ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನವೊಂದರ ಕುರಿತಮಾಹಿತಿ ಇಲ್ಲಿದೆ.
***
ಯಾವುದೇ ಕಲಾವಿದರು ಅಥವಾ ಸೃಜನಶೀಲ ಆವಿಷ್ಕಾರಗಳನ್ನು ಮಾಡುವವರು ತಮ್ಮ ವಿಶಿಷ್ಟ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ, ಅದರ ಮಾಲೀಕತ್ವ, ಹಕ್ಕು ಸ್ವಾಮ್ಯ ಮತ್ತು ಆ ಕೃತಿಗಳ ಭವಿಷ್ಯದ ಮೌಲ್ಯಗಳನ್ನು ಖಚಿತಪಡಿಸಿಕೊಳ್ಳಲು ಇರುವ ವೇದಿಕೆಯೇ ನಾನ್ ಫಂಜಿಬಲ್ ಟೋಕನ್(ಎನ್ಎಫ್‌ಟಿ).
ಎನ್‌ಎಫ್‌ಟಿ ಎಂದರೆ ಏನು ?
ಫಂಜಿಬಲ್ ಅಂದರೆ ‘ಬದಲಾಯಿಸಬಹುದಾದ’ ಎಂದು ಅರ್ಥ. ನಾನ್ ಫಂಜಿಬಲ್ ಅಂದರೆ ’ಯಾವ ವಸ್ತುವಿನ ಜತೆಗೂ ಪರ್ಯಾಯ ವಸ್ತುವಿನ ಸೃಷ್ಟಿಯ ಸಾಧ್ಯವಿಲ್ಲದ, ವಿಶಿಷ್ಟ ಮತ್ತು ತನ್ನದೇ ಆದ ಅನನ್ಯ ಗುರುತು ಹೊಂದಿರುವ’ ಎಂಬ ಅರ್ಥ ಬರುತ್ತದೆ. ಉದಾ: ಮೊನಾಲಿಸಾ ವರ್ಣಚಿತ್ರ.
ಇಲ್ಲಿ ‘ಟೋಕನ್’ ಎಂದರೆ ಕಲಾಕೃತಿ, ವಿಡಿಯೊ, ಆಟ, ಆನಿಮೇಟೆಡ್ ಚಿತ್ರಗಳು.. ಹೀಗೆ ಯಾವುದೇ ಉತ್ಪನ್ನವಾಗಿರಬಹುದು. ಉದಾಹರಣೆಗೆ, ಒಂದು ದುಬಾರಿ ಪೇಂಟಿಂಗ್, ಮಹಾರಾಜರೊಬ್ಬರ ಖಡ್ಗ, ಯಾವುದೋ ಐತಿಹಾಸಿಕ ಮಹತ್ವವುಳ್ಳ ಸ್ಮರಣಿಕೆಗಳು, ಸೆಲೆಬ್ರಿಟಿ ಉಡುಪು.. ಇತ್ಯಾದಿ. ಇಂಥ ವಸ್ತುಗಳು ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಸೇರಿವೆ ಎಂಬುದನ್ನು ಪ್ರಮಾಣೀಕರಿಸುವಂತಹ ಒಂದು ತಂತ್ರಜ್ಞಾನದ ವೇದಿಕೆಯೇ ಎನ್‌ಎಫ್‌ಟಿ.
ಈವರೆಗೂ ನಾವು ನೋಡುತ್ತಿರುವ, ಅಂತರ್ಜಾಲದಲ್ಲಿ ಲಭ್ಯವಿರುವ ಚಿತ್ರ ಅಥವಾ ಆಟಗಳಿಗೂ ಮತ್ತು ಎನ್‌ಎಫ್‌ಟಿ ಗೆ ಸೇರಿದ ವಸ್ತುಗಳಿಗಿರುವ ವ್ಯತ್ಯಾಸವೇನು ?
l ಯಾವುದೇ ಚಿತ್ರ ಅಥವಾ ರಚನೆಯನ್ನು (ಟೋಕನ್) ಬ್ಲಾಕ್ ಚೈನ್ ಎಂಬ ಆನ್‌ಲೈನ್ ಜಾಲಕ್ಕೆ ಸೇರಿಸಿದಾಗ ಅದು ಎನ್‌ಎಫ್‌ಟಿ ಆಗುತ್ತದೆ.
lಆ ಬ್ಲಾಕ್ ಚೈನ್ ಜಾಲದಲ್ಲಿ ಈ ಟೋಕನ್ ಅನ್ನು ಸೇರಿಸಿದಾಗ ಅದಕ್ಕೆ ಒಂದು ವಿಶಿಷ್ಟವಾದ ಸರಣಿ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಪ್ರತಿ ವಸ್ತುವನ್ನು ಎನ್‌ಎಫ್‌ಟಿಗೆ ಸೇರಿಸಿದಾಗ, ಅದರದ್ದೇ ಆದ ವಿಶಿಷ್ಟ ಸರಣಿ ಸಂಖ್ಯೆಯನ್ನು ಹೊಂದುತ್ತದೆ ಮತ್ತು ಅದು ಆ ವಸ್ತುವನ್ನು ನಾನ್ ಫಂಜಿಬಲ್ (ಪರ್ಯಾಯ ವಸ್ತು ಸೃಷ್ಟಿ ಅಸಾಧ್ಯ)ಆಗಿ ಮಾಡುತ್ತದೆ.
lಸರಳವಾಗಿ ಹೇಳುವುದಾದರೆ ನಾನ್ ಫಂಜಿಬಲ್ ಟೋಕನ್ ಎಂದರೆ ‘ಬ್ಲಾಕ್ ಚೈನ್ ಜಾಲಕ್ಕೆ ಸೇರಿಸಿದ ನಂತರ ತನ್ನದೇ ವಿಶಿಷ್ಟ ಸರಣಿ ಸಂಖ್ಯೆಯನ್ನು ಹೊಂದಿರುವ ವಸ್ತು' ಎನ್ನಬಹುದು.
l ಈ ವ್ಯವಸ್ಥೆಯಲ್ಲಿ ‘ಈ ಜಗತ್ತಿನ ವಿಶಿಷ್ಟ ವಸ್ತುವಿನ ಮಾಲೀಕತ್ವ ನಿಮ್ಮದು’ ಎಂಬ ಡಿಜಿಟಲ್ ಪ್ರಮಾಣ ಪತ್ರವೂ ಸಿಗುತ್ತದೆ. ಈ ಡಿಜಿಟಲ್ ಪ್ರಮಾಣ ಪತ್ರವನ್ನು ತಿದ್ದುಪಡಿ ಮಾಡಲು ಅಥವಾ ಹಾನಿ ಮಾಡಲು ಸಾಧ್ಯವಿರುವುದಿಲ್ಲ. ಇದು ಭೌತಿಕ ಆಸ್ತಿ ಅಥವಾ ವರ್ಚುಯಲ್ ಆಸ್ತಿಗಳನ್ನು ಸಂಪರ್ಕಿಸುತ್ತದೆ.
ಎನ್‌ಎಫ್‌ಟಿಗಳ ಪ್ರಯೋಜನ
l ಕಲಾವಿದರು ಮತ್ತು ಸೃಜನಶೀಲ ಅವಿಷ್ಕಾರಗಳನ್ನು ಮಾಡುವ ಮಂದಿ ಎನ್‌ಎಫ್‌ಟಿಯಾದ ತಮ್ಮ ರಚನೆ/ಕೃತಿಗಳನ್ನು ಜಗತ್ತಿನಾದ್ಯಂತ ಸುಲಭವಾಗಿ ಪ್ರದರ್ಶನ ಮತ್ತು ಮಾರಾಟ ಮಾಡಬಹುದು.
l ಇದು ಕಲಾವಿದರು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸಾಂಪ್ರದಾಯಿಕ ರೀತಿಯ ಕಲಾಗ್ಯಾಲರಿಗಳ ಪ್ರದರ್ಶನ ಮತ್ತು ಹರಾಜುಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸುತ್ತದೆ.
ರಾಯ ಧನ(ರಾಯಲ್ಟಿ)
l ಪ್ರತಿ ಬಾರಿ ಒಬ್ಬ ವ್ಯಕ್ತಿಯ ಎನ್‌ಎಫ್‌ಟಿ ಮಾರಾಟವಾದ ಮೇಲೆ, ಖರೀದಿಸಿದ ಗ್ರಾಹಕ ಅದನ್ನು ಮರು ಮಾರಾಟ ಮಾಡಲು ನಿರ್ಧರಿಸಿದರೆ ಅದರ ಬೆಲೆಯ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ಮೂಲ ಕಲಾವಿದರು ಪಡೆಯಬಹುದು.
l ಸಾಂಪ್ರದಾಯಿಕ ವ್ಯಾಪಾರದಲ್ಲಿ ಮೊದಲ ಮಾರಾಟದಲ್ಲಿಯೇ ಮೂಲ ಕಲಾವಿದನಿಗೂ ಆ ಉತ್ಪನ್ನಕ್ಕೂ ನಡುವಿನ ವಾಣಿಜ್ಯ ಸಂಬಂಧ ಕಳಚಿ ಹೋಗುತ್ತದೆ. ಆದರೆ, ಎನ್‌ಎಫ್‌ಟಿಯಲ್ಲಿ ಗ್ರಾಹಕರಿಂದ ಗ್ರಾಹಕರಿಗೆ ಕೈ ಬದಲಾಗುತ್ತಿದ್ದಂತೆಯೇ ಪ್ರತಿ ಬಾರಿಯೂ ಮೂಲ ಕಲಾವಿದರಿಗೆ ರಾಯಧನ ಪಾವತಿಸಲಾಗುತ್ತದೆ.
l ಇದು ಡಿಜಿಟಲ್ ವಸ್ತುವಿನ ಮೇಲಿನ ಮಾಲೀಕತ್ವವನ್ನು ಖಚಿತಪಡಿಸುತ್ತದೆ.
ಎನ್‌ಎಫ್‌ಟಿಗಳ ವೈಶಿಷ್ಟ್ಯ
l ಪ್ರತಿ ಎನ್‌ಎಫ್‌ಟಿಗಿರುವ ಸರಣಿ ಸಂಖ್ಯೆಯ ಗುರುತಿನೊಂದಿಗೆ ಮತ್ತೊಂದು ಎನ್‌ಎಫ್‌ಟಿ ರಚಿಸಲು ಸಾಧ್ಯವಿಲ್ಲ. ಇದೆಲ್ಲವನ್ನು ಬ್ಲಾಕ್ ಚೈನ್ ಮೂಲಕವೇ ನೋಡಬಹುದು ಮತ್ತು ಪರಿಶೀಲಿಸಬಹುದು.
l ಬ್ಲಾಕ್ ಚೈನ್‌ನಲ್ಲಿರುವ ಆ ಟೋಕನ್‌ನ ಮಾಲೀಕರು ಆ ಚಿತ್ರ ಮತ್ತು ಸ್ವತ್ತನ್ನು ಬಳಸಲು ಸಂಪೂರ್ಣ ಹಕ್ಕು ಸ್ವಾಮ್ಯ ಹೊಂದಿರುತ್ತಾರೆ.
l ಎನ್‌ಎಫ್‌ಟಿಗಳನ್ನು ನಕಲು ಮಾಡಲು ಸಾಧ್ಯವಾಗದ ಕಾರಣ ಅವು ಕಡಿಮೆ ಸಂಖ್ಯೆಯಲ್ಲಿರುತ್ತವೆ. ಹಾಗಾಗಿ ಅಂಥ ವಸ್ತುಗಳಿಗೆ ಸಹಜವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.
l ಒಂದು ಟೋಕನ್‌ನ ಮೆಟಾ ಡೇಟಾವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಆ ಚಿತ್ರ ಅಥವಾ ಟೋಕನ್ ಹೆಸರನ್ನು ಯಾರು ಅಳಿಸಲೂ ಸಾಧ್ಯವಿಲ್ಲ. ಹಾಗೆಯೇ, ಅದನ್ನು ಬ್ಲಾಕ್ ಚೈನ್‌ನಿಂದ ತೆಗೆದುಹಾಕಲು ಸಾಧ್ಯವಿಲ್ಲ ಮತ್ತು ಬದಲಾಯಿಸಲು ಸಾಧ್ಯವಿಲ್ಲ.
l ಎನ್‌ಎಫ್‌ಟಿ ಗಳು ಸುರಕ್ಷಿತವಾಗಿ ಸಂರಕ್ಷಿಸಬಹುದಾದ, ಡೌನ್ಲೋಡ್ ಮಾಡಬಹುದಾದ ಮತ್ತು ಮರು ಮಾರಾಟ ಮಾಡಬಹುದಾದ ಸೌಲಭ್ಯಗಳನ್ನು ಹೊಂದಿವೆ.
ಎನ್‌ಎಫ್‌ಟಿ ಒಂದು ಕ್ರಿಪ್ಟೊಕರೆನ್ಸಿಯೇ ?
ಖಂಡಿತಾ ಅಲ್ಲ. ಕ್ರಿಪ್ಟೊ ಕರೆನ್ಸಿಗಳು ಫಂಜಿಬಲ್ ಆಗಿರುತ್ತವೆ. ಒಂದು ಬಿಟ್ ಕಾಯಿನ್ ಅನ್ನು ಮತ್ತೊಂದು ಬಿಟ್ ಕಾಯಿನ್‌ಗೆ ಬದಲಾಯಿಸಬಹುದು. ಆದರೆ ಎನ್ ಎಫ್ ಟಿ ಗಳನ್ನು ಮತ್ತೊಂದು ಎನ್ ಎಫ್ ಟಿ ಯಿಂದ ಬದಲಾಯಿಸಲು ಸಾಧ್ಯವಿಲ್ಲ. ಅವು ಸಂಪೂರ್ಣ ವಿಭಿನ್ನ ಮೌಲ್ಯ ಹೊಂದಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.