ವೆಂಕಟ ಸುಬ್ಬರಾವ್. ವಿ
ಪ್ರಸ್ತುತ ವಿವಿಧ ಪಠ್ಯಕ್ರಮಗಳು ಚಾಲ್ತಿಯಲ್ಲಿವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಪೋಷಕರಲ್ಲಿರುವ ಗೊಂದಲ. ಈ ಸರಣಿಯಲ್ಲಿ ಪಠ್ಯಕ್ರಮಗಳ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತಿದೆ.
‘ನನ್ನ ಮಗನನ್ನು ಐ.ಸಿ.ಎಸ್.ಇ. ಸಿಲಬಸ್ ಇರುವ ಶಾಲೆಗೆ ಸೇರಿಸಬೇಕು ಅಂತಾ ಅಂದ್ಕೊಂಡಿದ್ದೀವಿ’– ಪೋಷಕರೊಬ್ಬರು ಮಾತು ಆರಂಭಿಸಿದರು.
‘ಅದು ತುಂಬಾ ಸ್ಟ್ಯಾಂಡರ್ಡ್ ಅಂತೆ, ಅಲ್ಲವಾ?’ – ‘ಸಿ.ಬಿ.ಎಸ್.ಇ’ಗೆ ಸೇರಿಸಿಬಿಡಿ. ಅದಕ್ಕಿಂತ ಸ್ವಲ್ಪ ಸುಲಭವಾಗಬಹುದು. ಸಿಬಿಎಸ್‌ಇ ಸ್ಕೂಲ್‌ಗಳು ತುಂಬಾ ಇವೆಯಲ್ಲಾ‘– ಅವರ ಜೊತೆಯಲ್ಲಿದ್ದವರು ಮಾತು ಮುಂದುವರಿಸಿದರು. ಅನಿಸಿಕೆ, ಅಭಿಪ್ರಾಯದ ಜೊತೆಗೆ ಸಲಹೆಯನ್ನೂ ನೀಡಿದರು.
‘ನನ್ನ ಮಗಳನ್ನು ಸ್ಟೇಟ್ ಸಿಲಬಸ್ ಇರುವ ಶಾಲೆಗೆ ಸೇರಿಸು ಅಂತಿದ್ದಾರೆ. ಸ್ಕೋರ್ ಮಾಡುವುದು ಸುಲಭ ಅಂತೆ. ಮುಂದಕ್ಕೂ ಬಹಳ ಒಳ್ಳೆಯದಾಗುತ್ತದಂತೆ’– ಅವರ ಮಾತಿನ ನಡುವೆ, ಮತ್ತೊಂದು ಧ್ವನಿ ಸೇರಿತು.
‘ಈಗ ಎನ್‌ಐಒಎಸ್ ಅಂತೆ. ಅದು ಓಪನ್ ಸ್ಕೂಲ್ ಅಂತೆ. ಶಾಲೆಗಳು ಎಲ್ಲಿವೆಯೋ. ಗೊತ್ತಿಲ್ಲಪ್ಪ… ಆಮೇಲೆ, ನನ್ನ ಫ್ರೆಂಡ್, ತನ್ನ ಮಗನನ್ನು ಐ.ಜಿ.ಸಿ.ಎಸ್.ಇ ಸಿಲಬಸ್ ಶಾಲೆಗೆ ಸೇರಿಸಿದ್ದ. ಅದೇನೋ, ಬೇರೆ ದೇಶಗಳಿಗೆ ಹೋದಾಗ, ತುಂಬಾ ಅನುಕೂಲವಾಗುತ್ತದೆ...’ ಮಾತುಗಳ ಪೋಣಿಸುವಿಕೆಗೆ ಕೊನೆಯೇ ಇಲ್ಲದಂತೆ, ಪೋಷಕರ ಚರ್ಚೆ ಮುಂದುವರಿದಿತ್ತು...!
ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ, ಅನೇಕ ಪೋಷಕರಲ್ಲಿ ಇಂಥದ್ದೊಂದು ಗೊಂದಲವಿರುವುದಂತೂ ಸಹಜ. ಹಲವು ಪೋಷಕರು, ಪಠ್ಯಕ್ರಮಗಳ ಕುರಿತು ಸರಿಯಾದ ಮಾಹಿತಿ ತಿಳಿಯದೇ, ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಮಕ್ಕಳಿಗೆ ಅದು ಒಗ್ಗದಿದ್ದಾಗ, ಅರ್ಧಕ್ಕೆ ಶಾಲೆ ಬಿಡಿಸಿ, ಪಠ್ಯಕ್ರಮ ಬದಲಿಸುವವರು ಇದ್ದಾರೆ.
ನೋಡಿ, ನಮ್ಮ ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಪಠ್ಯಕ್ರಮಗಳೆಂದರೆ; ಸ್ಟೇಟ್ ಸಿಲಬಸ್(ರಾಜ್ಯ ಪಠ್ಯಕ್ರಮ), ಸಿ.ಬಿ.ಎಸ್.ಇ(ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಪಠ್ಯಕ್ರಮ), ಐಸಿಎಸ್‌ಇ, ಕೇಂಬ್ರಿಡ್ಜ್ ಅಂತರರಾಷ್ಟ್ರೀಯ ಪಠ್ಯಕ್ರಮ, ಐ.ಜಿ.ಸಿ.ಎಸ್.ಇ, ಐ.ಬಿ ಹಾಗೂ ಎನ್.ಐ.ಒ.ಎಸ್. ಹಾಗೆಯೇ ಇತ್ತೀಚಿನ ದಿನಗಳಲ್ಲಿ ‘ಹೋಮ್ ಸ್ಕೂಲಿಂಗ್’ ಕೂಡಾ ಮುನ್ನಲೆಗೆ ಬರುತ್ತಿದೆ.
ಇವುಗಳಲ್ಲಿ ತಮ್ಮ ಮಕ್ಕಳಿಗೆ ಸರಿಹೊಂದುವ ಪಠ್ಯಕ್ರಮ ನಿರ್ಧರಿಸುವುದು ಬಹಳ ಮುಖ್ಯ ಘಟ್ಟ. ಹಾಗಾಗಿ, ಪಠ್ಯಕ್ರಮದ ಆಯ್ಕೆಗೂ ಮೊದಲು, ಈ ಪಠ್ಯಕ್ರಮಗಳ ವೈಶಿಷ್ಟ್ಯಗಳನ್ನು ತಿಳಿಯಬೇಕು. ಎಲ್ಲ ಪಠ್ಯಕ್ರಮಗಳೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವಂತೆಯೇ ರೂಪಿಸಲ್ಪಟ್ಟಿರುತ್ತವೆ. ಆದರೆ ನಿಮ್ಮ ಅವಶ್ಯಕತೆಗೆ ಸರಿಹೊಂದುವ ಪಠ್ಯಕ್ರಮವನ್ನು ಆರಿಸಿಕೊಳ್ಳಬಹುದು. ಈಗ ನಾವು, ಒಂದೊಂದಾಗಿ ಪಠ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಅರಿಯೋಣ
ಸ್ಟೇಟ್ ಸಿಲಬಸ್(ರಾಜ್ಯ ಪಠ್ಯಕ್ರಮ):
ಇದು ರಾಜ್ಯ ಸರ್ಕಾರ ರೂಪಿಸುವ ಪಠ್ಯಕ್ರಮ. ನಮ್ಮಲ್ಲಿ ಬಹಳಷ್ಟು ಜನ ಇದನ್ನು ಓದಿದವರೇ ಇದ್ದೇವೆ. ಬಹಳ ಹಿಂದಿನಿಂದಲೂ ಲಕ್ಷಾಂತರ ವಿದ್ಯಾರ್ಥಿಗಳು ಈ ಪಠ್ಯಕ್ರಮದಲ್ಲಿ ಓದಿ ಮುಂದೆ ಬಂದಿದ್ದಾರೆ.
ಬೇರೆಯ ಶಾಲೆಗಳಿಗೆ ಹೋಲಿಸಿದರೆ ಈ ಪಠ್ಯಕ್ರಮಗಳಿರುವ ಬಹುತೇಕ ಖಾಸಗಿ ಶಾಲೆಗಳಲ್ಲಿ ಶುಲ್ಕ (ಫೀಸ್) ಕಡಿಮೆಯಿರುತ್ತದೆ. ರಾಜ್ಯದ ಎಲ್ಲ ಭಾಗಗಳಲ್ಲೂ ಈ ಶಾಲೆಗಳು ಇರುವುದರಿಂದ, ರಾಜ್ಯದ ಒಳಗಡೆ ವರ್ಗಾವಣೆಯಾಗುವ ಉದ್ಯೋಗಸ್ಥರ ಮಕ್ಕಳಿಗೆ ಇದು ಸೂಕ್ತ ಪಠ್ಯಕ್ರಮ.
ಹಲವಾರು ಶಿಕ್ಷಣ ತಜ್ಞರು ಸೇರಿ ಇದನ್ನು ರೂಪಿಸುತ್ತಾರೆ. ಹಾಗಾಗಿ, ಇದು ಮಕ್ಕಳ ಸರ್ವತೋಮುಖ ಬೆಳವಣಿಗೆ ಗುರಿಯಾಗಿಸಿಕೊಂಡಿರುತ್ತದೆ. ರಾಜ್ಯ ಸರ್ಕಾರದ ಎಲ್ಲ ಅಧಿಸೂಚನೆಗಳನ್ನು ಅನುಷ್ಠಾನಗೊಳಿಸಿ ಮಕ್ಕಳ ಕಲಿಕೆ ಯನ್ನು ಉತ್ತಮಪಡಿಸಲಾಗುತ್ತದೆ. ಈ ಪಠ್ಯಕ್ರಮ ಆಂಗ್ಲಮಾಧ್ಯಮದಲ್ಲೂ ಲಭ್ಯವಿದೆ.
ಸ್ಟೇಟ್ ಪಠ್ಯಕ್ರಮ ಸುಲಭವೇ ?
ಈ ಪ್ರಶ್ನೆ ಬಹಳ ಮಂದಿಯದ್ದು. ‘ಹಾಗೇನಿಲ್ಲ. ಚೆನ್ನಾಗಿ ಓದಿದರೆ ಎಲ್ಲವೂ ಸುಲಭ. ಇದು ಸಹಜವಾಗಿ ಸುಲಭವಿದೆ‘ ಎನ್ನುತ್ತಾರೆ ಬೆಂಗಳೂರಿನ ವಿಡಿಯಾ ಪೂರ್ಣಪ್ರಜ್ಞ ಶಾಲೆಯ ಪ್ರಾಂಶುಪಾಲ ಕೆ.ಎಸ್. ಶ್ರೀಧರ್. ’ವಿದ್ಯಾರ್ಥಿಗಳು ಹೆಚ್ಚು ಒತ್ತಡಕ್ಕೆ ಒಳಗಾಗದೇ ವಿಷಯಗಳನ್ನು ಅರಿತು ಹೆಚ್ಚಿನ ಅಂಕ ಪಡೆಯಲು ಈ ಪಠ್ಯಕ್ರಮ ಸಹಾಯಕ‘ ಎಂದು ಅವರು ಅಭಿಪ್ರಾಯಪಡುತ್ತಾರೆ. ‘ಈ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ಪಿಯುಸಿಯಲ್ಲಿ ಕಷ್ಟವಾಗುತ್ತದೆ‘ ಎಂಬ ಮಾತಿದೆಯಲ್ಲಾ ಎಂಬ ಪ್ರಶ್ನೆಗೆ, ಶ್ರೀಧರ್ ಹೇಳುವುದು ಹೀಗೆ;‘ಅದು ತಪ್ಪು ಕಲ್ಪನೆ. ಬೇರೆಯದಕ್ಕಿಂತ, ಈ ಪಠ್ಯಕ್ರಮ ಓದಿದ ಮಕ್ಕಳೇ ಚೆನ್ನಾಗಿ ಅಂಕಗಳಿಸಿದ ಉದಾಹರಣೆಗಳಿವೆ‘ ಎನ್ನುತ್ತಾರೆ.
‘ರಾಜ್ಯ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. 9 ಮತ್ತು 10ನೇ ತರಗತಿಯ ಕೆಲವು ವಿಷಯಗಳಲ್ಲಿ ಸಿಬಿಎಸ್‌ಇಯಲ್ಲಿ ಉಪಯೋಗಿಸುವ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನೇ ರಾಜ್ಯ ಪಠ್ಯಕ್ರಮದಲ್ಲೂ ಉಪಯೋಗಿಸಲಾಗುತ್ತಿದೆ. ಹಾಗಾಗಿ ಮಕ್ಕಳು ಬೇರೆಯ ಪಠ್ಯಕ್ರಮಗಳಲ್ಲಿ ಕಲಿಯುವಂತೆಯೇ ಕಲಿಯುತ್ತಾರೆ‘ ಎನ್ನುತ್ತಾರೆ ಶ್ರೀಧರ್.
ಹೀಗಾಗಿ ಯಾವ ಪಠ್ಯಕ್ರಮಕ್ಕಿಂತಲೂ, ರಾಜ್ಯ ಪಠ್ಯಕ್ರಮ ಕಡಿಮೆಯೇನಿಲ್ಲ ಎನ್ನವುದನ್ನು ಅರಿತುಕೊಳ್ಳಬೇಕಿದೆ.
(ಲೇಖಕರು: ನಿರ್ದೇಶಕರು, ಸ್ಮಾರ್ಟ್ ಸೆರಬ್ರಮ್ ಪ್ರೈ. ಲಿ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.