ADVERTISEMENT

ಎಂಬಿಎ ನಂತರ ಮುಂದೇನು?: ಪ್ರದೀಪ್‌ ಕುಮಾರ್‌ ಅವರ ಪ್ರಶ್ನೋತ್ತರ ಅಂಕಣ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 21:30 IST
Last Updated 14 ನವೆಂಬರ್ 2021, 21:30 IST
ಪ್ರದೀಪ್‌ ಕುಮಾರ್‌
ಪ್ರದೀಪ್‌ ಕುಮಾರ್‌   

1. ಬಿಕಾಂ ಮಾಡಿ, ಎಂಬಿಎ ಮಾಡಿದ್ದೇನೆ. ಮುಂದೇನು ಮಾಡಬೇಕೆನ್ನುವ ಗೊಂದಲದಲ್ಲಿದ್ದೇನೆ. ನಿಮ್ಮ ಸಲಹೆ ನೀಡಿ.

ನಿಖಿಲ್, ಊರು ತಿಳಿಸಿಲ್ಲ.

ಒಂದು ಉದ್ಯಮದ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಗ್ರವಾದ ತಿಳಿವಳಿಕೆಯನ್ನು-ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಆಯವ್ಯಯ ಶಾಸ್ತ್ರ, ಬಂಡವಾಳ ಪೂರೈಕೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ-ಎಂಬಿಎ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಎಂಬಿಎ ಕೋರ್ಸ್‌ನಲ್ಲಿ ಕಲಿಸುವ ತತ್ವಗಳು, ಸೂತ್ರಗಳು ವೈಯಕ್ತಿಕ ಜೀವನದಲ್ಲೂ ಉಪಯುಕ್ತ.

ADVERTISEMENT

ಎಂಬಿಎ ಕೋರ್ಸ್ ನಂತರ ಆಕರ್ಷಕ ಅವಕಾಶಗಳಿವೆ. ಬ್ಯಾಂಕಿಂಗ್, ಫೈನಾನ್ಸ್, ಇನ್‌ವೆಸ್ಟ್‌ಮೆಂಟ್‌, ಇನ್ಶೂರೆನ್ಸ್, ರಿಟೇಲ್, ಮಾರ್ಕೆಟಿಂಗ್, ಎಫ್‌ಎಂಸಿಜಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಇನ್ನೂ ಹೆಚ್ಚಿನ ತಜ್ಞತೆಯ ಅಗತ್ಯವಿದ್ದರೆ, ಪಿಎಚ್‌ಡಿ ಕೂಡಾ ಮಾಡಬಹುದು.

2. ನಾನು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ. ಭಾರತೀಯ ಸೇನೆಗೆ ಸೇರಬೇಕು ಎಂಬ ಆಸೆ ಇದೆ. ಹೇಗೆ ಸೇರಬೇಕೆಂದು ತಿಳಿಸಿ.

ಸಂತೋಷ ಟಿ, ಊರು ತಿಳಿಸಿಲ್ಲ.

ನೀವು ಪದವಿಯ ಅಂತಿಮ ವರ್ಷದಲ್ಲಿರುವುದರಿಂದ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (ಸಿಡಿಎಸ್) ಪರೀಕ್ಷೆಯ ಮುಖಾಂತರ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಸೇರಿ ನಾನ್-ಟೆಕ್ನಿಕಲ್ ಹುದ್ದೆಗಳನ್ನು ಅರಸಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: https://indianarmy.nic.in/home

3. ನಾನು ಬಿಫಾರ್ಮಾ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ಓದಿದ ನಂತರ ನೌಕರಿಯ ಅವಕಾಶಗಳೇನು? ನನಗೆ ಫಾರ್ಮ್ ಡಿ ಮಾಡುವ ಬಯಕೆಯಿದೆ. ಇದನ್ನು ನಾನು ಮಾಡಬಹುದೇ? ಅಥವಾ ಎಂಫಾರ್ಮಾ ಮಾಡಲೇಬೇಕೇ? ಒಂದು ವೇಳೆ ಎಂಫಾರ್ಮಾ ಮಾಡಿದರೆ ನೌಕರಿಯ ಅವಕಾಶಗಳು ಹೇಗೆ?

ತೇಜು ತಾಪನ್, ಬೆಂಗಳೂರು.

ಬಿಫಾರ್ಮಾ ಪದವಿಯ ನಂತರ ನೇರವಾಗಿ ಮೂರು ವರ್ಷದ ಡಾಕ್ಟರ್ ಆಫ್ ಫಾರ್ಮಸಿ ಕೋರ್ಸ್ (ಫಾರ್ಮ್ ಡಿ) ಅಥವಾ ಎರಡು ವರ್ಷದ ಎಂಫಾರ್ಮಾ ಕೋರ್ಸ್ ಮಾಡಬಹುದು. ಈ ಎರಡೂ ಕೋರ್ಸ್‌ಗಳಿಗೂ ವೃತ್ತಿಯ ಅನೇಕ ಅವಕಾಶಗಳಿವೆ. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.pharmdinfo.com/pharm-d-course-f124/topic1704.html

4. ನಾನು 2015ರಲ್ಲಿ ಆರ್ಟ್ಸ್ ಪದವಿ ಮುಗಿಸಿದ್ದೇನೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಓದು ಮೊಟಕುಗೊಳಿಸಿದೆ. ನನಗೀಗ 28 ವರ್ಷ. ನನ್ನ ಗುರಿ ಪೊಲೀಸ್ ಅಧಿಕಾರಿ ಆಗಬೇಕು ಎನ್ನುವುದು. ನಿಮ್ಮ ಸಲಹೆ ಏನು?

ದುರುಗೇಶ್ ಪಿ. ಪಾಟೀಲ್, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಪಿಎಸ್‌ಐ ಹುದ್ದೆಗೆ ಸಾಮಾನ್ಯ ವರ್ಗಕ್ಕೆ 25 ವರ್ಷದ ಹಾಗೂ ಇನ್ನಿತರ ವರ್ಗಗಳಾದರೆ 27 ವರ್ಷದ ಗರಿಷ್ಠ ಮಿತಿಯಿದೆ. ಆದರೆ, ಪೊಲೀಸ್ ಅಧಿಕಾರಿಯಾಗುವುದೇ ನಿಮ್ಮ ಗುರಿ ಎನ್ನುವುದಾದರೆ ಯುಪಿಎಸ್‌ಸಿ ಮುಖಾಂತರ ಐಪಿಎಸ್ ಅಧಿಕಾರಿಯಾಗಲು ಪ್ರಯತ್ನಿಸಬಹುದು.

5. ನಾನು ಬಿಎಸ್‌ಸಿ ಪದವಿ ಮುಗಿಸಿದ್ದೇನೆ. ಮುಂದೆ ಎಂಎಸ್‌ಸಿ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ ನಾನು ಪಿಜಿಸಿಇಟಿಗೆ ಅರ್ಜಿ ಸಲ್ಲಿಸಿಲ್ಲ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ.

ಶೈಲಜಾ, ಬೆಂಗಳೂರು.

ಬಿಎಸ್‌ಸಿ ಪದವಿಯ ಆಧಾರದ ಮೇಲೆ ನೇರವಾಗಿ ಅಥವಾ ಕೆಲವೊಮ್ಮೆ ಪರೀಕ್ಷೆಗಳ ಮೂಲಕ ಎಂಎಸ್‌ಸಿ ಕೋರ್ಸ್‌ಗೆ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶದ ಅವಕಾಶವಿದೆ. ಈ ವರ್ಷದ ಪ್ರಕ್ರಿಯೆ ಇದೀಗ ಶುರುವಾಗುತ್ತಿದೆ. ಹಾಗಾಗಿ, ಈಗಲೂ ನೀವು ಎಂಎಸ್‌ಸಿಗೆ ಪ್ರಯತ್ನಿಸಬಹುದು.

6. ನಾನು ಪಿಯುಸಿ (ಪಿಸಿಎಂಬಿ) ಮುಗಿಸಿ ನೀಟ್ ಪರೀಕ್ಷೆ ಬರೆದಿದ್ದೇನೆ. ಎಂಬಿಬಿಎಸ್ ಓದಲು ಸರ್ಕಾರಿ ಸೀಟು ಸಿಗಲು ಕೆಲವು ಅಂಕಗಳು ಕಡಿಮೆಯಿವೆ. ಬಿಎಎಂಸ್ ಮಾಡಿದರೆ ಒಳ್ಳೆಯದೋ ಅಥವಾ ಬಿಡಿಎಸ್ ಮಾಡಿದರೆ ಒಳ್ಳೆಯದೋ? ಮುಂದೆ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು?

ಹೆಸರು, ಊರು ತಿಳಿಸಿಲ್ಲ.

ಈ ವರ್ಷ ಎಂಬಿಬಿಎಸ್ ಅಥವಾ ಬಿಡಿಎಸ್ ಕೋರ್ಸ್ ಸೇರಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಮತ್ತು ಎಂಬಿಬಿಎಸ್ ಕೋರ್ಸನ್ನೇ ಮಾಡುವ ಗುರಿಯಿದ್ದರೆ, ಅಲ್ಪ ವಿರಾಮವನ್ನು ತೆಗೆದುಕೊಂಡು ಪರಿಪೂರ್ಣ ತಯಾರಿಯಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಯತ್ನಿಸಬಹುದು. ಪ್ರಮುಖವಾಗಿ, ನಿಮ್ಮ ವೃತ್ತಿ ಯೋಜನೆಯಂತೆ ಕೋರ್ಸ್ ನಿರ್ಧಾರ ಮಾಡುವುದು ಸೂಕ್ತ.

7. ನಾನು ಬಿಎಸ್‌ಸಿಯನ್ನು (ಪಿಎಂಸಿಎಸ್) 2021ರಲ್ಲಿ ಮುಗಿಸಿದ್ದೀನಿ. ನನಗೆ ಭೌತಶಾಸ್ತ್ರ ಅಥವಾ ಗಣಿತದಲ್ಲಿ ಸ್ನಾತಕೋತ್ತರ ಪದವಿ ಮಾಡಲಿಷ್ಟವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಆಸಕ್ತಿ ಇಲ್ಲ. ಹಾಗಾಗಿ, ಎಂಬಿಎ ಮಾಡಬೇಕು ಎಂದುಕೊಂಡಿದ್ದೇನೆ. ಈ ನಿರ್ಧಾರ ಸರಿಯೇ?

ಹೆಸರು, ಊರು ತಿಳಿಸಿಲ್ಲ.

ಬಿಎಸ್‌ಸಿ ನಂತರ ಎಂಎಸ್‌ಸಿ (ಕಂಪ್ಯೂಟರ್ ಸೈನ್ಸ್), ಎಂಸಿಎ ಅಥವಾ ಎಂಬಿಎ ಮಾಡಬಹುದು. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯ ಆಧಾರದ ಮೇಲೆ ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಒಳ್ಳೆಯದು.

8. ನಾನು ಪಿಯುಸಿ (ವಿಜ್ಞಾನ) ಮುಗಿಸಿ ಬಿಎಸ್‌ಸಿ (ಅನಸ್ಥೇಶಿಯಾ) ಸೇರಬೇಕೆಂದುಕೊಂಡಿದ್ದೇನೆ. ಪ್ರವೇಶ ಪ್ರಕ್ರಿಯೆ, ಸರ್ಕಾರದ ಸೀಟು ಗಿಟ್ಟಿಸಿಕೊಳ್ಳುವುದು ಹೇಗೆ? ಮುಂದೇನು ಮಾಡುವುದೆಂದು ಗೊತ್ತಾಗುತಿಲ್ಲ.

ಮೇಘನಾ ಅಶ್ವತ್, ಊರು ತಿಳಿಸಿಲ್ಲ.

ಬಿಎಸ್‌ಸಿ (ಅನಸ್ಥೇಶಿಯಾ) ಕೋರ್ಸ್ ಪ್ರಕ್ರಿಯೆ ಇತ್ಯಾದಿ ಕುರಿತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.rguhs.ac.in/

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.