುದು ಎನ್ನುತ್ತಾರೆ ವಿನ್ಯಾಸಕರು.

ಪರಿಸರದೊಂದಿಗೆ ಮನುಷ್ಯನ ಹೆಚ್ಚು ಒಡನಾಟದ ಕಾರಣ ಮನೆಗೆ ಹಸಿರು ಅಥವಾ ನೀಲಿ ಬಣ್ಣಗಳು ಹೆಚ್ಚು ಮುದ ನೀಡುತ್ತವೆ. ಹೊರಗಡೆಯಿಂದ ಮನೆಯೊಳಗೆ ಬಂದ ಕೂಡಲೇ ಈ ಬಣ್ಣಗಳು ಹೊಸತನವನ್ನು ತಂದುಕೊಡುತ್ತದೆ. ಜೊತೆಗೆ ಒತ್ತಡದಿಂದ ಕೂಡಿದ್ದ ದಿನವಾಗಿದ್ದರೆ ಒತ್ತಡವನ್ನು ದೂರ ಮಾಡುವ ಶಕ್ತಿ ಈ ಬಣ್ಣಗಳಿಗೆ ಇದೆ.

ಕೆಲವರಿಗೆ ಗಾಢ ಬಣ್ಣಗಳು ಇಷ್ಟವಾದರೆ, ಕೆಲವರಿಗೆ ತಿಳಿ ಬಣ್ಣಗಳು ಇಷ್ಟವಾಗುತ್ತವೆ. ಕೆಂಪು ಅಧಿಕಾರವನ್ನು ಸೂಚಿಸಿದರೆ, ನೇರಳೆ ಬಣ್ಣವು ಸರ್ವಾಧಿಕಾರವನ್ನು ಸೂಚಿಸುತ್ತದೆ. ಕಪ್ಪು ಕೂಡ ಐಷಾರಾಮಿ ಜೀವನವನ್ನು ಸೂಚಿಸುತ್ತದೆ.

ಹಾಗಂತ ಮೇಲೆ ಹೇಳಿರುವ ಬಣ್ಣಗಳು ಎಲ್ಲರಿಗೂ ಒಂದೇ ರೀತಿಯ ಅನುಭವ ನೀಡುತ್ತದೆ ಎಂದಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬಣ್ಣಗಳು ನೀಡುವ ಅನುಭವ ಬದಲಾಗುತ್ತದೆ. ಆದ್ದರಿಂದ ಬಣ್ಣಗಳನ್ನು ಆಯ್ಕೆ ಮಾಡುವಾಗ ನಮ್ಮ ಆಸಕ್ತಿ, ಸಂಸ್ಕೃತಿಯ ಹಿನ್ನೆಲೆ, ನಮ್ಮ ಆರ್ಥಿಕ ಸ್ಥಿತಿ ಹೀಗೆ ಎಲ್ಲವನ್ನೂ ನೋಡಿಕೊಳ್ಳಬೇಕು. ಬೇರೆಯವರಿಂದ ಪ್ರಭಾವಕ್ಕೆ ಒಳಗಾಗುವುದು ಅಥವಾ ಬೇರೆಯವರ ಮನೆಯ ಗೋಡೆಯ ಬಣ್ಣಗಳನ್ನೇ ನಾವು ಬಳಸುವ ಬಗ್ಗೆ ಆಲೋಚನೆ ಮಾಡಬಾರದು.ಕೊನೆಗೂ ಬಣ್ಣಗಳು ನಿಮ್ಮ ವ್ಯಕ್ತಿವನ್ನು ಹೇಳಬೇಕು, ಮನೆ ಒಳಗೆ ಬಂದ ಕೂಡಲೇ ನೀವು ಯಾವ ವಾತಾವರಣವನ್ನು ಬಯಸುತ್ತೀರೋ ಅದಕ್ಕೆ ತಕ್ಕ ಹಾಗೆ ನಿಮ್ಮ ಗೋಡೆಯ ಬಣ್ಣ ಇರಬೇಕು. ಕೆಲವರು ಟ್ರೆಂಡ್‌ನ ಮೊರೆ ಹೋಗುತ್ತಾರೆ; ಅದು ಬದಲಾಗುತ್ತಿರುತ್ತದೆ ಎನ್ನುತ್ತಾರೆ ವಿನ್ಯಾಸಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.