ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಅಧ್ಯಯನ, ಸ್ಪರ್ಧಾತ್ಮಕ ಪರೀಕ್ಷೆ, ವೃತ್ತಿಜೀವನದ ಯಶಸ್ಸಿಗಾಗಿ ಮಾತ್ರ ನಿರ್ಣಾಯಕವಾಗಿಲ್ಲ; ಅವು ದೈನಂದಿನ ಜೀವನಕ್ಕೆ ಕೂಡ ಅಷ್ಟೇ ಉಪಯುಕ್ತ.
ಅದೆಷ್ಟು ಚೆನ್ನಾಗಿ ತಯಾರಿ ಮಾಡಿಕೊಂಡಿದ್ದರೂ, ಪ್ರಶ್ನೆ ಪತ್ರಿಕೆ ಕೈಗೆ ಸಿಗುತ್ತಿದ್ದಂತೆ, ಉತ್ತರಗಳೇ ಮರೆತುಹೋಗುವುದುಂಟು. ಬಹು ಆಯ್ಕೆಯ ಪ್ರಶ್ನೆಗಳಿಗೆ ಯಾವ ಉತ್ತರವನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಗೊಂದಲವಾಗುವುದೂ ಉಂಟು. ಬಾಲ್ಯದ ಘಟನೆಗಳನ್ನು, ಹತ್ತಾರು ವರ್ಷಗಳ ಹಿಂದೆ ಭೇಟಿ ಮಾಡಿದ್ದ ಸ್ಥಳಗಳನ್ನು, ದಶಕಗಳ ಹಿಂದಿನ ಹಳೆಯ ಹಾಡಿನ ಸಾಹಿತ್ಯವನ್ನು ಮರೆಯದ ನಮಗೆ ಹೀಗಾಗುವುದೇಕೆ? ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಅಧ್ಯಯನ, ಸ್ಪರ್ಧಾತ್ಮಕ ಪರೀಕ್ಷೆ, ವೃತ್ತಿಜೀವನದ ಯಶಸ್ಸಿಗಾಗಿ ಮಾತ್ರ ನಿರ್ಣಾಯಕವಾಗಿಲ್ಲ; ಅವು ದೈನಂದಿನ ಜೀವನಕ್ಕೆ ಕೂಡ ಅಷ್ಟೇ ಉಪಯುಕ್ತ.
ಯಾವುದೇ ಮಾಹಿತಿಯು ಸಂವೇದನಾ ಗ್ರಾಹಕಗಳ ಮೂಲಕ ಮಿದುಳನ್ನು ಪ್ರವೇಶಿಸುತ್ತದೆ, ಅದನ್ನು ಪ್ರಜ್ಞಾಪೂರ್ವಕವಾಗಿ ಗ್ರಹಿಸಿದಾಗ ಮಾತ್ರ ಮುಂದಿನ ಹಂತಕ್ಕೆ ಹೋಗುತ್ತದೆ. ಮಿದುಳು ಅಂತಹ ಮಾಹಿತಿಯನ್ನು ತನಗೆ ಬೇಕಾದ ರೂಪದಲ್ಲಿ ಪರಿವರ್ತಿಸಿಕೊಂಡು ಸಂಗ್ರಹಿಸಿಕೊಳ್ಳುತ್ತದೆ. ಹಾಗೆ ಸಂಗ್ರಹವಾದ ಮಾಹಿತಿಯನ್ನು ಯಾವಾಗ ಬೇಕಿದ್ದರೂ ಮರುಪಡೆಯಲು ಸಾಧ್ಯವಿದೆ. ಸ್ಮರಣೆಗಳಲ್ಲಿ ಕೆಲವು ಕ್ಷಣಿಕ ಅಥವಾ ಅಲ್ಪಾವಧಿಗಾದರೆ, ಉಳಿದವು ಜೀವಿತಾವಧಿಯಲ್ಲಿ ಉಳಿಯುವಂತಹ ದೀರ್ಘಾವಧಿ ಸ್ಮರಣೆಗಳು. ‘ನಾಳೆ 10 ಗಂಟೆಗೆ ಪರೀಕ್ಷಾ ಕೇಂದ್ರವನ್ನು ತಲುಪಬೇಕು‘ ಎನ್ನುವುದು ಅಲ್ಪಾವಧಿಯದ್ದಾದರೆ, ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಎನ್ನುವುದು ದೀರ್ಘಾವಧಿಯದ್ದು.
ಆದರೆ, ನಮ್ಮ ಮಿದುಳು ನಮ್ಮ ಜೀವನದ ಪ್ರತಿಯೊಂದು ಘಟನೆ, ಪದ ಅಥವಾ ಚಿತ್ರವನ್ನು ನೆನಪಿಟ್ಟುಕೊಳ್ಳಲು ವಿನ್ಯಾಸಗೊಳಿಸಲಾಗಿಲ್ಲ. ಹಾಗೆಯೇ ನೆನಪಿನೊಂದಿಗೆ ಹಸ್ತಕ್ಷೇಪವಾದಾಗ, ಮಿದುಳಿನಲ್ಲಿ ಸಂಗ್ರಹಣೆ ಅಥವಾ ಮರುಪಡೆಯುವಿಕೆ ವಿಫಲವಾದಾಗ ಹಾಗೂ ಮರೆಯುವ ಸ್ವ-ಪ್ರೇರಣೆಯಿಂದಾಗಿ ಕೆಲವೊಂದು ಮಾಹಿತಿಗಳು ಮರೆತುಹೋಗುತ್ತವೆ. ಹಾಗಾಗಿ, ಮಾಹಿತಿಯನ್ನು ಆಗಾಗ್ಗೆ ಪರಿಶೀಲಿಸುತ್ತಿರುವುದು ಅಗತ್ಯ.
ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿರ್ಣಾಯಕವಾಗಿರುವ ಜ್ಞಾಪಕ ಶಕ್ತಿಯ ವರ್ಧನೆಗೆ ಕೆಲವು ಉಪಾಯಗಳಿವೆ.
ಪ್ರಜ್ಞಾಪೂರ್ವಕ ಓದು :
ಯಾವುದೇ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಅದನ್ನು ಅರ್ಥಮಾಡಿಕೊಳ್ಳಬೇಕು. ಏಕಾಗ್ರತೆಯಿಂದ, ಜೋರಾಗಿ ಓದುವುದು ನೆನಪಿಗೆ ಸಹಾಯಕವಾಗುವ ತಂತ್ರಗಳಲ್ಲೊಂದು. ಓದಿದ ನಂತರ, ಪುಸ್ತಕವನ್ನು ಮುಚ್ಚಿಟ್ಟು ಮಾಹಿತಿಯನ್ನು ನಿಮ್ಮದೇ ಆದ ಶಬ್ದಗಳಲ್ಲಿ ಪುನರಾವರ್ತಿಸಿ. ಮಾಹಿತಿ ನಿಮ್ಮ ನೆನಪಿನಲ್ಲಿ ಸ್ಥಿರವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಇದು ಅನುವು ಮಾಡಿಕೊಡುತ್ತದೆ. ಆಗಿಲ್ಲವೆಂದರೆ, ಹೆಚ್ಚಿನ ಏಕಾಗ್ರತೆಯೊಂದಿಗೆ ಮತ್ತೆ ಓದಿ. ಓದಿಗೆ ಯಾವುದೇ ನಿಗದಿತ ಸಮಯವಿಲ್ಲದಿದ್ದರೂ, ನಿದ್ದೆಯಲ್ಲಿ ವಿಶ್ರಾಂತಿ ಪಡೆದು ತಾಜಾ ಸ್ಥಿತಿಯಲ್ಲಿರುವ ಮಿದುಳು, ಮುಂಜಾನೆಯ ಶಾಂತ ವಾತಾವರಣದಲ್ಲಿ ಬೇಗನೆ ಸಮೀಕರಿಸುತ್ತದೆ ಮತ್ತು ಹೆಚ್ಚಿನ ಮಾಹಿತಿಯನ್ನು ಉಳಿಸಿಕೊಳ್ಳುತ್ತದೆ. ಸಾಧ್ಯವಾದರೆ ಈ ಸಮಯವನ್ನೇ ಆಯ್ದುಕೊಳ್ಳಿ.
ಟಿಪ್ಪಣಿ ಮಾಡಿಕೊಳ್ಳಿ:
ಅಗತ್ಯವೆನಿಸುವ ಎಲ್ಲ ಮಾಹಿತಿಗಳನ್ನೂ ಬರೆದಿಟ್ಟುಕೊಳ್ಳಿ. ಬರೆಯುವ ಭೌತಿಕ ಕ್ರಿಯೆಯಲ್ಲಿ ನಿಮ್ಮ ಕೈ, ತೋಳು ಮತ್ತು ಬೆರಳುಗಳು ಸಕ್ರಿಯವಾಗುವುದರಿಂದ, ಗಮನ ಕೇಂದ್ರೀಕೃತವಾಗುತ್ತದೆ. ಇದು ಮಿದುಳಿನಲ್ಲಿ ಮಾಹಿತಿಯ ಸ್ಪಷ್ಟ ದಾಖಲಾತಿಗೆ ಸಹಕಾರಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕೆಲವು ಶಬ್ದಗಳನ್ನು ತಪ್ಪಾಗಿ ಬರೆಯುವ ವಿದ್ಯಾರ್ಥಿಗಳಿಗೆ, ಶಾಲೆಯಲ್ಲಿ ಹತ್ತು, ಇಪ್ಪತ್ತು ಸಲ ಬರೆಯಲು ಮೇಷ್ಟ್ರು ನೀಡುತ್ತಿದ್ದ ಹೋಂವರ್ಕ್ ನೆನೆಪಿಸಿಕೊಳ್ಳಿ.
ಮೊದಲಕ್ಷರ ತಂತ್ರ :
ನೆನಪಿಟ್ಟುಕೊಳ್ಳಬೇಕಾದ ಶಬ್ಧಗಳ ಪುಂಜವನ್ನು ಅದರ ಮೊದಲ ಅಕ್ಷರಗಳಿಗೆ ಸೀಮಿತಗೊಳಿಸಿಕೊಳ್ಳಿ. ಅದೇ ಹೊಸ ಶಬ್ದವಾಗಲಿ. ಶಾಲೆಯಲ್ಲಿ ದಿನವೂ ಏನಾದರೊಂದು ವಸ್ತುವನ್ನು ಬಿಟ್ಟು ಬರುತ್ತಿದ್ದ ಬಾಲಕಿಗೆ ಆಕೆಯ ಅಮ್ಮ ‘ಪೆಪ್ಪರ್‌ಮಿಂಟ್’ ಎಂಬ ಹೊಸ ಶಬ್ದವನ್ನು ಹೇಳಿಕೊಟ್ಟಳು. ಆಕೆ ಶಾಲೆ ಬಿಡುವಾಗ ದಿನವೂ ಅದನ್ನು ಪರಿಶೀಲಿಸಿಯೇ ಬರಬೇಕು. ಇಲ್ಲಿ ಪೆಪ್ಪರ್‌ಮಿಂಟ್ ಎನ್ನುವುದು ಎಲ್ಲ ವಸ್ತುಗಳ ಮೊದಲಕ್ಷರಗಳ ಸಂಕ್ಷಿಪ್ತ ರೂಪ. ಪೆನ್ಸಿಲ್, ಪೇಪರ್( ಪುಸ್ತಕ, ನೋಟ್‌ಬುಕ್), ರಬ್ಬರ್, ಮೆಂಡರ್ ಮತ್ತು ಥರ್ಮಾಸ್. ಅಂದಿನಿಂದ ಆಕೆ ಏನನ್ನೂ ಮರೆತು ಬರುತ್ತಿರಲಿಲ್ಲ. ಹೀಗೆ ಮೊದಲ ಅಕ್ಷರದ ಸಂಯೋಜನೆಯಿಂದ ಉತ್ಪತ್ತಿಯಾಗುವ ಪದಗುಚ್ಛವು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ವರ್ಧಿಸುತ್ತದೆ. ಹಾಗೆಯೇ ದಕ್ಷಿಣದ ರಾಜ್ಯಗಳ ಹೆಸರನ್ನು ನೆನಪಿಸಿಕೊಳ್ಳಲು ‘ಅಕಟಕಟಾ’ ಎಂದೂ ನೆನಪಿಟ್ಟುಕೊಳ್ಳಬಹುದು. ಆಂಗ್ಲ ಮಾಲೆಯ ಈ ಅಕ್ಷರಗಳು ಆಂಧ್ರ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೇಲಾಂಗಣ ಸೂಚಕ.
ಕತೆಯಾಗಿಸಿ:
ವಸ್ತು, ಘಟನೆಗಳ ದೀರ್ಘ ಪಟ್ಟಿಯನ್ನು ನೆನಪಿಟ್ಟುಕೊಳ್ಳಬೇಕಾದರೆ, ಅವುಗಳನ್ನು ಒಳಗೊಳ್ಳುವ ಕತೆಯನ್ನು ರಚಿಸಿಕೊಳ್ಳುವ ತಂತ್ರವು ಉತ್ತಮವಾಗಿದೆ. ನೀವು ರಚಿಸುವ ಕತೆಯಲ್ಲಿ ನೀವು ಈಗಾಗಲೇ ತಿಳಿದಿರುವ ಪಾತ್ರ, ವಸ್ತುಗಳಿದ್ದರೆ ನೆನಪಿಟ್ಟುಕೊಳ್ಳಲು ಸುಲಭ. 1919ರಲ್ಲಿ, ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡಯರ್ 400 ಜನರ ಹತ್ಯೆಗೆ ಕಾರಣವಾದುದನ್ನು ಹೀಗೆ ಕತೆಯಾಗಿ ಹೆಣೆದುಕೊಳ್ಳಬಹುದು.
ಅಮೃತದಂತೆ ಸಿಹಿಯಿರುವ 19 ಅಂಜೂರ, 19 ದ್ರಾಕ್ಷಿ ಮಾರಲು ಬಂದಿದ್ದ ಜಾಲಿ ಮನುಷ್ಯ ಕಾಬೂಲಿವಾಲಾಗೆ ಡೈರಿಯೊಂದು ಸಿಕ್ಕಿತು. ಎತ್ತಿಕೊಳ್ಳಲು ಮುಂದಾದಾಗ 400 ಗುಂಡುಗಳು ಸಿಡಿದವು! ಈ ತರಹದ ಕಲ್ಪನೆಗಳಿಂದ ನೆನಪಿಟ್ಟುಕೊಳ್ಳಲು ಕಠಿಣವೆನಿಸುವ ಇಸವಿ, ಘಟನಾಸ್ಥಳ, ವ್ಯಕ್ತಿಗಳ ಹೆಸರನ್ನು ದೀರ್ಘಾವಧಿ ಯಲ್ಲಿ ಸಹಜವಾಗಿ ನೆನಪಿಟ್ಟುಕೊಳ್ಳಬಹುದು. ಅಗತ್ಯವೆನಿಸಿದರೆ ಮಾಹಿತಿಯನ್ನು ಫೋಟೋಗಳು, ನಕ್ಷೆಗಳು ಮತ್ತು ಚಿಹ್ನೆಗಳಾಗಿಯೂ ದೃಶ್ಯೀಕರಿಸಬಹುದು.
ಕಳೆದುಕೊಳ್ಳುವ ಮುನ್ನ ಬಳಸಿ :
ಯಾವುದೇ ಮಾಹಿತಿಯನ್ನು ನಿಯಮಿತವಾಗಿ ಬಳಸದಿದ್ದರೆ, ಅದನ್ನು ಮರುಪಡೆಯಲು ಕಷ್ಟವಾಗುತ್ತದೆ. ಉದಾಹರಣೆಗೆ ಹತ್ತು ವರ್ಷಗಳ ಹಿಂದಿನ ನಿಮ್ಮ ಹಳೆಯ ಫೋನ್ ನಂಬರ್. ಒತ್ತಡ, ಖಿನ್ನತೆ, ದುಃಖ, ಆತಂಕಗಳಿಂದಲೂ ಸ್ಮರಣೆಯು ತಾತ್ಕಾಲಿಕವಾಗಿ ಹಾನಿಗೊಳಗಾಗಬಹುದು. ಹಾಗಾಗಿ, ಮಹತ್ವದ ಮಾಹಿತಿಯನ್ನು ಆಗಾಗ ಪುನರಾವರ್ತನೆಗೊಳಿಸುತ್ತಿರಿ. ಪುನರಾವರ್ತನೆಯು ನಿಮ್ಮ ಮೆದುಳಿನ ಮೂಲಕ ದೀರ್ಘಾವಧಿ ಸ್ಮರಣೆಯಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತದೆ.
ನಿಧಾನವೇ ಪ್ರಧಾನ :
ಅಧ್ಯಯನವನ್ನು ಲಗುಬಗೆಯಲ್ಲಿ ಮುಗಿಸಬೇಡಿ. ನಿತ್ಯವೂ ನಿಯಮಿತವಾಗಿ ಭಾಗಗಳಲ್ಲಿ ಅಧ್ಯಯನ ಮಾಡುವುದರಿಂದ, ಮಾಹಿತಿಯು ದೀರ್ಘಾವಧಿಯ ಸ್ಮರಣೆಯಲ್ಲಿ ಶೇಖರಣೆಯಾಗಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ.
ಮಿದುಳಿನ ಕಾಳಜಿ :
ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಮೆದುಳಿಗೂ ಸಾಕಷ್ಟು ವಿಶ್ರಾಂತಿ ಬೇಕು. ಹಾಗಾಗಿ ಸಾಕಷ್ಟು ನಿದ್ದೆ ಮಾಡಿ. ಹಾಗೆಯೇ ಜ್ಞಾಪಕ ಶಕ್ತಿ ವರ್ಧನೆಗೆ ಕಾರಣವಾಗಬಲ್ಲ ಮಾನಸಿಕ ವ್ಯಾಯಾಮ ಗಳತ್ತಲೂ ಗಮನ ನೀಡಿ. ಪದಬಂಧಗಳು, ಸುಡೊಕು, ಚೆಸ್ ಆಟಗಳು ಸ್ಮರಣೆಯನ್ನು ಸುಧಾರಿಸಲು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.