ಮೂಡಿಗೆರೆ: ತಾಲ್ಲೂಕಿನ ದೇವರುಂದ, ಮೂಲರಹಳ್ಳಿ, ಗುತ್ತಿಹಳ್ಳಿ, ಊರುಬಗೆ, ಮೇಕನಗದ್ದೆ ಸೇರಿದಂತೆ ವಿವಿಧ ಗ್ರಾಮಗಳ ರೈತರು ಘೋಷಿಸಿದ್ದ ಮತದಾನ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮಸ್ಥರು, ‘ಕಳೆದ ಬಾರಿ ಊರುಬಗೆ, ಹಂತೂರು, ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸತತ ಮೂರು ತಿಂಗಳ ಕಾಲ ಬಿಡುವಿಲ್ಲದೇ ಸುರಿದ ಅಪಾರ ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಭತ್ತ, ಏಲಕ್ಕಿ ಬೆಳೆಗಳೆಲ್ಲವೂ ಹಾನಿಯಾಗಿದ್ದವು. ಅಲ್ಲದೇ ಕಾಳು ಮೆಣಸು ಬಳ್ಳಿಗಳು ಕೊಳೆತು ಹೋಗಿದ್ದು, ಏಲಕ್ಕಿ ಗಿಡಗಳು ಕೂಡ ಶೀತ ಹೆಚ್ಚಳವಾಗಿ ಕರಗಿ ಹೋಗಿದ್ದವು. ರೈತರಿಗಾದ ನಷ್ಟವನ್ನು ತುಂಬಿ ಕೊಡುವ ಸಲುವಾಗಿ ಸರ್ಕಾರವು ರೈತರಿಂದ ಅರ್ಜಿಯನ್ನು ಸ್ವೀಕರಿಸಿತ್ತು. ಆದರೆ, ಅರ್ಜಿ ಸಲ್ಲಿಸಿ ವರ್ಷ ಕಳೆಯುತ್ತಿದ್ದರೂ ಅತಿವೃಷ್ಟಿ ಪರಿಹಾರವನ್ನು ವಿತರಿಸಿಲ್ಲದಿರುವುದನ್ನು ಖಂಡಿಸಿ ಈ ಭಾಗದ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕಾರ ಮಾಡಲು ಸರ್ವ ಪಕ್ಷಗಳ ಮುಖಂಡರು ಸೇರಿ ತೀರ್ಮಾನಕ್ಕೆ ಬರಲಾಗಿತ್ತು’ ಎಂದಿದ್ದಾರೆ.
‘ಆದರೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಅತಿವೃಷ್ಟಿ ಪರಿಹಾರಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ಒದಗಿಸಿದ್ದು, ಹಂತಹಂತವಾಗಿ ಪರಿಹಾರ ಬಿಡುಗಡೆ ಮಾಡುತ್ತಿದ್ದು ಈಗಾಗಲೇ ಪ್ರಥಮ ಹಂತದ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಇನ್ನು ಕೆಲ ದಿನಗಳಲ್ಲಿ ಎಲ್ಲಾ ರೈತರ ಖಾತೆಗಳಿಗೆ ಅತಿವೃಷ್ಟಿ ಪರಿಹಾರ ಹಣವನ್ನು ಜಮಾ ಮಾಡಲಾಗುವುದು ಎಂದು ಖಚಿತ ಭರವಸೆ ಕೊಟ್ಟಿದ್ದಾರೆ. ಅಲ್ಲದೇ ಮೂಡಿಗೆರೆಗೆ ಬಂದಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಮುಂದಿನ ದಿನಗಳಲ್ಲಿ ಮೂಡಿಗೆರೆ ತಾಲ್ಲೂಕಿನ ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿದೆ’ ಎಂದು ಗ್ರಾಮಸ್ಥರ ಸಹಿಯಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.