ಎರಡು ತಿಂಗಳ ಹಿಂದೆ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಬಂದಿದ್ದಮಂಡ್ಯದ ರೈತರೊಬ್ಬರ ಹೊಟ್ಟೆ ಬಲೂನಿನಂತೆ ಬಾತುಕೊಂಡಿತ್ತು. ಸ್ವಲ್ಪ ಕೈ ಸೋಕಿದರೂ ತೀವ್ರ ನೋವಿನಿಂದ ವಿಲಿವಿಲಿ ಒದ್ದಾಡುತ್ತಿದ್ದ ಅವರ ಸ್ಥಿತಿ ಚಿಂತಾಜನಕವಾಗಿತ್ತು.
ವಾಂತಿ, ಚಳಿಜ್ವರ ಮತ್ತು ಉಸಿರಾಟ ತೊಂದರೆ ಅನುಭವಿಸುತ್ತಿದ್ದ 45 ವರ್ಷ ಆಸುಪಾಸಿನ ಅವರನ್ನು ವೈದ್ಯರು ಪರೀಕ್ಷಿಸಿದರು. ಈ ವ್ಯಕ್ತಿ ಒಂದು ತಿಂಗಳಿಂದ ತೀವ್ರ ಹೊಟ್ಟೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಗೊತ್ತಾಯಿತು. ರಕ್ತ, ಮೂತ್ರ ಮತ್ತುಸ್ಕ್ಯಾನ್, ಸಿ.ಟಿ. ಸ್ಕ್ಯಾನ್ ಪರೀಕ್ಷೆಯಿಂದ ಮೂತ್ರಪಿಂಡ ಸಮಸ್ಯೆ ಇರುವುದು ಪತ್ತೆಯಾಯಿತು.
ಸೋಂಕಿಗೆ ಒಳಗಾದ ಎಡ ಬದಿಯ ಕಿಡ್ನಿನೀರಿನಿಂದ ತುಂಬಿದ ಬಲೂನಿನಂತೆ ಊದಿಕೊಂಡಿತ್ತು. ಅದರಲ್ಲಿ ಹಲವಾರು ನೀರುಗುಳ್ಳೆ, ಚಿಕ್ಕ ಗಡ್ಡೆಗಳು ಬೆಳೆದಿದ್ದವು. ಕೀವು ಮತ್ತು ರಕ್ತ ಒಸರುತ್ತಿತ್ತು. ತಕ್ಷಣ ಪರಿಸ್ಥಿತಿಯ ಗಂಭೀರತೆ ಅರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಗೆ ಅಣಿಯಾಯಿತು.
ಒಂದೂವರೆ ತಾಸು ನಡೆದ ‘ರೆಟ್ರೊಪೆರಿ ಟೋನಿಯಮ್ ನೆಫ್ರೆಕ್ಟೊಮಿ’ ಶಸ್ತ್ರಚಿಕಿತ್ಸೆ ಮೂಲಕ ರೋಗಗ್ರಸ್ತ ಕಿಡ್ನಿ ತೆಗೆದು ಹಾಕಲಾಯಿತು. ಹಲವಾರು ನೀರುಗುಳ್ಳೆಗಳಿಂದ ಬಾತುಕೊಂಡಿದ್ದ ಕಿಡ್ನಿಯನ್ನು ಹೊರತೆಗೆಯುವುದು ಕಷ್ಟವಾದ ಕಾರಣ ರೋಗಿಯ ದೇಹದ ಒಳಗಡೆಯೇ ನೀರುಗುಳ್ಳೆಗಳನ್ನು ಒಡೆಯ ಲಾಯಿತು.ಇದು ರೋಗಿಯ ದೇಹದಿಂದ ತೆಗೆದ ವಿಶ್ವದ ಅತಿ ದೊಡ್ಡ ಕಿಡ್ನಿ ಎಂಬ ಕಲ್ಪನೆ ತಕ್ಷಣಕ್ಕೆ ಇರಲಿಲ್ಲ ಎನ್ನುತ್ತಾರೆಡಾ. ಪುವ್ವಾಡ ಸಂದೀಪ್.
ವೈದ್ಯಕೀಯ ಭಾಷೆಯಲ್ಲಿ ಈ ಸ್ಥಿತಿಯನ್ನು ಅಡಲ್ಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ (ಎಡಿಪಿಕೆಡಿ) ಮತ್ತು ಕ್ರೋನಿಕ್ ಕಿಡ್ನಿ ಡಿಸೀಸ್ (ಸಿಕೆಡಿ) ಎಂದು ಕರೆಯುತ್ತಾರೆ. ರೋಗಿಯ ದೇಹದಿಂದ ಹೊರತೆಗೆದ ಕಿಡ್ನಿ ತೂಕ 7.72 ಕೆ.ಜಿ. ತೂಕ ಮತ್ತು ಗಾತ್ರ 34X15 ಸೆಂಟಿ ಮೀಟರ್ ಇತ್ತು. ಈ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಕಳಿಸಲು ನಿರ್ಧರಿಸಿದ್ದೇವೆ. ರೋಗಿ ಸಂಪೂರ್ಣ ಗುಣಮುಖರಾಗಿದ್ದು, ಆರೋಗ್ಯದಿಂದ ಇದ್ದಾರೆ. ಅವರನ್ನು ಮನೆಗೆ ಕಳಿಸಲಾಗಿದೆ ಎಂದು ಅವರು ‘ಮೆಟ್ರೊ’ಗೆ ತಿಳಿಸಿದರು.
ಕಳೆದ ಆಗಸ್ಟ್‌ನಲ್ಲಿ ಆಸ್ಪತ್ರೆಯ ಇದೇ ವೈದ್ಯರ ತಂಡ ಬೆಳಗಾವಿಯ ಶಿಕ್ಷಕರೊಬ್ಬರ ದೇಹದಿಂದ 7.2 ಕೆ.ಜಿ ತೂಕದ (31 ಸೆಂಟಿ ಮೀಟರ್ ಉದ್ದ ಮತ್ತು 13 ಸೆಂಟಿ ಮೀಟರ್ ಅಗಲ) ಮೂತ್ರಪಿಂಡ ಹೊರತೆಗೆದಿತ್ತು. ಈ ದಾಖಲೆಯನ್ನುಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2021ರಲ್ಲಿ ಹೊರತರಲಿರುವ ಸಂಚಿಕೆಯಲ್ಲಿ ಚಿತ್ರ ಸಮೇತವಾಗಿ ಪ್ರಕಟಿಸುವುದಾಗಿ ಹೇಳಿದೆ.
ದುಬೈ ಆಸ್ಪತ್ರೆಯ ವೈದ್ಯ ಡಾ. ಫರಿಬೋರ್ಜ್ ಬಘೇರಿ 2016ರಲ್ಲಿ ರೋಗಿಯೊಬ್ಬರ ದೇಹದಿಂದ ಹೊರತೆಗೆದ 4.25 ಕೆ.ಜಿ ತೂಕದ ಕಿಡ್ನಿ ವಿಶ್ವದ ದೊಡ್ಡ ಕಿಡ್ನಿ ಎಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ. ರಾಮಯ್ಯ ಆಸ್ಪತ್ರೆಯ ಯುರಾಲಜಿ ವಿಭಾಗದವೈದ್ಯರಾದ ಡಿ.ರಮೇಶ್, ಪ್ರಸಾದ್ ಮೈಲಾರಪ್ಪ, ಮಾನಸ ಟಿ., ಪುವ್ವಾಡ ಸಂದೀಪ, ಗಿರೀಶ್ ಎಂ.ಎಸ್., ರಾಜಶೇಖರ್, ಬಾಲಾಜಿ ಈ ತಂಡದಲ್ಲಿದ್ದರು.
2011: ಮಹಾರಾಷ್ಟ್ರದ ಧುಲೆಯ ಯುರಾಲಜಿ ಇನ್‌ಸ್ಟಿಟ್ಯೂಟ್, ಕಿಡ್ನಿ ತೂಕ– 2.14 ಕೆ.ಜಿ
2016: ದುಬೈ ಆಸ್ಪತ್ರೆ, ಕಿಡ್ನಿ ತೂಕ–4.25 ಕೆ.ಜಿ
2019: ಎಂ.ಎಸ್. ರಾಮಯ್ಯ ಆಸ್ಪತ್ರೆ, ಕಿಡ್ನಿ ತೂಕ–7.20 ಕೆ.ಜಿ.
2020: ಎಂ.ಎಸ್. ರಾಮಯ್ಯ ಆಸ್ಪತ್ರೆ, ಕಿಡ್ನಿ ತೂಕ–7.72 ಕೆ.ಜಿ.
ಮಧುಮೇಹಿಗಳ ಕಿಡ್ನಿಗೆ ಬೇಗ ಸೋಂಕು
ಸೋಂಕು ತಗುಲುವ ಮೂತ್ರಪಿಂಡಗಳಿಗೆ ಸಕಾಲಿಕ ಚಿಕಿತ್ಸೆ ದೊರೆಯದಿದ್ದರೆ ಕೀವು, ರಕ್ತ ತುಂಬಿದ ನೀರುಗುಳ್ಳೆ, ಗಡ್ಡೆಗಳಿಂದ ಬಲೂನಿನಂತೆ ಊದಿಕೊಳ್ಳುತ್ತವೆ. ಇದರಿಂದ ಹೊಟ್ಟೆಯೂ ಬಾವು ಬರುತ್ತದೆ. ಸೋಂಕು ತಗುಲಿದ ಕಿಡ್ನಿಯನ್ನು ಹಾಗೆಯೇ ಬಿಟ್ಟರೆ ರೋಗಿಯ ರಕ್ತದೊತ್ತಡ ಹೆಚ್ಚಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ. ಅದರಲ್ಲೂ ಮಧುಮೇಹಿಗಳ ಮೂತ್ರಪಿಂಡಗಳಿಗೆ ಬೇಗ ಸೋಂಕು ತಗುಲುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ.
ಸಿಗರೇಟ್, ಬೀಡಿ, ತಂಬಾಕು, ಮದ್ಯಪಾನ, ಆಹಾರದಲ್ಲಿ ಅತಿಯಾದ ಉಪ್ಪು ಬಳಕೆ ಮೂತ್ರಪಿಂಡ ಆರೋಗ್ಯಕ್ಕೆ ಮಾರಕ. ಆದಷ್ಟೂ ಹೆಚ್ಚು ನೀರು ಸೇವಿಸುವುದು ಉತ್ತಮ ಎನ್ನುತ್ತಾರೆ ಡಾ. ಸಂದೀಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.