ಮಾಲ್ದೀವ್ಸ್ ಎಂಬ ಪುಟ್ಟ ದ್ವೀಪ ಸದಾ ಪ್ರವಾಸಿಗಳ ಪ್ರಥಮ ಆದ್ಯತೆಯ ವಿಹಾರತಾಣ. ಹೀಗಿರುವ ಮಾಲ್ಡೀವ್ಸ್ ಇದೀಗ ದೇಶದ ರಾಜಕೀಯ ಚಿಂತಕರ ಚಿತ್ತಕೆಡಿಸಿದೆ ಯಾಕೆ? ಬನ್ನಿ ನೋಡೋಣ.
ದೇಶದ ಭೌಗೋಳಿಕ ಮತ್ತು ರಾಜಕೀಯ ತಲ್ಲಣಗಳು ಪ್ರಚಂಚದ ಬೃಹತ್ ಶಕ್ತಿಗಳಾದ ಮತ್ತು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರಿಯೋಣ.
ಹಿಂದೂ ಮಹಾಸಾಗರದಲ್ಲಿ ಇರುವ ಮಾಲ್ದೀವ್ಸ್ ಎಂಬ ದ್ವೀಪಸಮೂಹ ರಾಷ್ಟ್ರವು ಜಾಗತಿಕ ಶಕ್ತಿ ಭಾರತ ಮತ್ತು ಚೀನಾ ನಡುವಿನ ಸ್ಪರ್ಧೆಗೆ ಕಾರಣವಾಗಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಅಂದರೆ ಮುಖ್ಯವಾಗಿ ಭಾರತ ಪರವಾಗಿದ್ದ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ)ಯಿಂದ, ಚೀನಾ ಪರವಾಗಿರುವ ಪ್ರೋಗ್ರೆಸಿವ್ ಪಾರ್ಟಿ ಆಫ್ ಮಾಲ್ದೀವ್ಸ್ (ಪಿಪಿಎಂ) ಎಂಬ ರಾಜಕೀಯ ಪಕ್ಷದ ಕಡೆಗೆ ಈ ಪುಟ್ಟ ದೇಶದ ರಾಜಕೀಯವು ಪಲ್ಲಟಗೊಂಡಿರುವುದು ಭಾರತದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ಕಾರಣಗಳು ಈ ಕೆಳಗಿನಂತಿವೆ.
ರಾಜಕೀಯ ವಿಭಜನೆ, ಜಾಗತಿಕ ಪ್ರಭಾವ: ಮಾಲ್ದೀವ್ಸ್‌ನ ಆಂತರಿಕ ರಾಜಕಾರಣದಲ್ಲಿ ಭಾರತಪರ ಮತ್ತು ಚೀನಾಪರ ಪಕ್ಷಗಳು ಎಂಬ ಸ್ಪಷ್ಟ ವಿಭಜನೆಯನ್ನು ಕಾಣಬಹುದು. ನವೆಂಬರ್ 2023ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಿಪಿಎಂನ ಮೊಹಮ್ಮದ್ ಮುಯಿಝು ಅವರ ಜಯವು ಚೀನಾಕ್ಕೆ ಹೆಚ್ಚು ಬೆಂಬಲ ನೀಡುವ ಸರ್ಕಾರಕ್ಕೆ ಅಲ್ಲಿನ ಜನರ ಬೆಂಬಲ ನೀಡಿದ್ದನ್ನು ಸೂಚಿಸುತ್ತದೆ. ಈ ಮೂಲಕ ರಾಜಕೀಯ ನಾಯಕತ್ವದ ಬದಲಾವಣೆಯು ಈ ದೇಶದಲ್ಲಿ ವಿದೇಶಾಂಗ ನೀತಿಯ ಬಗ್ಗೆ ಜನರ ಧೋರಣೆಯಲ್ಲಾಗಿರುವ ಪಲ್ಲಟವನ್ನೂ ಸೂಚಿಸುತ್ತದೆ.
ಚೀನಾದ ಪ್ರಭಾವ ಮತ್ತು ಆರ್ಥಿಕ ಚಟುವಟಿಕೆಗಳು: ಮಾಲ್ದೀವ್ಸ್‌ನಲ್ಲಿ ಚೀನಾದ ಪ್ರಭಾವವು ಹೆಚ್ಚುತ್ತಲೇ ಬಂದಿದೆ. ಇದನ್ನು ಮೂಲ ಸೌಕರ್ಯ ಯೋಜನೆಗಳೂ ಸೇರಿ ಆರ್ಥಿಕ ಚಟುವಟಿಕೆಗಳಲ್ಲಿ ಕಾಣಬಹುದು. ಚೀನಾದ ಮಹತ್ವಾಕಾಂಕ್ಷೆಯ ‘ಸಿಲ್ಕ್ ರೋಡ್’ ಎಂಬ ವಿವಿಧೋದ್ದೇಶ ಯೋಜನೆಯಲ್ಲಿಯೂ ಮಾಲ್ದೀವ್ಸ್ ಪಾಲುದಾರ ದೇಶವಾಗಿ ಸೇರಿದೆ. ಚೀನಾವು ಇಲ್ಲಿ ಅನುಸರಿಸುತ್ತಿರುವ ‘ಸಮತೆಗಾಗಿ ಸಾಲ’ ಧೋರಣೆಯು ಆತಂಕಕ್ಕೆ ಕಾರಣವಾಗಿದ್ದು, ಇದಕ್ಕೆ ಉದಾಹರಣೆಯಾಗಿ ಶ್ರೀಲಂಕಾದ ಹಂಬನ್‌ಟೋಟ ಬಂದರು ಯೋಜನೆಯನ್ನು ನೋಡಬಹುದು. ಚೀನಾ ಮಾಲ್ಡೀವ್ಸ್‌ನಲ್ಲಿ ಮಾಡಹೊರಟಿರುವ ಆರ್ಥಿಕ ಚಟುವಟಿಕೆಗಳಲ್ಲಿ ಮೂಲಸೌಕರ್ಯಗಳಲ್ಲಿ ಹೂಡಿಕೆಯೂ ಸೇರಿದ್ದು, ಇವು ದೀರ್ಘಕಾಲೀನ ಪ್ರಭಾವಗಳನ್ನು ಬೀರಬಹುದು.
ಭಾರತದ ಆತಂಕಗಳು ಮತ್ತು ಕಾರ್ಯತಂತ್ರ ಹಿತಾಸಕ್ತಿಗಳು: ಭಾರತಕ್ಕೆ ಮಾಲ್ದೀವ್ಸ್ ಬಹಳಷ್ಟು ಮಹತ್ವ ಹೊಂದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದೆಂದರೆ, ಅದು ಭಾರತಕ್ಕೆ ಭೌಗೋಳಿಕವಾಗಿ ಹತ್ತಿರವಾಗಿರುವುದು ಮತ್ತು ಪ್ರಮುಖ ಸಾಗರ ಸಂಪರ್ಕದ ಹಾದಿಯಲ್ಲಿ ಅದು ಹತ್ತಿರವಾಗಿ ಇರುವುದು (Sea Lines of Communication-SLOCs). ಯಾವುದೇ ರೀತಿಯ ಬಾಹ್ಯ ಶಕ್ತಿಗಳ ಪ್ರಭಾವವು ಮಾಲ್ದೀವ್ಸ್ ಮೇಲೆ ಭಾರತ ಹೊಂದಿದ್ದ ಪ್ರಭಾವದ ಮೇಲೂ ಹಾಗೂ ದೇಶದ ಭದ್ರತೆಯ ಮೇಲೂ ಗಂಭೀರ ಪರಿಣಾಮ ಬೀರಬಲ್ಲದು.
ಭಾರತವು ಚೀನಾವು ಹೆಣೆಯುತ್ತಿರುವ ‘ಸಾಲದ ಬಲೆ’ಯ ಕುಟಿಲ ರಾಜತಾಂತ್ರಿಕ ರಾಜಕೀಯದ ಬಗ್ಗೆ ಮತ್ತು ಅದರ ‘ಮುತ್ತಿನ ಮಾಲೆಯ ಸಿದ್ಧಾಂತ’ ಎಂದರೆ ‘ಸ್ಟ್ರಿಂಗ್ ಆಫ್ ಪರ್ಲ್ಸ್’ (ಇದು ಚಿಕ್ಕಪುಟ್ಟ ದ್ವೀಪ ದೇಶಗಳನ್ನು ತನ್ನ ಪ್ರಭಾವಕ್ಕೆ ಒಳಪಡಿಸುವ ತಂತ್ರ) ಕಾರ್ಯತಂತ್ರದ ಬಗ್ಗೆ ಆತಂಕ ಹೊಂದಿದೆ. ಆ ವಲಯದ ಭೌಗೋಳಿಕ ರಾಜಕೀಯದ ಚದುರಂಗ ದಲ್ಲಿ ಮಾಲ್ದೀವ್ಸ್ ಎಂಬ ಚಿಕ್ಕ ಸೈನಿಕಕಾಯಿ ಬಹಳ ಮಹತ್ವದ್ದಾಗಿದೆ.
ಅಧಿಕಾರ ಮತ್ತು ಧೋರಣೆಗಳ ಪಲ್ಲಟ: ಮಾಲ್ದೀವ್ಸ್ ಎಂಬ ಪುಟ್ಟ ದೇಶದೊಳಗಿನ ರಾಜ ಕೀಯ ಪಲ್ಲಟಗಳು ವಿದೇಶಾಂಗ ಧೋರಣೆಗಳ ಪರಿವರ್ತನೆಗೆ ಕಾರಣವಾಗಬಹುದು. ರಾಜಕೀಯ ನಾಯಕತ್ವ ಮತ್ತು ವಿದೇಶಾಂಗ ಧೋರಣೆಗಳ ನಡುವಿನ ಏರುಪೇರಿನ ಚಲನವಲನವು ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಪ್ರಭಾವದ ಮಟ್ಟವನ್ನು ನಿರ್ಧರಿಸುತ್ತದೆ.
ಭಾರತದ ರಾಜತಾಂತ್ರಿಕ ಪ್ರತಿಕ್ರಿಯೆ: ಭಾರತವು ಮಾಲ್ದೀವ್ಸ್‌ನ ಸಾರ್ವಭೌಮತೆಯನ್ನು ಒಪ್ಪಿಕೊಳ್ಳು ತ್ತಲೇ, ಅಲ್ಲಿ ಬಾಹ್ಯ ಶಕ್ತಿಗಳ, ನಿರ್ದಿಷ್ಟವಾಗಿ ಚೀನಾದ ಪ್ರಭಾವದ ಮೇಲೆ ಕಣ್ಗಾವಲು ಇಡುತ್ತಲೇ ಬಂದಿದೆ.ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ‘ಮುಚ್ಚುಮರೆಯ ಕಾರ್ಯಕ್ರಮ’ ಮತ್ತು ಸುಸ್ಥಿರವಲ್ಲದ ಸಾಲದ ಬಗ್ಗೆ, ಆಂದರೆ ಸಾಲದ ಬಲೆಯ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ‘ಭಾರತ ಮೊದಲು’ಎಂಬ ಧೋರಣೆ ಹೊಂದಿದ್ದ ಮಾಜಿ ಅಧ್ಯಕ್ಷ ಮೊಹಮ್ಮದ್ ಸಾಲಿಹ್ ಅವರ ಚುನಾವಣಾ ಪ್ರಚಾರವು ಭಾರತದ ಹಿತಾಸಕ್ತಿಗಳ ಜೊತೆಗೆ ಸರಿಹೊಂದುತ್ತದೆಯಲ್ಲದೇ ಭಾರತ ಪರ ನಿಲುವಿಗೆ ಒತ್ತು ನೀಡುತ್ತಾ ಬಂದಿತ್ತು.
ಅಖಚಿತ ಭವಿಷ್ಯ: ಮೊಹಮ್ಮದ್ ಮುಯಿಝು ಅವರು ಪ್ರಮಾಣವಚನ ಸ್ವೀಕರಿಸುವಾಗಲೇ ಮಾಲ್ದೀವ್ಸ್‌ನ ವಿದೇಶಾಂಗ ಧೋರಣೆಯು ಬೀಜಿಂಗ್ ಪರ ವಾಲುವುದು ಎಂಬ ನಿರೀಕ್ಷೆ ಇತ್ತು. ಹೀಗಿದ್ದರೂ ಮಾಲ್ದೀವ್ಸ್ ಭಾರತ ಪರವಾಗಿಯೇ ಇರುವುದೇನೋ ಎಂಬ ನಿರೀಕ್ಷೆ ಸುಳ್ಳಾಗಿದೆ. (ಹಿಂದೆ ಮಾಲ್ದೀವ್ಸ್ ದೇಶವನ್ನೇ ವಶಪಡಿಸಿಕೊಳ್ಳಲು ಶ್ರೀಲಂಕಾದ ಬಂಡುಕೋರ ಬಾಡಿಗೆ ಸೈನಿಕರು ಯತ್ನಿಸಿದಾಗ, ಭಾರತದ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಅಲ್ಲಿಗೆ ಭಾರತೀಯ ಸೈನಿಕರನ್ನು ಕಳಿಸಿ, ಆ ಯತ್ನವನ್ನು ವಿಫಲಗೊಳಿಸಿದ್ದರು. ಅಂದಿನಿಂದಲೂ ಮಾಲ್ದೀವ್ಸ್ ರಕ್ಷಣೆಗೆಂದು ನೂರರಷ್ಟು ಭಾರತೀಯ ಸೈನಿಕರು ಅಲ್ಲಿದ್ದಾರೆ. ಈಗ ಈ ಸೈನಿಕರನ್ನೇ ಹೊರಗೆ ಕಳಿಸಲು ಅಧ್ಯಕ್ಷ ಮುಯಿಝು ಗಡುವು ನೀಡಿರುವುದು ಸ್ಪಷ್ಟವಾಗಿ ಬದಲಾದ ಧೋರಣೆಯನ್ನು ತಿಳಿಸುತ್ತದೆ.) ಭಾರತ ಮತ್ತು ಚೀನಾದ ನಡುವಿನ ಮೇಲಾಟವು ಮುಖ್ಯವಾಗಿ ಮಾಲ್ದೀವ್ಸ್‌ನ ರಾಜಕೀಯ ನಾಯಕತ್ವವು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಮೇಲೆ ಹೆಚ್ಚಾಗಿ ಅವಲಂಬಿಸುತ್ತದೆ. ಹಿಂದೂ ಮಹಾಸಾಗರದಲ್ಲಿ ತಮ್ಮ ಪ್ರಾಬಲ್ಯವನ್ನು ಎತ್ತಿಹಿಡಿಯಲು ಭಾರತ ಮತ್ತು ಚೀನಾ ಎರಡಕ್ಕೂ ಮಾಲ್ದೀವ್ಸ್ ಒಂದು ಬಹುಮುಖ್ಯ ಪ್ರದೇಶ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಈ ಪ್ರದೇಶದಲ್ಲಿ ನಡೆಯುತ್ತಿರುವ- ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಪರಿಣಾಮಗಳನ್ನು ಒಳಗೊಂಡ ಭಾರತ-ಚೀನಾ ಸ್ಪರ್ಧೆಯನ್ನು ಎತ್ತಿತೋರಿಸುತ್ತದೆ. ಈ ಮೇಲಾಟದಲ್ಲಿ ಇರುವ ಸಮತೋಲನವು ಈ ಪ್ರದೇಶ ಮಾತ್ರವಲ್ಲದೆ ಜಾಗತಿಕವಾದ ಮುಖ್ಯವಾಗಿ ಇಂಡೋಪೆಸಿಫಿಕ್ ಪ್ರದೇಶದ ಸ್ಥಿರತೆಯ ಮೇಲೆಯೂ ಪ್ರಭಾವ ಬೀರಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.