ನಾನು ಎಲೆಕ್ಟ್ರಿಕಲ್ ಡಿಪ್ಲೊಮಾ ಮಾಡಿದ್ದೇನೆ. ನನಗೆ ಐ.ಎ.ಎಸ್. ಮಾಡುವ ಕನಸಿದೆ. ಈಗ ನಾನು ಬಿ.ಎ. ಅಥವಾ ಬಿ.ಕಾಂ. ಮಾಡಬಹುದೆ? ಪದವಿ ಮುಗಿದ ಮೇಲೆ ಐ.ಎ.ಎಸ್. ಪರೀಕ್ಷೆ ತೆಗೆದುಕೊಳ್ಳಬಹುದೇ? ಗೊಂದಲದಲ್ಲಿ ಇದ್ದೇನೆ. ದಯವಿಟ್ಟು ತಿಳಿಸಿಕೊಡಿ.
ಕಿರಣ್.ಎನ್, ಹಿರೇಕೆರೂರ
ನೀವು ಎಸ್.ಎಸ್.ಎಲ್.ಸಿ.ಯ ನಂತರ ಯಾವ ಕಾರಣದಿಂದ ಡಿಪ್ಲೊಮಾ ಸೇರಿಕೊಂಡಿರೋ ಗೊತ್ತಿಲ್ಲ. ನಿಮ್ಮ ವಯಸ್ಸು ಎಷ್ಟು ತಿಳಿಸಿಲ್ಲ. ಪಿ.ಯು.ಸಿ. ನಂತರ ಡಿಗ್ರಿಗೆ ಸೇರಬೇಕು. 3 ವರ್ಷ ಡಿಪ್ಲೊಮಾ ಪಿ.ಯು.ಸಿ.ಗೆ ಸಮ ಎಂದು ಪರಿಗಣಿಸುತ್ತಾರೆ. ನೀವು ಗಮನದಲ್ಲಿಡಬೇಕಾದ ಅಂಶವೆಂದರೆ ಮಾನ್ಯತೆ ಪಡೆದ ಕಾಲೇಜಿನಿಂದ ಡಿಗ್ರಿಯನ್ನು ಪಡೆಯಬೇಕು. ನಂತರ ಐ.ಎ.ಎಸ್. ಪರೀಕ್ಷೆಗೆ ಸಿದ್ಧತೆ ನಡೆಸಿ ಕೂರಬೇಕು. ನಿಮ್ಮ ವ್ಯಾಸಂಗ ಹಾಗೂ ಶ್ರಮದ ಮೇಲೆ ನಿಮ್ಮ ಫಲಿತಾಂಶ ನಿಂತಿದೆ. ಐ.ಎ.ಎಸ್. ಬರೆಯಲು ಎಲಿಜಿಬಿಲಿಟಿ ಮಾನ್ಯತೆ ಪಡೆದ ಕಾಲೇಜಿನಿಂದ ಡಿಗ್ರಿ ಪಡೆದಿರಬೇಕು. ಇದನ್ನು ಆರ್ಟ್ಸ್, ಸೈನ್ಸ್ ಅಥವಾ ಕಾಮರ್ಸ್ ಕ್ಷೇತ್ರದ ಯಾವುದೇ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಬರೆಯಬಹುದು.
ಹೆಚ್ಚಿನ ಐ.ಎ.ಎಸ್. ಪರೀಕ್ಷೆಯ ವಿವರವನ್ನು www.upse.gov.in ಇಂದ ಪಡೆಯಬಹುದು. ಯಾವುದೇ ಗುರಿ ಇಟ್ಟುಕೊಳ್ಳುವ ಮುಂಚೆ ಆ ಕ್ಷೇತ್ರದ ಬಗ್ಗೆ ವಿವರಗಳನ್ನು ಸಂಗ್ರಹಿಸಬೇಕು.
***
ನನ್ನ ಮಗ ವೈಭವ್ ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳಿಗೆ 610 (97.6) ಪಡೆದಿದ್ದಾನೆ. ಈಗ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಐಚ್ಛಿಕ ವಿಷಯಗಳಾಗಿ ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರಗಳನ್ನು ತೆಗೆದುಕೊಂಡಿದ್ದಾನೆ. ಅವನಿಗೆ ಐ.ಐ.ಟಿ. ಯಲ್ಲಿ ವ್ಯಾಸಂಗ ಮಾಡುವ ಇಚ್ಛೆ. ಜೆ.ಇ.ಇ. ತರಬೇತಿ ಪಡೆಯುತ್ತಿದ್ದಾಗ ಅವನು ಜೀವಶಾಸ್ತ್ರದ ಬದಲಾಗಿ ಎಲೆಕ್ಟ್ರಾನಿಕ್ಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದ. ಆದರೆ ನಾನೇ ಬೇರೆಯವರ ಮಾತು ಕೇಳಿ ಜೀವಶಾಸ್ತ್ರ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದೆ. ಈ ವಿಷಯ ಅವನಿಗೆ ಹೊರೆಯಾಗಿ ಅನಿಸುತ್ತಿದೆ. ಅದಕ್ಕಾಗಿ ತಮ್ಮ ಸಲಹೆ ಮತ್ತು ಸೂಚನೆಗಳನ್ನು ಕೊಡಿ.
ಹೆಸರು, ಊರು ಬೇಡ
ಬೇರೆಯವರ ಮಾತು ಕೇಳಿ ಈ ರೀತಿಯ ತಪ್ಪು ಅರಿಕೆ ಮಾಡಬೇಡಿ. ಆ ಬೇರೆಯವರು ಆ ಕ್ಷೇತ್ರದ ಪರಿಣಿತರೇ? ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಅರ್ಹತೆ, ಆಸಕ್ತಿ ಇರುತ್ತದೆ. ನಾವು ತಂದೆ ತಾಯಿಗಳು ಅದಕ್ಕೆ ತಕ್ಕ ಪ್ರೋತ್ಸಾಹದ ವಾತಾವರಣ ಕಲ್ಪಿಸಿ, ವಿದ್ಯಾರ್ಥಿ ತನ್ನ ಗುರಿಮುಟ್ಟಲು ಸಹಾಯ ಮಾಡಬೇಕು.
ಅವನು 2ನೇ ಪಿ.ಯು.ಸಿ.ಯಲ್ಲಿ ಜೀವಶಾಸ್ತ್ರದ ಬದಲು ಎಲೆಕ್ಟ್ರಾನಿಕ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಆದ್ದರಿಂದ ಅವನು ಮತ್ತೆ ಮೊದಲನೇ ಪಿಯುಸಿಗೆ ಹೊಸ ಕಾಂಬಿನೇಷನ್ ತೆಗೆದುಕೊಂಡು ಓದಬೇಕು. ಅಯ್ಯೋ ಒಂದು ವರ್ಷ ಹಾಳಾಯಿತು ಅಂತ ಕೊರಗಬೇಡಿ. ಐ.ಐ.ಟಿ.ಯಲ್ಲಿ ಸೀಟು ಸಿಕ್ಕಿ ಓದಿ ಮುಂದೆ ಬಂದಾಗ ನಿಮಗೆ ನೀವು ಮಾಡಿದ ನಿರ್ಧಾರ ಸರಿ ಅನ್ನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.