ADVERTISEMENT

ವಿಮಾನದಲ್ಲಿ ಕೆಲಸ: ಗಗನಸಖಿಯಾಗುವ ಕನಸನ್ನು ನನಸು ಮಾಡಲು ಹೀಗೆ ಮಾಡಿ...

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 6:32 IST
Last Updated 16 ಜನವರಿ 2020, 6:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಾಮಾನ್ಯವಾಗಿ ಯುವ ವಯಸ್ಕರನ್ನು ಹೆಚ್ಚು ಸೆಳೆಯುವ ಕೆಲಸ ಕ್ಯಾಬಿನ್ ಸಿಬ್ಬಂದಿಯಾಗಿ ವಿಮಾನದಲ್ಲಿ ಕಾರ್ಯ ನಿರ್ವಹಿಸುವುದು. ಪ್ರಯಾಣಿಕರಿಗೆ ಶುಭಕೋರಿ ಅವರ ಸುರಕ್ಷತೆ ಹಾಗೂ ಭದ್ರತೆ ನೋಡಿಕೊಳ್ಳುವುದು, ಜೊತೆಗೆ ಆಹಾರ ಮತ್ತು ಪಾನೀಯಗಳನ್ನು ನೀಡುವುದು ವಿಮಾನದಲ್ಲಿ ಕೆಲಸ ಮಾಡುವ ಕ್ಯಾಬಿನ್ ಸಿಬ್ಬಂದಿಗಳು ಕರ್ತವ್ಯ.

ವಿಮಾನಯಾನ ಉದ್ಯಮದಲ್ಲಿ ಕ್ಯಾಬಿನ್ ಸಿಬ್ಬಂದಿ ಕೆಲಸ ಕೂಡ ಪ್ರಮುಖವಾದದ್ದು. ಪ್ರಯಾಣಿಕರ ಸುರಕ್ಷತೆ, ಸೌಲಭ್ಯ ನೋಡಿಕೊಳ್ಳುವುದರ ಹೊರತಾಗಿ ವಿಮಾನ ಹಾರಾಡುವಾಗ ಮತ್ತು ಇಳಿಯುವ ಮೊದಲು ಎಲ್ಲಾ ತುರ್ತು ವ್ಯವಸ್ಥೆಗಳನ್ನು ಪರಿಶೀಲಿಸುವ ಜವಾಬ್ದಾರಿಯೂ ಕ್ಯಾಬಿನ್ ಸಿಬ್ಬಂದಿಗಳ ಮೇಲಿರುತ್ತದೆ.

ಅರ್ಹತೆ ಮತ್ತು ಕೌಶಲಗಳು

ADVERTISEMENT

ಈ ಉದ್ಯೋಗ ಮಾಡ ಬಯಸುವವರು ಸೌಹಾರ್ದಯುತ ವ್ಯಕ್ತಿತ್ವ ಹೊಂದಿರಬೇಕು. ಉತ್ತಮ ಸಂವಹನ ಕಲೆಯ ಜತೆಗೆ ಇಂಗ್ಲಿಷ್ ಭಾಷೆ ಬಲ್ಲವರಾಗಿರಬೇಕು ಹಾಗೂ ಪ್ರಯಾಣಿಕರೊಂದಿಗೆ ನಿರಂತರ ಸಂವಹನ ನಡೆಸುವ ಕಾರಣ ಕಾರ್ಯ ನಿರ್ವಹಿಸುವ ಆಯಾ ಸ್ಥಳೀಯ ಭಾಷೆಗಳ ಜ್ಞಾನವೂ ಇರಬೇಕು. ಹುದ್ದೆಗೆ ಸೇರಲು ನೀವು 5 ರಿಂದ 6 ಅಡಿ ಎತ್ತರವಿರಬೇಕು. ಇದು ಕ್ಯಾಬಿನ್ ಸಿಬ್ಬಂದಿ ಹುದ್ದೆಯ ನಿಯಮ.

ಈ ಹುದ್ದೆಗೆ ಸಂಸ್ಥೆಗಳು ಹೆಚ್ಚಾಗಿ 18 ರಿಂದ 25 ವರ್ಷದೊಳಗಿನವರನ್ನು ನೇಮಿಸಿಕೊಳ್ಳುತ್ತವೆ. ಅದರಲ್ಲೂ ಅವಿವಾಹಿತ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇದೆ. ಕೆಲವು ಸಂಸ್ಥೆಗಳು ಇತ್ತೀಚಿಗೆ ವಿವಾಹಿತ ಮಹಿಳೆಯರಿಗೂ ಹುದ್ದೆ ನೀಡುತ್ತಿವೆ. ಕೆಲಸಕ್ಕೆ ದೈಹಿಕ ಸಾಮರ್ಥ್ಯದೊಂದಿಗೆ ಫಿಟ್ನೆಸ್‌ ಕೂಡ ಬಹಳ ಮುಖ್ಯ. ಜೊತೆಗೆ ಯಾವುದೇ ಮಾನಸಿಕ ಹಾಗೂ ದೈಹಿಕ ಅನಾರೋಗ್ಯದಿಂದ ಬಳಲುತ್ತಿರಬಾರದು.

ಭಾರತದಲ್ಲಿ ಹಲವಾರು ಕ್ಯಾಬಿನ್ ಸಿಬ್ಬಂದಿ ತರಬೇತಿ ಸಂಸ್ಥೆಗಳಿವೆ. ಅವು ನಿಮಗೆ ಉದ್ಯೋಗ ಪಡೆಯಲು ತರಬೇತಿ ನೀಡುತ್ತವೆ. ಈ ಸಂಸ್ಥೆಗಳು ಡಿ‍ಪ್ಲೊಮಾ, ಪದವಿ ಮತ್ತು ಪ್ರಮಾಣ ಪತ್ರದ ಕೋರ್ಸ್‌ಗಳನ್ನು ನಡೆಸುತ್ತವೆ. ಆರು ತಿಂಗಳು ಅಥವಾ ಒಂದು ವರ್ಷದ ಕೋರ್ಸ್‌ಗಳನ್ನು ಮಾಡಬಹುದು. ತರಬೇತಿಯ ಜತೆಗೆ ವಿಮಾನ ನಡೆಸುವಲ್ಲಿ ಕ್ಯಾಬಿನ್ ಸಿಬ್ಬಂದಿ ವಹಿಸಬೇಕಾದ ಜವಾಬ್ದಾರಿಗಳನ್ನು ತಿಳಿಸಲಾಗುತ್ತದೆ. ವಿಮಾನದ ಭಾಗಗಳ ಬಗ್ಗೆ ಹಾಗೂ ಅವುಗಳು ನಿರ್ವಹಿಸುವ ಕಾರ್ಯಗಳ ಬಗ್ಗೆ ತಿಳಿಸಲಾಗುತ್ತದೆ. ಇವುಗಳ ತರಬೇತಿಯೊಂದಿಗೆ ಸಂವಹನ ಕೌಶಲವನ್ನು ಸುಧಾರಿಸಲಾಗುತ್ತದೆ.

ಪ್ರಯಾಣದಲ್ಲಿ ಪ್ರಯಾಣಿಕರ ಸೇವೆ ಹಾಗೂ ಸಿಬ್ಬಂದಿಗಳ ನಡುವೆ ಹೊಂದಾಣಿಕೆಯ ಮೂಲಕ ತಂಡದೊಂದಿಗೆ ಮಾಡುವ ಕಾರ್ಯ ವೈಖರಿ ಬಹಳ ಮುಖ್ಯ. ಸ್ಪಷ್ಟವಾದ ಧ್ವನಿ, ಜವಾಬ್ದಾರಿಯ ಪ್ರಜ್ಞೆ ಹಾಗೂ ಎಲ್ಲಾ ಸಮಯದಲ್ಲೂ ಸಕಾರಾತ್ಮಕ ಮನೋಭಾವದಿಂದ ಹೊಂದಿಕೊಳ್ಳುವ ಗುಣ ಇರಬೇಕು. ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರು ಭಯ ಪಡುವ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಧೈರ್ಯ ಹಾಗೂ ತಾಳ್ಮೆಯಿಂದ ಇದ್ದಾಗ ಮಾತ್ರ ಪ್ರಯಾಣಿಕರನ್ನು ನಿಭಾಯಿಸುವಲ್ಲಿ ಯಶಸ್ಸು ಕಾಣಲು ಸಾಧ್ಯ.

ಪ್ರಯಾಣಿಕರು ಸುರಕ್ಷಿತವಾಗಿ ಹಾಗೂ ಆರಾಮವಾಗಿ ಪ್ರಯಾಣಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಕ್ಯಾಬಿನ್ ಸಿಬ್ಬಂದಿಗಳ ಮೇಲಿರುವ ಕಾರಣ, ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದಕ್ಕೆ ಕಠಿಣ ತರಬೇತಿ ಸೇರಿದಂತೆ ಅವರ ಚುರುಕುತನ ಪ್ರದರ್ಶಿಸಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಒಮ್ಮೆ ಉದ್ಯೋಗಕ್ಕೆ ಸೇರಿದ ನಂತರ ನಮ್ಮ ಜೀವನ ಇಷ್ಟೇ ಎನ್ನುವಂತಿಲ್ಲ. ವೃತ್ತಿ ಜೀವನದ ಹಾದಿಯಲ್ಲಿ ತಿರುವು ಪಡೆಯಬಹುದು. ಕ್ಯಾಬಿನ್ ಸಿಬ್ಬಂದಿ ತಂಡದ ಮುಖ್ಯಸ್ಥರಾಗಬಹುದು ಅಥವಾ ಸುರಕ್ಷತೆ ಮತ್ತು ಕಾರ್ಯವಿಧಾನದ ಬೋಧಕರಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.