1. ಐಸಿಎಸ್‌ಇ ಮತ್ತು ಸಿಬಿಎಸ್‌ಇ ಪಠ್ಯಕ್ರಮಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ. ನಮ್ಮ ಸಂಬಂಧಿಕರ ಹುಡುಗನೊಬ್ಬ 6 ನೇ ತರಗತಿಯವರೆಗೂ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಓದಿದ್ದು, ಕಾರಣಾಂತರಗಳಿಂದ ಬೇರೆ ಸ್ಥಳಕ್ಕೆ ಹೋಗಬೇಕಾಗಿದೆ. ಅಲ್ಲಿರುವುದು ಐಸಿಎಸ್‌ಇ ಶಾಲೆ ಮಾತ್ರ. ಇವನನ್ನು ಐಸಿಎಸ್‌ಇ ಶಾಲೆಗೆ ಸೇರಿಸುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತದೆಯೇ?.
ಹೆಸರು, ಊರು ತಿಳಿಸಿಲ್ಲ.
ಪೋಷಕರು ಪದೇ ಪದೇ ವರ್ಗಾವಣೆಯಾಗುವ ವೃತ್ತಿಯಲ್ಲಿದ್ದರೆ, ಅಂಥವರು ತಮ್ಮ ಮಕ್ಕಳನ್ನು ರಾಜ್ಯ ಪಠ್ಯಕ್ರಮದ ಬದಲು ಐಸಿಎಸ್‌ಇ(ಇಂಡಿಯನ್ ಕೌನ್ಸಿಲ್ ಆಫ್ ಸೆಕೆಂಡರಿ ಎಜುಕೇಷನ್) ಅಥವಾ ಸಿಬಿಎಸ್‌ಇ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ಹೆಚ್ಚು ಸಮಂಜಸವೆನಿಸುತ್ತದೆ. ರಾಜ್ಯ/ಸಿಬಿಎಸ್‌ಇ ಪಠ್ಯಕ್ರಮಗಳಿಗೆ ಹೋಲಿಸಿದರೆ ಐಸಿಎಸ್‌ಇ ಪಠ್ಯಕ್ರಮದಲ್ಲಿ ಗಣಿತ, ವಿಜ್ಞಾನದ ವಿಷಯಗಳ ಜೊತೆ ಭಾಷೆ, ಚರಿತ್ರೆ, ಭೂಗೋಳ, ಸಮಾಜ ವಿಜ್ಞಾನ, ಕಲೆ, ಸಾಹಿತ್ಯದಂತಹ ವಿಷಯಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ ಇತ್ಯಾದಿಯನ್ನೂ ಕಲಿಯುವ ಅವಕಾಶವಿರುತ್ತದೆ. ಈ ಕಾರಣಗಳಿಂದ, ಐಸಿಎಸ್‌ಇ ಹೆಚ್ಚು ಸಮಗ್ರ ಮತ್ತು ಪ್ರಾಯೋಗಿಕವೆನಿಸುತ್ತದೆ. ವಿದ್ಯಾರ್ಥಿಗಳು ರಾಜ್ಯ/ಸಿಬಿಎಸ್‌ಇ ಶಿಕ್ಷಣದಲ್ಲಿ ಪಡೆದಷ್ಟು ಅಂಕಳನ್ನುಐಸಿಎಸ್‌ಇ ಪದ್ಧತಿಯಲ್ಲಿ
ಪಡೆಯುವುದು ಕಷ್ಟ.
ಇನ್ನು, ಸಿಬಿಎಸ್‌ಇಯಲ್ಲಿ ಓದಿದವರು ಐಸಿಎಸ್ಇನಲ್ಲಿ ಮುಂದುವರಿಸುವ ಕುರಿತು ಕೇಳಿದ್ದೀರಿ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ; ಆದರೆ, ಮುಂದಿನ ಶಿಕ್ಷಣದ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಆ ವಿದ್ಯಾರ್ಥಿಗೆ ಹೆಚ್ಚುವರಿ ಬೋಧನೆಯ ಅಗತ್ಯವಿದೆಯೇ ಎಂದು ಪರಿಶೀಲಿಸುವುದು ಸೂಕ್ತ. ವಿದೇಶದಲ್ಲಿ ಐಸಿಎಸ್‌ಇ ಶಿಕ್ಷಣಕ್ಕೆ ಹೆಚ್ಚು ಮನ್ನಣೆ ಇದೆ. ಹಾಗಾಗಿ, ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಅನುಕೂಲಕರವಾಗಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.catalyzecenter.com/blog/2018/april/differences-between-CBSE-and-ICSE-curricula.html
***
2. ನಾನು ಬಿಎಸ್‌ಸಿ (ಬಯೋಟೆಕ್ನಾಲಜಿ) ಓದಿದ್ದೇನೆ. ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಎಂಎಸ್‌ಸಿ ಮಾಡಿದರೆ ಉಪಯೋಗವಿದೆಯೇ? ಬೇರೆ ಏನಾದರೂ ಆಯ್ಕೆಗಳಿವೆಯೇ? ದಯವಿಟ್ಟು ಸಲಹೆ ಕೊಡಿ.
ಹೆಸರು, ಊರು ತಿಳಿಸಿಲ್ಲ.
ಒಂದು ನಿರ್ದಿಷ್ಟವಾದ ವೃತ್ತಿ ಮತ್ತು ಅದಕ್ಕೆ ಅನುಗುಣವಾಗಿ ಶಿಕ್ಷಣದ ಯೋಜನೆಯಿಲ್ಲದೆ ಕೋರ್ಸ್ ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಈಗಲೂ, ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿ ಯೋಜನೆಯನ್ನು ಮಾಡಿದರೆ ಈಗಿರುವ ಗೊಂದಲ ನಿವಾರಣೆಯಾಗುತ್ತದೆ.
ಬಿಎಸ್‌ಸಿ ನಂತರ ನೇರವಾಗಿ ಕೆಲಸಕ್ಕೆ ಸೇರುವುದಾದರೆ, ಸರ್ಕಾರಿ ಮತ್ತು ಖಾಸಗೀ ವಲಯದ ಬಯೋಟೆಕ್ನಾಲಜಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು, ಔಷಧ, ಆಹಾರ, ರಸಗೊಬ್ಬರ, ಕಾಸ್ಮೆಟಿಕ್ಸ್ ಮತ್ತಿತರ ತಯಾರಿಕ ಸಂಸ್ಥೆಗಳು, ಪ್ರಯೋಗಾಲಯಗಳಂತಹ ಕ್ಷೇತ್ರಗಳಲ್ಲಿ ವೃತ್ತಿಯನ್ನು ಹುಡುಕಿಕೊಳ್ಳಬಹುದು.
ಹೆಚ್ಚಿನ ತಜ್ಞತೆಗಾಗಿ ಎಂಎಸ್‌ಸಿ (ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಮೈಕ್ರೊಬಯಾಲಜಿ, ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್, ಫೊರೆನ್ಸಿಕ್ ಸೈನ್ಸ್, ಲೈಫ್ ಸೈನ್ಸ್, ಜೆನೆಟಿಕ್ಸ್, ಕ್ಲಿನಿಕಲ್ ರಿಸರ್ಚ್ ಇತ್ಯಾದಿ) ಕೋರ್ಸ್ ಅನ್ನು ರೆಗ್ಯುಲರ್ ಅಥವಾ ಕೆಲಸದಲ್ಲಿದ್ದುಕೊಂಡು ದೂರಶಿಕ್ಷಣದ ಮುಖಾಂತರವೂ ಮಾಡಬಹುದು. ಜೊತೆಗೆ, ಮಾರ್ಕೆಟಿಂಗ್‌ನಲ್ಲಿ ಆಸಕ್ತಿಯಿದ್ದರೆ ಎಂಬಿಎ (ಬಯೋಟೆಕ್ನಾಲಜಿ), ಸಂಶೋಧನೆಯಲ್ಲಿ ಆಸಕ್ತಿಯಿದ್ದರೆ ಪಿಎಚ್.ಡಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU
***
3. ನಾನು ಎಂಕಾಂ ಮಾಡುತ್ತಿದ್ದೇನೆ. ನನಗೆ ಆಡಿಟರ್ ಆಗಬೇಕೆಂಬ ಆಸೆ ಇದೆ. ಆದರೆ, ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ.
ಶಿವರಾಜ್, ನರಗುಂದ.
ಬಿಕಾಂ/ಎಂಕಾಂ (ಕನಿಷ್ಠ ಶೇ 55) ನಂತರ ಸಿಎ ಇಂಟರ್‌ಮೀಡಿಯೆಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿ ಕೊಳ್ಳಬಹುದು. ಜೊತೆಗೆ 3 ವರ್ಷದ ಆರ್ಟಿಕಲ್ ಟ್ರೈನಿಂಗ್‌ಗೆ ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಠ 3 ರಿಂದ 4 ವರ್ಷ ಬೇಕಾಗುತ್ತದೆ.
ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಪರಿಶೀಲಿಸಿ: https://icai.org/
***
4. ಡಿಫಾರ್ಮಾ ಮುಗಿದ ಮೇಲೆ ಮುಂದೇನು ಮಾಡಬಹುದು? ಭಾರತ ಹಾಗೂ ವಿದೇಶದಲ್ಲಿರುವ ಉದ್ಯೋಗಾವಕಾಶಗಳೇನು?
ಹೆಸರು, ಊರು ತಿಳಿಸಿಲ್ಲ.
ಡಿಫಾರ್ಮಾ ನಂತರ ಫಾರ್ಮಾ ಉತ್ಪಾದನೆ, ಮಾರ್ಕೆಟಿಂಗ್ ಮತ್ತು ಸಂಶೋಧನೆ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್ಸ್, ಕಮ್ಯೂನಿಟಿ ಸೆಂಟರ್ಸ್, ಮೆಡಿಕಲ್ ಸ್ಟೋರ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಹಾಗೂ, ಸರ್ಕಾರಿ ಕ್ಷೇತ್ರದ ಹುದ್ದೆಗಳಿಗೂ ಪ್ರಯತ್ನಿಸಬಹುದು.
ಹೆಚ್ಚಿನ ತಜ್ಞತೆಗಾಗಿ, ಡಿಫಾರ್ಮಾ ನಂತರ ಎರಡು ವರ್ಷದ ಬಿಫಾರ್ಮಾ ಮಾಡಿ, ನಂತರ ಎಂಫಾರ್ಮಾ ಮಾಡಬಹುದು. ಅನೇಕ ಹೊರರಾಷ್ಟ್ರಗಳಲ್ಲಿ ಭಾರತದ ಫಾರ್ಮಸಿಸ್ಟ್‌ಗಳಿಗೆ ಬೇಡಿಕೆಯಿದೆ. ವಿದೇಶದಲ್ಲಿ ಉದ್ಯೋಗವನ್ನು ಅರಸುವ ಆಕಾಂಕ್ಷೆಯಿದ್ದಲ್ಲಿ, ಭಾರತದಲ್ಲಿ ಫಾರ್ಮಸಿಸ್ಟ್ ಎಂದು ನೋಂದಾಯಿಸಿಕೊಂಡ ನಂತರ, ಆಯಾ ದೇಶಕ್ಕೆ ಅನುಗುಣವಾಗುವ ವಲಸೆ/ಉದ್ಯೋಗದ ನಿಯಮಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.